ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಸದಸ್ಯನ ವರ್ತನೆಗೆ ಖಂಡನೆ

Last Updated 7 ಜನವರಿ 2012, 5:45 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪುರಸಭೆಯ ಸಭಾಂಗಣದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಸಭೆ ನಡೆಸುತ್ತಿದ್ದುದನ್ನು ಜೆಡಿಎಸ್‌ನ ಪುರಸಭಾ ಸದಸ್ಯ ರವೀಶ್ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಅಸಮಧಾನಗೊಂಡ ಬಿಜೆಪಿ ಕಾರ್ಯಕರ್ತರು ರವೀಶ್ ನಿಲುವು ಖಂಡಿಸಿ ಶುಕ್ರವಾರ ಪುರಸಭೆ ಕಚೇರಿಯಲ್ಲಿ  ಪ್ರತಿಭಟನೆ ನಡೆಸಿದರು.

ನಗರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಚ್. ಶೋಭಾಶುಭಕರ್, ಸದಸ್ಯರಾದ ಸಿ.ಟಿ. ಗಣೇಶ್, ಪುಟ್ಟಣ್ಣ, ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಂತರ ಮುಖ್ಯಾಧಿಕಾರಿ ಅನುಮತಿಯೊಂದಿಗೆ ಪುರಸಭೆಯ ಸಭಾಂಗಣದಲ್ಲಿ  ಪ್ರಾಧಿಕಾರದ ಅಧ್ಯಕ್ಷೆ ಶೋಭಾ ಶುಭಕರ್, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನವಿಲೆ ಅಣ್ಣಪ್ಪ, ಪುರಸಭಾಧ್ಯಕ್ಷೆ ಗೀತ ಅವಿನಾಶ್, ಜಿಲ್ಲಾ ಬಿಜೆಪಿ ಉಪಾ ಧ್ಯಕ್ಷ ಪಟೇಲ್ ಮಂಜುನಾಥ್,  ಕಾರ್ಯಕಾರಿ ಸಮಿತಿ ಸದಸ್ಯ ಕೆ.ಕೆ.ರಂಗನಾಥನ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎ.ಆರ್. ನಾಗರಾಜು ಪಾಲ್ಗೊಂಡಿದ್ದ ಸಭೆ ಆರಂಭವಾಯಿತು.

ಅಷ್ಟರಲ್ಲಿ ಹೊರಗಡೆ ನಿಂತಿದ್ದ ಪುರಸಭಾ ಸದಸ್ಯ ರವೀಶ್, ಯಾರನ್ನು ಕೇಳಿ ಸಭೆ ನಡೆಸುತ್ತಿದ್ದೀರಿ, ಪ್ರಾಧಿಕಾರದ ಅಧ್ಯಕ್ಷರು. ಹೊರಗಡೆ ಶಾಮಿಯಾನ ಹಾಕಿ ಸಭೆ ನಡೆಸಲಿ. ಪುರಸಭೆಯ ಸಭಾಂಗಣದಲ್ಲಿ ಸಭೆ ನಡೆಸಬಾರದು ಎಂದರು. ಆಗ ಅಲ್ಲಿಗೆ ಬಂದ ಯೋಜನಾ ಪ್ರಾಧಿಕಾರದ ಅಧಿಕಾರಿ ಶಂಕರ್, ಸಭೆ ನಡೆಸಲು ಸಂಬಂಧಿಸಿದವರಿಂದ ಅನುಮತಿ ಪಡೆಯಲಾಗಿದೆ ಎಂದು ಹೇಳಿದರಾದರೂ ಇದನ್ನು ಒಪ್ಪದ ರವೀಶ್, ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಬಿಜೆಪಿ ಮುಖಂಡರು ಸಭೆಯಿಂದ ಹೊರಬಂದು ರವೀಶ್ ಜೊತೆ ವಾಗ್ವಾದಕ್ಕಿಳಿದರು. ಪುರಸಭೆ ವಿರುದ್ಧ ಧಿಕ್ಕಾರ ಕೂಗಿದ  ಬಿಜೆಪಿ ಕಾರ್ಯಕರ್ತರು ಪುರಸಭೆಯ ಸಭಾಂಗಣ ಯಾರೊಬ್ಬರ ಆಸ್ತಿಯಲ್ಲ. ಇಲ್ಲಿ ಬಿಜೆಪಿಯವರು ಪಕ್ಷದ ಮೀಟಿಂಗ್ ಮಾಡಲು ಬಂದಿಲ್ಲ. ಪ್ರಾಧಿಕಾರದ ಅಧ್ಯಕ್ಷರು ಸಭೆ ನಡೆಸುತ್ತಿದ್ದಾರೆ ಅಷ್ಟೇ. ಇದನ್ನೇ ಅಪರಾಧ ಎಂಬಂತೆ ಬಿಂಬಿಸುವುದು ತರವಲ್ಲ ಎಂದು ತರಾಟೆ ತೆಗೆದುಕೊಂಡರು.

ಸ್ಥಳಕ್ಕೆ ಆಗಮಿಸಿದ ಪುರಸಭೆಯ ಮುಖ್ಯಾಧಿಕಾರಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಕಾರ್ಯಕರ್ತರು, ಸಭೆ ನಡೆಸಲು ನಿಮ್ಮ ಅನುಮತಿ ಪಡೆದರೂ ಕೆಲ ಸದಸ್ಯರು ಅತಿರೇಕದಿಂದ ವರ್ತಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಶಾಸಕರು ಆಗಮಿಸಿ ಸಮಸ್ಯೆ ಬಗೆಹರಿಸುವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಸ್ವಲ್ಪ ಸಮಯದ ನಂತರ ಪ್ರಾಧಿಕಾರದ ಕಚೇರಿಗೆ ತೆರಳಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೂಡ ಅಧ್ಯಕ್ಷ ನವಿಲೆ ಅಣ್ಣಪ್ಪ, ಕಾನೂನಿನ ಅರಿವಿಲ್ಲದೇ ಪುರಸಭಾ ಸದಸ್ಯರೊಬ್ಬರು ಸಭೆ ನಡೆಸಬಾರದು ಎಂದು ಬೆದರಿಕೆ ಹಾಕಿದ್ದು ತರವಲ್ಲ. ಇದಕ್ಕೆಲ್ಲಾ ಬಿಜೆಪಿ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಪುರಸಭೆಯನ್ನು ಸೂಪರ್‌ಸೀಡ್ ಮಾಡುವಷ್ಟು ಕಾರಣಗಳು ಲಭ್ಯವಾ ಗಿಲ್ಲ. ಅವ್ಯವಹಾರಗಳನ್ನೆಲ್ಲ ಕಲೆ ಹಾಕಲಾಗುತ್ತಿದೆ. ಪ್ರಬಲ ಕಾರಣದೊಂದಿಗೆ ಪುರಸಭೆಯನ್ನು ಸರ್ಕಾರ ಸೂಪರ್‌ಸೀಡ್ ಮಾಡಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT