ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನು ಕುರುಬರ ಸಮಸ್ಯೆಗಳಿಗೆ ಸಿಗದ ಉತ್ತರ

Last Updated 10 ಸೆಪ್ಟೆಂಬರ್ 2011, 6:10 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಮದ್ದೂರು ಕಾಲೋನಿಯ ಗಿರಿಜನ ಹಾಡಿಯ ಜೇನು ಕುರುಬರ ಸಮಸ್ಯೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಹಾಡಿಯಲ್ಲಿ 225 ಮನೆಗಳಿದ್ದು 550ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಹಲವರು ಸುಮಾರು ವರ್ಷಗಳಿಂದ ಗುಡಿಸಿಲಿನಲ್ಲಿಯೇ ವಾಸ ಮಾಡುತ್ತಿದ್ದು ಇವರಿಗೆ ಸರ್ಕಾರ ಯಾವುದೇ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಟ್ಟಿಲ್ಲ.

ಈ ಹಾಡಿಗೆ ರಸ್ತೆ ಇದ್ದರೂ ಡಾಂಬರೀಕರಣವಾಗಿಲ್ಲ ಹಾಗೂ ಬಸ್ ಸೌಕರ್ಯವಿಲ್ಲ. ಈ ಜನರು ಬಹಳ ಹಿಂದಿನಿಂದಲೂ ಕಾಡಿನಲ್ಲಿ ದೊರೆಯುವ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು.
 
ಆದರೆ ಅರಣ್ಯದ ಕಾನೂನುಗಳು ಹೆಚ್ಚಾದಂತೆಲ್ಲಾ ಈಗ ಕಾಡಿನೊಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಈ ಹಾಡಿಯ ಜೇನುಕುರುಬರ ಲ್ಯಾಂಪ್ ಸಹಕಾರ ಸಂಘದ ಸದಸ್ಯ ಜಗದೀಶ್ ಹೇಳುತ್ತಾರೆ. ಪ್ರಸ್ತುತ ಕೇರಳದ ಕಡೆಗೆ ಮತ್ತು ಸುತ್ತಮುತ್ತಲಿನ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ಎನ್ನುತ್ತಾರೆ. ಇಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆ ಕೂಡ ಸರಿಯಾಗಿ ನಡೆದಿಲ್ಲ. ಈ ಹಾಡಿಯ ಜೇನು ಕುರುಬರಿಗೆ ಸರ್ಕಾರ ಜಮೀನುಗಳನ್ನು ನೀಡಿದ್ದರೂ ವ್ಯವಸಾಯ ಕೈಗೊಳ್ಳಲು ಸಾಧ್ಯವಾಗಿಲ್ಲ.

ಪ್ರಮುಖ ಕಾರಣ ಕಾಡುಮೃಗಗಳ ಹಾವಳಿ ಮತ್ತು ಸಣ್ಣ ಹಿಡುವಳಿಗಳು. ಸರ್ಕಾರದ ವತಿಯಿಂದ ನೀಡುವ ಸೌಲಭ್ಯಗಳನ್ನು ಸಹ ಸರಿಯಾಗಿ ಬಳಸಿ ಕೊಳ್ಳಲು ಆಗುತ್ತಿಲ್ಲ. ಈ ಹಾಡಿಯಲ್ಲಿ ಬೀದಿ ದೀಪಗಳಿದ್ದರೂ ಸಮರ್ಪಕವಾಗಿ ಉರಿಯುವುದಿಲ್ಲ. ಮತ್ತು ಇಲ್ಲಿರುವ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಬೆಳಕಿಗಾಗಿ ಸೀಮೆಎಣ್ಣೆ ದೀಪವನ್ನೇ ಅವಲಂಬಿಸಬೇಕಿದೆ ಹಾಗೂ ಸೀಮೆಎಣ್ಣೆ ತರಲು ಸುಮಾರು 7 ಕಿ.ಮೀ. ದೂರದಲ್ಲಿರುವ ಬೇರಂಬಾಡಿ ಗ್ರಾಮದ ನ್ಯಾಯ ಬೆಲೆ ಅಂಗಡಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಹಾಡಿಯಲ್ಲಿ ನ್ಯಾಯ ಬೆಲೆ ಅಂಗಡಿ ಇಲ್ಲ.

ಈ ಹಾಡಿಗೆ ವಾರಕ್ಕೊಮ್ಮೆ ವೈದ್ಯರು ಆಗಮಿಸಿದರೂ ಸಹ ಹಲವು ವೇಳೆ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೌಲಭ್ಯ ಮರೀಚಿಕೆಯಾಗಿದೆ. ವಾಹನ ಸೌಕರ್ಯದ ಕೊರತೆ ಇರುವುದರಿಂದ ಹಾಡಿಯ ಜನರಿಗೆ ತೊಂದರೆಯಾಗಿದೆ.

2004-05ನೇ ಸಾಲಿನಲ್ಲಿ ಹಾಡಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಕೊಠಡಿಯನ್ನು ನಿರ್ಮಿಸಿದ್ದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇಲ್ಲಿರುವ ಆಶ್ರಮ ಶಾಲೆಯಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದ್ದು ಉದ್ಘಾಟನೆಗೂ ಮುಂಚೆ ಮೇಲ್ಛಾವಣಿ ಕುಸಿದಿದೆ ಎನ್ನುತ್ತಾರೆ.

ಸಮಾಜ ಕಲ್ಯಾಣ ಇಲಾಖೆ ಇವರಿಗೆ ಸರ್ಕಾರದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಜೇನು ಕುರುಬರು ವಾಸಿಸುವ ಹಾಡಿಯಲ್ಲಿ ಅವರಿಗೆ ಪೌಷ್ಠಿಕ ಆಹಾರ ನೀಡುವ ಯೋಜನೆ ಚಾಲನೆಯಲ್ಲಿದೆ, ಈಗ ಕುಟುಂಬಗಳ ಸಮೀಕ್ಷೆ ಕಾರ್ಯ ನಡೆದಿದೆ. ನಂತರ ಆಯ್ಕೆಯಾದ ಕುಟುಂಬಗಳಿಗೆ ಮಾಸಿಕ 300 ರೂಪಾಯಿ ವೆಚ್ಚದಲ್ಲಿ ಕಡಲೆಕಾಳು, ಎಣ್ಣೆ, ಬೆಲ್ಲ, ಇತರೆ ಕಾಳುಗಳನ್ನು ನೀಡಲಾಗುವುದು ಎಂದು ಪ್ರಭಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಇಲ್ಲಿರುವ ಕೈ ಪಂಪ್ ಕೆಟ್ಟು ವರ್ಷಗಳೇ ಕಳೆದಿದ್ದರೂ ಇನ್ನೂ ದುರಸ್ತಿಯಾಗಿಲ್ಲ. ಹಾಡಿಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ರಾಜೇಶ್ವರಿ ಆಯ್ಕೆಯಾಗಿರುವ ಬರಗಿ ಕ್ಷೇತ್ರದ ವ್ಯಾಪ್ತಿಗೆ ಈ ಹಾಡಿ ಬರುತ್ತದೆ. ಆದರೆ ಈವರೆಗೂ ನಮ್ಮ ಹಾಡಿಗೆ ಭೇಟಿ ನೀಡಿಲ್ಲ ಮತ್ತು ಜನಪ್ರತಿನಿಧಿಗಳು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಬರುತ್ತಾರೆ ನಮ್ಮ ಕಷ್ಟಸುಖಗಳಿಗೆ ಸ್ಪಂದಿಸುವುದಿಲ್ಲ ಎನ್ನುವುದು ಹಾಡಿಯ ಜನರ ಆರೋಪವಾಗಿದೆ.

ನಮಗೆ ಸರ್ಕಾರದ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಆದಷ್ಟು ಶೀಘ್ರವಾಗಿ ಅಧಿಕಾರಿ ವರ್ಗದವರು ದೊರಕಿಸಿ ಕೊಡಬೇಕೆಂದು ಹಾಡಿಯ ಯುವಕರಾದ ಸುರೇಶ್, ಮಲ್ಲಿಕಾರ್ಜುನ್, ಷಣ್ಮುಗ ಹಾಗೂ ರಾಜು ಅವರ ಬೇಡಿಕೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT