ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ ಸಾಹಿತ್ಯ ಉತ್ಸವ: ಸಲ್ಮಾನ್ ರಶ್ದಿ ಭೇಟಿ ರದ್ದು

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ, ಐಎಎನ್‌ಎಸ್): ಶುಕ್ರವಾರ ಇಲ್ಲಿ ಆರಂಭವಾದ ಐದು ದಿನಗಳ ಸಾಹಿತ್ಯ ಉತ್ಸವದಲ್ಲಿ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿಯವರ `ದಿ ಸಟಾನಿಕ್ ವರ್ಸಸ್~ನ ಒಂದು ಭಾಗವನ್ನು ಓದಲು ಪ್ರಯತ್ನಿಸಿದ ಕಾದಂಬರಿಕಾರ ಹರಿ ಕುಂಜ್ರು ಅವರನ್ನು ಸಂಘಟಕರು ತಡೆದರಾದರೂ ಅವರು ಓದುವುದನ್ನು ಮುಂದುವರಿಸಿದ್ದರೆ ಪೊಲೀಸರು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿದೆ.

“ದೇವರು ಮತ್ತು ಮನುಷ್ಯ” ಕುರಿತ ಅಧಿವೇಶನದ ಕೊನೆಯಲ್ಲಿ ಕುಂಜ್ರು ಮತ್ತು ಅಮಿತಾವ್ ಕುಮಾರ್ ಅವರು ವಿವಾದಿತ ಪುಸ್ತಕದ ಭಾಗವನ್ನು ಓದದಂತೆ ತಡೆಯಲು ಸಂಘಟಕರು ಮುಂದಾದಾಗ ಈ ಘಟನೆ ನಡೆಯಿತು.
ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಂಘಟಕರು ನಿರಾಕರಿಸಿದ್ದಾರೆ. ಇದಕ್ಕೂ ಮುನ್ನ, ರಶ್ದಿ ಭೇಟಿ ರದ್ದುಗೊಳಿಸಿದ ನಂತರ ಮಾತನಾಡಿದ್ದ ಸಂಘಟಕರು, ಉತ್ಸವದಲ್ಲಿ `ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಬದ್ಧ~ವಿರುವುದಾಗಿ ಪ್ರಕಟಿಸಿದ್ದರು.

ಆದರೆ, ಉತ್ಸವದಲ್ಲಿ ಭಾಗವಹಿಸಿದ್ದ ದೇಶ-ವಿದೇಶಗಳ ಅನೇಕ ಲೇಖಕರು ಈ ಕೃತಿಯ ಓದುವಿಕೆಗೆ ತಡೆ ನೀಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೇಟಿ ರದ್ದುಪಡಿಸಲು ಕಾರಣ:ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರು, ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಬೇಕಿದ್ದ ತಮ್ಮ ಕಾರ್ಯಕ್ರಮವನ್ನು ಭದ್ರತಾ ಕಾರಣಗಳಿಂದಾಗಿ (ಜೀವ ಬೆದರಿಕೆಯ ಹಿನ್ನೆಲೆಯಲ್ಲಿ) ರದ್ದುಗೊಳಿಸಿದ್ದಾರೆ.

ಉತ್ಸವದ ಸಂಘಟಕರು ಆರಂಭದಲ್ಲಿ ಬುಕರ್ ಪ್ರಶಸ್ತಿ ವಿಜೇತ ಈ ಲೇಖಕನ ಹೇಳಿಕೆಯನ್ನು ಓದಿ ಹೇಳಿದರು. ಉತ್ಸವದ ನಿರ್ಮಾಪಕ ಮತ್ತು ಪ್ರಧಾನ ನಿರ್ದೇಶಕ ಸಂಜಯ್ ಕೆ ರಾಯ್ ಇದನ್ನು ಓದಿದರು. “ಸ್ಥಳೀಯಾಡಳಿತದ ಮನವಿ ಮೇರೆಗೆ ನಾನು ಈವರೆಗೆ ಯಾವುದೇ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಉತ್ಸವದಲ್ಲಿ ಭಾಗವಹಿಸಿ ಮಾತನಾಡಲು ನನಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಭಾವನೆಯಿತ್ತು.

ಆದರೆ ಮಹಾರಾಷ್ಟ್ರ ಮತ್ತು ರಾಜಸ್ತಾನದ ಗುಪ್ತಚರ ಸಂಸ್ಥೆಗಳು, ನನ್ನ ಹತ್ಯೆಗೆ ಮುಂಬೈನ ಭೂಗತ ಪಾತಕಿಗಳು ಸಂಚು ರೂಪಿಸಿರುವುದಾಗಿ ಮಾಹಿತಿ ನೀಡಿದ್ದು, ಈ ಬಗ್ಗೆ ನನಗೆ ಅನುಮಾನವಿದ್ದರೂ, ನನ್ನೊಂದಿಗೆ ಇತರ ಲೇಖಕರ ಜೀವಕ್ಕೂ ತೊಂದರೆ ಉಂಟಾಗಬಹುದೆಂಬ ಕಾರಣಕ್ಕೆ ಭಾರತ ಭೇಟಿ ರದ್ದುಪಡಿಸಲು ತೀರ್ಮಾನಿಸಿದ್ದೇನೆ” ಎಂದು 65 ವರ್ಷದ ರಶ್ದಿ ತಮ್ಮ ಈ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಡಿಯೊದಲ್ಲಿ ಪ್ರತ್ಯಕ್ಷ:ಈ ಮಧ್ಯೆ, ಉತ್ಸವದ ಕುರಿತು ಟ್ವಿಟರ್‌ನಲ್ಲಿ ಬರೆದಿರುವ ರಶ್ದಿ, `ವಿಡಿಯೊ ಸಂಪರ್ಕದ ಮೂಲಕ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ~ ಎಂದು ಪ್ರಕಟಿಸಿದ್ದಾರೆ.
 
`ರಶ್ದಿ ಭೇಟಿ ರದ್ದಾಗಿರುವುದರಿಂದ ನಮಗೆ ನಿರಾಶೆಯಾಗಿದೆ~ ಎಂದು ಸಂಘಟಕರು ಹೇಳಿದ್ದಾರೆ. `ಪ್ರತಿಭಟನೆಯಂತಹ ಘಟನೆ ಒಪ್ಪುವಂತಹದ್ದಲ್ಲ~ ಎಂದಿದ್ದಾರೆ. ಉತ್ಸವದ ಸಹನಿರ್ದೇಶಕ ವಿಲಿಯಂ ಡಾರ್ಲಿಂಪಲ್, `ಕೆಂಪು ಹಾಸು ಹಾಕಿ ರಶ್ದಿಯವರನ್ನು ಸ್ವಾಗತಿಸಬೇಕಾಗಿತ್ತು, ಆದರೆ ಭೇಟಿ ರದ್ದಾಗಿರುವುದು ದುರದೃಷ್ಟಕರ~ ಎಂದು ನುಡಿದಿದ್ದಾರೆ.

ದೇಶಕ್ಕೆ ರಶ್ದಿ ಭೇಟಿಯನ್ನು ಇಸ್ಲಾಮಿಕ್ ಸೆಮಿನರಿ ದರುಲ್ ಉಲೂಮ್ ದೇವಬಂದ್, ಜಮಾತ್-ಎ-ಇಸ್ಲಾಂ ಹಿಂದ್ ಮತ್ತಿತರ ಮುಸ್ಲಿಂ ಸಂಘಟನೆಗಳು ವಿರೋಧಿಸಿದ್ದವು. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಭೇಟಿಗೆ ರಾಜಕೀಯ ಪಕ್ಷಗಳು ಪರ-ವಿರೋಧ ನಿಲುವು ವ್ಯಕ್ತಪಡಿಸಿದ್ದವು.

ಲೇಖಕ ರಶ್ದಿ, 1988ರಲ್ಲಿ ಪ್ರಕಟವಾದ ತಮ್ಮ `ದಿ ಸಟಾನಿಕ್ ವರ್ಸಸ್~ ಕಾದಂಬರಿಯಲ್ಲಿ ಇಸ್ಲಾಂ ಧರ್ಮ ನಿಂದನೆ ಮಾಡಿದ ಆರೋಪಕ್ಕಾಗಿ ಇಡೀ ಮುಸ್ಲಿಂ ಜಗತ್ತಿನ ವಿರೋಧ ಕಟ್ಟಿಕೊಂಡಿದ್ದಾರೆ. ಇದರಿಂದಾಗಿ ಭಾರತದಲ್ಲಿ ಅವರ ಈ ಕಾದಂಬರಿಯನ್ನು ನಿಷೇಧಿಸಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಖೊಮೇನಿ, 1989ರ ಫೆಬ್ರುವರಿ 14ರಂದು ರಶ್ದಿ  ಅವರ ವಿರುದ್ಧ ಹತ್ಯೆ `ಫತ್ವಾ~ ಹೊರಡಿಸಿದ್ದಾರೆ. ಇದಲ್ಲದೆ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲಾಟ್ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಭೇಟಿಯಾಗಿ, `ರಾಜ್ಯದ ಜನತೆ ರಶ್ದಿ  ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿ, ಜೈಪುರಕ್ಕೆ ಅವರ ಆಗಮನವನ್ನು ಬಯಸಿಲ್ಲ~ ಎಂದು ತಿಳಿಸಿದ್ದರು.

ಮುಸ್ಲಿಂ ಸಂಘಟನೆಗಳ ಸ್ವಾಗತ: ಜೈಪುರ ಸಾಹಿತ್ಯ ಉತ್ಸವಕ್ಕೆ ವಿವಾದಾತ್ಮಕ ಲೇಖಕ ಸಲ್ಮಾನ್  ಭೇಟಿ ರದ್ದುಪಡಿಸಿರುವುದನ್ನು ಹಲವು ಮುಸ್ಲಿಂ ಸಂಘಟನೆಗಳು ಸ್ವಾಗತಿಸಿದ್ದು, ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿವೆ. ಸ್ಥಳಿಯಾಡಳಿತ ಮತ್ತು ಪೊಲೀಸರ ಮನವಿ ಮೇರೆಗೆ ಪ್ರತಿಭಟನೆ ಹಿಂಪಡೆದ ವಿವಿಧ ಸಂಘಟನೆಗಳು, ರಶ್ದಿ ಅವರು ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಸಂಘಟಕರು ಪ್ರಕಟಿಸಿದ ಮೇಲೆ ಇನ್ನಷ್ಟು ತೃಪ್ತಿ ಮತ್ತು ಸಮಾಧಾನ ವ್ಯಕ್ತಪಡಿಸಿವೆ.

`ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಈ ಭೇಟಿ ರದ್ದಾಗಿರುವುದು ಸ್ವಾಗತಾರ್ಹ ನಿರ್ಧಾರ~ ಎಂದು ಜಮಾತ್-ಎ-ಇಸ್ಲಾಮಿ ಹಿಂದ್ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಪ್ರತಿಕ್ರಿಯಿಸಿದ್ದಾರೆ.
ಮುಜಾಫರ್‌ನಗರ ವರದಿ:ರಶ್ದಿ ಅವರು ಭಾರತ ಭೇಟಿ ರದ್ದುಪಡಿಸಿರುವುದನ್ನು `ಪ್ರಜಾಪ್ರಭುತ್ವಕ್ಕೆ ಸಂದ ಜಯ~ ಎಂದು ಪ್ರಮುಖ ಇಸ್ಲಾಮಿಕ್ ಸೆಮಿನರಿ ದರುಲ್ ಉಲೂಮ್ ದೇವಬಂದ್ ಪ್ರತಿಕ್ರಿಯಿಸಿದೆ. `ನಾವು ಪ್ರಜಾಸತ್ತಾತ್ಮಕವಾಗಿ ಈ ಭೇಟಿಯನ್ನು ವಿರೋಧಿಸಿದ್ದೆವು~ ಎಂದು ದರುಲ್ ಉಲೂಮ್ ದೇವಬಂದ್‌ನ ಕುಲಪತಿ ಮೌಲಾನ ಅಬುಲ್ ಖಾಸೀಂ ನೊಮಾನಿ ತಿಳಿಸಿದ್ದಾರೆ.

`ಸರ್ಕಾರ ಪಾತ್ರವಿಲ್ಲ~ (ಲಖನೌ ವರದಿ):`ಸಲ್ಮಾನ್ ರಶ್ದಿಯವರು ಭಾರತ ಭೇಟಿ ರದ್ದುಪಡಿಸಿರುವುದು ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಇದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ~ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸ್ಪಷ್ಟಪಡಿಸಿದ್ದಾರೆ.

“ರಶ್ದಿಯವರಿಗೆ ಭಾರತಕ್ಕೆ ಬರಲು ವೀಸಾ ಬೇಕಾಗಿಲ್ಲ. ಅವರನ್ನು ಬರದಂತೆ ಯಾರು ತಡೆದವರು. ಅವರ ಭೇಟಿ ತಡೆಯುವ ಯಾವುದೇ ಕಾನೂನು ದೇಶದಲ್ಲಿ ಇಲ್ಲ” ಎಂದು ಸಿಂಗ್ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT