ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ನಲ್ಲಿ ಚುನಾವಣೆ: ಈಗಲೇ ಪ್ರಚಾರ; ಬಾಡೂಟ, ಗುಂಡು ಪಾರ್ಟಿ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿಕ್ಷಕರಿಗೆ ಭರಪೂರ ಭೋಜನ, ಆಮಿಷಗಳ ಸುರಿಮಳೆ, ಮಹಿಳಾ ಶಿಕ್ಷಕರಿಗೂ ವಿಶೇಷ ಕೊಡುಗೆಗಳು, ಶಾಲಾ-ಕಾಲೇಜುಗಳಲ್ಲೇ ಪ್ರಚಾರ...

ಇದು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸನ್ನಿವೇಶ. ಜೂನ್ ತಿಂಗಳಲ್ಲಿ ಈ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಆದರೆ, ಅಭ್ಯರ್ಥಿಗಳು ಶಿಕ್ಷಕರನ್ನು ಸಂತೃಪ್ತಿ ಪಡಿಸಲು ಈಗಿನಿಂದಲೇ ಪೈಪೋಟಿಗಳಿದಿದ್ದಾರೆ. 

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಲು ಬಿಜೆಪಿಯಿಂದ ವೈ.ಎ. ನಾರಾಯಣಸ್ವಾಮಿ, ಜೆಡಿಎಸ್‌ನಿಂದ ಆರ್. ಚೌಡರೆಡ್ಡಿ, ಕಾಂಗ್ರೆಸ್‌ನಿಂದ ರಾಮಲಿಂಗಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ವಕೀಲ ಆರ್. ರಾಜಣ್ಣ, ಬಸವರಾಜ್ ಮುಂತಾದವರು ಆಕಾಂಕ್ಷಿಗಳಾಗಿದ್ದಾರೆ. ಈ ಆಕಾಂಕ್ಷಿ ಅಭ್ಯರ್ಥಿಗಳು ಶಿಕ್ಷಕರನ್ನು ಮನವೊಲಿಸಲು ದಿನನಿತ್ಯ ಪ್ರಚಾರದಲ್ಲಿ ತೊಡಗಿದ್ದಾರೆ.

ಶಿಕ್ಷಕರಿಗೆ ನೂತನ ವರ್ಷದ ಡೈರಿಗಳು, ಕ್ಯಾಲೆಂಡರ್‌ಗಳು, ಪುಟ್ಟ ಕ್ಯಾಲೆಂಡರ್‌ಗಳನ್ನು ನೀಡುವ ಮೂಲಕ ಅಭ್ಯರ್ಥಿಗಳು ಮೊದಲ ಹಂತದ ಆಮಿಷಗಳನ್ನೊಡ್ಡಿದ್ದಾರೆ. ಇನ್ನು ಶಿಕ್ಷಕಿಯರಿಗಾಗಿ ಬೆಳ್ಳಿ ಬಟ್ಟಲುಗಳನ್ನು ನೀಡಲು ಅಭ್ಯರ್ಥಿಯೊಬ್ಬರು ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ಬಟ್ಟಲುಗಳನ್ನು ನೀಡುವುದು ಈ ಅಭ್ಯರ್ಥಿಯ ಉದ್ದೇಶ.  ಶಿಕ್ಷಕರಿಗೆ ಗುಂಪು, ಗುಂಪಾಗಿ ವಿಶೇಷ ಬಾಡೂಟ, ಭರ್ಜರಿ ಪಾರ್ಟಿಗಳನ್ನೂ ಅಭ್ಯರ್ಥಿಗಳು ಆಯೋಜಿಸುತ್ತಿದ್ದಾರೆ.

ಅಭ್ಯರ್ಥಿಗಳ ಈ ಆಮಿಷಗಳಿಗೆ ಎಲ್ಲ ಶಿಕ್ಷಕರು ಬಲಿಯಾಗುತ್ತಿಲ್ಲ. ಹಲವು ಶಿಕ್ಷಕರು ಕಾಣಿಕೆಗಳನ್ನು ನಯವಾಗಿ ತಿರಸ್ಕರಿಸಿದ್ದಾರೆ. ತಾವು ವಿತರಿಸಿದ ಡೈರಿಗಳನ್ನು ಹಲವು ಶಿಕ್ಷಕರು ಮುಟ್ಟಿಲ್ಲ. ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ ಹಲವಾರು ಶಿಕ್ಷಕರಿದ್ದಾರೆ~ ಎಂದು ಅಭ್ಯರ್ಥಿಗಳ ಬೆಂಬಲಿಗರು ಹೇಳುತ್ತಾರೆ.

ಚುನಾವಣಾ ಆಯೋಗ ವೆಚ್ಚಕ್ಕೆ ಕಡಿವಾಣ ಹಾಕುತ್ತಿಲ್ಲ. ಆದ್ದರಿಂದಲೇ ಅಭ್ಯರ್ಥಿಗಳು ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದಾರೆ.  ಇನ್ನೂ ಶಾಲಾ-ಕಾಲೇಜುಗಳ ಅವಧಿಯಲ್ಲೇ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿರುವ ಪ್ರಸಂಗಗಳು ದಿನನಿತ್ಯ ನಡೆಯುತ್ತಿವೆ. ಇದರಿಂದ ಪಾಠ-ಪ್ರವಚನಕ್ಕೂ ತೊಂದರೆಯಾಗುತ್ತಿದೆ.

ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ವಿ.ಜಿ. ದಿವಾಕರ್, ಮುಖ್ಯಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ನಂತರವೂ ಶಾಲಾ-ಕಾಲೇಜುಗಳಲ್ಲೇ ಪ್ರಚಾರ ನಡೆಯುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT