ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ವಿರುದ್ಧ ಕಿಡಿಕಾರಿದ ಈಶ್ವರಪ್ಪ

Last Updated 3 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ‘ತುಂಡು ಗುತ್ತಿಗೆ ಹಗರಣ ನಡೆಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ದೂರಿದರು.

ಚನ್ನಪಟ್ಟಣ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ಪರವಾಗಿ ಭಾನುವಾರ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ದೇವೇಗೌಡರಿಗೆ ಹಣ ಹೊಡೆಯುವುದು ಮತ್ತು ಖರ್ಚು ಮಾಡುವುದು ಗೊತ್ತು. ಆದರೆ ಅದು ಬಿಜೆಪಿಯವರಿಗೆ ಗೊತ್ತಿಲ್ಲ’ ಎಂದು ಅವರು ಹೇಳಿದರು.

‘ಜೆಡಿಎಸ್ ಪಕ್ಷವನ್ನು ದೇವೇಗೌಡರ ಕುಟುಂಬದ ಪಕ್ಷ ಎಂದು ಕರೆಯಬಹುದು. ಇಲ್ಲಿ ಈ ಕುಟುಂಬದವರೇ ರಾಷ್ಟ್ರೀಯ ನಾಯಕರು,  ರಾಜ್ಯ ನಾಯಕರು, ಸಂಸದರು, ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮತ್ತೊಬ್ಬರು ಶಾಸಕರು. ಹಾಗಾಗಿ ಇದನ್ನು ಜೆಡಿಎಸ್ ಪಕ್ಷ ಎಂಬುದಕ್ಕಿಂತ ದೇವೇಗೌಡರ ಕುಟುಂಬದ ಪಕ್ಷ ಎಂದು ಹೇಳಬಹುದು’ ಎಂದು ಅವರು ವ್ಯಂಗ್ಯವಾಡಿದರು.

‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಥವಾ ದೇವೇಗೌಡರ ಕುಟುಂಬದವರು ಕಣಕ್ಕಿಳಿದರೆ ಸೋಲುತ್ತಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು. ಇದರಿಂದಾಗಿ ಅವರು ಕಣದಿಂದ ಹಿಂದೆ ಸರಿದರೇ ಹೊರತು ಸಾಮಾನ್ಯ ಕಾರ್ಯಕರ್ತರನ್ನು ಬೆಳೆಸಲು ಅಲ್ಲ’ ಎಂದು ಅವರು ಟೀಕಿಸಿದರು.

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದಿಂದ ತಾಲ್ಲೂಕಿನ ಅಭಿವೃದ್ಧಿ ಆಗಿಲ್ಲ. ಕ್ಷೇತ್ರದ ಜನತೆಗೆ ಅಗತ್ಯವಾಗಿದ್ದ ನೀರಾವರಿ ಯೋಜನೆ ಬಂದಿಲ್ಲ ಎಂದ ಅವರು, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಕ್ಷೇತ್ರಕ್ಕೆ 150 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆ ರೂಪಿಸಿದ್ದಾರೆ. ಅದಕ್ಕೆ ಸರ್ಕಾರದ ಅನುಮೋದನೆಯೂ ದೊರೆತಿದೆ ಎಂದು ಹೇಳಿದರು.

ಬಿಜೆಪಿಯ ಆಶ್ವಾಸನೆಗಳನ್ನು ಸುಳ್ಳು ಎಂದು ಹೇಳುವ ವಿರೋಧ ಪಕ್ಷದವರು ಅಧಿಕಾರದಲ್ಲಿ ಇದ್ದಾಗ ಕೇವಲ ಸುಳ್ಳು ಆಶ್ವಾಸನೆಗಳನ್ನೇ ನೀಡಿದ್ದಾರೆ. ಹಾಗಾಗಿ ಅವರಿಗೆ ನಾವು ನೀಡುತ್ತಿರುವ ಆಶ್ವಾಸನೆಯೂ ಸುಳ್ಳು ಎನ್ನಿಸುತ್ತಿದೆ ಎಂದ ಅವರು ವಿರೋಧ ಪಕ್ಷದವರಿಗೆ ಸುಳ್ಳು ಆಶ್ವಾಸನೆ ಯಾವುದು, ನಿಜವಾದ ಆಶ್ವಾಸನೆ ಯಾವುದು ಎಂಬುದೇ ಗೊತ್ತಿಲ್ಲವಾಗಿದೆ ಎಂದು ಜರಿದರು.

ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳುತ್ತದೆ. ಚನ್ನಪಟ್ಟಣದಲ್ಲಿ ಸ್ವಲ್ಪ ಪ್ರಮಾಣದ ಸ್ಪರ್ಧೆ ನೀಡಲಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಸಂಸದ ಅನಂತಕುಮಾರ್ ಮಾತನಾಡಿ, ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಇಲ್ಲಿ ಎಲ್ಲರೂ ಹೈಕಮಾಂಡ್ ಹೇಳಿದಂತೆ ನಡೆಯುತ್ತೇವೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನ ಮತದಾರರನ್ನು ಹೆಚ್ಚಿಸಿಕೊಂಡು ಬಂದಿದೆ. ರಾಜ್ಯದಲ್ಲಿ 4 ಶಾಸಕರಿಂದ 116 ಶಾಸಕರವರೆಗೆ ಬಿಜೆಪಿ ಬಂದಿದೆ ಎಂದರು. ಕೇಂದ್ರದ ಯುಪಿಎ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಅದರ ಪತನಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT