ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿಗೆ ಹೋಗಿ ಬಂದದ್ದು ವ್ಯರ್ಥವಾಗಲಿಲ್ಲ...

ಪ್ರತಿಭಟಿಸಿದವರ ಅನಿಸಿಕೆ; ನೊಣಗಳಿಂದ ರೋಸಿ ಹೋಗಿದ್ದ ಗ್ರಾಮದಲ್ಲಿ ಹೊಸ ಬೆಳಕು!
Last Updated 6 ಡಿಸೆಂಬರ್ 2013, 9:20 IST
ಅಕ್ಷರ ಗಾತ್ರ

ಹೊಸ ಬೆಳವನೂರು (ದಾವಣಗೆರೆ ತಾ.): ತಗ್ಗಿದ ನೊಣಗಳ ಕಾಟ. ಫಾರಂಗಳಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯದ ತೆರವು. ಶಾಲೆಯಲ್ಲಿ ಗೋಣಿಚೀಲಕ್ಕೆ ಸೇರಿದ ಸೊಳ್ಳೆ ಪರದೆ. ಫಾರಂಗಳ ಸುತ್ತಲೂ ಔಷಧಿ ಸಿಂಪಡಣೆ.

ತೊಂದರೆ ಕೊಡುತ್ತಿದ್ದ ಫಾರಂಗಳನ್ನು ಸ್ಥಳಾಂತರಿಸಬೇಕು ಎಂಬ ಜಿಲ್ಲಾಡಳಿತದ ಆದೇಶಕ್ಕೆ ಶ್ಲಾಘನೆ. ಜೈಲಿಗೆ ಹೋಗಿ ಬಂದವರಿಂದ ನಿಟ್ಟುಸಿರು; ಗ್ರಾಮದವರ ಹಿತಕ್ಕಾಗಿ ಶ್ರಮಿಸಿದ ಸಮಾಧಾನದ ಭಾವ. ಹೊಸ ಜೀವನಕ್ಕೆ ನಾಂದಿ!
– ಜಿಲ್ಲಾ ಕೇಂದ್ರದಿಂದ ಕೇವಲ ಆರು ಕಿ.ಮೀ. ದೂರದಲ್ಲಿರುವ ಹೊಸ ಬೆಳವನೂರಿನಲ್ಲಿ ಕಂಡುಬರುತ್ತಿರುವ ‘ಹೊಸ ದೃಶ್ಯ’ಗಳಿವು. ಸ್ಥಳಕ್ಕೆ ತೆರಳಿದ್ದ ‘ಪ್ರಜಾವಾಣಿ’ ಪ್ರತಿನಿಧಿ ಜತೆ ಊರಿನ ಜನರು ತಾವು ಪಟ್ಟ ಸಂಕಷ್ಟ, ಈಗಿನ ಸಮಾಧಾನ ಹಾಗೂ ಉಳಿದಿರುವ ಕೆಲವು ಸಮಸ್ಯೆಗಳ ಚಿತ್ರಣ ತೆರೆದಿಟ್ಟರು.

ಕೋಳಿ ಫಾರಂಗಳಲ್ಲಿ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ‘ಜನ್ಮ’ ತಳೆಯುತ್ತಿದ್ದ ನೊಣಗಳ ಕಾಟದಿಂದ ಬೇಸತ್ತು ಹೋಗಿದ್ದ ಗ್ರಾಮದಲ್ಲಿ ಒಂದರ್ಥದಲ್ಲಿ ‘ಹೊಸ ಜೀವನ’ ಆರಂಭವಾಗಿದೆ. ಫಾರಂಗಳಲ್ಲಿ ಕೊನೆಗೂ ಕೆಲ ನಿರ್ವಹಣಾ ಕ್ರಮ ಹಾಗೂ ಸ್ವಚ್ಛತೆ ಕೈಗೊಂಡಿರುವುದರಿಂದ ನೊಣಗಳ ಪ್ರಮಾಣ ತಗ್ಗಿದೆ. ಇದೀಗ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ.

ಕೆಟ್ಟ ಮೇಲೆ ಬುದ್ಧಿ ಬಂತು..!: ಗ್ರಾಮದಲ್ಲಿರುವ ಶ್ರೀರಾಮ, ಶ್ರೀಶೈಲ, ಲಕ್ಷ್ಮೀವೆಂಕಟೇಶ್ವರ ಹಾಗೂ ಎಂಆರ್‌ಎಂ ಕೋಳಿ ಫಾರಂಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತದ ವತಿಯಿಂದ ಪ್ರಕ್ರಿಯೆ ಆರಂಭಿಸಿರುವುದು ಹಾಗೂ ಈ ನಡುವೆ, ‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬಂತೆ ಫಾರಂಗಳ ಬಳಿ ಕೆಲ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುತ್ತಿರವುದು ಈ ಬೆಳವಣಿಗೆಗೆ ಕಾರಣ.

‘ನೊಣಗಳು ಊಟದ ತಟ್ಟೆಗೇ ಬಂದು ಕೂರುತ್ತಿದ್ದವು. ನೊಣಗಳಿಂದ ನಾವು ಹಲವು ವರ್ಷಗಳಿಂದ ಅನುಭವಿಸಿದ ತೊಂದರೆ ಒಂದೆರಡಲ್ಲ. ಹೋರಾಟದ ನಂತರ ಎಚ್ಚೆತ್ತುಕೊಂಡ ಮಾಲೀಕರು ಫಾರಂಗಳಲ್ಲಿನ ಸ್ವಚ್ಛತೆ ಮಾಡಿಸಿದ್ದೋ ಅಥವಾ ಬಿಸಿಲಿನ ತಾಪವೋ ಏನೋ ನೊಣಗಳು ಕಡಿಮೆಯಾಗಿದೆ. ಸಂಪೂರ್ಣವಾಗಿ ಫಾರಂಗಳು ಸ್ಥಳಾಂತರಗೊಂಡರೆ ಇನ್ನೂ ನೆಮ್ಮದಿಯಿಂದ ಇರಬಹುದು’ ಎಂದವರು ಗ್ರಾಮದ ನೀಲಕಂಠಪ್ಪ.

‘ಒಂದು ಕೋಳಿಗೆ 70 ವಾರ ಆಯಸ್ಸು. ಕೋಳಿ 3 ವರ್ಷ ಮೊಟ್ಟೆ ಇಡುತ್ತದೆ. ಆದರೆ, ಒಂದು ನೊಣ ಒಮ್ಮೆಲೆ 700 ಮೊಟ್ಟೆ ಇಡುತ್ತದೆ. ಇದರಿಂದ ಅಸಂಖ್ಯಾತ ನೊಣಗಳು ಉಂಟಾಗಿದ್ದವು. ಹಲವು ವರ್ಷಗಳಿಂದ ಕೋಳಿಗಳ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಪ್ರತಿಭಟನೆ ನಡೆಸುವ ಅನಿವಾರ್ಯತೆಯೂ ಬರುತ್ತಿರಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದೆ. ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ದುರ್ವಾಸನೆಯ ಪ್ರಮಾಣವೂ ತಗ್ಗಿದೆ’ ಎಂದು ಭಾರತ ನಿರ್ಮಾಣ ಸೇವಕರೂ ಆದ ಕರಿಬಸಪ್ಪ ಹಾಗೂ ಬಸವರಾಜ್‌ ತಿಳಿಸಿದರು.

ಗುಂಡಿಗಳನ್ನು ಬಳಸುತ್ತಿಲ್ಲ:’ ‘ಈಗ ಕೋಳಿ ತ್ಯಾಜ್ಯಗಳನ್ನು ಹೂಳಲು ಗುಂಡಿ ತೆಗೆದಿದ್ದಾರೆ. ಆದರೆ, ಅವುಗಳನ್ನು ಅಲ್ಲಿಗೆ ಹಾಕುತ್ತಿಲ್ಲ. ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ನಾಯಿಗಳ ಕಾಟ ಆರಂಭವಾಗಿದೆ. ನೂರಿನ್ನೂರು ನಾಯಿಗಳು ಬರುತ್ತವೆ. ಕುರಿ, ಮೇಕೆ, ದನಗಳಿಗೆ ನಾಯಿಗಳು ಕಚ್ಚಿದ ಉದಾಹರಣೆ ಇದೆ. ನಾಯಿಗಳು ಇರುವುದರಿಂದ, ಫಾರಂ ಬಳಿ ಹೋಗುವುದಕ್ಕೇ ಒಮ್ಮೊಮ್ಮೆ ಭಯವಾಗುತ್ತದೆ. ಜೋಳದ ತೆನೆಯನ್ನೂ ನಾಯಿಗಳು ಬಿಡುತ್ತಿಲ್ಲ! ಕೋಳಿಗಳ ತ್ಯಾಜ್ಯವನ್ನು ಇದೀಗ 4–5 ಎಕರೆಯಷ್ಟು ಜಾಗದಲ್ಲಿ ಸುರಿಯಲಾಗಿದೆ’ ಎಂದು ಹೇಳಿದರು.

‘ಇಡೀ ಗ್ರಾಮದ ಜನರಿಗೆ ತೊಂದರೆಯಾದರೂ ಮಾಲೀಕರು ತಲೆಕೆಡಿಸಿಕೊಳ್ಳಲಿಲ್ಲ. ಪ್ರತಿಭಟನೆ ನಡೆಸಿದ ರೈತ ಮುಖಂಡರಾದ ಶಿವಮೂರ್ತಪ್ಪ, ಬಸವರಾಜಪ್ಪ ಹಾಗೂ ನಾವು ಪೊಲೀಸ್‌ ಠಾಣೆ, ಜೈಲು, ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು. 11 ಜನ ಜೈಲಿಗೆ ಹೋಗಿದ್ದರು. ಅವರ ಕುಂಟುಬದವರು ಆತಂಕಗೊಂಡಿದ್ದರು. ಆದರೆ, ಇಡೀ ಊರಿನವರ ನೆಮ್ಮದಿಗಾಗಿ ಹೋರಾಡಿದ ಹೆಮ್ಮೆ, ಖುಷಿ ಈಗ ಇದೆ. ನ್ಯಾಯ ಸಿಕ್ಕಿದೆ’ ಎಂದು ಹೆಮ್ಮೆಯ ಭಾವ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ಆದರೂ ಫಾರಂಗಳ ಮಾಲೀಕರು ಇಲ್ಲಿಗೆ ಬಂದಿಲ್ಲ. ಕಾರ್ಮಿಕರನ್ನು ಮುಂದಿಟ್ಟುಕೊಂಡು ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಅಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೇ ಇಡೀ ಗ್ರಾಮದ ಜನರ ಹಿತವನ್ನಷ್ಟೇ ಮುಖ್ಯವಾಗಿ ನೋಡಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಒತ್ತಾಯವಾಗಿತ್ತು.

ನಾವೆಲ್ಲಿ ಕೆಲಸ ಮಾಡುವುದು!?
ಈ ಫಾರಂನಲ್ಲಿ 18 ಮಂದಿ ಜೀವನ ಕಂಡುಕೊಂಡಿದ್ದೇವೆ. 10–12 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ನಮಗೇನೂ ತೊಂದರೆಯಾಗಿಲ್ಲ. ಆದರೆ, ಈಗ ಫಾರಂ ಮುಚ್ಚಿದರೆ ಮುಂದೇನು ಎಂಬ ಆತಂಕ ಎದುರಾಗಿದೆ. ತಿಂಗಳ ಹಿಂದೆ, ನೊಣಗಳ ನಿಯಂತ್ರಣಕ್ಕೆ ಔಷಧಿಗೆಂದು ₨ 90 ಲಕ್ಷ ಖರ್ಚಾಗಿದೆ. ಇಲ್ಲಿ 42 ಸಾವಿರ ಕೋಳಿಗಳಿವೆ. ಈಗ ನೊಣಗಳಿಲ್ಲ. ಕೆಲಸ ಹೋದರೆ ನಾವೇನು ಮಾಡುವುದು?

– ಗಿರೀಶ್‌, ಮೇಲ್ವಿಚಾರಕ, ಶ್ರೀಶೈಲ ಕೋಳಿ ಫಾರಂ.

ಶಾಲೆಯಲ್ಲಿ ನೆಮ್ಮದಿಯಿಂದ ಊಟ
ನೆಮ್ಮದಿಯಿಂದ ಊಟ ಮಾಡುತ್ತಾ ಕುಳಿತಿದ್ದ ಶಿಕ್ಷಕರು, ‘ಹಿಂದೆ ಹೀಗೆ ಊಟ ಮಾಡಲು ಆಗುತ್ತಿರಲಿಲ್ಲ. ಜನರ ಪ್ರತಿಭಟನೆ ನಂತರ ಫೌಲ್ಟ್ರಿಗಳಲ್ಲಿ ಸ್ವಚ್ಛತೆ ನಡೆದಿದೆ. ನೊಣಗಳು ಕಡಿಮೆಯಾಗಿದೆ. ಸೊಳ್ಳೆಪರದೆ ಅಲ್ಲಿ ಚೀಲದಲ್ಲಿ ಕಟ್ಟಿ ಇಟ್ಟಿದ್ದೇವೆ’ ಎಂದು ಶಾಲೆಯ ಶಿಕ್ಷಕಿಯರು ಬೀರು ಮೇಲಿಟ್ಟಿದ್ದ ಮೂಟೆಯತ್ತ ಕೈ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT