ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಏಕಾಂಗಿ ಸ್ಪರ್ಧೆ: ಕುಮಾರಸ್ವಾಮಿ

Last Updated 21 ಅಕ್ಟೋಬರ್ 2012, 12:55 IST
ಅಕ್ಷರ ಗಾತ್ರ

ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳವು 224 ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿ ಕಣಕ್ಕಿಳಿಸಲಿದೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರವು ರೈತರ ಸಾಲ 3,600 ಕೋಟಿ ಮನ್ನಾ ಘೋಷಣೆ ಮಾಡಿದ್ದರೂ ಈವರೆಗೂ ಮನ್ನಾ ಮಾಡಿಲ್ಲ. ಕೇವಲ ಘೋಷಣೆ ಆಗಿದೆ. 2013ರವರೆಗೆ ಅವಧಿ ನಿಗದಿಪಡಿಸಿದ್ದಾರೆ. ಆ ಹೊತ್ತಿಗೆ ಈ ಸರ್ಕಾರ ಅಧಿಕಾರದಲ್ಲಿಯೇ ಇರುವುದಿಲ್ಲ. ಅವೈಜ್ಞಾನಿಕ ಘೋಷಣೆ ಮಾಡಿ ಸರ್ಕಾರ ಜನತೆ ಕಣ್ಣಿಗೆ ಮಣ್ಣೆರಚುತ್ತಿದೆ.

9 ಲಕ್ಷ ಕುಟುಂಬಗಳಿಗೆ ಮಾಸಾಶನ ರದ್ದುಪಡಿಸಲಾಗಿದೆ. ಸಾವಿರಾರು ಕುಟುಂಬಗಳಿಗೆ 8-9 ತಿಂಗಳಿಂದ ಮಾಸಾಶನ ದೊರಕಿಲ್ಲ. ಜನತೆಯ ಸಮಸ್ಯೆ ಅರಿತು ಪರಿಹರಿಸುವ ಪ್ರಯತ್ನ ಮಾಡದೇ ಗೊಂದಲಕಾರಿ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸರ್ಕಾರವನ್ನು ಬಿಜೆಪಿ ನಡೆಸುತ್ತಿದೆ ಎಂದು ಆರೋಪಿಸಿದರು.

ತೆರಿಗೆ ಹೆಚ್ಚಳ-ಬಿಜೆಪಿ ಸಾಧನೆ: ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಲಕ್ಷ ಕೋಟಿ ಬಜೆಟ್ ಘೋಷಣೆ ಮಾಡಿದೆಯೇ ವಿನಃ ಅಭಿವೃದ್ಧಿ ಕೆಲಸ ಆಗಿಲ್ಲ. ಶೇ 14.5ರಷ್ಟು ವ್ಯಾಟ್ ತೆರಿಗೆ ಹೆಚ್ಚಳ ಮಾಡಿದೆ. ರಾಷ್ಟ್ರದಲ್ಲಿಯೇ ಅತ್ಯಂತ ಗರಿಷ್ಠ ತೆರಿಗೆ ಪಡೆಯುವ ರಾಜ್ಯ ಕರ್ನಾಟಕ. ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುವ ಬಿಜೆಪಿ ಸರ್ಕಾರವು ಅಭಿವೃದ್ಧಿ ಕೆಲಸಕ್ಕೆ ಮಾತ್ರ ಹಣ ಕೊಟ್ಟಿಲ್ಲ ಎಂದು ಆಪಾದಿಸಿದರು.

ಹಣ ಪಡೆಯುವ ಹಕ್ಕಿದೆ: ಮಂಗಳೂರಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರವು ರಾಜ್ಯಕ್ಕೆ 80 ಸಾವಿರ ಕೋಟಿ ಕೊಟ್ಟಿದೆ ಎಂದು ಹೇಳಿದ್ದಾರೆ. ಈ 80 ಸಾವಿರ ಕೋಟಿ ಹಣವನ್ನು ಕರ್ನಾಟಕ ರಾಜ್ಯಕ್ಕೆ `ಧರ್ಮ~ಕ್ಕೇನೂ ಕೊಟ್ಟಿಲ್ಲ. 1 ಲಕ್ಷ ಕೋಟಿ ತೆರಿಗೆ ಕಟ್ಟುವ  ರಾಜ್ಯದ ಜನತೆಗೆ ಕೇಂದ್ರದಿಂದ ಅಷ್ಟೇ ಪ್ರಮಾಣದ ಹಣ ಪಡೆಯುವ ಹಕ್ಕು ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT