ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಸೌಲಭ್ಯ ಹಿಂದಕ್ಕೆ ಮೇಯರ್ ಎಚ್ಚರಿಕೆ

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಮೇಯರ್ ಸ್ಥಾನದ ವಿರುದ್ಧ ಬಿಬಿಎಂಪಿ ಜೆಡಿಎಸ್ ಪಕ್ಷದ ನಾಯಕ ಆರ್. ಪ್ರಕಾಶ್ ಹಗುರವಾಗಿ ಮಾತನಾಡುವುದನ್ನು ಮುಂದುವರಿಸಿದರೆ ಅವರಿಗೆ ಕೊಟ್ಟ ಸೌಲಭ್ಯವನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ' ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಎಚ್ಚರಿಕೆ ನೀಡಿದರು.

ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. `ಬಿಬಿಎಂಪಿ ಸದಸ್ಯರು ಕೌನ್ಸಿಲ್‌ನಲ್ಲಿ ಕೈಗೊಂಡ ತೀರ್ಮಾನದಂತೆ ಸಭೆ ಕರೆಯಲು ಮುಂದಾಗಿದ್ದೆ. ಈ ನಿರ್ಧಾರದಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ವಿಷಯವನ್ನು ಸರಿಯಾಗಿ ಗ್ರಹಿಸದೆ ಆರೋಪ ಮಾಡುವುದು ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಬಿಬಿಎಂಪಿ ನಿಯಮಾವಳಿ ಪ್ರಕಾರ ಆಡಳಿತ ಪಕ್ಷ ಮತ್ತು ಅಧಿಕೃತ ವಿರೋಧ ಪಕ್ಷದ ನಾಯಕರಿಗೆ ಮಾತ್ರ ಕಚೇರಿ ಸೇರಿದಂತೆ ಎಲ್ಲ ಸೌಲಭ್ಯ ನೀಡಬೇಕು. ಶಿಷ್ಟಾಚಾರಕ್ಕಾಗಿ ಜೆಡಿಎಸ್ ನಾಯಕರಿಗೂ ಸೌಲಭ್ಯ ನೀಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಬಿಬಿಎಂಪಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ' ಎಂದರು.

`ನಿಯಮಾವಳಿ ಪ್ರಕಾರ ಯಾವುದೇ ಕಡತವನ್ನು 90 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಮೀಸಲಾತಿ ವಿವಾದ ಇನ್ನೂ ಕೋರ್ಟ್‌ನಲ್ಲಿ ಇರುವುದರಿಂದ ನನ್ನ ಅವಧಿ ಮುಗಿದು 5 ತಿಂಗಳಾದರೂ ಹೊಸ ಮೇಯರ್ ಆಯ್ಕೆ ಆಗಿಲ್ಲ. ಹೀಗಾಗಿ ಸ್ಥಾಯಿ ಸಮಿತಿಗಳಿಗೆ ಹೊಸ ನೇಮಕವೂ ನಡೆದಿಲ್ಲ. ಕಡತಗಳನ್ನು ವಿಲೇವಾರಿ ಮಾಡದೆ ಇನ್ನೆಷ್ಟು ದಿನ ಹಾಗೆ ಇಡಬೇಕು' ಎಂದು ಪ್ರಶ್ನಿಸಿದರು.

`ಕೆಎಂಸಿ ಕಾಯ್ದೆ 10 (2)ರ ಪ್ರಕಾರ ನಾನು ಅಧಿಕಾರದಲ್ಲಿ ಮುಂದುವರಿದಿದ್ದು, 95 (2)ರ ಪ್ರಕಾರ ಕಡತ ವಿಲೇವಾರಿ ಮಾಡುತ್ತಿದ್ದೇನೆ. ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್ ಸೇರಿದಂತೆ ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು' ಎಂದರು.

ಮೊಕದ್ದಮೆ: `ಪತ್ರಿಕೆಗಳಲ್ಲಿ ನನ್ನ ವಿರುದ್ಧ ಜಾಹೀರಾತು ನೀಡಿರುವ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರಿ ಸಂಘದ ವಿರುದ್ಧ ಬಿಬಿಎಂಪಿ ಪರವಾಗಿ ಮತ್ತು ವೈಯಕ್ತಿಕವಾಗಿ ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ' ಎಂದು ವೆಂಕಟೇಶಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT