ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈರಾಂ ರಮೇಶ್‌ಗೆ ಯಡಿಯೂರಪ್ಪ ಪತ್ರ

Last Updated 18 ಫೆಬ್ರುವರಿ 2011, 17:55 IST
ಅಕ್ಷರ ಗಾತ್ರ

ಬೆಂಗಳೂರು: ‘ಕರಾವಳಿ ನಿಯಂತ್ರಣ ವಲಯ’ (ಸಿಆರ್‌ಜೆಡ್) ಅಧಿಸೂಚನೆಯಲ್ಲಿ ರಾಜ್ಯದ ಕರಾವಳಿ ಜನರ ಹಿತರಕ್ಷಣೆಗೆ ಅಗತ್ಯವಿರುವ ಅಂಶಗಳನ್ನು ಸೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವ ಜೈರಾಂ ರಮೇಶ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಸಂಬಂಧ ಫೆ.14ರಂದು ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ, ರಾಜ್ಯದ ಜನರ ಹಿತದೃಷ್ಟಿಯಿಂದ ಕೆಲವು ಅಂಶಗಳನ್ನು ಅಧಿಸೂಚನೆಯಲ್ಲಿ ಸೇರಿಸುವಂತೆ ಈ ಹಿಂದೆ ಎರಡು ಪತ್ರಗಳನ್ನು ಬರೆಯಲಾಗಿತ್ತು. ಅವುಗಳನ್ನು ಕೈಬಿಟ್ಟು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ರಾಜ್ಯದ ಕರಾವಳಿ ವಲಯದ ಜನರು ಭವಿಷ್ಯದಲ್ಲಿ ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದರು.

‘ನದಿ ತೀರದ ದ್ವೀಪಗಳ ನಿಯಂತ್ರಣ ವಲಯದ ವ್ಯಾಪ್ತಿ, ಸ್ಥಳೀಯ ಮೀನುಗಾರರು ಮತ್ತು ಜನರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕೇರಳ, ಗೋವಾ ಮತ್ತು ನವಿ ಮುಂಬೈ ಮಾದರಿಯಲ್ಲಿ ರಾಜ್ಯಕ್ಕೂ ರಿಯಾಯಿತಿ ನೀಡಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸಿಆರ್‌ಜೆಡ್-3ರ ವ್ಯಾಪ್ತಿಯ 200ರಿಂದ 500 ಮೀಟರ್ ವ್ಯಾಪ್ತಿಯಲ್ಲಿ ಮಂಜುಗಡ್ಡೆ ಘಟಕಗಳು, ಶೈತ್ಯಾಗಾರಗಳು, ಮೀನು ಸಂಸ್ಕರಣಾ ಘಟಕಗಳು ಮತ್ತು ನಾಗರಿಕ ಸೌಲಭ್ಯ ಕಲ್ಪಿಸಲು ಅವಕಾಶ ನೀಡಬೇಕು. ನಿಯಂತ್ರಣ ವಲಯದಲ್ಲಿ ರಸ್ತೆಗಳ ನಿರ್ಮಾಣಕ್ಕೆ ವಿನಾಯಿತಿ ನೀಡುವುದು. ಸಿಆರ್‌ಜೆಡ್-3ರ ವ್ಯಾಪ್ತಿಯಲ್ಲಿರುವ ಹಳ್ಳಿಗಳಿಗೆ ಸಿಆರ್‌ಜೆಡ್-2 ವಲಯದ ಸ್ಥಾನಮಾನ ನೀಡುವ ಅಂಶಗಳನ್ನು ಅಧಿಸೂಚನೆಯಲ್ಲಿ ಅಳವಡಿಸಬೇಕು ಎಂದು ಕೋರಿದ್ದಾರೆ.

ನಿಯಂತ್ರಣ ವಲಯದಲ್ಲಿ ಮರಳು ಗಣಿಗಾರಿಕೆ ಮತ್ತು ಕಪ್ಪೆಚಿಪ್ಪು ಸಂಗ್ರಹಕ್ಕೆ ಅವಕಾಶ ನೀಡುವುದು, ರಾಜ್ಯ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರಗಳಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸುವುದು, ಈ ಪ್ರದೇಶದಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ಕಲ್ಪಿಸುವುದು ಮತ್ತಿತರ ಅಂಶಗಳನ್ನೂ ಅಧಿಸೂಚನೆಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿಗೆ ಪತ್ರ:ಯಡಿಯೂರಪ್ಪ ಅವರು ಫೆ. 4ರಂದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಲಭ್ಯವಾಗುವ ಆರ್ಥಿಕ ಅನುಕೂಲಗಳನ್ನು ಒದಗಿಸಲು ಹಣಕಾಸು ಸ್ಥಾಯಿ ಸಮಿತಿ ರಚಿಸುವಂತೆ ಒತ್ತಾಯ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT