ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಬಿಜೆಪಿ ಮಾದರಿಯೇ?

Last Updated 3 ಜನವರಿ 2011, 10:05 IST
ಅಕ್ಷರ ಗಾತ್ರ

ತರಂಗಾಂತರ (2-ಜಿ ಸ್ಪೆಕ್ಟ್ರಂ) ಹಂಚಿಕೆ ಹಗರಣದ ವಿರುದ್ಧ ಲೋಕಸಭೆಯ ಕಲಾಪ ನಡೆಯಗೊಡದೆ ‘ಹೋರಾಟ’ ಮಾಡಿದ ಬಿಜೆಪಿ ಮಾದರಿಯಲ್ಲಿಯೇ ನಮ್ಮ ಮುಖ್ಯಮಂತ್ರಿಗಳ ಭೂ ಹಗರಣಗಳನ್ನು ಮುಂದೆ ಮಾಡಿ, ಬರಲಿರುವ ವಿಧಾನಸಭೆಯ ‘ಕಲಾಪ ನಡೆಸಲು ಬಿಡೆವು’ ಎಂದು ಎಚ್.ಡಿ. ಕುಮಾರಸ್ವಾಮಿ ‘ಎಚ್ಚರಿಕೆ’ ನೀಡಿದ್ದಾರೆ. (ಪ್ರ.ವಾ. ಜ 2). ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸೃಷ್ಟಿಸಿದ ಆ ಕೋಲಾಹಲವನ್ನು ಮಾಧ್ಯಮಗಳ ಮೂಲಕ ಕಣ್ಣಾರೆ ಕಂಡ ಧೃತರಾಷ್ಟ್ರರು ನಾವು. ಅದೇ ಧಾರಾವಾಹಿಯ ಮುಂದುವರಿಕೆಗೆ ನಾವು ಮತ್ತೆ ಸಾಕ್ಷಿಯಾಗಬೇಕು !

ಒಬ್ಬ ಪ್ರಜೆಯಾಗಿ ನನ್ನದೊಂದು ಪ್ರಶ್ನೆ: ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಡಿಯೂರಪ್ಪನವರಿಗೆ ‘ನೈತಿಕ’ ಹಕ್ಕು ಇದೆಯೋ ಇಲ್ಲವೋ, ಹಗರಣಗಳ ತನಿಖೆಯ ನಂತರ, ನಿರ್ಧಾರವಾಗಬೇಕಾದ ವಿಷಯ. ಆದರೆ ಪ್ರಜೆಗಳು ಎದುರಿಸುತ್ತಿರುವ ನೂರಾರು ಸಮಸ್ಯೆಗಳ ಬಗ್ಗೆ ಮುಕ್ತ ಚರ್ಚೆಯಾಗಲು ಸೂಕ್ತ ವೇದಿಕೆಯಾಗಿರುವ ವಿಧಾನಸಭೆಯ ಅಧಿವೇಶನವನ್ನೇ ಹಾಳು ಮಾಡಲು ಜೆಡಿಎಸ್ ಅಥವಾ ಯಾವುದೇ ಪಕ್ಷಕ್ಕಾಗಲಿ ‘ನೈತಿಕ’ ಹಕ್ಕು ಇದೆಯೇ? ಒಮ್ಮೆ ಮುಖ್ಯಮಂತ್ರಿಯಾಗಿದ್ದವರು ಕುಮಾರಸ್ವಾಮಿ; ಮುಂದೆಯೂ ಆಗಬಹುದು. ಅವರು ಇಂಥ ವಿಷಯಗಳ ಬಗ್ಗೆ ವಿವೇಕದ ನಿಲುವು ತಾಳಬೇಕೆಂದು ನನ್ನ ನಿರೀಕ್ಷೆ. ಬಿಜೆಪಿ ಹೋರಾಟವೇ ನಿಮಗೆ ‘ಮಾದರಿ’ ಆಗುವುದಾದರೆ ಆ ಪಾರ್ಟಿಗೂ ನಿಮ್ಮ ಪಾರ್ಟಿಗೂ ಇರುವ ಫರಕಾದರೂ ಏನು?

ಹಗರಣಗಳಿಂದ ಮುಕ್ತವಾದ ಯಾವ ರಾಜಕೀಯ ಪಕ್ಷವೂ ಈಗ ಇಲ್ಲ. ಎಲ್ಲರ ಬಣ್ಣವೂ ಬಯಲಾಗುತ್ತಿದೆ. ನಮ್ಮ ಪ್ರಜಾಸತ್ತಾತ್ಮಕ ವೇದಿಕೆಗಳ ಇತ್ತೀಚಿನ ವಿದ್ಯಮಾನಗಳ ‘ವಿನ್ಯಾಸ’ ನೋಡಿದರೆ, ಹೇಗಾದರೂ ಗಲಾಟೆ- ಗೊಂದಲಗಳ ದೂಳೆಬ್ಬಿಸಿ, ಅವರವರ ಹಗರಣಗಳು ಮುಚ್ಚಿಹೋಗುವಂತೆ, ಜನರ ಮನಸ್ಸಿನಿಂದ ಮರೆಯಾಗುವಂತೆ, ನಮ್ಮ ಎಲ್ಲ ರಾಜಕೀಯ ಪಕ್ಷಗಳು ಒಂದು ‘ಒಳ-ಒಪ್ಪಂದ’ ಮಾಡಿಕೊಂಡಿರಬಹುದೇ ಎಂಬ ಅನುಮಾನ ಉಂಟಾಗುತ್ತಿದೆ. ಕುಮಾರಸ್ವಾಮಿ ತಮ್ಮ ಸದ್ಯದ ನಿಲುವು ಕೈಬಿಡಲಿ ಎಂಬುದು ನನ್ನ ಆಗ್ರಹವಲ್ಲ. ರಾಜಕಾರಣಿಗಳಿಗೆ ಅವರದೇ ಅಜೆಂಡಾಗಳಿರುತ್ತವೆ. ಆದರೆ ‘ಪ್ರಜೆ’ಗಳು ಎನ್ನಿಸಿಕೊಂಡ ನಾವು ಈ ಕುರಿತು ಎಚ್ಚರ ವಹಿಸುವುದು ನಮ್ಮ ಪ್ರಜಾಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT