ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಜವರೇಗೌಡ ರಾಜೀನಾಮೆ

Last Updated 19 ಏಪ್ರಿಲ್ 2013, 6:09 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡ ಗುರುವಾರ ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ.

ಬೇಲೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಪಕ್ಷ ಟಿಕೆಟ್ ನೀಡದಿರುವುದರಿಂದ ಬೇಸತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಗುರುವಾರ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರ ಹಾಗೂ ಪಕ್ಷದಿಂದ ಆಗಿರುವ ಅನ್ಯಾಯದ ಬಗ್ಗೆ ಗದ್ಗದಿತರಾಗಿ ಮಾತನಾಡಿದರು.

`ನನ್ನ ಮತ್ತು ದೇವೇಗೌಡರ ಕುಟುಂಬದ ಸಂಬಂಧ ರಾಜಕೀಯಕ್ಕಿಂತ ಮಿಗಿಲಾದುದು. ಈ ಸಂಬಂಧ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ಅನಿವಾರ್ಯವಾಗಿ ಈಗ ಅದನ್ನು ಕೊನೆಗಾಣಿಸಬೇಕಾಗಿದೆ. ದೇವೇಗೌಡರ ಬಗ್ಗೆ ನನಗೆ ಕೊನೆಯ ಉಸಿರಿರುವವರೆಗೂ ಅದೇ ಗೌರವ ಇರುತ್ತದೆ. ಆದರೆ ಪಕ್ಷದ ಸಂಬಂಧ ಶಾಶ್ವತವಾಗಿ ಕಡಿದುಕೊಂಡಿದೆ' ಎಂದರು.

`ನನಗೆ ನೀಡಿರುವ ಭರವಸೆಯಂತೆ ಪಕ್ಷ ನಡೆದುಕೊಳ್ಳಬೇಕಾಗಿತ್ತು. ಎರಡು ವರ್ಷಗಳ ಕಾಲ ನಾನೇ ಅಭ್ಯರ್ಥಿ ಎಂದು ಬಿಂಬಿಸಿ ಕೊನೆಯ ಕ್ಷಣದಲ್ಲಿ ಅನ್ಯಾಯ ಮಾಡಿದ್ದಾರೆ. ಇದಕ್ಕೆ ದೇವೇಗೌಡರನ್ನು ನಾನು ದೂರುವುದಿಲ್ಲ. ಬೇರೆ ಯಾವುದೋ ಹಂತದಲ್ಲಿ  ಅನ್ಯಾಯವಾಗಿದೆ. ಯಾರಮೇಲೂ ತಪ್ಪು ಹೊರಿಸುವುದಿಲ್ಲ. ನನ್ನಿಂದಲೇ ತಪ್ಪಾಗಿದೆ ಎಂದು ಭಾವಿಸಿ ತುಂಬ ನೋವಿನಿಂದಲೇ ಪಕ್ಷದಿಂದ ದೂರ ಸರಿಯುತ್ತಿದ್ದೇನೆ ಎಂದು ಜವರೇಗೌಡ ಗದ್ಗದಿತರಾಗಿ ನುಡಿದರು.

ಭವಾನಿ ಪ್ರವೇಶ ಆಘಾತಕಾರಿ
`ಎರಡು ವರ್ಷ ಹಿಂದೆಯೇ ನಾನೇ ಬೇಲೂರಿನ ಅಭ್ಯರ್ಥಿ ಎಂದು ಘೋಷಿಸಿದ್ದರೂ, ಕೆಲವೇ ತಿಂಗಳ ಹಿಂದೆ ಭವಾನಿ ರೇವಣ್ಣ ಅವರು `ನಾನು ಬೇಲೂರು ಕ್ಷೇತ್ರದ ಆಕಾಂಕ್ಷಿ' ಎಂದುಬಿಟ್ಟರು. ಇದು ಆಘಾತಕಾರಿ ಬೆಳವಣಿಗೆಯಾಗಿತ್ತು. ಹೀಗೆ ಘೋಷಿಸುವುದಕ್ಕೂ ಮೊದಲು ನನ್ನನ್ನು ಕರೆಸಿ ಮಾತನಾಡಿದ್ದರೆ, ಅಥವಾ ಮೊದಲೇ ತಿಳಿಸಿದ್ದರೆ ನಾನೇ ಹಿಂದೆ ಸರಿಯುತ್ತಿದ್ದೆ. ಹಿಂದೆಯೂ ಹಲವುಬಾರಿ ವಿಧಾನ ಪರಿಷತ್ತಿಗೆ, ಬೇರೆಬೇರೆ ಹುದ್ದೆಗಳಿಗೆ ನನ್ನ ಹೆಸರು ಸೂಚಿಸಿ ಕೊನೆಗೆ ನನ್ನನ್ನು ಕರೆಸಿ ಸಮಾಧಾನ ಮಾಡಿಸಿದ ಉದಾಹರಣೆ ಇದೆ. ದೇವೇಗೌಡರ ಆಣತಿಯಂತೆ ಒಪ್ಪಿ ನಡೆದಿದ್ದೇನೆ. ಈ ಬಾರಿಯ ಬೆಳವಣಿಗೆಯಿಂದ ನಾನು ಯಾರನ್ನು ನಂಬಬೇಕು ಎಂಬ ಪ್ರಶ್ನೆ ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಲಿಂಗೇಗೌಡರ ಮೇಲೆ ಕಿಡಿ
ತನಗೆ ಟಿಕೆಟ್ ತಪ್ಪಿದ್ದಕ್ಕೆ ಯಾರ ವಿರುದ್ಧವೂ ಆರೋಪ ಮಾಡುವುದಿಲ್ಲ ಎಂದ ಜವರೇಗೌಡರು, ಮಾಧ್ಯಮದವರು ಮತ್ತೆ ಮತ್ತೆ ಕೆಣಕಿದಾಗ, `ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಸ್ವಾರ್ಥ ನನ್ನನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ' ಎಂದರು.

`ತಮ್ಮ ಕ್ಷೇತ್ರದಲ್ಲಿರುವ ಕುರುಬ ಜನಾಂಗದವರ ಮತವನ್ನು ಸೆಳೆಯುವ ಉದ್ದೇಶದಿಂದ ಬೇಲೂರಿನಲ್ಲಿ ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡೋಣ ಎಂಬ ಹುಳವನ್ನು ಅವರು ದೇವೇಗೌಡ ಹಾಗೂ ವರಿಷ್ಠರ ತಲೆಯೊಳಗೆ ಬಿತ್ತಿದ್ದರು. ಆ ಮೂಲಕ ದೇವೇಗೌಡರ ಮನೆಗೆ ಬೆಂಕಿ ಹಚ್ಚುವ ಕಾರ್ಯವನ್ನು ಶಿವಲಿಂಗೇಗೌಡರು ಮಾಡಿದ್ದಾರೆ. ನನ್ನ ಮತ್ತು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ವಿರುದ್ಧ ಅವರು ಮೊದಲಿಂದಲೇ ಕಿಡಿ ಕಾರುತ್ತ ಬಂದಿದ್ದಾರೆ ಎಂದು ಜವರೇಗೌಡ ಆರೋಪಿಸಿದರು.

ಪಕ್ಷದ ವರಿಷ್ಠ ರೇವಣ್ಣ ವಿರುದ್ಧ ಯಾವುದೇ ಆರೋಪ ಮಾಡಲು ನಿರಾಕರಿಸಿದ ಅವರು, `ದೇವೇಗೌಡರಿಗೆ ಇರುವ ಸಮಾಧಾನ ರೇವಣ್ಣಅವರಲ್ಲಿ ಇಲ್ಲ. ಅವರು ಇಂಥ ಸಮಾಧಾನದ ಗುಣವನ್ನು ಬೆಳೆಸಿಕೊಳ್ಳಬೇಕು' ಎಂದರು.

ನನ್ನ ಬೆಂಬಲಿಗರು ಮತ್ತು, ಹಿತೈಷಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಸದ್ಯಕ್ಕೆ ಬೇರೆ ಪಕ್ಷದ ಕಡೆಗೆ ಹೋಗುವ ಯೋಚನೆ ಇಲ್ಲ ಎಂದು ಅವರು ಷ್ಪಷ್ಟಪಡಿಸಿದರು.

ಕಾಂಗ್ರೆಸ್-ಕೆಜೆಪಿ ಗಾಳ
ಜವರೇಗೌಡರು ಪಕ್ಷ ಬಿಟ್ಟ ವಿಚಾರ ಘೋಷಣೆಯಾಗುತ್ತಿದ್ದಂತೆ ಬೇಲೂರು ಕ್ಷೇತ್ರದ ಕಾಂಗ್ರೆಸ್ ಹಾಗೂ ಕೆಜೆಪಿ ಅಭ್ಯರ್ಥಿಗಳು ಅವರ ಮನೆಗೆ ಧಾವಿಸಿ ಮಾತುಕತೆ ನಡೆಸಿದ್ದಾರೆ.

`ಪಕ್ಷದ ಟಿಕೆಟ್ ಕೈತಪ್ಪುವುದು ಖಚಿತವಾಗುತ್ತಿದ್ದಂತೆಯೇ ನನ್ನನ್ನು ಕೆಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವೈ.ಎನ್ ರುದ್ರೇಶಗೌಡ ಕರೆ ಮಾಡಿ ಬೆಂಬಲ ನೀಡುವಂತೆ ಕೋರಿದ್ದರು' ಎಂದು ಜವರೇಗೌಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಆದರೆ ಗೋಷ್ಠಿ ಮುಗಿದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಿಶ್ವನಾಥ್ ಹಾಗೂ ರುದ್ರೇಶಗೌಡರು ಜವರೇಗೌಡರ ಮನೆಗೆ ಧಾವಿಸಿ ಮಾತುಕತೆ ನಡೆಸಿದ್ದಾರೆ. ಇಬ್ಬರೂ ಸುಮಾರು ಒಂದೇ ಸಮಯಕ್ಕೆ ಜವರೇಗೌಡರ ಮನೆಯ ಬಾಗಿಲು ತಟ್ಟಿದ್ದರು.

ಭೇಟಿಯ ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿದ ರುದ್ರೇಶಗೌಡರು, `ಇದೊಂದು ಸೌಹಾರ್ದ ಭೇಟಿ. ರಾಜಕೀಯ ಮಾತನಾಡಿಲ್ಲ, ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ' ಎಂದರು.

ವಿಶ್ವನಾಥ್ ಮಾತನಾಡಿ, `ಹಿಂದೆ ನಮಗೆ ಆಗಿರುವ ಸ್ಥಿತಿಯೇ ಈಗ ಜವರೇಗೌಡರಿಗೆ ಆಗಿದೆ. ಅದು ಕುಟುಂಬ ಪಕ್ಷ ಅಲ್ಲಿ ಬೇರೆಯವರಿಗೆ ಸ್ವಾತಂತ್ರ್ಯ ಇಲ್ಲ, ನಾವು ನಿಮ್ಮ ಜತೆಗೆ ಇದ್ದೇವೆ ಎಂಬ ಭರವಸೆಯನ್ನು ಜವರೇಗೌಡರಿಗೆ ನೀಡಿದ್ದೇನೆ ಎಂದರು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT