ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಪಿಸಿ ವರದಿಯಲ್ಲಿ ವಾಜಪೇಯಿ ಹೆಸರು ಅಸಂಬದ್ಧ ಕ್ರಮ: ಜಸ್ವಂತ್

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಹಗರಣ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಿ ಸಿದ್ಧಪಡಿಸಿರುವ ಕರಡು ವರದಿಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರನ್ನು ಸೇರಿಸಿರುವುದಕ್ಕೆ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. `2 ಜಿ ಹಗರಣ ಕುರಿತು ವಾಜಪೇಯಿ ಅವರ ಆಡಳಿತ ಅವಧಿಯಲ್ಲಿ ತಪ್ಪು ಹುಡುಕುತ್ತಿರುವ ಜೆಪಿಸಿಯ ಕ್ರಮ ಅಸಂಬದ್ಧ ಹಾಗೂ ಹಾಸ್ಯಾಸ್ಪದ' ಎಂದು ಜಸ್ವಂತ್ ಅವರು ಲೇವಡಿ ಮಾಡಿದ್ದಾರೆ.

`ನಾನು ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವನಾಗಿದ್ದೆ ಎಂಬ ಕಾರಣಕ್ಕೆ ಈ ಹೇಳಿಕೆ ನೀಡುತ್ತಿಲ್ಲ. ಆದರೆ ಇಂತಹ ಅಸಂಬದ್ಧ ದಾಖಲೆ ಬಿಡುಗಡೆ ಮಾಡುವ ಅಗತ್ಯವಿರಲಿಲ್ಲ' ಎಂದು ಜೆಪಿಸಿ ಸದಸ್ಯರೂ ಆಗಿರುವ ಜಸ್ವಂತ್ ಸಿಂಗ್ ಸೋಮವಾರ ಸಂಸತ್ತಿನ ಹೊರಗಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ಎನ್‌ಡಿಎ ಸರ್ಕಾರ ಅಂದಿನ ದೂರಸಂಪರ್ಕ ಸಚಿವ ಜಗಮೋಹನ್ ಮತ್ತು ಹಣಕಾಸು ಸಚಿವ ಯಶವಂತ ಸಿನ್ಹಾ ಅವರ ವಿರೋಧದ ನಡುವೆಯೂ ಟೆಲಿಕಾಂ ಕಂಪೆನಿಗಳಿಗೆ ರಿಯಾಯಿತಿ ಅನುದಾನ ನೀಡಿದ್ದೇಕೆ?' ಎಂಬ ಸುದ್ದಿಗಾರರ ಪ್ರಶ್ನೆಗೆ ಜಸ್ವಂತ್ ಸಿಂಗ್, `ಇದೊಂದು ಗೊಂದಲದ ಪ್ರಶ್ನೆಯಾಗಿದೆ' ಎಂದು ಹಾರಿಕೆ ಉತ್ತರ ನೀಡಿದರು.

2ಜಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜೆಪಿಸಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಟೆಲಿಕಾಂ ಕಂಪೆನಿಗಳಿಗೆ ರಿಯಾಯಿತಿ ಅನುದಾನ ನೀಡಿರುವುದನ್ನು ಪ್ರಶ್ನಿಸಿತ್ತು.

`ವರದಿಯಲ್ಲಿ ವಾಜಪೇಯಿ ಹೆಸರಿಲ್ಲ'

ನವದೆಹಲಿ (ಪಿಟಿಐ): 2ಜಿ ಹಗಣರ ಕುರಿತು ಜೆಪಿಸಿ ಸಿದ್ಧಪಡಿಸಿರುವ ಕರಡು ವರದಿಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಹೆಸರು ಸೇರಿಸಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ಜೆಪಿಸಿ ಅಧ್ಯಕ್ಷ ಪಿ.ಸಿ.ಚಾಕೊ ತಳ್ಳಿ ಹಾಕಿದ್ದಾರೆ. `ಜೆಪಿಸಿ ವರದಿಯಲ್ಲಿ ಯಾವುದೇ ನಾಯಕರ ಹೆಸರನ್ನು ಪ್ರಸ್ತಾಪಿಸಿಲ್ಲ. ಇದು ಕೇವಲ ಕಪೋಲಕಲ್ಪಿತ ವಾದ' ಎಂದು ಚಾಕೊ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT