ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಂದಾಲ್ ಪೊಲೀಸ್ ಕಸ್ಟಡಿ ವಿಸ್ತರಣೆ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿ ಪೊಲೀಸರ ವಶದಲ್ಲಿರುವ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಅಬು ಜುಂದಾಲ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು ಇಲ್ಲಿನ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯ ಗುರುವಾರ ಮತ್ತೆ 15 ದಿವಸಗಳ ಕಾಲ ವಿಸ್ತರಿಸಿದೆ.

ದೇಶದಲ್ಲಿ ನಡೆದಿರುವ ವಿವಿಧ ಸ್ಫೋಟ ಮತ್ತು ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಜುಂದಾಲ್‌ನನ್ನು ಸಮಗ್ರವಾಗಿ ತನಿಖೆಗೆ ಗುರಿಪಡಿಸಿ ಇನ್ನಷ್ಟು ವಿವರಗಳನ್ನು ಅರಿಯುವ ಉದ್ದೇಶ ಹೊಂದಿರುವ ದೆಹಲಿ ಪೊಲೀಸರಿಗೇ ಆರೋಪಿಯನ್ನು ಮತ್ತೆ 15 ದಿನಗಳ ಕಾಲ ಒಪ್ಪಿಸಲಾಗಿದೆ. ಇದರಿಂದ ವಿವಿಧ ಪ್ರಕರಣಗಳ ಮಧ್ಯೆ ಇರುವ ಕೊಂಡಿಯನ್ನು ಅರಿಯಲು ಸಾಧ್ಯವಾಗುತ್ತದೆ ಮತ್ತು ವಿಧ್ವಂಸಕ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿವಿಧ ತನಿಖಾ ದಳಗಳಿಗೂ ಸಹಾಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಿವಿಧ ಭಯೋತ್ಪಾದನಾ ಕೃತ್ಯಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಮಹಾರಾಷ್ಟ್ರ ಸಿಐಡಿ ವಿಭಾಗ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿವೆ. ಆದರೆ, ದೆಹಲಿ ಪೊಲೀಸರ ತನಿಖೆ ಪೂರ್ಣವಾಗಿಲ್ಲದ ಕಾರಣ ಅರ್ಜಿ ಸಲ್ಲಿಸಿರುವ ತನಿಖಾ ದಳಗಳು ಇದೇ 20ರವರೆಗೆ ಕಾಯಬೇಕು ಎಂದು ನ್ಯಾಯಾಧೀಶ ವಿನೋದ್ ಯಾದವ್ ಹೇಳಿದರು.

ಆರೋಪಿಯು ಒಂಬತ್ತು ಬೇರೆ ಬೇರೆ ಇಮೇಲ್ ಖಾತೆಯನ್ನು ಬಳಕೆ ಮಾಡಿದ್ದಾನೆ. ಆತ ಉಪಯೋಗಿಸಿರುವ ನಾಲ್ಕು ಅಂತರರಾಷ್ಟ್ರೀಯ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇದರಲ್ಲಿ ಪಾಕ್ ಮತ್ತು ಸೌದಿ ಅರೇಬಿಯಾದ ಸಿಮ್ ಕಾರ್ಡ್‌ಗಳೂ ಇವೆ ಎಂದು ದೆಹಲಿ ಪೊಲೀಸರು ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ಗೆ ವಿವರಿಸಿದರು. ಈ ಮಾಹಿತಿಗೆ ಪೂರಕವಾಗಿ ಕರೆ ವಿವರಗಳನ್ನೂ ದೆಹಲಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.

ತನಿಖೆ ಪ್ರಗತಿಯಲ್ಲಿದ್ದು, ವಿವಿಧ ವಿಧ್ವಂಸಕ ಕೃತ್ಯಗಳ ಆರೋಪಿಗಳಿಗೂ ಜುಂದಾಲ್‌ಗೂ ಇರುವ ನಂಟು ಮತ್ತು ಇವುಗಳ ಹಿಂದೆ ಇರುವ ಲಷ್ಕರ್-ಎ-ತೊಯ್ಬಾ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸಂಚುಕೋರರ ವಿವರಗಳನ್ನು ಅರಿಯಬೇಕಿದೆ. ಆದ್ದರಿಂದ ಆರೋಪಿಯನ್ನು ತಮ್ಮ ವಶದಲ್ಲೇ ಮುಂದುವರಿಸಲು ಅವಕಾಶ ನೀಡಬೇಕು ಎಂದು ದೆಹಲಿ ಪೊಲೀಸರು ನ್ಯಾಯಾಧೀಶರನ್ನು ಕೋರಿದರು ಎಂದು ಹೇಳಿರುವ ಮೂಲಗಳು, ಕೋರ್ಟ್ ಕಲಾಪವನ್ನು ಚಿತ್ರೀಕರಿಸಲಾಗಿದೆ ಎಂದೂ ತಿಳಿಸಿವೆ.

ಬಿಳಿ ವರ್ಣದ ಕುರ್ತಾ ಮತ್ತು ಪೈಜಾಮ ಧರಿಸಿದ್ದ 30 ವರ್ಷ ವಯಸ್ಸಿನ ಆರೋಪಿ ಜುಂದಾಲ್‌ನನ್ನು ದೆಹಲಿ ಪೊಲೀಸರು ಕೋರ್ಟ್‌ಗೆ ಕರೆತಂದರು, ಕೋರ್ಟ್ ಒಳಗೆ ಹೋಗುವವರೆಗೂ ಆತನ ಮುಖವನ್ನು ಮುಚ್ಚಲಾಗಿತ್ತು.  ಜುಂದಾಲ್‌ನನ್ನು ಈ ತಿಂಗಳ 21ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT