ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಂತಾ ಅಂತ್ಯಕ್ರಿಯೆ ಇಂದು

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಶಿರ್ವ (ಉಡುಪಿ ಜಿಲ್ಲೆ): ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ನರ್ಸ್ ಜೆಸಿಂತಾ ಅವರ ಮೃತದೇಹವನ್ನು ಭಾನುವಾರ ಲಂಡನ್‌ನಿಂದ ಜೆಟ್ ಏರ್‌ವೇಸ್ ವಿಮಾನದ ಮೂಲಕ ಮುಂಬೈಗೆ,  ಅಲ್ಲಿಂದ ಮಂಗಳೂರಿಗೆ ತರಲಾಯಿತು. ಬಳಿಕ ಶವವನ್ನು ಮಣಿಪಾಲಕ್ಕೆ ಕೊಂಡೊಯ್ದು ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಅಂತ್ಯಕ್ರಿಯೆಯು ಅವರ ಪತಿಯ ಇಚ್ಛೆಯಂತೆ ಶಿರ್ವದ ಆರೋಗ್ಯ ಮಾತಾ ಚರ್ಚ್‌ನ ದಫನ ಭೂಮಿಯಲ್ಲಿ ಸೋಮವಾರ ಸಂಜೆ 4 ಗಂಟೆಗೆ  ನಡೆಯಲಿದೆ.

ಲಂಡನ್‌ನ ಕೆಥೆಡ್ರೆಲ್‌ನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಜೆಸಿಂತಾ ಅವರ ಪತಿ ಬೆನೆಡಿಕ್ಟ್ ಬರ್ಬೋಜಾ, ಪುತ್ರ ಜುನಾಲ್ ಮತ್ತು ಪುತ್ರಿ ಲಿಶಾ ತವರಿಗೆ ಮರಳಿದರು. ಶಿರ್ವ ಗ್ರಾಮದ ಸೊರ್ಕಳದ ಮನೆಗೆ ತಲುಪಿದ  ಪತಿ ಹಾಗೂ ಮಕ್ಕಳು ಜೆಸಿಂತಾ ಸಾವಿನಿಂದ ತೀವ್ರ ದುಃಖಿತರಾಗಿರುವುದು ಕಂಡುಬಂತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ತಾಯಿಯೊಂದಿಗೆ ಅಜ್ಜಿ ಮನೆಗೆ ಬಂದು ಖುಷಿಯಿಂದ ದಿನ ಕಳೆದಿದ್ದ ಮಕ್ಕಳ ಮೊಗದಲ್ಲಿ ಈ ಬಾರಿ ದುಃಖ ಮಡುಗಟ್ಟಿತ್ತು. ಪತ್ನಿಯ ಅಗಲುವಿಕೆಯಿಂದ ನೊಂದಿದ್ದ ಬೆನೆಡಿಕ್ಟ್ ಬರ್ಬೋಜಾ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

`ಜೆಸಿಂತಾ ಅಂತ್ಯಕ್ರಿಯೆ ಬಳಿಕ ಮಾಧ್ಯಮಗಳ ಜತೆ ಮಾತನಾಡುತ್ತೇನೆ' ಎಂದು ದುಃಖತಪ್ತರಾಗಿ ಹೇಳಿದ ಬೆನೆಡಿಕ್ಟ್, `ಜೆಸಿಂತಾ ಅಂತ್ಯಕ್ರಿಯೆಯನ್ನು ಸುಗಮವಾಗಿ ನಡೆಸಲು ಅನುವು ಮಾಡಿಕೊಡಿ' ಎಂದು ಮಾಧ್ಯಮಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಜೆಸಿಂತಾಳ ಅಂತ್ಯಕ್ರಿಯೆಯ ಅಂತಿಮ ಕ್ಷಣಗಳನ್ನು ಸೆರೆಹಿಡಿಯಲು ಶಿರ್ವ ಗ್ರಾಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸುದ್ದಿ ಮಾಧ್ಯಮಗಳ ದಂಡೇ ಬೀಡುಬಿಟ್ಟಿದೆ.

ಬಂದೋಬಸ್ತ್
ಪಾರ್ಥಿವ ಶರೀರದ ದರ್ಶನಕ್ಕೆ ಸುಮಾರು 5ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯವರೆಗೆ ಶಿರ್ವ ಪರಿಸರದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 11ಗಂಟೆ ವೇಳೆಗೆ ಬೆನೆಡಿಕ್ಟ್ ಅವರ ಸೊರ್ಕಳದ ಮನೆಗೆ ಮೃತದೇಹ ತರಲಾಗುವುದು. ಮಧ್ಯಾಹ್ನ 3ರಿಂದ 4ಗಂಟೆಯವರೆಗೆ ಶಿರ್ವ ಚರ್ಚ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 

ಸಂಜೆ 4ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಡೆನ್ನಿಸ್ ಪ್ರಭು, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಫಾ.ಡಾ.ಅಲೋಶಿಯಸ್ ಪಾವ್ಲ ಡಿಸೋಜ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಲಿದೆ. ಉಡುಪಿ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ, ಶಿರ್ವ ಚರ್ಚ್ ಧರ್ಮಗುರು ರೆ.ಫಾ.ಸ್ಟ್ಯಾನಿ ತಾವ್ರೊ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT