ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಡಿಮಾಕನಹಳ್ಳಿಯಲ್ಲಿ ಬರಿದಾದ ಜಲ

Last Updated 23 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಕೆಜಿಎಫ್: ಆಂಧ್ರಪ್ರದೇಶಕ್ಕೆ ಅಂಟಿಕೊಂಡಿರುವ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಜೇಡಿಮಾಕನಹಳ್ಳಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ತಾತ್ಸಾರಕ್ಕೆ ಒಳಗಾಗಿರುವ ಗ್ರಾಮ. 

ಉತ್ತಮ ರಸ್ತೆ ಬೇಕಾದರೆ ಆಂಧ್ರಪ್ರದೇಶಕ್ಕೆ ಹೋಗಿ ನಂತರ ಈ ಹಳ್ಳಿಗೆ ಬರಬೇಕಾದ ಪರಿಸ್ಥಿತಿ ಇರುವ ಕಾರಣ ಗ್ರಾಮಕ್ಕೆ ಭೇಟಿ ನೀಡುವವರೇ ವಿರಳ. ಎಲ್ಲೆಡೆಯಂತೆ ಇಲ್ಲೂ ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಉಳ್ಳವರು ಹೇಗೋ ನೀರು ಪಡೆಯುತ್ತಾರೆ. ಆದರೆ ಗ್ರಾಮದ ಪರಿಶಿಷ್ಟರೇ ಇರುವ ಕಾಲೊನಿ ಜನ ಮಾತ್ರ ಪಕ್ಕದ ಗ್ರಾಮಗಳಿಂದ ನೀರು ಹೊತ್ತು ಬಸವಳಿದಿದ್ದಾರೆ.

ಜೇಡಿಮಾಕನಹಳ್ಳಿಯಲ್ಲಿ ಸುಮಾರು 150 ಮನೆಗಳಿವೆ. ಬಹುತೇಕ ಎಲ್ಲರೂ ಕೃಷಿಕರೇ. ಅದರಲ್ಲೂ ಪರಿಶಿಷ್ಟ ಜಾತಿಯವರೇ ಇರುವ ಕಾಲೊನಿ. ಇಲ್ಲಿರುವವರು ಎಲ್ಲ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರಸ್ತೆ ಇಲ್ಲ. ಚರಂಡಿ ಇಲ್ಲ. ಇರುವ ಚರಂಡಿಯಲ್ಲಿ ನೀರು ಸಹ ಹರಿಯುವುದಿಲ್ಲ.

ಇವೆಲ್ಲಕ್ಕೂ ಇಂಬು ಇಟ್ಟಂತೆ ಕುಡಿಯುವ ನೀರು ಸಹ ಈಗ ಇಲ್ಲ. ಗ್ರಾಮದಲ್ಲಿದ್ದ ಎರಡು ಕೊಳವೆಬಾವಿಗಳು ಒಣಗಿ ಹೋಗಿವೆ. ಎಂತಹ ಬರದಲ್ಲೂ ನೀರು ನೀಡುತ್ತಿದ್ದ ಬಾವಿಯಲ್ಲಿ ಜಲ ಬರಿದಾಗಿದೆ. ಸಮಸ್ಯೆ ಪರಿಹಾರಕ್ಕೆ ಅವರಿಗೆ ಸಿಗುವ ಏಕೈಕ ವ್ಯಕ್ತಿಯೆಂದರೆ ಗ್ರಾಮ ಪಂಚಾಯತಿ ಸದಸ್ಯ ಮಾತ್ರ. ದೊಡ್ಡ ಸಮಸ್ಯೆಯನ್ನು ಪಂಚಾಯಿತಿ ಮಟ್ಟದ ಸದಸ್ಯರು ನಿವಾರಿಸಲು ಸಾಧ್ಯವಿಲ್ಲ ಎಂಬುದು ಕಾಲೊನಿಯ ಜನಕ್ಕೆ ಗೊತ್ತು.

ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಎರಡು ಬಸ್ ಬದಲಾಯಿಸಿ ಬಂಗಾರಪೇಟೆಗೆ ಬರಬೇಕು. ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಇವೆಲ್ಲಾ ಮಾಡುವುದಕ್ಕೆ ಅವರಿಗೆ ಪುರಸೊತ್ತೇ ಇಲ್ಲ.

ಹೆಸರಿಗೇನೋ ಕರ್ನಾಟಕದಲ್ಲಿ ಇದ್ದೇವೆ. ನಾವು ಕೊನೆ ಭಾಗದಲ್ಲಿ ಇದ್ದೇವೆ ಎಂಬ ತಾತ್ಸಾರ ಗ್ರಾಮಸ್ಥರಿಗಿದೆ. `ವೋಟ್ ಕೇಳಬೇಕಾದರೆ ಬಣ್ಣದ ಮಾತು ಹೇಳುವವರು ಈಗ ನಮ್ಮ ತಾಪತ್ರಯ ನಿವಾರಿಸಲು ಮುಂದೆ ಬರುತ್ತಿಲ್ಲ~ ಎಂಬುದು ಕಾಲೊನಿಯ ಜನರ ಅಳಲು.

ಇವತ್ತು ಕೊರೆಯುವ ಕೊಳವೆ ಬಾವಿ ಒಂದೆರಡು ದಿನಗಳಲ್ಲಿ ನೀರಿಲ್ಲದೆ ಒಣಗಿಹೋಗುತ್ತದೆ. ಅಂತರ್ಜಲ ಇಲ್ಲದೆ ಎಲ್ಲಿಂದ ನೀರು ತರುವುದು ಎಂಬುದು ಅಧಿಕಾರಿಗಳ ಸಮಜಾಯಿಷಿ. ಆದರೂ, ಟ್ಯಾಂಕರ್ ಮೂಲಕವಾಗಿಯಾದರೂ ನೀರು ಸರಬರಾಜು ಮಾಡಲು ಸಾಧ್ಯ ಎಂಬುದನ್ನು ತಿಳಿಯಬೇಕು ಎಂಬುದು ಗ್ರಾಮಸ್ಥರ ಬಯಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT