ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಕಿತ್ತಾಟ: ಕಾಂಗ್ರೆಸ್‌ಗೆ ಲಾಭ?

Last Updated 28 ಜನವರಿ 2012, 11:00 IST
ಅಕ್ಷರ ಗಾತ್ರ

ಯಾದಗಿರಿ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಂಡಾಯ ಎದ್ದಿರುವ ಸದಸ್ಯರು ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿದ್ದು, ಬಹುಮತ ಪಡೆದಿರುವ ಜೆಡಿಎಸ್‌ನ ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ನಗರಸಭೆ ಅಧ್ಯಕ್ಷೆ ನಾಗರತ್ನಾ ಅನಪೂರ ವಿರುದ್ಧ ಜ.10 ರಂದು ಅವಿಶ್ವಾಸ ಮಂಡನೆ ಮಾಡಲಾಗಿತ್ತು. ಅವಿಶ್ವಾಸ ಗೊತ್ತುವಳಿ ಸ್ವೀಕೃತವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇದೇ ರೀತಿ ಉಪಾಧ್ಯಕ್ಷರಾಗಿದ್ದ ಮಲ್ಲಯ್ಯ ಗೊಂದೆನೂರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಎರಡೂ ಸ್ಥಾನಗಳಿಗೆ ಫೆ.1 ರಂದು ಚುನಾವಣೆ ನಡೆಯಲಿದೆ.

ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ. ಫೆ.1 ರಂದು ಬೆಳಿಗ್ಗೆ 11 ಗಂಟೆಯವರೆಗೆ ನಾಮಪತ್ರ ಸಲ್ಲಿಸಲಾಗುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಗಲಿದೆ. ನಂತರ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳುವ ಸಮಯ ನಿಗದಿಪಡಿಸಲಾಗಿದ್ದು, ನಂತರ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳೂ ಆಗಿರುವ ಸಹಾಯಕ ಆಯುಕ್ತರು ಜಾರಿ ಮಾಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಜೆಡಿಎಸ್‌ಗೆ ತಲೆನೋವು: ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ನಡೆದ ಪ್ರಥಮ ಚುನಾವಣೆಯಲ್ಲಿ 31 ಸ್ಥಾನಗಳ ಪೈಕಿ 18 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಜೆಡಿಎಸ್ ಸ್ಪಷ್ಟ ಬಹುಮತ ಪಡೆದಿದೆ. ಕಾಂಗ್ರೆಸ್ 9 ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ.

ತಲಾ 30 ತಿಂಗಳ ಎರಡು ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿದ್ದು, ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಮೊದಲ ಅವಧಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಜೆಡಿಎಸ್‌ಗೆ ದೊರೆತಿದ್ದವು. ಎರಡನೇ ಅವಧಿಗೂ ಎರಡೂ ಸ್ಥಾನಗಳಲ್ಲಿ ಜೆಡಿಎಸ್‌ನ ಸದಸ್ಯರೇ ಅಧಿಕಾರ ಪಡೆದಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಎರಡನೇ ಅವಧಿಯ ಅಧ್ಯಕ್ಷ ಸ್ಥಾನವನ್ನು ತಲಾ 15 ತಿಂಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು. ಅದರಂತೆ ಮೊದಲ 15 ತಿಂಗಳ ಅಧಿಕಾರ ನಡೆಸಿದ ನಾಗರತ್ನಾ ಅನಪೂರ ಹಾಗೂ ಮಲ್ಲಯ್ಯ ಗೊಂದೆನೂರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು.

ಉಪಾಧ್ಯಕ್ಷ ಮಲ್ಲಯ್ಯ ಗೊಂದೆನೂರ ರಾಜೀನಾಮೆ ನೀಡಿದ್ದು, ಅಧ್ಯಕ್ಷೆ ನಾಗರತ್ನಾ ಅನಪೂರ ರಾಜೀನಾಮೆ ನೀಡದೇ ಇರುವುದರಿಂದ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು. ಅವಿಶ್ವಾಸ ಗೊತ್ತುವಳಿ ಸ್ವೀಕೃತವಾಗಿದ್ದರಿಂದ ನಾಗರತ್ನಾ ಅನಪೂರ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಪ್ರತಿಪಕ್ಷವಾದ ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಪಡೆದಿದ್ದು, ಏನನ್ನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇದೀಗ ಬಂಡಾಯ ಎದ್ದಿರುವ ಜೆಡಿಎಸ್ ಸದಸ್ಯರೇ ಕಾಂಗ್ರೆಸ್‌ಗೆ ಬೆಂಬಲ ನೀಡಲು ಮುಂದಾಗಿದ್ದು, ಜೆಡಿಎಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಏಕೈಕ ಸಂಸ್ಥೆಯಲ್ಲಿ ಜೆಡಿಎಸ್ ಆಡಳಿತ ಹೊಂದಿತ್ತು. ಇದೀಗ ಅದೂ ಕೈತಪ್ಪಿ ಹೋಗಲಿದ್ದು, ಜಿಲ್ಲಾ ಘಟಕದ ನೂತನ ಅಧ್ಯಕ್ಷರ ನೇಮಕವಾದ ಕೆಲ ದಿನಗಳಲ್ಲಿಯೇ ಈ ಚಟುವಟಿಕೆಗಳು ನಡೆದಿರುವುದು ಆರಂಭದಲ್ಲಿಯೇ ಪಕ್ಷಕ್ಕೆ ಹಿನ್ನಡೆ ಉಂಟಾದಂತಾಗಿದೆ.

ಅಧ್ಯಕ್ಷ ವಿರುದ್ಧ ಅವಿಶ್ವಾಸ ಮಂಡನೆಯ ಸಭೆಯಲ್ಲಿ 27 ಸದಸ್ಯರು ಗೊತ್ತುವಳಿ ಪರವಾಗಿ ಮತ ಚಲಾಯಿಸಿದ್ದು, ಅಂದು ನಡೆದ ಸಭೆಗೆ ಸ್ವತಃ ನಾಗರತ್ನಾ ಅನಪೂರ ಗೈರು ಹಾಜರಾಗಿದ್ದರು. ಹೀಗಾಗಿ ಜೆಡಿಎಸ್‌ನ 14 ಸದಸ್ಯರು ಅವಿಶ್ವಾಸ ಗೊತ್ತುವಳಿಯ ಪರವಾಗಿ ಮತ ಚಲಾಯಿಸಿರುವುದು ಜೆಡಿಎಸ್ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ: ಬದಲಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದೀಗ ತೆರವಾಗಿರುವ ಅಧ್ಯಕ್ಷ ಸ್ಥಾನ ಅನಾಯಾಸವಾಗಿ ಕಾಂಗ್ರೆಸ್ ಪಾಲಾಗಲಿದೆ. ಜೆಡಿಎಸ್‌ನಿಂದ ಬಂಡಾಯ ಎದ್ದಿರುವ 14 ಸದಸ್ಯರು ಹಾಗೂ ನಾಲ್ವರು ಪಕ್ಷೇತರ ಸದಸ್ಯರು, ಕಾಂಗ್ರೆಸ್ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್‌ನ ಲಲಿತಾ ಅನಪೂರ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಬಂಡಾಯ ಎದ್ದಿರುವ ನರಸಿಂಗ ಲಿಂಗೇರಿ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆ ಪ್ರಕ್ರಿಯೆಯಲ್ಲಿ ಒಮ್ಮತದ ಆಯ್ಕೆ ಮಾಡಲಾಗುವುದು. ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಬಹುತೇಕ ಅವಿರೋಧ ಆಯ್ಕೆ ಆಗಲಿದೆ ಎಂದು ಕಾಂಗ್ರೆಸ್‌ನ ಸದಸ್ಯರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜೆಡಿಎಸ್‌ನ ಮುಖಂಡರು, ಬಂಡಾಯ ಎದ್ದಿರುವ ಸದಸ್ಯರ ಮನವೊಲಿಕೆಗೆ ಯತ್ನಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮನವೊಲಿಕೆ ಫಲ ನೀಡದಿದ್ದರೆ, ವಿಪ್ ಜಾರಿಗೊಳಿಸುವ ನಿಟ್ಟಿನಲ್ಲೂ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ 18 ಸದಸ್ಯರಲ್ಲಿ 14 ಸದಸ್ಯರು ವಿರೋಧಿ ಪಾಳೆಯಕ್ಕೆ ಸೇರಿರುವುದು ಜೆಡಿಎಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಸದ್ಯಕ್ಕೆ ಜೆಡಿಎಸ್ ಸದಸ್ಯರ ಮನವೊಲಿಕೆ ಪ್ರಯತ್ನ ಕೈಗೂಡುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಯಾವುದೇ ಬದಲಾವಣೆ ಆದರೂ ಆಶ್ಚರ್ಯವಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಕಾಂಗ್ರೆಸ್, ಅನಾಯಾಸವಾಗಿ ಅಧ್ಯಕ್ಷ ಸ್ಥಾನಕ್ಕೆ ಏರುವ ಕನಸಿನಲ್ಲಿದೆ. ಫೆ.1 ರಂದು ನಡೆಯುವ ಚುನಾವಣೆಯ ಬಳಿಕವಷ್ಟೇ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT