ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಸಂಸ್ಕೃತಿ ಅಧ್ಯಯನ ಪೀಠ ಆರಂಭ ಶೀಘ್ರ

Last Updated 10 ಫೆಬ್ರುವರಿ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಜೈನ ಸಾಹಿತ್ಯ ಕುರಿತ ಆಳ ಸಂಶೋಧನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಜೈನ ಸಂಸ್ಕೃತಿ ಅಧ್ಯಯನ ಪೀಠ ಆರಂಭಿಸಲಾಗುವುದು’ ಎಂದು ವಿವಿ ಕುಲಪತಿ ಡಾ. ಎನ್. ಪ್ರಭುದೇವ್ ತಿಳಿಸಿದರು. ವಿವಿಯ ಕನ್ನಡ ಅಧ್ಯಯನ ಕೇಂದ್ರ, ಶ್ರುತ ಸಂವರ್ಧನ ಸಂಸ್ಥಾನ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ‘ಧರ್ಮ ಮತ್ತು ಕಾವ್ಯಧರ್ಮ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕನ್ನಡ ಕಾವ್ಯಕ್ಕೆ ಅಪಾರ ಕೊಡುಗೆ ನೀಡಿದ ಜೈನಧರ್ಮದ ಸಾಂಸ್ಕೃತಿಕ ಆಯಾಮಗಳ ಅಧ್ಯಯನ ಪ್ರಸ್ತುತ ಅಗತ್ಯವಾಗಿದೆ. ಜೈನ ಸಂಸ್ಕೃತಿಯ ಅಧ್ಯಯನಕ್ಕೆ ವಿವಿಯಲ್ಲಿ ಪೀಠದ ಅಗತ್ಯವಿರುವುದನ್ನು ಜೈನ ಮುನಿ ಜ್ಞಾನ ಸಾಗರ್‌ಜೀ ತಿಳಿಸಿದ್ದಾರೆ. ಪೀಠ ಸ್ಥಾಪನೆ ಕುರಿತಂತೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚೆಗಳು ನಡೆದಿವೆ’ ಎಂದರು. ನಾಡೋಜ ಡಾ. ಕಮಲಾ ಹಂಪನಾ ಮಾತನಾಡಿ ‘ಕನ್ನಡ ಸಾಹಿತ್ಯವನ್ನು ಉದ್ಘಾಟಿಸಿದ ಕೀರ್ತಿ ಜೈನ ಕವಿಗಳಿಗೆ ಸಲ್ಲುತ್ತದೆ. ಪಂಪ, ರನ್ನ ಸೇರಿದಂತೆ ಅನೇಕರು ಉಭಯ ಭಾಷಾ ಕವಿಗಳು ಎಂದೇ ಕರೆದುಕೊಂಡವರು.

ಸಂಸ್ಕೃತ, ಪ್ರಾಕೃತದಲ್ಲಿ ಪಾಂಡಿತ್ಯ ಗಳಿಸಿದ್ದ ಈ ಕವಿಗಳು ಕನ್ನಡದಲ್ಲಿ ಕಾವ್ಯ ರಚನೆ ಮಾಡಿದ್ದೇ ಆಶ್ಚರ್ಯ ಮತ್ತು ಹೆಮ್ಮೆಯ ಸಂಗತಿ’ ಎಂದರು. ‘ವಚನ ಪರಂಪರೆಗೂ ಮುನ್ನ ಜೈನ ಕವಿಗಳು ಆಡುಭಾಷೆಯಲ್ಲಿ ಕಾವ್ಯ ರಚಿಸುವ ಮೂಲಕ ಧರ್ಮ ಪ್ರಚಾರಕ್ಕೆ ಮುಂದಾದರು. ಇದರಿಂದಾಗಿ ಜನಸಾಮಾನ್ಯರು ಕಾವ್ಯಾಸಕ್ತರಾದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆಯಲು ಕನ್ನಡದ ಜೈನ ಕವಿಗಳು ನೀಡಿದ ಕೊಡುಗೆ ಅಪಾರ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ ‘ಅರಿವನ್ನು ನವೀಕರಿಸಿಕೊಳ್ಳವುದೇ ಧರ್ಮ ಎಂದು ಪಂಪ ತನ್ನ ಕಾವ್ಯದಲ್ಲಿ ಹೇಳುತ್ತಾನೆ. ಕಾಲಕ್ಕೆ ತಕ್ಕಂತೆ ಜೈನಧರ್ಮ ತನ್ನನ್ನು ತಾನೇ ನವೀಕರಿಸಿಕೊಳ್ಳುತ್ತಾ ಹೋಯಿತು. ಹೊಸ ಬಗೆಯ ಚೈತನ್ಯಗಳಿಗೆ ಈ ಧರ್ಮ ತೆರೆದುಕೊಳ್ಳುವುದು ಸಾಧ್ಯವಾಯಿತು’ ಎಂದರು. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ. ಗಂಗಾಧರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಞಾನ ಮಾರ್ಗ ಮುನಿ ಆಶ್ರಮದ ಸಾಧ್ವಿ ಅನಿತಾ ದೀದಿ, ಡಾ. ಸಿ.ಬಿ ಹೊನ್ನಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT