ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟಿ ಕಾಲೇಜಿನವ್ರಿಗೆ ನೌಕ್ರಿ ಸಿಕ್ಕದ

Last Updated 8 ಅಕ್ಟೋಬರ್ 2011, 6:45 IST
ಅಕ್ಷರ ಗಾತ್ರ

 `ಸರ್... ಜೆಟಿ ಕಾಲೇಜ್ನ ಸ್ಟೂಡೆಂಟ್‌ಗಳಿಗೆ ವಿಜಯ ಬ್ಯಾಂಕ್ ನೌಕ್ರಿ ಸಿಕ್ತಂತೆ. ಅದೂ ಕ್ಯಾಂಪಸ್ ಸೆಲೆಕ್ಷನ್, ಗದಗ್‌ನಲ್ಲಿ ಇಷ್ಟು ಪ್ರಮಾಣ್ದಾಗ್ ಆಯ್ಕೆ ಮಾಡಿಕೊಂಡದ್ದು ಇದೇ ಮೊದಲ್ ಸಲ ನೋಡ್ರಿ...~ ಎಂದು ನಮ್ಮ ಶರಣು ಮೆಣಸಿನಕಾಯಿ ಹೇಳಿದ್ದನ್ನ ಕೇಳಿ ಸ್ವಲ ಕುತೂಹಲವಾಯಿತು. ಅದೇನೋ ನೋಡೆ ಬಿಡೋಣ ಎಂದು ಜೆಟಿ ಕಾಲೇಜಿಗೆ ಹೋದೆವು.

ಕಾಲೇಜ್ ಕ್ಯಾಂಪಸ್‌ಗೆ ಎಂಟ್ರಿ ಕೊಡುವ ಮೊದಲು ಮತ್ತೇ ನಮ್ಮ ಮೆಣಸಿನಕಾಯಿ ಕಾಲೇಜಿನ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೊಟ್ಟರು. 1958ರಲ್ಲಿ ಪ್ರಾರಂಭವಾಯಿತು. ನ್ಯಾಕ್ ಕಮಿಟಿಯಿಂದ `ಎ~ ಗ್ರೇಡ್ ಮಾನ್ಯತೆ ಪಡೆದುಕೊಂಡಿದೆ ಎಂದು ಪ್ರಾಥಮಿಕ ಜ್ಞಾನವನ್ನು ತಲೆಗೆ ತುಂಬಿದರು.

ಕಾಲೇಜಿನ ಒಳಗೆ ಹೋದ ತಕ್ಷಣ ಪ್ಲೇಸ್‌ಮೆಂಟ್ ಅಧಿಕಾರಿ ಎಸ್.ವಿ. ಕುಂದಗೋಳ ಎದುರಾದರು. ಉಭಯಕುಶಲೋಪರಿಯಾದ ತರುವಾಯ ಮಾತಿಗೆ ಮುಂದಡಿ ಇಟ್ಟರು.

`ಸರ್.. ನಮ್ಮ ಕಾಲೇಜಿನ 13 ವಿದ್ಯಾರ್ಥಿಗಳು ವಿಜಯಾ ಬ್ಯಾಂಕಿಗೆ ಆಯ್ಕೆಯಾಗಿದ್ದಾರೆ. ಎಲ್ಲರೂ ಬಿಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ ಓದಿದವರು. ಪದವಿ ಮುಗಿಸಿ ಕಾಲೇಜಿನಿಂದ ಹೋಗುವ ಮೊದಲೆ ನೌಕರಿ ಸಿಕ್ಕಿಬಿಟ್ಟಿದೆ~  ಎಂದು ಖುಷಿಯಿಂದ ಹೇಳಿದರು.

ವಾಣಿಶ್ರೀ ಗೌಡರ, ಮಂಜುಳಾ ಚಲವಾದಿ, ದೀಪಾ ನಾಯಕ, ಅಶ್ವಿನಿ ನಾಲ್ವಡ, ವಿನ್ಸಿಲ್ಲಾ ದೊರೆಸ್ವಾಮಿ, ಸ್ವಾತಿ ಮಾಂಡ್ರೆ, ಸುಶ್ಮಿತಾ ಜೋಶಿ, ಶ್ವೇತಾ ಸುರೇಬಾನ, ಪ್ರತಿಭಾ ಸಂದಿಗವಾಡ. ಅಭಿಮನ್ಯು ಹುಬ್ಳೀಕರ, ಕಲ್ಲಪ್ಪ ಇದ್ಲಿ, ಚಿನ್ಮಯ ಮೂರ್ಖಂಡಿ, ಈರಣ್ಣ ಜವಳಿ ಇಷ್ಟು ಮಂದಿ ಈಗ ಬ್ಯಾಂಕ್ ನೌಕರರು. ಇವರೆಲ್ಲ ತಮ್ಮ-ತಮ್ಮ ಕ್ಲಾಸಿನಲ್ಲಿ 60ಕ್ಕಿಂತ ಹೆಚ್ಚು ಅಂಕಗಳಿಸಿರುವ ಪ್ರತಿಭಾನ್ವಿತರು ಎಂದು ಕುಂದಗೋಳ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಯಿಂದ ಹೇಳಿದರು.

ಐದು ದಶಕ ಕಳೆದಿರುವ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ (ಜೆ.ಟಿ) ಕಾಲೇಜನಲ್ಲಿ ಇದೇ ಮೊದಲು ಇಷ್ಟು ದೊಡ್ಡ ಮಟ್ಟದಲ್ಲಿ ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಂಡಿರುವುದು. ಕಾಲೇಜಿಗೆ ಐತಿಹಾಸಿಕ ವಿಷಯವಾಗಿರುವ ಈ ಸೆಲೆಕ್ಷನ್ ಪ್ರಕ್ರಿಯೆ ಬಗ್ಗೆ ಸವಿಸ್ತಾರವಾಗಿ ಹೇಳಲು ಪ್ರಾರಂಭಿಸಿದರು ಕುಂದಗೋಳ.

`ನಮ್ಮ ಕಾಲೇಜ್ ಕ್ಯಾಂಪಸ್ಸಿನಲ್ಲೇ ವಿಜಯಾ ಬ್ಯಾಂಕಿನ ಶಾಖೆ ಇದೆ. ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ರಾಷ್ಟ್ರಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವುದು ಗೊತ್ತಾಯಿತು. ನಂತರ ಬೆಳಗಾವಿಯ ಕೇಂದ್ರ ಕಚೇರಿಗೆ ಸಂಪರ್ಕ ಸಾಧಿಸಿ ಕ್ಯಾಂಪಸ್ ಸೆಲೆಕ್ಷನ್‌ಗೆ ಮನವಿ ಮಾಡಿಕೊಳ್ಳಲಾಯಿತು. ಕೋರಿಕೆಗೆ ಸ್ಪಂದಿಸಿದ ಅಧಿಕಾರಿಗಳು, ಕಾಲೇಜಿನಲ್ಲಿ ಎಷ್ಟು ವಿದ್ಯಾರ್ಥಿಗಳು ಕಳೆದ ಸೆಮಿಸ್ಟರ್‌ಗಳಲ್ಲಿ ಉತ್ತಮ ಅಂಕ ತೆಗೆದುಕೊಂಡಿದ್ದಾರೆ. ಅಂತಹವರ ಪಟ್ಟಿ ತಯಾರು ಮಾಡಿ ಕಳುಹಿಸಿಕೊಡಿ ಎಂದರು.

82 ವಿದ್ಯಾರ್ಥಿಗಳ ಮೊದಲ ಪಟ್ಟಿ ತಯಾರಾಯಿತು. ಕೆಲ ದಿನಗಳ ನಂತರ ಪಟ್ಟಿಯನ್ನು ಕಡಿತಗೊಳಿಸಬೇಕು ಎನ್ನುವ ಸೂಚನೆಯೂ ಬಂತು. ಅದೇ ರೀತಿ ಎರಡು-ಮೂರು ಬಾರಿ ಕಡಿತಗೊಳಿಸಿ, ಬಳಿಕ ಅಂತಿಮವಾಗಿ 25 ಮಂದಿ ಕೊನೆಯ ಸುತ್ತಿಗೆ ಅರ್ಹತೆ ಪಡೆದುಕೊಂಡರು. ಇವರನ್ನು ಜಾತಿವಾರು ಮೀಸಲಾತಿ ಆಧಾರದ ಮೇಲೆ, ಸರ್ಕಾರದ ಸೂಚನೆ ಅನುಸಾರವಾಗಿಯೇ ಆಯ್ಕೆ ಮಾಡಲಾಯಿತು.

ಜುಲೈ ತಿಂಗಳು ನಾಲ್ಕು ಮಂದಿ ಅಧಿಕಾರಿಗಳು ಬಂದರು. ವಿದ್ಯಾರ್ಥಿಗಳನ್ನು ಸಂದರ್ಶನ ಮಾಡಿದರು. ಕೊನೆಗೆ 13 ಮಂದಿಯನ್ನು ಆಯ್ಕೆ ಮಾಡಿಕೊಂಡರು. ಹತ್ತು ದಿನಗಳ ಹಿಂದೆ ಇವರಿಗೆ ಕೆಲಸದ ಆದೇಶವೂ ಬಂತು. ನಾವು ಪಟ್ಟ ಶ್ರಮವೂ ಸಾರ್ಥಕವಾಯಿತು~ ಎಂದು ಭಾವುಕರಾದರು ಕುಂದಗೋಳ.

“ನಾವು ಮೊದಲು ಸಂದರ್ಶನಕ್ಕೆ ಹಾಜರಾದಾಗ ಸ್ವಲ್ಪ ಹೆದರಿಕೆ ಉಂಟಾಯಿತು. ಆದರೆ ನಮಗೆ ಸಾಫ್ಟ್‌ಸ್ಕಿಲ್ ಬಗ್ಗೆ ಮೂರ‌್ನಾಲ್ಕು ದಿನಗಳು ತರಬೇತಿ ನೀಡಿದ್ದರಿಂದ ಧೈರ್ಯವಾಗಿ  ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದೆವು~ ಎಂದು ತಮ್ಮ ಅನುಭವ ಹಂಚಿಕೊಂಡರು ಚಿನ್ಮಯ ಮೂರ್ಖಂಡಿ ಹಾಗೂ ಅಭಿಮನ್ಯು ಹುಬ್ಳೀಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT