ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈನಿಂದ ಅಕ್ಕಿ ಖಚಿತ: ಸಿ.ಎಂ

Last Updated 1 ಜೂನ್ 2013, 19:48 IST
ಅಕ್ಷರ ಗಾತ್ರ

ತುಮಕೂರು: ಬಿಪಿಎಲ್ ಪಡಿತರ ಚೀಟಿದಾರರಿಗೆ ಕೆ.ಜಿ.ಗೆ 1 ರೂಪಾಯಿ ದರದಲ್ಲಿ ತಿಂಗಳಿಗೆ 30 ಕೆ.ಜಿ ಅಕ್ಕಿ ನೀಡುವ ಯೋಜನೆ ಜುಲೈ 1ರಿಂದ ಖಂಡಿತ ಜಾರಿಗೆ ಬರಲಿದೆ. ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಡುಗೆ ಅನಿಲ ಬಳಕೆದಾರರಿಗೆ ನೇರ ನಗದು ವರ್ಗಾವಣೆ ಮಾಡುವ ಯೋಜನೆಗೆ ಶನಿವಾರ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡವರಿಗೆ 1 ರೂಪಾಯಿಗೆ ಅಕ್ಕಿ ನೀಡುವ ಯೋಜನೆ ಜಾರಿಯಲ್ಲಿ ಸರ್ಕಾರ ಎಡವಿದೆ. ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ ಎಂಬ ಮಾತುಗಳಲ್ಲಿ ಹುರುಳಿಲ್ಲ. ಈ ವಿಚಾರದಲ್ಲಿ ಗೊಂದಲ ನಿರ್ಮಾಣ ಮಾಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಕ್ಕೆ ಹೆಚ್ಚುವರಿಯಾಗಿ ಅಕ್ಕಿ ನೀಡುವಂತೆ ಕೋರಲಾಗಿದೆ. ಪ್ರಧಾನಿ, ಕೇಂದ್ರ ಆಹಾರ ಸಚಿವರು, ಹಣಕಾಸು ಸಚಿವರ ಜತೆ ಚರ್ಚಿಸಿದ್ದೇನೆ. ಈಗ ರಾಜ್ಯಕ್ಕೆ ಕೊಡುತ್ತಿರುವ ಅಕ್ಕಿ ಜತೆಗೆ ಹೆಚ್ಚುವರಿಯಾಗಿ 1.80 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದೆ. ನಮ್ಮ ಬೇಡಿಕೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.

ಎತ್ತಿನ ಹೊಳೆ ಯೋಜನೆ: ಬರ ಪೀಡಿತ ಬಯಲು ಸೀಮೆ ಪ್ರದೇಶದ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಯೋಜನೆಗೆ ಶೀಘ್ರ ಚಾಲನೆ ಸಿಗಲಿದೆ. ಈಗಾಗಲೇ ಟೆಂಡರ್ ಕರೆದಿದ್ದು, ಚುನಾವಣೆ ನೀತಿ ಸಂಹಿತೆಯಿಂದಾಗಿ ಟೆಂಡರ್ ತೆರೆಯಲಾಗಿಲ್ಲ. ಈಗ ಟೆಂಡರ್ ತೆರೆದು, ಏಜೆನ್ಸಿ ಗುರುತಿಸಿ ಕಾಮಗಾರಿ ಗುತ್ತಿಗೆಯನ್ನು ವಹಿಸಲಾಗುವುದು ಎಂದರು.

ಬೆಂಬಲ: ಎತ್ತಿನಹೊಳೆ ಯೋಜನೆ ಜಾರಿಗೆ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಬೆಂಬಲ ವ್ಯಕ್ತಪಡಿಸಿದರು. ಮೊದಲ ಹಂತದಲ್ಲಿ ಎತ್ತಿನಹೊಳೆ ಜಾರಿ ಮಾಡಿದ ನಂತರ 2ನೇ ಭಾಗವಾಗಿ ಪರಮಶಿವಯ್ಯ ವರದಿ ಜಾರಿ ಮಾಡುವ ಮೂಲಕ ಬಯಲು ಸೀಮೆಯ ಬರ ಪೀಡಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯಿಲಿ, ನರ್ಮ್ ಯೋಜನೆ ಬೆಂಗಳೂರು, ಮೈಸೂರಿನಲ್ಲಿ ಜಾರಿಯಾಗಿದೆ. ಈ ಯೋಜನೆ ಜಾರಿಗೆ ಕೇಂದ್ರ ಹೊಸ ಸ್ವರೂಪ ನೀಡುತ್ತಿದ್ದು, ಮುಂದಿನ ಹಂತದಲ್ಲಿ ತುಮಕೂರು, ಮಂಗಳೂರು, ಹುಬ್ಬಳ್ಳಿ-  ಧಾರವಾಡ ಮತ್ತಿತರ ನಗರಗಳಿಗೂ ವಿಸ್ತರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT