ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಪಿಸಿ ರಚನೆ: ಸಂಸತ್ತಿನಲ್ಲಿ ಇಂದು ಪ್ರಧಾನಿಹೇಳಿಕೆ

Last Updated 21 ಫೆಬ್ರುವರಿ 2011, 17:25 IST
ಅಕ್ಷರ ಗಾತ್ರ

ನವದೆಹಲಿ: ‘ಎರಡನೇ ತಲೆಮಾರಿನ ರೇಡಿಯೋ ತರಂಗಾಂತರ ಹಗರಣ’ ವಿಚಾರಣೆಗೆ ‘ಜಂಟಿ ಸದನ ಸಮಿತಿ’ (ಜೆಪಿಸಿ) ರಚಿಸುವ ಸರ್ಕಾರದ ಇಂಗಿತ ಕುರಿತು ಪ್ರಧಾನಿ ಮನಮೋಹನ್‌ಸಿಂಗ್ ಮಂಗಳವಾರ ಸಂಸತ್ತಿನಲ್ಲಿ ಹೇಳಿಕೆ ನೀಡುವ ಸಾಧ್ಯತೆ ಇದೆ.

ಇಡೀ ಚಳಿಗಾಲದ ಅಧಿವೇಶನವನ್ನು ನುಂಗಿಹಾಕಿದ 2ಜಿ ಹಗರಣದ ವಿಚಾರಣೆಗೆ ಸಂಸತ್ತಿನ ಜಂಟಿ ಸದನ ಸಮಿತಿ ರಚಿಸಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಗೆ ಸರ್ಕಾರ ಒಪ್ಪಿಕೊಂಡಿದ್ದು, ಸಂಸತ್ತಿನಲ್ಲಿ ಈ ಕುರಿತು ಅಧಿಕೃತವಾಗಿ ಪ್ರಕಟಿಸುವುದಷ್ಟೇ ಬಾಕಿ ಉಳಿದಿದೆ.

ಪ್ರಧಾನಿ ಸಿಂಗ್ ಮಂಗಳವಾರ ಲೋಕಸಭೆಗೆ ತಮ್ಮ ಮಂತ್ರಿಮಂಡಳದ ನೂತನ ಸದಸ್ಯರನ್ನು ಪರಿಚಯಿಸುವ ಸಂದರ್ಭದಲ್ಲಿ ಜೆಪಿಸಿ ರಚಿಸುವ ಸರ್ಕಾರದ ಉದ್ದೇಶ ಕುರಿತು ಪ್ರಸ್ತಾಪಿಸಲಿದ್ದಾರೆ.

ಸೋಮವಾರ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಂಗಳವಾರ, ಬುಧವಾರ ಚರ್ಚೆ ನಡೆಯಲಿದೆ. ಚರ್ಚೆಗೆ ಪ್ರಧಾನಿ ಉತ್ತರಿಸಿದ ಬಳಿಕ ಗುರುವಾರ ದೂರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಜೆಪಿಸಿ ರಚನೆ ಕುರಿತ ನಿರ್ಣಯ ಮಂಡಿಸಲಿದ್ದಾರೆ. ಗುರುವಾರ ಮತ್ತು ಶುಕ್ರವಾರ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಸಮಗ್ರ ಚರ್ಚೆ ನಡೆಯಲಿದೆ. ಅನಂತರ ನಿರ್ಣಯ ಒಪ್ಪಿಗೆಗಾಗಿ ರಾಜ್ಯಸಭೆಯಲ್ಲಿ ಮಂಡನೆ ಆಗಲಿದೆ.

2ಜಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಒಳಗೊಂಡಂತೆ ಯಾರನ್ನು ಬೇಕಾದರೂ ವಿಚಾ|ರಣೆಗೆ ಒಳಪಡಿಸುವ; ಯಾವುದೇ ದಾಖಲೆಯನ್ನು ಪರಿಶೀಲಿಸುವ ಅಧಿಕಾರವಿರುವ ಜಂಟಿ ಸದನ ಸಮಿತಿಗೆ ಸಾಧ್ಯವಾದಷ್ಟು ಪಕ್ಷಗಳ ಸದಸ್ಯರನ್ನು ನೇಮಿಸುವ ಆಲೋಚನೆ ಸರ್ಕಾರಕ್ಕೆ ಇದ್ದಂತಿದೆ.

ಸಮಿತಿ ಸಣ್ಣದಾಗಿದ್ದಾರೆ ರಾಜಕೀಯ ಪಕ್ಷಗಳ ಬಲಾಬಲದ ಆಧಾರದಲ್ಲಿ ಏಳೆಂಟು ಪಕ್ಷಗಳಿಗಷ್ಟೇ ಅವಕಾಶ ದೊರೆಯಲಿದೆ. ಸಂಸತ್ತಿನಲ್ಲಿ 37 ರಾಜಕೀಯ ಪಕ್ಷಗಳಿವೆ. ಸಮಿತಿಯಲ್ಲಿ 30 ಸದಸ್ಯರಿದ್ದರೆ ಲೋಕಸಭೆ 20 ಹಾಗೂ ರಾಜ್ಯಸಭೆಯ 10 ಮಂದಿಗೆ ಪ್ರಾತಿನಿಧ್ಯ ಸಿಗಲಿದೆ. ಈ ಸಂಖ್ಯೆ 21 ಆದರೆ ಕ್ರಮವಾಗಿ 14 ಮತ್ತು ಏಳು ಮಂದಿಗೆ ಮಾತ್ರ ಸ್ಥಾನ ದೊರೆಯಲಿದೆ.

ಚಳಿಗಾಲದ ಅಧಿವೇಶನ ಸಂಪೂರ್ಣ 2ಜಿ ಹಗರಣಕ್ಕೆ ಬಲಿಯಾದ ಬಗ್ಗೆ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ಬಿಗಿ ಪಟ್ಟು ಸಡಿಲಿಸಿದ್ದರಿಂದ ಸಮಸ್ಯೆ ಸುಸೂತ್ರವಾಗಿ ಬಗೆಹರಿದಿದೆ. ಕಲಾಪವೇ ನಡೆಯದ ಚಳಿಗಾಲದ ಅಧಿವೇಶನಕ್ಕೆ ಅಂದಾಜು 150 ಕೋಟಿ ವೆಚ್ಚವಾಗಿದೆ.

ಬಜೆಟ್ ಅಧಿವೇಶನ ಸುಸೂತ್ರವಾಗಿ- ರಚನಾತ್ಮಕವಾಗಿ ನಡೆಯಲಿದೆ ಎಂಬ ವಿಶ್ವಾಸವನ್ನು ಸಿಂಗ್ ವ್ಯಕ್ತಪಡಿಸಿದ್ದಾರೆ. ಬಜೆಟ್ ಮಂಡನೆ ಆಗಬೇಕು. ಸಮಗ್ರವಾಗಿ ಚರ್ಚೆಯಾಗಿ ಅಂಗೀಕಾರವಾಗಬೇಕು. ಹಾಗೇ ಮಹತ್ವದ ಮಸೂದೆಗಳನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿದೆ ಎಂದಿದ್ದಾರೆ.

ಬಜೆಟ್ ಅಧಿವೇಶನವನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಭಾನುವಾರ ಸ್ಪೀಕರ್ ಮೀರಾ ಕುಮಾರ್ ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ 2ಜಿ ಹಗರಣದ ವಿಚಾರಣೆಗೆ ಜಂಟಿ ಸದನ ಸಮಿತಿ ರಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT