ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಒಸಿ: ವೇತನ ಇಲ್ಲದೇ ಪರದಾಟ

Last Updated 27 ಅಕ್ಟೋಬರ್ 2011, 10:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆಗಳಲ್ಲಿ (ಜೆಒಸಿ) ಸೇವೆ ಸಲ್ಲಿಸಿ ಈಗ ಬೇರೆ ಇಲಾಖೆಗಳಿಗೆ ಕರ್ತವ್ಯಕ್ಕೆ ನಿಯೋಜಿತರಾಗಿರುವ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಕಳೆದ ಹಲವು ತಿಂಗಳುಗಳಿಂದ ಸಂಬಳ ದೊರೆಯದೇ ಪರದಾಡುತ್ತಿದ್ದಾರೆ.

ಈಗಾಗಲೇ ವರದಿಯಾಗಿರುವಂತೆ ಜೆಒಸಿ ಸಂಸ್ಥೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಬೇರೆ ಇಲಾಖೆಗಳಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದೆ. ಆದರೆ ಅವರಿಗೆ ಸಂಬಳ ಮಾತ್ರ ದೊರೆತಿಲ್ಲ ಎಂಬುದು ಈಗ ಬಲವಾಗಿ ಕೇಳಿ ಬರುತ್ತಿರುವ ದೂರು.

ಜೆಒಸಿ ಮುಚ್ಚಲು ಸರ್ಕಾರ ಮಾಡಿದ ತೀರ್ಮಾನದಿಂದಾಗಿ ರಾಜ್ಯದಾದ್ಯಂತ ಸೇವೆ ಸಲ್ಲಿಸುತ್ತಿದ್ದ 1900ಕ್ಕೂ ಜೆಒಸಿ ಕೇಂದ್ರಗಳ 3746 ನೌಕರರು ಬೇರೆ ಇಲಾಖೆಗೆ ನಿಯೋಜಿತರಾದರು. ಇವರಿಗೆ ವೇತನ ದೊರೆಯದೇ ಅವರು ಮತ್ತು ಅವರನ್ನು ಅವಲಂಬಿಸಿರುವ ಕುಟುಂಬ ವರ್ಗ ಅತಂತ್ರ ಸ್ಥಿತಿಯಲ್ಲಿ ಪರದಾಡುವಂತಾಗಿದೆ.

ಜೆಒಸಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲು ರಾಜ್ಯ ಸರ್ಕಾರ 2010ರ ನವೆಂಬರ್ 18ರಂದು ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡಿತು. ಕಾಯಂ ಸಿಬ್ಬಂದಿಯನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ನಿಯೋಜಿಸಲು ತೀರ್ಮಾನಿಸಲಾಗಿತ್ತು.

`ಒಂದೆಡೆ ಎಲ್ಲ ಸಿಬ್ಬಂದಿಯನ್ನೂ ಬೇರೆಡೆ ನಿಯೋಜನೆ ಮಾಡಲಾಗಿದೆ ಎಂಬುದಾಗಿ ದಾಖಲೆಗಳಲ್ಲಿ ಹೇಳಿದ್ದರೂ, ಈ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಜೊತೆಗೆ ಸಂಬಳವೂ ದೊರಕಿಲ್ಲ. ಒಟ್ಟಿನಲ್ಲಿ ಈ ನೌಕರರ ಸ್ಥಿತಿ ತ್ರಿಶಂಕುವಿನಂತಾಗಿದೆ~ ಎಂಬುದು ಆಘಾತಕ್ಕೆ ಒಳಗಾಗಿರುವ ಸಿಬ್ಬಂದಿಯ ನೋವು.

ನಿಯೋಜನೆ ಆಗದೇ ಇನ್ನೂ ಖಾಲಿ ಇರುವ ಸಿಬ್ಬಂದಿಯನ್ನು ನಿಗಮ, ಮಂಡಳಿಗಳಿಗೂ ನಿಯೋಜನೆ ಮಾಡುವ ಚಿಂತನೆ ನಡೆದಿದೆ. ಆದರೆ ತಾಂತ್ರಿಕ ಶಿಕ್ಷಣ ಅರ್ಹತೆ ಪಡೆದಿರುವ ಸಿಬ್ಬಂದಿಯನ್ನು ಗುಮಾಸ್ತರ ಹುದ್ದೆಗೆ ನೇಮಕ ಮಾಡಿದರೆ ಸಮರ್ಥವಾಗಿ ಕೆಲಸ ನಿರ್ವಹಿಸಲು ಕಷ್ಟ. ಈ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎನ್ನುವುದು ತಜ್ಞರ ಅನಿಸಿಕೆ.

`ಸದ್ಯ ವಿವಿಧ ಇಲಾಖೆಗಳಲ್ಲಿ ನಿಯೋಜನೆಗೊಂಡಿರುವ ಜೆಒಸಿ ಕೇಂದ್ರಗಳ ಸಿಬ್ಬಂದಿಗೆ ಹೊಸ ಕೆಲಸ ಗೊತ್ತಿಲ್ಲ. ಜೊತೆಗೆ 25 ವರ್ಷಗಳ ಸೇವಾ ಅನುಭವ ಇದ್ದವರೂ ಸಹ ಐದು ವರ್ಷದ ಹಿಂದಿನ ವೇತನ ಶ್ರೇಣಿಯನ್ನು ಪಡೆಯುವಂತಾಗಿದೆ~ ಎನ್ನುತ್ತಾರೆ ಕಲಘಟಗಿ ಕಾಲೇಜಿನ ಉಪನ್ಯಾಸಕ ಬಸವರಾಜ ಕುರಹಟ್ಟಿ.

`ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಬಿ.ಎ. ಹರೀಶಗೌಡ ಜೆಒಸಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವರದಿ ಸಲ್ಲಿಸಿದ್ದರು. ಅವರ ಶಿಫಾರಸು ಪಾಲಿಸಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಈಗ ವೇತನವಿಲ್ಲದೆ, ಕೆಲಸದ ಭದ್ರತೆಯೂ ಇಲ್ಲದೆ ಪರದಾಡುವಂತೆ ಆಗಿದೆ~ ಎಂಬುದು ಖಾಸಗಿ ಜೆಒಸಿ ಕೇಂದ್ರದ ಉಪನ್ಯಾಸಕ ಮಹಾವೀರ ಉಪಾಧ್ಯ ಅವರ ಅಭಿಪ್ರಾಯ.

ಕೃತಕ ಕಾಲು ಜೋಡಣಾ ಶಿಬಿರ
ಹುಬ್ಬಳ್ಳಿ:
ರಾಜ್ಯೋತ್ಸವ ಅಂಗವಾಗಿ ನವೆಂಬರ್ ಒಂದರಂದು ಬಡ ಅಂಗವಿಕಲರಿಗೆ ಉಚಿತವಾಗಿ ಜೈಪುರ ಕೃತಕ ಕಾಲು ಜೋಡಣಾ ಶಿಬಿರವನ್ನು ಕಿಮ್ಸನಲ್ಲಿ ಏರ್ಪಡಿಸಲಾಗಿದೆ.

ಇನ್ನರ್ ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಹಾಗೂ ಮಹಾವೀರ ಲಿಂಬ್ ಸೆಂಟರ್ ಆಶ್ರಯದಲ್ಲಿ ಶಿಬಿರ ನಡೆಯಲಿದೆ. ಒಟ್ಟು 51 ಕೃತಕ ಕಾಲುಗಳನ್ನು ವಿತರಿಸಲಾಗುತ್ತದೆ. ಆಸಕ್ತರು ತಮ್ಮ ಕಾಲಿನ ಅಳತೆಯನ್ನು ಇದೇ 27ರೊಳಗಾಗಿ ಹೆಸರು ನೋಂದಾಯಿಸಬಹುದು.
 
ಮೊದಲು ಬಂದವರಿಗೆ ಮೊದಲ ಆದ್ಯತೆ. ಹೆಚ್ಚಿನ ವಿವರಗಳಿಗೆ ಹಾಗೂ ಹೆಸರು ನೋಂದಾವಣೆಗೆ ಮಹಾವೀರ ಲಿಂಬ್ ಸೆಂಟರ್ (2272498), ವೀರೇಂದ್ರ ಜೈನ್ (9448786429), ಮಂಜು ಓಸ್ತವಾಲ್ (9480207586) ಅಥವಾ ನವೀತಾ ಮೋಡಿ (9449819126) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT