ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಸ್ವಂತ ಬಲದ ವಿಶ್ವಾಸ

ನಮ್ಮದೇ ಸರ್ಕಾರ: ದೇವೇಗೌಡ
Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷ ಎಂದು ಹೇಳುವ ಸ್ಥಿತಿ ಈಗ ಇಲ್ಲ. ನಮ್ಮ ಪಕ್ಷ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯುವ ಶಕ್ತಿ ಹೊಂದಿದೆ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. `ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ನ ಶಕ್ತಿಯನ್ನು ಹಿಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಟಿಕೆಟ್‌ಗಾಗಿ ಪೈಪೋಟಿ ಇತ್ತು. ನಮ್ಮ ಪಕ್ಷ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಬಲ್ಲ ಶಕ್ತಿ ಗಳಿಸಿಕೊಂಡಿರುವುದಕ್ಕೆ ಇದು ಸಾಕ್ಷಿ' ಎಂದರು.

`ಈ ಚುನಾವಣೆಯಲ್ಲಿ ಜೆಡಿಎಸ್ `ಕಿಂಗ್‌ಮೇಕರ್' ಆಗುತ್ತಾ?' ಎಂಬ ಪ್ರಶ್ನೆಗೆ, `ನಾವೇ ಕಿಂಗ್ (ಸ್ವಂತ ಬಲದಲ್ಲಿ ಅಧಿಕಾರ ಹಿಡಿಯುವುದು) ಏಕೆ ಆಗಬಾರದು' ಎಂದು ಮರುಪ್ರಶ್ನೆ ಹಾಕಿದರು.

`ಈ ಮಾತನ್ನು ಉತ್ಪ್ರೇಕ್ಷೆಯಿಂದ ನಾನು ಹೇಳುತ್ತಿಲ್ಲ. 1989ರ ಚುನಾವಣೆಯಲ್ಲಿ ನಾನು ಕೂಡ ಸೋತಿದ್ದೆ. ಪಕ್ಷದ ನಾಯಕರಲ್ಲಿ ಹಲವರು ಸೋತಿದ್ದರು. ಆದರೆ, 1994ರಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯಿತು. ನಾನು ಜನರ ಪರವಾಗಿ ಹೋರಾಡುತ್ತಿರುವವನು. ಜನಬೆಂಬಲದ ನಿರೀಕ್ಷೆಯಲ್ಲಿ ಇರುವವನು. ರಾಜಕೀಯದಲ್ಲಿ  ಇರುವ ಯಾವುದೇ ವ್ಯಕ್ತಿಯೂ ನಿರಾಶಾವಾದಿ ಆಗಬಾರದು' ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಏಳು ವರ್ಷ ಆಗಿದೆ. ಅವರು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ಭಾವಿಸುವುದು ತಪ್ಪಲ್ಲ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿರುವ ಬಿಜೆಪಿ, ಅದನ್ನು ಈ ಚುನಾವಣೆಯಲ್ಲೂ ಉಳಿಸಿಕೊಳ್ಳುತ್ತೇವೆ ಎಂದು ಹೇಳಿಕೊಳ್ಳುವುದೂ ತಪ್ಪಲ್ಲ. ಈಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಹೊಸ ಪಕ್ಷಗಳು ಕೂಡ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಆಸೆ ವ್ಯಕ್ತಪಡಿಸುವುದು ತಪ್ಪಲ್ಲ ಎಂದು ಹೇಳಿದರು.

`ನಿರಾಸೆ ಆಗಿಲ್ಲ': `ಈ ಚುನಾವಣೆಯ ಫಲಿತಾಂಶ ಕುರಿತು ಹಲವು ಮಾಧ್ಯಮಗಳು ಸಮೀಕ್ಷೆ ನಡೆಸಿವೆ. ಅವುಗಳು ಪ್ರಕಟಿಸಿದ ಸಮೀಕ್ಷೆಯಿಂದ ನಮಗೆ ನಿರಾಸೆ ಆಗಿಲ್ಲ, ಜುಗುಪ್ಸೆಯೂ ಆಗಿಲ್ಲ. ಯಾರನ್ನೂ, ಯಾವ ಸಮೀಕ್ಷೆಗಳನ್ನೂ ನಾನು ಅಲ್ಲಗಳೆಯುವುದಿಲ್ಲ. ನಮ್ಮನ್ನು ಎಚ್ಚರಗೊಳಿಸಿದ ಮಾಧ್ಯಮದವರಿಗೆ ನಾನು ಋಣಿ' ಎಂದು ದೇವೇಗೌಡರು ಪ್ರತಿಕ್ರಿಯಿಸಿದರು.

ತಮ್ಮ ಪಕ್ಷ ತಾರಾ ಪ್ರಚಾರಕರನ್ನು ನೆಚ್ಚಿಕೊಂಡಿಲ್ಲ. ಪಕ್ಷದ ಹಿರಿಯ ಮುಖಂಡರೇ ತಾರಾ ಪ್ರಚಾರಕರು. ರಾಜಕೀಯ ವ್ಯವಸ್ಥೆ ಅಧೋಗತಿಗೆ ಇಳಿದಿದೆ. ಯಾವುದೇ ಪಕ್ಷ, ವ್ಯಕ್ತಿಯ ಕುರಿತು ಬೆರಳು ತೋರಿಸಲು ಬಯಸುವುದಿಲ್ಲ. ವ್ಯಕ್ತಿಗತ ನಿಂದನೆಯನ್ನೂ ಮಾಡುವುದಿಲ್ಲ ಎಂದರು.

ಮುಂಬರುವ ಲೋಕಸಭಾ ಚುನಾವಣೆಯ ಬಳಿಕವೂ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ. ಯುಪಿಎ ಮತ್ತು ಎನ್‌ಡಿಎ ಮೈತ್ರಿಕೂಟದ ನೇತಾರರು ಈಗಲೇ ಮಿತ್ರಪಕ್ಷಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಾದೇಶಿಕ ಪಕ್ಷಗಳು ಮೈತ್ರಿಕೂಟ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಯಾವುದೇ ಪಕ್ಷವೂ ಪ್ರಾದೇಶಿಕ ಪಕ್ಷಗಳ ಹೊರತಾಗಿ ಸರ್ಕಾರವನ್ನು ರಚಿಸಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

`ಹೋರಾಟ ನಿಲ್ಲುವುದಿಲ್ಲ': ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, `ಕಾವೇರಿ ನ್ಯಾಯಮಂಡಳಿ ನೀಡಿದ ಅಂತಿಮ ತೀರ್ಪು ರಾಜ್ಯದ ಪಾಲಿಗೆ ಆಘಾತಕಾರಿಯಾದುದು. ಯಾವುದೇ ಸಂದರ್ಭದಲ್ಲೂ ಕರ್ನಾಟಕ ನ್ಯಾಯಾಂಗದ ಆದೇಶವನ್ನು ಮೀರಿಲ್ಲ. ಆದರೂ, ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಲೇ ಇವೆ. ಈ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುವುದಕ್ಕಾಗಿ ಆರಂಭಿಸಿರುವ ಹೋರಾಟವನ್ನು ನಿಲ್ಲಿಸುವುದಿಲ್ಲ' ಎಂದರು.

`ನಾನು ವೈಯಕ್ತಿಕ ಕಾರಣಗಳಿಗಾಗಿ ಯಾವತ್ತೂ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಕಣ್ಣೀರು ಹಾಕಿಲ್ಲ. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡುವಾಗ ಮಾರ್ಚ್ 8ರಂದು ಸಂಸತ್ತಿನಲ್ಲಿ ಕಣ್ಣೀರು ಹಾಕಿದೆ. ಅದು ಮೊಸಳೆ ಕಣ್ಣೀರು ಅಲ್ಲ' ಎಂದು ತಿಳಿಸಿದರು.

ನೇರ ಉತ್ತರ ನೀಡದ ಪ್ರಶ್ನೆಗಳು...

-ಪ್ರಶ್ನೆ: ಚುನಾವಣೆ ನಂತರ ನಿಮ್ಮ ಪಕ್ಷದ ಪಾತ್ರ ಏನು?

ಮುಂದೆ ನೋಡೋಣ.

-ಪ್ರಶ್ನೆ: ಜೆಡಿಎಸ್ ಹಿಂದೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿತ್ತು. ಮುಂದೆಯೂ ಹಾಗೆಯೇ ಮಾಡಬಹುದು ಎಂಬ ಭಯ ಅಲ್ಪಸಂಖ್ಯಾತರಲ್ಲಿ ಇದೆ. ಅವರಿಗೆ ಏನು ಭರವಸೆ ನೀಡುತ್ತೀರಿ?
ಡಿಎಂಕೆ ಹಿಂದೆ ಎನ್‌ಡಿಎ ಮೈತ್ರಿಕೂಟದಲ್ಲಿ ಇತ್ತು. ನಂತರ ಯುಪಿಎ ಮೈತ್ರಿಕೂಟ ಸೇರಿತು. ಮುಂದೇನು ಎಂಬುದನ್ನು ಫಲಿತಾಂಶದ ನಂತರ ಹೇಳುತ್ತೇನೆ.

-ಪ್ರಶ್ನೆ: ನಿಮ್ಮ ಕುಟುಂಬದ ಸದಸ್ಯರಲ್ಲದವರನ್ನು ಮುಖ್ಯಮಂತ್ರಿ ಹುದ್ದೆಗೆ ಹೆಸರಿಸಲು ಸಿದ್ಧರಿದ್ದೀರಾ?
ನನ್ನ ಮಕ್ಕಳು ರಾಜಕೀಯ ಪ್ರವೇಶಿಸುವ ಮುನ್ನವೇ ವೈ.ಕೆ.ರಾಮಯ್ಯ ಅವರನ್ನು ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದೆ.

-ಪ್ರಶ್ನೆ: ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ?
ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಆರೋಗ್ಯದ ಮೇಲೆ ಎಲ್ಲವೂ ನಿಂತಿದೆ.

ಚುನಾವಣೆ ನಂತರ ಪುಸ್ತಕ

ರಾಜಕೀಯ ಜೀವನದ ಬೆಳವಣಿಗೆಗಳ ಕುರಿತ ಪುಸ್ತಕ ರಚನೆ ಬಗ್ಗೆ ಕೇಳಿದಾಗ, `ಚುನಾವಣೆಗೂ ಮುನ್ನ ಬಿಡುಗಡೆ ಮಾಡಿದರೆ ರಾಜಕೀಯ ಲಾಭಕ್ಕಾಗಿ ಇದೆಲ್ಲ ಮಾಡಿದರು ಎನ್ನುತ್ತಾರೆ. ಇನ್ನೂ ಮೂರು ತಿಂಗಳ ಕೆಲಸ ಇದೆ. ನನ್ನ ಎರಡನೇ ಮಗಳ ಪ್ರೇರಣೆಯಿಂದ ಪುಸ್ತಕ ಬರೆಯುತ್ತಿದ್ದೇನೆ. ಚುನಾವಣೆ ಬಳಿಕ ಅದನ್ನು ಬಿಡುಗಡೆ ಮಾಡುತ್ತೇನೆ' ಎಂದು ದೇವೇಗೌಡರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT