ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ನೀರು ಕಲಕಿದ ಕೆಜೆಪಿ!

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹಾಸನ: ಹೇಮಾವತಿಯಲ್ಲಿ ನೀರು ಸ್ವಲ್ಪ ಕದಡಿದೆ. ಜಾತ್ಯತೀತ ಜನತಾ ದಳ (ಜೆಡಿಎಸ್) ಪ್ರಾಬಲ್ಯದ ಈ ಜಿಲ್ಲೆಯಲ್ಲಿ ಕೆಜೆಪಿಯ ಪ್ರವೇಶದಿಂದ ಈ ನೀರು ಇನ್ನೂ ಹೆಚ್ಚು ಕದಡಿದೆ.

ಇಡೀ ರಾಜ್ಯ ಒಂದು ದಿಕ್ಕಿನಲ್ಲಿದ್ದರೆ ಹಾಸನ ಬೇರೆ ದಿಕ್ಕಿನಲ್ಲಿರುತ್ತದೆ. ಕಾಂಗ್ರೆಸ್ ಅಲೆ, ಬಿಜೆಪಿ ಅಲೆ ಎಂಬ ಎಲ್ಲ ಸಮೀಕ್ಷೆ, ಲೆಕ್ಕಾಚಾರಗಳೂ ಹಾಸನಕ್ಕೆ ಬಂದಾಗ ತಲೆಕೆಳಗಾಗಿವೆ. ಕಳೆದ ಬಾರಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ (ಈಗ ಶ್ರವಣಬೆಳಗೊಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ) ಸಿ.ಎಸ್. ಪುಟ್ಟೇಗೌಡ ಹಾಗೂ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಪಕ್ಷ ತೊರೆದಾಗ ಜಿಲ್ಲೆಯಲ್ಲಿ ಜೆಡಿಎಸ್‌ಗೆ ದೊಡ್ಡ ಹೊಡೆತ ಎಂಬ ಭಾವನೆ ಮೂಡಿತ್ತು. ಈಗ ಸ್ಥಿತಿ ಬದಲಾಗಿದೆ. ದೇವೇಗೌಡರ ಸಮೀಪದ ಸಂಬಂಧಿ ಸಿ.ಎನ್.ಬಾಲಕೃಷ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪುಟ್ಟೇಗೌಡರಿಗೆ ಗೆಲುವು ಸುಲಭವಾಗಿ ಒಲಿಯುವ ಸ್ಥಿತಿ ಇಲ್ಲ. ಇದು ಜಿಲ್ಲೆಯಲ್ಲಿ ಭಾರೀ ಕುತೂಹಲದ ಕ್ಷೇತ್ರ.

ಲಿಂಗಾಯತ ಪ್ರಾಬಲ್ಯದ ಬೇಲೂರು ಮತ್ತು ಅರಸೀಕೆರೆಯಲ್ಲಿ ಕೆಜೆಪಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು. ಬೇಲೂರಿನಲ್ಲಿ ಒಕ್ಕಲಿಗ ಸಮುದಾಯದವರಿಗೆ (ಎಚ್.ಎಂ. ವಿಶ್ವನಾಥ್) ಟಿಕೆಟ್ ನೀಡುತ್ತಿದ್ದಂತೆ ಆಕಾಂಕ್ಷಿಯಾಗಿದ್ದ ಶಿವರುದ್ರಪ್ಪ ಸ್ವತಂತ್ರ ಅಭ್ಯರ್ಥಿಯಾದರು. ಜೆಡಿಎಸ್‌ನವರು ಲಿಂಗಾಯತ ಅಭ್ಯರ್ಥಿ ಲಿಂಗೇಶ್‌ಗೆ ಟಿಕೆಟ್ ನೀಡುತ್ತಿದ್ದಂತೆ ಶಿವರುದ್ರಪ್ಪ ನಾಮಪತ್ರ ಹಿಂತೆಗೆದುಕೊಂಡರು. ಆ ಮೂಲಕ ಜೆಡಿಎಸ್ ವಿಶ್ವನಾಥ್ ಅವರನ್ನು ಹಿಂದಕ್ಕೆ ತಳ್ಳಿದೆ.

ಅರಸೀಕೆರೆಯಲ್ಲಿ ಲಿಂಗಾಯತ ಮತಗಳನ್ನೇ ಗಮನದಲ್ಲಿಟ್ಟು ಕೆಜೆಪಿ ಡಾ. ಲೋಕೇಶ್ ಅವರನ್ನು ಕಣಕ್ಕಿಳಿಸಿದೆ. ಗೆಲುವು ಸುಲಭವಲ್ಲದಿದ್ದರೂ, ಇಲ್ಲಿ ಅವರು ಕಾಂಗ್ರೆಸ್‌ನ್ನು ಹಿಂದಿಕ್ಕಬಹುದು. ಕಳೆದ ಬಾರಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ, ಮಾಜಿ ಸಚಿವ ಬಿ. ಶಿವರಾಮು (ಗಂಡಸಿ ಶಿವರಾಮು) ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಅರಕಲಗೂಡು ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಅವರನ್ನು ಸೋಲಿಸಿ ಶಾಸಕರಾದ ಎ. ಮಂಜು ಅವರ ಸ್ಥಿತಿಯೂ ಹೀಗೆಯೇ ಇದೆ. ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಟಿಕೆಟ್‌ಗಾಗಿ ಶ್ರಮಿಸಿದ್ದ, ಸಿದ್ದರಾಮಯ್ಯ ಅವರ ಆಪ್ತ ಎಸ್. ಪುಟ್ಟಸ್ವಾಮಿ ಇಲ್ಲಿ ನಿರ್ಣಾಯಕರಾಗಿದ್ದಾರೆ.

ಕಾಂಗ್ರೆಸ್ ಟಿಕೆಟ್ ವಂಚಿತರಾಗುತ್ತಿದ್ದಂತೆ ಪುಟ್ಟಸ್ವಾಮಿ ಕೆಜೆಪಿಗೆ ಜಿಗಿದರು. ಕುರುಬ ಸಮುದಾಯದವರು ಎಂಬುದು ಪುಟ್ಟಸ್ವಾಮಿ ಅವರ ಶಕ್ತಿ. ಪುಟ್ಟಸ್ವಾಮಿ ಹೆಚ್ಚು ಹೆಚ್ಚು ಮತ ಪಡೆದಂತೆ ಮಂಜುಗೆ ಗೆಲುವು ದೂರವಾಗಬಹುದು. ಕುರುಬ ಮತ್ತು ಲಿಂಗಾಯತ ಸಮುದಾಯದ ಮತಗಳೂ ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಮಾಣದಲ್ಲಿವೆ. ಜೆಡಿಎಸ್ ಮತ್ತು ದೇವೇಗೌಡ ಕುಟುಂಬವನ್ನು ವಿರೋಧಿಸುವ ಸಮುದಾಯಗಳೂ ಇಲ್ಲಿ ವೈಯಕ್ತಿಕ ವರ್ಚಸ್ಸಿನ ಹಿನ್ನೆಲೆಯಲ್ಲಿ ಎ.ಟಿ. ರಾಮಸ್ವಾಮಿ ಅವರನ್ನು ಬೆಂಬಲಿಸುತ್ತಿವೆ. ಕುರುಬ ಸಮುದಾಯದ ಮತಗಳನ್ನು ಪುಟ್ಟಸ್ವಾಮಿ ಸೆಳೆದು, ಒಕ್ಕಲಿಗರ ಒಂದು ಭಾಗ ಹಾಗೂ ಲಿಂಗಾಯತ ಮತಗಳು ಲಭಿಸಿದರೆ ರಾಮಸ್ವಾಮಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿದೆ. ಸಿದ್ದರಾಮಯ್ಯ ಪ್ರಚಾರಕ್ಕೆ ಬಂದ ಬಳಿಕ ಚಿತ್ರಣ ಬದಲಾಗಬಹುದು.

ಈ ಭಾಗದ ಇಡೀ ಕುರುಬ ಸಮುದಾಯ ಸಿದ್ದರಾಮಯ್ಯ ಅವರ ಅಭಿಮಾನಿ. ಸಿದ್ದರಾಮಯ್ಯ ಬಂದು ಮಂಜು ಪರವಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಈ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು. ಸಿದ್ದರಾಮಯ್ಯ ಹಾಗೂ ಮಂಜು ನಡುವೆ ಮುಸುಕಿನ ಗುದ್ದಾಟವಿದೆ ಎಂಬ ಗುಸುಗುಸು, ಜತೆಗೆ ಅರಕಲಗೂಡಿನಲ್ಲಿ ಅಂಬೇಡ್ಕರ್ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಇರಿಸು ಮುರುಸು ಉಂಟುಮಾಡಿದ್ದನ್ನು ಕುರುಬ ಸಮುದಾಯ ಮರೆತಿಲ್ಲ. ತನ್ನ ಅನುಯಾಯಿಯೇ ಇಲ್ಲಿ ಕೆಜೆಪಿ ಅಭ್ಯರ್ಥಿಯಾಗಿರುವಾಗ ಸಿದ್ದರಾಮಯ್ಯ ಮನಸಾರೆ ಮಂಜು ಪರ ಪ್ರಚಾರ ಮಾಡುವರೇ ಎಂಬ ಅನುಮಾನ ಎಲ್ಲರಲ್ಲಿದೆ, ಭಾರೀ ಕುತೂಹಲ ಕೆರಳಿಸಿದೆ.

ರೇವಣ್ಣ ಅವರಿಗೆ `ಮಹಿಳೆಯ ವಿರುದ್ಧ ಸೋಲು' ಎಂದು ಜ್ಯೋತಿಷಿ ಹೇಳಿದ್ದಾರೆ ಎಂಬ ವದಂತಿಯೊಂದು ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಅದಕ್ಕೆ ಪುಷ್ಟಿ ಎಂಬಂತೆ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ವಿರುದ್ಧ ಎಸ್.ಜಿ. ಅನುಪಮಾ ಸ್ಪರ್ಧಿಸಿರುವುದರಿಂದ (ಕಳೆದ ಚುನಾವಣೆಯಲ್ಲೂ ಇವರೇ ಸ್ಪರ್ಧಿಸಿದ್ದರು) ಈ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ.

ಈ ಬಾರಿ ಕಾಂಗ್ರೆಸ್ ಅಲೆಯ ಜತೆಗೆ `ರೇವಣ್ಣಗೆ ಜನರ ವಿರೋಧವಿದೆ' ಎಂಬ ಸುದ್ದಿಗಳೂ ಬಂದಿದ್ದರಿಂದ ರೇವಣ್ಣ ಪರಿವಾರ ಸಹಿತ ಪ್ರಚಾರಕ್ಕೆ ಇಳಿದಿದ್ದಾರೆ. ವೈದ್ಯ ಮತ್ತು ಎಂಜಿನಿಯರ್ ಆಗಿರುವ ಇಬ್ಬರು ಮಕ್ಕಳು, ಪತ್ನಿ ಭವಾನಿ ಸೇರಿ ಕುಟಂಬದವರೆಲ್ಲ ಮನೆಮನೆಗೆ ಹೋಗಿ ಕೈ ಮುಗಿಯುತ್ತಿದ್ದಾರೆ. ದೇವೇಗೌಡರು ಒಂದು ಸುತ್ತಿನ ಪ್ರಚಾರ ಮಾಡಿಯಾಗಿದೆ.

ಸಕಲೇಶಪುರ ಕ್ಷೇತ್ರದಲ್ಲಿ ಕೆಜೆಪಿ-ಜೆಡಿಎಸ್ ಹಣಾಹಣಿ ಇದೆ. ಹಾಸನದಲ್ಲಿ ಹಾಲಿ ಶಾಸಕ ಎಚ್.ಎಸ್. ಪ್ರಕಾಶ್ (ಜೆಡಿಎಸ್) ಸತತ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಹೊಸ ಮುಖ ಎಚ್.ಕೆ. ಮಹೇಶ್ ಅವರನ್ನು ಕಣಕ್ಕೆ ಇಳಿಸಿದೆ. ಎರಡೂ ಕಡೆ ಪೈಪೋಟಿ ಇದ್ದರೂ,  ಜೆಡಿಎಸ್ ಪರವಾಗಿಯೇ ಕೆಲಸ ಮಾಡುತ್ತಿವೆ.

ಜಿಲ್ಲೆಯಲ್ಲಿ ಸಮಸ್ಯೆಗಳು ಸಾವಿರಾರು ಇದ್ದರೂ ಚುನಾವಣೆಗೆ ಜಾತಿ - ಉಪಜಾತಿ ಲೆಕ್ಕಾಚಾರವೇ ಮುಖ್ಯ. ಯಾವ ಅಲೆ ಬಂದರೂ ಚುನಾವಣಾ ದಿನದ ಹಿಂದಿನ ಎರಡು-ಮೂರು ರಾತ್ರಿಗಳಲ್ಲಿ ಹರಿಯುವ `ಹೊಳೆ'ಗೆ ಸುನಾಮಿಯನ್ನೂ ಶಾಂತಗೊಸುವ ಶಕ್ತಿ ಇದೆ.

ಅನುಭವಿಗಳ ಅಖಾಡ

ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ಹಾಗೂ ಕಾಂಗ್ರೆಸ್‌ನ ಎ. ಮಂಜುಗೆ ಆರನೇ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ರಾಮಸ್ವಾಮಿ ಮೂರು ಬಾರಿ ಗೆದ್ದು ಎರಡು ಬಾರಿ ಸೋತಿದ್ದರೆ, ಮಂಜು ಮೂರು ಬಾರಿ ಸೋತು ಎರಡು ಬಾರಿ ಗೆದ್ದಿದ್ದಾರೆ.

1994ರ ನಂತರ ಈ ಕ್ಷೇತ್ರದಲ್ಲಿ ಮಂಜು ಮತ್ತು ಎಟಿಆರ್ ನಡುವೆಯೇ ಸ್ಪರ್ಧೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಎಟಿಆರ್ ಈಗ ಜೆಡಿಎಸ್‌ನಲ್ಲಿದ್ದಾರೆ. ಒಮ್ಮೆ ಬಿಜೆಪಿ ಯಿಂದ ಗೆದ್ದಿದ್ದ ಮಂಜು ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಪಕ್ಷಗಳು ಬದಲಾದರೂ ಈ ಇಬ್ಬರ ಹಣಾಹಣಿ ಈಗಲೂ ಉಳಿದುಕೊಂಡಿದೆ. ಮೊದಲಿನಿಂದಲೇ ಜೆಡಿಎಸ್‌ನಲ್ಲಿದ್ದ ಶ್ರವಣ ಬೆಳಗೊಳ ಕ್ಷೇತ್ರದ ಅಭ್ಯರ್ಥಿ ಪುಟ್ಟೇಗೌಡ ಆರನೇಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಈ ವರೆಗೆ ಇವರು ಮೂರು ಗೆಲುವು ಹಾಗೂ ಎರಡು ಸೋಲನ್ನು ಕಂಡಿದ್ದಾರೆ.

ಅರಸೀಕೆರೆಯ ಕಣಕ್ಕೆ ಇಳಿದಿರುವ ಕಾಂಗ್ರೆಸ್‌ನ ಬಿ. ಶಿವರಾಮು ಗಂಡಸಿ ಕ್ಷೇತ್ರವಿದ್ದಾಗ ಸತತವಾಗಿ ನಾಲ್ಕು ಬಾರಿ ಗೆದ್ದಿದ್ದರು. ಕ್ಷೇತ್ರ ಮರುವಿಂಗಡಣೆಯಾದಾಗ ಅತಂತ್ರರಾದರು. ಕಳೆದ ಬಾರಿ ಹಾಸನದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. ಆರನೇಚುನಾವಣೆಯಲ್ಲಿ ಗೆಲುವು ಅರಸಿಕೊಂಡು ಅರಸೀಕೆರೆಗೆ ಹೋಗಿದ್ದಾರೆ. ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣ ಹಾಗೂ ಹಾಸನದಲ್ಲಿ ಎಚ್.ಎಸ್. ಪ್ರಕಾಶ್ (ಜೆಡಿಎಸ್) ಐದನೇ ಬಾರಿ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT