ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಿಕ ಸಂಘಟನೆ ಧರಣಿ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ: ಜೀವಿಕ ಸಂಘಟನೆ ಹಾಗೂ ಕರ್ನಾಟಕ ಜೀತದಾಳು ಮುಕ್ತ ಕೃಷಿ ಕಾರ್ಮಿಕ ಒಕ್ಕೂಟಗಳು ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಪಟ್ಟಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದವು.

ಜೀತದಾಳು ಜಾಗೃತಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮೊದಲು ಪಟ್ಟಣದ ಗಾಂಧಿ ಭವನದಿಂದ ಮೆರವಣಿಗೆ ಹೊರಟು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾಗಿ, ಆನಂತರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಲಾಯಿತು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದಿದ್ದರೂ ಸಮಾಜದಲ್ಲಿ ಜೀತ ಪದ್ಧತಿ, ಬಾಲ ಕಾರ್ಮಿಕ ಪದ್ಧತಿ, ಜಾತಿ ಪದ್ಧತಿಯಂತಹ ಅನಿಷ್ಟ ಪದ್ಧತಿಗಳು ಇಂದಿಗೂ ರೂಢಿಯಲ್ಲಿದ್ದು, ಮೊದಲು ಈ ಅನಿಷ್ಟ ಪದ್ಧತಿಗಳು ತೊಲಗಬೇಕು, ದಲಿತರು, ಜೀತದಾಳುಗಳು, ಕೃಷಿ ಕಾರ್ಮಿಕರ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜೀತದಾಳುಗಳ ಪುನರ್ವಸತಿಗಾಗಿ ಇರುವ ಸರ್ಕಾರದ 2008ರ ಕ್ರಿಯಾ ಯೋಜನೆ ಕೂಡಲೇ ಜಾರಿಯಾಗಬೇಕು. ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಅರುಣಪ್ರಭಾ ಅವರಿಗೆ ಬೇಡಿಕೆಗಳ ಮನವಿ ಪತ್ರ ಅರ್ಪಿಸಲಾಯಿತು.

ತಾಲ್ಲೂಕು ಜೀವಿಕ ಸಂಚಾಲಕ ಹನುಮಂತು, ಮಹಿಳಾ ಸಂಚಾಲಕಿ ಯಶೋದಮ್ಮ, ಜೀತದಾಳು ಕೃಷಿ ಕಾರ್ಮಿಕ ಒಕ್ಕೂಟದ ಗಂಗಾ, ಪದಾಧಿಕಾರಿಗಳಾದ ಗೋಪಾಲ, ಮಹೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಗೆ ಬಲವಂತದ ಆರೋಪ: ರಾಮನಗರದಲ್ಲಿ ನಡೆಯುತ್ತಿರುವ ಕಂದಾಯ ಇಲಾಖೆ ನೌಕರರ ಪ್ರತಿಭಟನೆಗೆ ತಾಲ್ಲೂಕು ಕಚೇರಿ ನೌಕರರನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ತಹಸೀಲ್ದಾರ್ ಅರುಣಪ್ರಭ ಇಲ್ಲಿನ ಪುರ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ.

ರಾಮನಗರದ ಈಗಲ್‌ಟನ್ ರೆಸಾರ್ಟ್ ಭೂ ಒತ್ತುವರಿ ವಿಚಾರದಲ್ಲಿ ಅಮಾನತ್ತಾಗಿರುವ ನೌಕರರ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರಾಮನಗರದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಚ್ಛೆಯಿದ್ದವರನ್ನು ಕರೆಯುವುದನ್ನು ಬಿಟ್ಟು ಅದರಲ್ಲೂ ಮಹಿಳೆಯರನ್ನು ಸಹ ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಅರುಣಪ್ರಭಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT