ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ್ ಸಮಾಜದಿಂದ 1 ರೂಪಾಯಿಗೆ ಊಟ

Last Updated 22 ಅಕ್ಟೋಬರ್ 2012, 5:35 IST
ಅಕ್ಷರ ಗಾತ್ರ

ಬಳ್ಳಾರಿ: ಬಡಜನರ ನೆರವಿಗಾಗಿ ನಗರದ ಜೈನ್ ಮಾರುಕಟ್ಟೆಯಲ್ಲಿನ `ರೋಟಿ ಘರ್~ನಲ್ಲಿ ಎರಡು ರೂಪಾಯಿಗೆ ಊಟ ವಿತರಿಸುತ್ತಿರುವ ಜೈನ್ ಸಮಾಜವು ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ)ಯ ಆಸ್ಪತ್ರೆ ಆವರಣದಲ್ಲಿ ಬಡ ಜನರಿಗಾಗಿ ಕೇವಲ ಒಂದು ರೂಪಾಯಿಗೆ ಊಟ ನೀಡುವ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದೆ.

1100 ಹಾಸಿಗೆಗಳ ವಿಮ್ಸ ಆಸ್ಪತ್ರೆಗೆ ನಿತ್ಯವೂ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಗಡಿ ಭಾಗದ ಆಂಧ್ರದ ವಿವಿಧೆಡೆಯಿಂದ ಚಿಕಿತ್ಸೆಗಾಗಿ ರೋಗಿಗಳನ್ನು ಕರೆತಂದು, ಅವರೊಂದಿಗೆ ಆಸ್ಪತ್ರೆಯಲ್ಲಿ ತಂಗುವ ಬಡ ಜನರಿಗೆ ನೆರವಾಗಲಿ ಎಂದೇ ಸಮಾಜದ ವತಿಯಿಂದ ಈ ಕಾರ್ಯಕ್ರಮ ಆರಂಭಿಸಲಾಗಿದೆ.

ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಮಂಗಳವಾರ ಈ ಕಾರ್ಯಕ್ರಮ ಆರಂಭಿಸಲಾಗಿದ್ದು, ಪ್ರತಿ ಭಾನುವಾರಕ್ಕೆ ಒಮ್ಮೆಯಂತೆ 400 ರೊಟ್ಟಿ, ಪಲ್ಯ ಮತ್ತು ಸಿಹಿ ಬೂಂದಿಯನ್ನು ವಿತರಿಸಲಾಗುತ್ತಿದೆ.
ಪ್ರತಿಯೊಬ್ಬರಿಗೆ ಎರಡು ರೊಟ್ಟಿಯಂತೆ ವಿತರಿಸುವ ಜೈನ ಸಮುದಾಯದ ಯುವಕರು, ಒಟ್ಟು 200 ಜನರಿಗೆ ಮಧ್ಯಾಹ್ನ 12ರಿಂದ ಊಟ ವಿತರಿಸಿ ಮರಳುತ್ತಾರೆ.


`ದೂರದ ಊರುಗಳಿಂದ ಆಗಮಿಸುವ ಬಡಜನರಿಗೆ ಕೊಂಚ ನೆರವಾಗಲಿ ಎಂಬ ಉದ್ದೇಶದಿಂದ ಸದ್ಯ ವಾರಕ್ಕೆ ಒಮ್ಮೆಯಂತೆ ಊಟ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದೆ ನಿತ್ಯವೂ ವಿತರಿಸಲು ಆಲೋಚಿಸಲಾಗುತ್ತಿದೆ ಎಂದು ಜೈನ ಸಮುದಾಯದ ಮುಖಂಡರಾದ ಟಿ.ಸೂರಜ್‌ಮಲ್ ಜೈನ್ ಹಾಗೂ ಉತ್ಸವಲಾಲ್ `ಪ್ರಜಾವಾಣಿ~ಗೆ ತಿಳಿಸಿದರು.

ಜೈನ್ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಮತ್ತು ಬಡ ಜನರ ನೆರವಿಗಾಗಿ ಎರಡು ರೂಪಾಯಿಗೆ ಎರಡು ರೊಟ್ಟಿ ಊಟ ನೀಡುವ ಕಾರ್ಯಕ್ರಮ ಅನೇಕ ತಿಂಗಳುಗಳಿಂದ ನಡೆದಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿಮ್ಸ ಆವರಣದಲ್ಲೂ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಸಮಾಜದ ವತಿಯಿಂದ ಆರ್ಥಿಕ ನೆರವು ಪಡೆಯುತ್ತ, ಜೈನ್ ಮಾರುಕಟ್ಟೆಯಲ್ಲಿ ಆರಂಭಿಸಲಾಗಿರುವ ರೋಟಿ ಘರ್‌ನಲ್ಲೇ ಮಹಿಳೆಯರಿಬ್ಬರನ್ನು ನೇಮಿಸಲಾಗಿದ್ದು, ಅವರು ಸಿದ್ಧಪಡಿಸುವ ಬಿಸಿಬಿಸಿ ರೊಟ್ಟಿ, ಪಲ್ಯವನ್ನು ಸಣ್ಣದೊಂದು ಆಟೋ ರಿಕ್ಷಾದಲ್ಲಿ ಇಲ್ಲಿಗೆ ತೆರಲಾಗುತ್ತದೆ. ಸರದಿಯಲ್ಲಿ ಬರುವ ಜನತೆಗೆ ಯೂಸ್ ಅಂಡ್ ಥ್ರೋ ತಟ್ಟೆಗಳಲ್ಲಿ ಇಟ್ಟು ವಿತರಿಸಲಾಗುತ್ತದೆ ಎಂದು ಅವರು ವಿವರಿಸಿದರು.

`ಊಟ ಮಾಡುವವರಿಗೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ಒಂದು ರೂಪಾಯಿ ದರ ನಿಗದಿ ಮಾಡಲಾಗಿದೆ. ಎರಡು ರೊಟ್ಟಿ, ಪಲ್ಯ ಮತ್ತು ಸ್ವಲ್ಪ ಸಿಹಿ ಬೂಂದಿಯಿಂದ ಹೊಟ್ಟೆ ತುಂಬದಿದ್ದರೂ, ತಮ್ಮವರ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಂತೆಗೀಡಾದವರಿಗೆ, ಧಾವಂತದಲ್ಲಿ ಇರುವವರಿಗೆ ಇದರಿಂದ ಅನುಕೂಲವಾಗಲಿದೆ ಎಂಬುದೇ ನಮ್ಮ ಭಾವನೆ~ ಎಂದು ಅವರು ಅಭಿಪ್ರಾಯಪಟ್ಟರು.

`ಒಂದು ಚಹ ಕುಡಿದರೂ ಕನಿಷ್ಠ ರೂ 5 ನೀಡಬೇಕು. ಅಂಥದ್ದರಲ್ಲಿ ಎರಡು ರೊಟ್ಟಿ, ಪಲ್ಯ, ಬೂಂದಿ ಕೇವಲ 1 ರೂಪಾಯಿಗೆ ನೀಡುತ್ತಿರುವುದು ನಮ್ಮಂತಹ ಬಡವರಿಗೆ ನೆರವಾಗಿದೆ~ ಎಂದು ಮಗನನ್ನು ಚಿಕಿತ್ಸೆಗೆ ದಾಖಲಿಸಿರುವ ಸಿಂಧನೂರಿನ ಗೂಳಪ್ಪ ಸಂತಸ ವ್ಯಕ್ತಪಡಿಸುತ್ತಾರೆ.

ಕನಿಷ್ಠ ರೂ 30ಕ್ಕೆ ಒಂದು ಊಟ ದೊರೆಯುತ್ತಿರುವ ಈ ದಿನಗಳಲ್ಲಿ ಬಡ ಜನತೆಗೆ ಇದರಿಂದ ಅನುಕೂಲವಾಗಿದೆ. ಗಂಡಸರು ಹೋಟೆಲ್‌ಗೆ ಹೋಗಿ ಊಟ ಅಥವಾ ತಿಂಡಿ ಸೇವಿಸಿ ಬರುತ್ತಾರೆ. ಆದರೆ, ಇಲ್ಲಿಗೆ ಬರುವ ಮಹಿಳೆಯರು ಮತ್ತು ಮಕ್ಕಳಿಗೆ ಎದುರಾಗುವ ತೊಂದರೆ ನೀಗಿಸಲು ಇಂತಹ ಕಾರ್ಯಕ್ರಮ ಆರಂಭಿಸಿರುವುದು ಅಭಿನಂದನೀಯ ಎಂದು ಸಂಡೂರಿನ ದುರ್ಗಮ್ಮ ಎಂಬುವವರು ಹೇಳಿದರು.

ಮಕ್ಕಳ ವಾರ್ಡ್‌ಗೆ ತೆರಳುವ ಮಾರ್ಗದಲ್ಲಿ, ಎಸ್.ಕೆ. ಮೋದಿ ಪ್ರತಿಷ್ಠಾನ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಅರವಟಿಗೆಯ ಎದುರಿನಲ್ಲೇ ಈ ಊಟದ ವ್ಯವಸ್ಥೆ ಮಾಡಲಾಗಿದ್ದು, ಜೈನ್ ಸಮುದಾಯದ ಯುವಕರಾದ ಗಜೇಶ್, ವಿನೀತ್, ಭರತ್, ಜಯೇಶ್, ಸನ್ನಿ, ರಾಜೀವ್, ನವೀನ್, ಅನಿಲ್, ಮಹೇಶ್ ಹಾಗೂ ಶ್ರೀನಿವಾಸ್ ಜನರಿಗೆ ಊಟ ವಿತರಿಸುವ ಸೇವೆ ಸಲ್ಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT