ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಲ್ಲೂ ಬಂಡಾಯ

Last Updated 17 ಏಪ್ರಿಲ್ 2013, 20:25 IST
ಅಕ್ಷರ ಗಾತ್ರ

ಬೆಂಗಳೂರು: ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರ ಜೆಡಿಎಸ್‌ನಲ್ಲೂ ಬಂಡಾಯ ಭುಗಿಲೆದ್ದಿದೆ. ಕೋಲಾರ ಜಿಲ್ಲೆಯ ಮುಳಬಾಗಲು, ತುಮಕೂರು ಜಿಲ್ಲೆಯ ಕುಣಿಗಲ್, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.

ಕುಣಿಗಲ್ ಕ್ಷೇತ್ರದಲ್ಲಿ ಎಸ್. ಪಿ.ಮುದ್ದಹನುಮೇಗೌಡ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ, ಅವರಿಗೆ `ಬಿ' ಫಾರಂ ನೀಡಲಾಗಿತ್ತು. ಅವರು ನಾಮಪತ್ರವನ್ನೂ ಸಲ್ಲಿಸಿದ್ದರು. ಆದರೆ, ನಾಮಪತ್ರ ಸಲ್ಲಿಸುವ ಅವಧಿ ಕೊನೆಗೊಳ್ಳುವ ಹಂತದಲ್ಲಿ ಮಾಜಿ ಸಚಿವ ಡಿ. ನಾಗರಾಜಯ್ಯ ಅವರಿಗೆ ಪಕ್ಷವು `ಸಿ' ಫಾರಂ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ನಾಗರಾಜಯ್ಯ ಅವರು ನಾಮಪತ್ರದ ಜೊತೆಗೆ `ಸಿ' ಫಾರಂ ಅನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಹೀಗಾಗಿ ಅವರನ್ನೇ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ. `ಸಿ' ಫಾರಂ ನೀಡಿದ ನಂತರ `ಬಿ' ಫಾರಂಗೆ ಮಾನ್ಯತೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಳಬಾಗಲು ಕ್ಷೇತ್ರದಲ್ಲೂ ಇದೇ ರೀತಿ ಆಗಿದೆ. ಮೊದಲು ಆದಿನಾರಾಯಣ ಅವರಿಗೆ ಜೆಡಿಎಸ್ ಬಿ ಫಾರಂ ನೀಡಲಾಗಿತ್ತು. ಅವರು ನಾಮಪತ್ರ ಸಲ್ಲಿಸಿದ ಕೆಲ ಹೊತ್ತಿನಲ್ಲೇ ಮುನಿಆಂಜಿನಪ್ಪ ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರದೊಂದಿಗೆ ಸಿ ಫಾರಂ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಮುನಿಆಂಜಿನಪ್ಪ ಅವರನ್ನೇ ಅಧಿಕೃತ ಅಭ್ಯರ್ಥಿಯನ್ನಾಗಿ ಪರಿಗಣಿಸಲಿದ್ದಾರೆ.

ಆದಿನಾರಾಯಣ,ಮುದ್ದಹನುಮೇಗೌಡ ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗುತ್ತದೋ ಅಥವಾ ಪಕ್ಷೇತರ ಅಭ್ಯರ್ಥಿಗಳನ್ನಾಗಿ ಪರಿಗಣಿಸಲಾಗುತ್ತದೋ ಎಂಬುದು ಗುರುವಾರ ನಡೆಯುವ ನಾಮಪತ್ರಗಳ ಪರಿಶೀಲನೆ ನಂತರ ಗೊತ್ತಾಗಲಿದೆ.

ಮಾಜಿ ಸ್ಪೀಕರ್ ಕೃಷ್ಣ ಅವರಿಗೆ  ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.

ಕಾಂಗ್ರೆಸ್ಸಿಗರಿಗೆ ಗಾಳ: ಕಾಂಗ್ರೆಸ್ ಟಿಕೆಟ್‌ನಿಂದ ವಂಚಿತರಾದ ವಸಂತ ಸಾಲಿಯಾನ (ಕಾಪು), ಎ.ಕೃಷ್ಣಪ್ಪ (ಹಿರಿಯೂರು), ಸೈಯದ್ ಸೈಫುಲ್ಲಾ (ದಾವಣಗೆರೆ ದಕ್ಷಿಣ) ಅವರು ಜೆಡಿಎಸ್ ಟಿಕೆಟ್ ಪಡೆಯುವ ಮೂಲಕ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ತೊರೆದು ಜೆಡಿಎಸ್ ಸೇರಿದ ರಾಜುಗೌಡ, ಬೇಳೂರು ಗೋಪಾಲಕೃಷ್ಣ, ಶಶಿಲ್ ನಮೋಶಿ ಅವರಿಗೆ ಈ ಮೊದಲೇ `ಬಿ' ಫಾರಂ ನೀಡಲಾಗಿತ್ತು.

ಬುಧವಾರ ಬೆಳಿಗ್ಗೆ ಜೆಡಿಎಸ್ 97 ಕ್ಷೇತ್ರಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಅಧಿಕೃತ ಅಭ್ಯರ್ಥಿಗಳಿಗೆ ಸೋಮವಾರ,ಮಂಗಳವಾರವೇ `ಬಿ' ಫಾರಂ ನೀಡಲಾಗಿತ್ತು ಎನ್ನಲಾಗಿದೆ. ಕೊನೆ ಗಳಿಗೆಯಲ್ಲಿ ಟಿಕೆಟ್ ಘೋಷಿಸಿದರೂ, ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನ ನಡೆದಿದೆ. ಶನಿವಾರದವರೆಗೂ ನಾಮಪತ್ರಗಳನ್ನು ವಾಪಸ್ ಪಡೆಯಲು ಅವಕಾಶ ಇದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT