ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಿ ಪ್ರಭೇದಎಷ್ಟು ವಿಧ?

Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

`ಧರೆಯಲ್ಲಿ ಪ್ರಸ್ತುತ ಎಷ್ಟು ವಿಧದ ಜೀವಿಗಳಿವೆ?'

ಇದು ಕುತೂಹಲದ ಪ್ರಶ್ನೆ. ತಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುವ ಯಾರಿಗೇ ಆದರೂ ಈ ಪ್ರಶ್ನೆ ಸಹಜ. ಏಕೆಂದರೆ ರಸ್ತೆ ಬದಿಯ ಗಿಡಗಂಟಿಗಳಲ್ಲೇ ಅಥವಾ ಪುಟ್ಟ ಕೈತೋಟದಲ್ಲೇ ಕಾಣಬಹುದಾದ ಸಸ್ಯಗಳು, ಚಿಟ್ಟೆ ಇರುವೆ ಮಿಡತೆಗಳು ಇಂಥ ಜೀವಿಗಳಲ್ಲೇ ಎಷ್ಟೊಂದು ವಿಧ-ವೈವಿಧ್ಯ. ವಾಸ್ತವ ಏನೆಂದರೆ ಕೇವಲ ನಮ್ಮ ಸನಿಹದ ಪರಿಸರದಲ್ಲಿನ ಜೀವಿ ವಿಧಗಳನ್ನು ಗುರುತಿಸುವುದು, ಎಣಿಸುವುದೇ ಸುಲಭದ ಕೆಲಸ ಅಲ್ಲ. ಹಾಗಿರುವಾಗ ಇಡೀ ಭೂಮಿಯಲ್ಲಿರುವ ಜೀವಿ ವಿಧ-ಪ್ರಭೇದಗಳನ್ನು ಪತ್ತೆ ಹಚ್ಚುವುದೆಂದರೆ...?

ಹಾಗೆಂದು ಈ ಕೆಲಸ ನಡೆದೇ ಇಲ್ಲ ಎಂದು ಭಾವಿಸಿಬಿಡಬೇಡಿ. ಜಗತ್ತಿನಲ್ಲಿರುವ ಜೀವಿ ವಿಧಗಳನ್ನು ಸ್ಪಷ್ಟವಾಗಿ ಗುರುತಿಸಿ ಹೆಸರಿಸಿ ವರ್ಗೀಕರಿಸಿ ಎಣಿಸುವ ಕಾರ್ಯ ಸಮರ್ಥ ಸಾಧ್ಯತೆಗಳಿಸಿದ್ದು 1730ರ ದಶಕದಲ್ಲಿ. ಆ ಕಾಲದಲ್ಲಿ ಸ್ವೀಡನ್‌ನ ವಿಖ್ಯಾತ ಸಸ್ಯ ವಿಜ್ಞಾನಿ `ಕಾರ್ಲ್ ಲಿನೆಯಸ್' ಜೀವಿಗಳ ವರ್ಗೀಕರಣಕ್ಕೆ-ನಾಮಕರಣಕ್ಕೆ ಸಪ್ತ ಹಂತಗಳ ಸ್ಪಷ್ಟ ವೈಜ್ಞಾನಿಕ ಕ್ರಮವನ್ನು ರೂಪಿಸಿದ.

ಆದರೂ, ಹಾಗೆ ಕೆಲ ಶತಮಾನಗಳಿಂದಲೂ ಜೀವಿಗಳನ್ನು ಗುರುತಿಸಿ, ವರ್ಗೀಕರಿಸಿ, ಹೆಸರಿಸಿ ಗಣತಿ ಮಾಡುವ ಕಾರ್ಯ ಜೀವ ವಿಜ್ಞಾನಿಗಳಿಂದ ಜಗತ್ತಿನಾದ್ಯಂತ ನಡೆದಿದ್ದರೂ ಆ ಕೆಲಸ ಇನ್ನೂ ಮುಗಿದಿಲ್ಲ. ಏಕೆಂದರೆ ಧರೆಯ ಪ್ರತಿಯೊಂದು ಜೀವಿವಾರುಗಳಲ್ಲೂ ಜೀವಜಾಲ ಎಷ್ಟು ವೈವಿಧ್ಯಮಯವಾಗಿದೆಯೆಂದರೆ ಹುಡುಕಿದಂತೆಲ್ಲ ಹೊಸ ಹೊಸ ಜೀವಿ ಪ್ರಭೇದಗಳು ಪತ್ತೆಯಾಗುತ್ತ ಜೀವಿ ಪ್ರಭೇದಗಳ ಪಟ್ಟಿ ಬೆಳೆಯುತ್ತಲೇ ಇದೆ. ಉದಾಹರಣೆಗೆ ಇರುವೆಗಳಲ್ಲೇ ಒಂಬತ್ತು ಸಾವಿರ ಪ್ರಭೇದಗಳಿವೆ. ಸೊಳ್ಳೆಗಳಲ್ಲಿ ಮೂರು ಸಾವಿರ, ಕಪ್ಪೆಗಳಲ್ಲಿ ಎರಡೂವರೆ ಸಾವಿರ ಪ್ರಭೇದಗಳಿದ್ದರೆ, ದುಂಬಿಗಳಲ್ಲಿ ಮೂರೂವರೆ ಲಕ್ಷ ಪ್ರಭೇದಗಳಿವೆ! ದಕ್ಷಿಣ ಅಮೆರಿಕದ ಸುರಿನೇಮ್ ರಾಷ್ಟ್ರದ ಅಮೆಜೋನಿಯಾ ಪ್ರದೇಶದ ಒಂದೇ ಒಂದು ನದಿಯಲ್ಲಿ ಮೂರೇ ಮೂರು ವಾರಗಳ ಅವಧಿಯಲ್ಲಿ ಮೂವತ್ತಾರು ಹೊಸ ಮತ್ಸ್ಯಪ್ರಭೇದಗಳು ಪತ್ತೆಯಾಗಿವೆ! `ಕನ್ಸರ್ವೇಶನ್ ಇಂಟರ್‌ನ್ಯಾಷನಲ್' ಸಂಸ್ಥೆವಿಜ್ಞಾನಿಗಳು ಇತ್ತೀಚೆಗೆ ಕೈಗೊಂಡಿದ್ದ ಶೋಧದಲ್ಲಿ ಕಂಡುಹಿಡಿದ ಸೋಜಿಗದ ಪತ್ತೆ ಇದು.

ಅದೆಲ್ಲ ಏನೇ ಇದ್ದರೂ ಜೀವ ವಿಜ್ಞಾನಿಗಳ, ವೈಜ್ಞಾನಿಕ ಸಂಘ-ಸಂಸ್ಥೆಗಳ ಪ್ರಯತ್ನಗಳಿಂದಾಗಿ ಈವರೆಗೆ ಲಕ್ಷಾಂತರ ಜೀವಿ ಪ್ರಭೇದಗಳು ಪತ್ತೆಯಾಗಿವೆ, ಪಟ್ಟಿಗೊಂಡಿವೆ. ಅತ್ಯಂತ ಇತ್ತೀಚಿನ ಮಾಹಿತಿ ಪ್ರಕಾರ ಪ್ರಸ್ತುತದವರೆಗೆ ಜಗತ್ತಿನಾದ್ಯಂತ ಎಲ್ಲ ಜೀವಿವಾರುಗಳಲ್ಲೂ ಗುರುತಿಸಲ್ಪಟ್ಟ, ಹೆಸರಿಸಲ್ಪಟ್ಟ ಜೀವಿ ಪ್ರಭೇದಗಳ ಒಟ್ಟು ಸಂಖ್ಯೆ ಹದಿನೆಂಟು ಲಕ್ಷ ಇಪ್ಪತ್ತು ಸಾವಿರ. ಪ್ರತಿ ಸರ್ವೆಕ್ಷಣೆಯ ನಂತರವೂ ಈ ಸಂಖ್ಯೆ ಬದಲಾಗುತ್ತದೆಂಬುದು ಸ್ಪಷ್ಟ ತಾನೇ?

ಧರೆಯ ಪ್ರಧಾನ ಜೀವಿ ವಿಧಗಳು ಅವುಗಳ ಪ್ರಭೇದ ಸಂಖ್ಯೆಗಳ ಅತ್ಯಂತ ಇತ್ತೀಚಿನ ಅಚ್ಚರಿಯ ಅಂಕಿ-ಅಂಶಗಳನ್ನು ಗಮನಿಸಿ:

ಸಸ್ಯಗಳು:
ಶೈವಲಗಳು, ಹುಲ್ಲು ಗಿಡಗಳಿಂದ ಮಹಾವೃಕ್ಷಗಳವರೆಗೆ ಸಕಲ ಸಸ್ಯಪ್ರಭೇದಗಳ ಸಂಖ್ಯೆ ಮೂರು ಲಕ್ಷ ಐವತ್ತು ಸಾವಿರ (3,50,000) ಈ ಪೈಕಿ ಶೈವಲ ಪ್ರಭೇದಗಳೇ 80,000 (ಚಿತ್ರ-1).

ಕೀಟಗಳು ಮತ್ತು ಮೈರಿಯಾಪಾಡ್ಸ್:
ಗರಿಷ್ಠ ವೈವಿಧ್ಯದ ಈ ಜೀವಿಗಳಲ್ಲಿ ಈವರೆಗೆ ಪತ್ತೆಯಾಗಿರುವ ಪ್ರಭೇದಗಳು ಒಂಬತ್ತು ಲಕ್ಷದ ಎಂಬತ್ತು ಮೂರು ಸಾವಿರ (9,83,000) ಚಿತ್ರ-5.

ಫಂಗೈ ಮತ್ತು ಲೈಕೆನ್ಸ್:
ಅಣಬೆ, ಬೂಷ್ಟ್ ಹುಳುಕು ಹುದುಗು ಇತ್ಯಾದಿ ಶಿಲೀಂಧ್ರಗಳು ಮತ್ತು ಕಲ್ಲು ಹೂವುಗಳನ್ನು ಒಳಗೊಂಡ ಈ ಜೀವಿ ವರ್ಗದ ಪ್ರಭೇದಗಳು ಒಂದು ಲಕ್ಷ (1,00,000) ಚಿತ್ರ-2.

ಚೆಲಿಸಿರೇಟ್ಸ್: (ಚಿತ್ರ-6)
ಜೇಡ, ಚೇಳು (ಸಂಧಿಪದಿ) ಮತ್ತು ಅದೇ ವರ್ಗದ ಇತರ ಎಲ್ಲ ಸಂಧಿ ಪದಿಯೇತರ ಪ್ರಾಣಿಗಳ ಈ ಗುಂಪಿನ ಪ್ರಭೇದಗಳು ಒಂದು ಲಕ್ಷ ಎರಡು ಸಾವಿರದ ಇನ್ನೂರ ನಲವತ್ತೆಂಟು (1,02,248).

ಕ್ರಸ್ಟೇಶಿಯನ್ಸ್:
ಏಡಿ, ಪ್ರಾನ್, ಲಾಬ್‌ಸ್ಟರ್ ಇತ್ಯಾದಿಗಳ ವರ್ಗ. ಒಟ್ಟು ಪ್ರಭೇದಗಳು ನಲವತ್ತೇಳು ಸಾವಿರ (47,000).

ಮತ್ಸ್ಯಗಳು:
ತಿಮಿಂಗಿಲ ಗಾತ್ರದ `ವ್ಹೇಲ್ ಶಾರ್ಕ್'ನಿಂದ ಒಂಬತ್ತೇ ಮಿ.ಮೀ. ಉದ್ದದ `ಪಿಗ್ಮಿ ಗೋಬಿ'ವರೆಗೆ ಸಕಲ ಸಿಹಿ ನೀರಿನ ಮತ್ತು ಕ್ಷಾರಜಲದ ಮತ್ಸ್ಯ ಪ್ರಭೇದಗಳು ಮೂವತ್ತೆರಡು ಸಾವಿರದ ನಾಲ್ಕುನೂರು (32,400) ಚಿತ್ರ-8.

ಉಭಯವಾಸಿಗಳು:
ಕಪ್ಪೆ, ಸಲಮ್ಯಾಂಡರ್, ನ್ಯೂಟ್ ಇತ್ಯಾದಿಗಳ ಈ ಗುಂಪಿನ ಒಟ್ಟು ಪ್ರಭೇದಗಳು 6771 (ಚಿತ್ರ-3).

ಸರೀಸೃಪಗಳು:
ಹಾವು, ಹಲ್ಲಿ, ಆಮೆ, ಕಡಲಾಮೆ, ಟೆರಾಪಿನ್, ಮೊಸಳೆ..... ಇವುಗಳನ್ನೆಲ್ಲ ಒಳಗೊಂಡಿರುವ ಸರೀಸೃಪ ವರ್ಗದಲ್ಲಿರುವ ಒಟ್ಟು ಪ್ರಭೇದಗಳು 9547 (ಚಿತ್ರ-10, 11).

ಮೃದ್ವಂಗಿಗಳು:
ಸುಣ್ಣದ ಚಿಪ್ಪುಗಳನ್ನು (ಕವಡೆ ಶಂಖ ಕಪ್ಪೆಚಿಪ್ಪು ಇತ್ಯಾದಿ) ನಿರ್ಮಿಸುವ ಶಂಬುಕ, ನಾಟಿಲಸ್ (ಚಿತ್ರ-9) ಅಂತಹವು ಹಾಗೂ ಆಕ್ಟೋಪಸ್, ಸ್ಕ್ವಿಡ್ ಮುಂತಾದ ಪ್ರಾಣಿಗಳ ಈ ಗುಂಪಿನ ಪ್ರಭೇದಗಳು 85,000.

ಹಕ್ಕಿಗಳು: (ಚಿತ್ರ-7)
ಹಾರುವ ಮತ್ತು ಹಾರದ ಎಲ್ಲ ಖಗಪ್ರಭೇದಗಳು ಹತ್ತು ಸಾವಿರದ ಅರವತ್ತ ನಾಲ್ಕು (10,064).

ಸ್ತನಿಗಳು:
ಮನುಷ್ಯರ ಏಕೈಕ ಪ್ರಭೇದವೂ ಸೇರಿದಂತೆ ಸ್ತನಿಗಳ ಒಟ್ಟು ಪ್ರಭೇದಗಳು 5501 (ಚಿತ್ರ-12).

 ಇವೇ ಅಲ್ಲದೆ ಎರೆಹುಳು ಇತ್ಯಾದಿ ಅನೆಲಿಡ್‌ಗಳ 12,000 ಪ್ರಭೇದಗಳು, ಸ್ಪಾಂಜ್‌ಗಳ 10,000, ಬ್ಯಾಕ್ಟೀರಿಯಾಗಳ 4,000, ನೆಮಟೋಡ್ ಹುಳುಗಳ 25,000 ಪ್ರಭೇದಗಳು, ಜೆಲ್ಲಿಮೀನು ಮತ್ತು ಆ್ಯನಿಮೋನಿಗಳ 10,000 ಮತ್ತಿತರ ಪ್ರಭೇದಗಳು 35,000 ಎಲ್ಲ ಸೇರಿ ಸದ್ಯದ ಸರ್ವಜೀವಿ ಪ್ರಭೇದಗಳ ಸಂಖ್ಯೆ ಸಮೀಪ ಹದಿನೆಂಟು ಲಕ್ಷ ತಲುಪಿದೆ.

ಇದು ಈವರೆಗೆ ತಿಳಿದಿರುವ ಸಂಖ್ಯೆ ಅಷ್ಟೆ-ತಜ್ಞರು ಹೇಳುವಂತೆ ಜೀವಿಗಳ ಅಜ್ಞಾತ ಪ್ರಭೇದಗಳೇ ಇದಕ್ಕಿಂತ ಬಹಳ ಹೆಚ್ಚಿದೆ. ಈ ಕ್ಷೇತ್ರದ ವಿದ್ವಾಂಸರ ನಿರೀಕ್ಷೆಯ ಪ್ರಕಾರ ಧರೆಯಲ್ಲಿರಬಹುದಾದ ಜೀವಿ ಪ್ರಭೇದಗಳು ಎಂಬತ್ತೈದು ಲಕ್ಷದಿಂದ ಒಂದು ಕೋಟಿ ಆಗಬಹುದು! ಎಂಥ ವೈವಿಧ್ಯ! ಅಲ್ಲವೇ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT