ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಂತಾ ಸಾವಿಗೆ ಕಿರುಕುಳ ಕಾರಣ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನ ಆತ್ಮಹತ್ಯೆ ಮಾಡಿಕೊಳ್ಳಲು, ಅವರು ಕಾರ್ಯ ನಿರ್ವಹಿಸುತ್ತಿದ್ದ ಇಲ್ಲಿನ ಕಿಂಗ್ ಎಡ್ವರ್ಡ್ 7 ಆಸ್ಪತ್ರೆಯ ಕೆಲ ಹಿರಿಯ ಸಹೋದ್ಯೋಗಿಗಳ ಕಿರುಕುಳದ ನಡವಳಿಕೆಯೇ ಕಾರಣ ಎಂಬ ಅನುಮಾನ ಮೂಡಿದೆ.

ಜೆಸಿಂತಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರವೊಂದರಲ್ಲಿ ಆಸ್ಪತ್ರೆಯ ಹಿರಿಯ ಸಹೋದ್ಯೋಗಿಗಳ ವರ್ತನೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಯುವರಾಣಿ ಕೇಟ್ ಗರ್ಭಿಣಿಯೇ ಎಂಬ ಬಗ್ಗೆ ಮತ್ತು ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಆಸ್ಟ್ರೇಲಿಯಾದ ರೇಡಿಯೊ ನಿರೂಪಕರು ಲಂಡನ್‌ನ ಕಿಂಗ್ ಎಡ್ವರ್ಡ್ 7 ಆಸ್ಪತ್ರೆಗೆ ರಾಣಿ ಎಲಿಜಬೆತ್ ಮತ್ತು ಯುವರಾಜ ಚಾರ್ಲ್ಸ್ ಹೆಸರಿನಲ್ಲಿ ಕೀಟಲೆ ಕರೆ ಮಾಡಿದ್ದರು. ಇದರ ಬಗ್ಗೆ ಅರಿವಿಲ್ಲದ ಜೆಸಿಂತಾ ಅವರು ಕರೆಯನ್ನು ಯುವರಾಣಿಯ ಚಿಕಿತ್ಸಾ ಕೊಠಡಿಯ ನರ್ಸ್‌ಗೆ ವರ್ಗಾಯಿಸಿದ್ದರು. ಅಲ್ಲಿ ಪಡೆದ ಮಾಹಿತಿಯನ್ನು ರೇಡಿಯೋ ಪ್ರಸಾರ ಮಾಡಿದ ನಂತರ ವ್ಯಾಪಕ ಕೋಲಾಹಲ ಉಂಟಾಗಿತ್ತು. ಇದರ ಬೆನ್ನಲ್ಲೇ ಜೆಸಿಂತಾ ನಿಗೂಢವಾಗಿ ಸಾವನ್ನಪ್ಪಿದ್ದರು.

ಆತ್ಮಹತ್ಯೆಗೂ ಮುನ್ನ ಜೆಸಿಂತಾ ಬರೆದ 3 ಪತ್ರಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಕೊರೋನರ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈಗ ಬಹಿರಂಗಗೊಂಡ ಮಾಹಿತಿಯ ಪ್ರಕಾರ, ಒಂದು ಪತ್ರದಲ್ಲಿ ರೇಡಿಯೊ ನಿರೂಪಕರ ಹುಸಿ ಕರೆಯಿಂದ ತಾವು ಅನುಭವಿಸಿದ ಯಾತನೆಗಳನ್ನು ಹಂಚಿಕೊಂಡಿದ್ದಾರೆ.

ಎರಡನೇ ಪತ್ರದಲ್ಲಿ, ಘಟನೆಯ ನಂತರ ಹಿರಿಯ ಸಹೋದ್ಯೋಗಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡ್ದ್ದಿದನ್ನು ವಿವರಿಸ್ದ್ದಿದಾರೆ. ಮೂರನೇ ಪತ್ರದಲ್ಲಿ ಶವಸಂಸ್ಕಾರವನ್ನು ಯಾವ ರೀತಿ ಮಾಡಬೇಕೆಂದು ಸೂಚಿಸಿದ್ದಾರೆ.

ಎರಡು ಪತ್ರಗಳು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ, 3ನೇ ಪತ್ರ, ಅವರಿಗೆ ಸೇರಿದ ವಸ್ತುಗಳ ಜತೆ ದೊರೆತಿತ್ತು.

ಪತಿ ಆಕ್ರೋಶ: ಜೆಸಿಂತಾ ಬರೆದಿಟ್ಟ ಪತ್ರದ ಮಾಹಿತಿ ಹೊರಬೀಳುತ್ತಿದ್ದಂತೆ ಕೆಂಡಾಮಂಡಲವಾಗಿರುವ ಪತಿ ಬೆನೆಡಿಕ್ಟ್ ಬರ್ಬೋಜಾ ಹಾಗೂ ಕುಟಂಬದ ಸದಸ್ಯರು, ಆಸ್ಪತ್ರೆಯ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

`ಜೆಸಿಂತಾ ಬರೆದಿರುವ ಪತ್ರದಲ್ಲಿ ಆಸ್ಪತ್ರೆಯವರು ತಮ್ಮಂದಿಗೆ ನಡೆದುಕೊಂಡ ರೀತಿ, ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ಇಡೀ ಆಸ್ಪತ್ರೆಯ ವ್ಯವಸ್ಥೆ ಕುರಿತು ತನಿಖೆ ನಡೆಯಬೇಕೆಂದು ಅವರ ಪತಿ  ಒತ್ತಾಯಿಸಿದ್ದಾರೆ' ಎಂದು ಸಲ್ಡಾನ ಕುಟುಂಬದ ಸಮೀಪವರ್ತಿಗಳು ತಿಳಿಸಿದ್ದಾರೆ.

ಜೆಸಿಂತಾ ಬರೆದಿಟ್ಟಿರುವ ಪತ್ರಗಳನ್ನು ಸ್ಕಾಟ್ಲೆಂಡ್ ಯಾರ್ಡ್ ತನಿಖಾಧಿಕಾರಿಗಳು ಪರಿಶೀಲಿಸಿದ್ದಾರೆ. ಇದರ ಜೊತೆಗೆ ಜೆಸಿಂತಾ ಅವರ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಆಸ್ಪತ್ರೆಯ ಸಹೋದ್ಯೋಗಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ. ಜೆಸಿಂತಾ ಕುಟುಂಬದವರು, ಆಕೆಯ ಕೈಬರಹದ ಪತ್ರಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದಾರೆ.

ಏತನ್ಮಧ್ಯೆ ಲಂಡನ್ ವೆಸ್ಟ್‌ಮಿನಿಸ್ಟರ್ ಕೆಥೆಡ್ರೆಲ್‌ನಲ್ಲಿ ಜೆಸಿಂತಾ ಆತ್ಮಕ್ಕೆ ಶಾಂತಿಕೋರಿ ಅವರ ಆಪ್ತರು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT