ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಪಿಸಿ ಮುಖ್ಯಸ್ಥ ಚಾಕೋ ತಲೆದಂಡ: ಬಿಜೆಪಿ, ಎಡಪಕ್ಷಗಳ ಪಟ್ಟು

Last Updated 25 ಏಪ್ರಿಲ್ 2013, 12:27 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್): 2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಮುಖ್ಯಸ್ಥ ಸ್ಥಾನದಿಂದ ಪಿ.ಸಿ. ಚಾಕೋ ಅವರನ್ನು ಕಿತ್ತು ಹಾಕುವಂತೆ ಬಿಜೆಪಿ ಮತ್ತು ಎಡಪಕ್ಷಗಳು ಒಂದಾಗಿ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರನ್ನು ಗುರುವಾರ ಆಗ್ರಹಿಸಿದವು.

ತೃಣಮೂಲ ಕಾಂಗ್ರೆಸ್ ನ ಲೋಕಸಭಾ ಸದಸ್ಯೆ ಅಂಬಿಕಾ ಬ್ಯಾನರ್ಜಿ ನಿಧನದ ಹಿನ್ನೆಲೆಯಲ್ಲಿ ಕರಡು ವರದಿಯನ್ನು ಅಂತಿಮಗೊಳಿಸಬೇಕಾಗಿದ್ದ ಜೆಪಿಸಿ ಸಭೆ ಮುಂದೂಡಿಕೆಯಾದರೂ ವಿರೋಧ ಪಕ್ಷಗಳ ಸದಸ್ಯರು ಮೊದಲೇ ನಿಗದಿಯಾಗಿದ್ದಂತೆ ಲೋಕಸಭಾಧ್ಯಕ್ಷರನ್ನು ಭೇಟಿ ಮಾಡಿದರು.

ವರದಿಯ ಪಠ್ಯಕ್ಕೆ ಸಂಬಂಧಿಸಿದಂತೆ ವಿಭಜನೆಗೊಂಡಿರುವ 30 ಸದಸ್ಯರ ಜೆಪಿಸಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಸಭೆ ಸೇರಬೇಕಾಗಿತ್ತು.

ಜೆಪಿಸಿ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸುವ ನಿಟ್ಟಿನಲ್ಲಿ ಈದಿನ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಎಡಪಕ್ಷಗಳು ಒಟ್ಟಾಗಿ ನಿಂತುಕೊಂಡವು. ಸಮಿತಿಯ ಕಾಂಗ್ರೆಸ್ಸೇತರ ಸದಸ್ಯರು ಲೋಕಸಭಾಧ್ಯಕ್ಷರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಚಾಕೋ ಅವರನ್ನು ಸಮಿತಿ ಮುಖ್ಯಸ್ಥ ಹುದ್ದೆಯಿಂದ ಕಿತ್ತು ಹಾಕುವಂತೆ ಆಗ್ರಹಿಸಿದರು.

'ಇದು ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಹಗರಣ. ಸರ್ಕಾರ ಇದರ ಬಗ್ಗೆ ಬಾಯಿ ಬಿಡುತ್ತಿಲ್ಲ. ಪ್ರಧಾನಿಯವರಿಗೆ ಎಲ್ಲ ಗೊತ್ತಿದೆ ಎಂಬುದಾಗಿ ಮಾಜಿ ದೂರಸಂಪರ್ಕ ಸಚಿವ ರಾಜಾ ಅವರು ಹೇಳಿದ್ದು, ಪ್ರಧಾನಿ ಅದಕ್ಕೆ ಉತ್ತರ ನೀಡಬೇಕು' ಎಂದು ರಾಜ್ಯ ಸಭೆಯಲ್ಲಿನ ವಿರೋಧ ಪಕ್ಷದ ಉಪನಾಯಕ ರವಿ ಶಂಕರ ಪ್ರಸಾದ್ ಹೇಳಿದರು.

ಚಾಕೋ ಅವರನ್ನು ಕಿತ್ತು ಹಾಕಬೇಕು ಎಂದು ಒತ್ತಾಯಿಸಿ ಲೋಕಸಭಾಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ಪ್ರಸಾದ್ ನುಡಿದರು. ಜೆಪಿಸಿಯ ನಿಷ್ಪಕ್ಷಪಾತತೆ ಮತ್ತು ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ನಾವು ಬಯಸುತ್ತೇವೆ ಎಂದು ಅವರು ನುಡಿದರು.

ಚಾಕೋ ಅವರು ಜೆಪಿಸಿ ಸದಸ್ಯರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ - ಮಾರ್ಕ್ಸ್ ವಾದಿ (ಸಿಪಿಐ-ಎಂ) ನಾಯಕ ಸೀತಾರಾಂ ಯಚೂರಿ ಹೇಳಿದರು.

'ಈ ವರದಿ ನಮಗೆ ಸ್ವೀಕಾರಾರ್ಹ ಅಲ್ಲ. ವರದಿಯನ್ನು ಹಂಚಿದ ರೀತಿ ಮತ್ತು ಸೋರಿಕೆ ಮಾಡಿದ್ದನ್ನು ಅಂಗೀಕರಿಸಲಾಗದು. ಅಧ್ಯಕ್ಷರು ಅಸಮರ್ಪಕವಾಗಿ ವರ್ತಿಸಿದ್ದಾರೆ ಮತ್ತು ಸಮಿತಿ ಸದಸ್ಯರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ' ಎಂದು ಯಚೂರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT