ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನುಕುರುಬರ ಕೆಂಚಪ್ಪನಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

Last Updated 11 ಫೆಬ್ರುವರಿ 2012, 9:50 IST
ಅಕ್ಷರ ಗಾತ್ರ

  ಗೋಣಿಕೊಪ್ಪಲು: ಪಾಲಿಬೆಟ್ಟ ಸಮೀಪದ ಚೊಟ್ಟೆಪಾರಿ ಗಿರಿಜನ ಹಾಡಿಯ ಜೇನುಕುರುಬರ ಕೆಂಚಪ್ಪ ಅವರಿಗೆ ಪ್ರಸಕ್ತ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.  ಜೇನುಕುರುಬರ ಜಾನಪದ ಹಾಡಿನ ಪ್ರಕಾರಕ್ಕೆ ಅಕಾಡೆಮಿಯು ಜಿಲ್ಲೆಯ ಈ ಕಲಾವಿದನಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ.

    ಅಂದಾಜು 73ರ ಹರೆಯದ ಕೆಂಚಪ್ಪ ಜೇನುಕುರುಬರ ಸಂಸ್ಕೃತಿ, ಇತಿಹಾಸ, ಜೇನು ಬಿಚ್ಚುವ ಹಾಡು, ಕಾಡಿನ ಸಂಬಂಧ, ಮರ, ಗಿಡ ಮೊದಲಾದವುಗಳ ಜಾನಪದ ಕಥನ ಗೀತೆಗಳನ್ನು ಗಂಟೆಗಟ್ಟಲೆ ಹಾಡುತ್ತಾರೆ. ಕೆಲವು ಹಾಡುಗಳನ್ನು ಹಿರಿಯರಿಂದ ಕಲಿತ್ತಿದ್ದರೆ ಮತ್ತೆ ಕೆಲವು ಹಾಡುಗಳನ್ನು ತಾವೇ ಸ್ವತಃ  ಸೃಷ್ಟಿಸಿಕೊಂಡು ಹಾಡುತ್ತಿದ್ದಾರೆ.

    ಹಾಡಿನ ದಣಿವರಿಯದ ಕೆಂಚಪ್ಪ ಅನೇಕ ರಾಷ್ಟ್ರಮಟ್ಟದ ಗಿರಿಜನ ಸಮಾವೇಶದಲ್ಲಿ ಹಾಡಿದ್ದಾರೆ. ಹರಿಯಾಣ, ದೆಹಲಿ,  ಕೇರಳ, ಚೆನ್ನೈ, ಬೆಂಗಳೂರು ಮೊದಲಾದ ಕಡೆಯಲೆಲ್ಲ ಕಾರ್ಡ್ ಸಂಸ್ಥೆಯ ರಾಯ್ ಡೇವಿಡ್ ಅವರೊಂದಿಗೆ ಹೋಗಿ ಹಾಡಿದ್ದಾರೆ.
 
ದೆಹಲಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ ಅನುಭವವೂ ಕೆಂಚಪ್ಪ ಅವರಿಗೆ ಇದೆ. ನಾಗರಹೊಳೆಯಲ್ಲಿ ನಿರ್ಮಿಸಿದ್ದ ತಾಜ್ ಹೋಟೆಲ್ ತೆರವಿಗಾಗಿ ಕೆಂಚಪ್ಪ ತಮ್ಮ  ಹಾಡಿನ ಮೂಲಕ ಧ್ವನಿ ಎತ್ತಿದ್ದರು. ಇವರ ಕಲೆಯನ್ನು ಗುರುತಿಸಿರುವ ಜಾನಪದ ಅಕಾಡೆಮಿ ಚಿತ್ರದುರ್ಗದಲ್ಲಿ  ಮಾರ್ಚ್ 3ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ. 

   ಕೆಂಚಪ್ಪ ನಾಗರಹೊಳೆ ಕಲ್ಲಳ್ಳ ಗಿರಿಜನ ಆಶ್ರಮ ಶಾಲೆಯಲ್ಲಿ 2ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ತಂದೆ ಕರಿಯ ನಾಗರಹೊಳೆಯಲ್ಲಿ ಆನೆ  ಮಾವುತರಾಗಿದ್ದರು. ಬಳಿಕ ಅವರು ನಿವೃತ್ತರಾದ ಮೇಲೆ ಚೊಟ್ಟೆಪಾರಿ ಹಾಡಿಗೆ ಬಂದು ನೆಲೆಸಿದರು. ಕೆಂಚಪ್ಪ ಅವರಿಗೆ 7ಮಂದಿ ಮಕ್ಕಳಿದ್ದು, 2ನೇ ಮಗ ಜೆ.ಕೆ. ರಾಮು ತಾ.ಪಂ.ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT