ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಧೂಮೀಕರಣ

Last Updated 20 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ತರಕಾರಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ರೋಗಗಳು ಸಾಮಾನ್ಯವಾಗಿದ್ದು, ಸಂಪೂರ್ಣ ಫಸಲು ಪಡೆಯುವ ರೈತರ ನಿರೀಕ್ಷೆ ಹುಸಿಯಾಗುತ್ತಿದೆ. ತರಕಾರಿ ಬೆಳೆಗಳಾದ ಟೊಮೆಟೊ, ಆಲೂಗೆಡ್ಡೆ, ಬಟಾಣಿ, ಬದನೆ, ಸೌತೆಕಾಯಿ, ಮೆಣಸಿನಕಾಯಿ, ಬೀನ್ಸ್ ಹಾಗೂ ಬಾಳೆ, ದಾಳಿಂಬೆ ಇತ್ಯಾದಿ ತೋಟಗಾರಿಕಾ ಬೆಳೆಗಳು ಮಣ್ಣಿನಲ್ಲಿರುವ ಸೋಂಕಿನಿಂದ ಬರುವ ರೋಗಗಳಿಂದ ಹಾನಿಗೊಳಗಾಗುತ್ತಿವೆ.

ಬೇರು ಕೊಳೆ ರೋಗ, ಸೊರಗು ರೋಗ ಹಾಗೂ ಬೇರು ಗಂಟು ರೋಗಗಳು ಸಾಮಾನ್ಯವಾಗಿ ಕಂಡುಬರುವ ರೋಗಗಳು ಶಿಲೀಂದ್ರ, ಬ್ಯಾಕ್ಟೀರಿಯಾ ಹಾಗೂ ಜಂತುಹುಳುಗಳ (ನೆಮಟೋಡ್) ಸೋಂಕಿನಿಂದ ಬರುತ್ತವೆ. ಈ  ಎಲ್ಲಾ ಸೋಂಕುಗಳ ಮೂಲ ಮಣ್ಣು.

ರೋಗಗಳ ನಿಯಂತ್ರಣಕ್ಕೆ ರೈತರು ಕಾರ್ಬೊಪ್ಯೂರಾನ್, ಕ್ಲೋರೋಪಿಕ್ರಿನ್, ಆಲ್ಡಿಕಾರ್ಬ್, ಆಕ್ಸಾಮಿಲ್ ಇತ್ಯಾದಿ ರಾಸಾಯನಿಕಗಳನ್ನು ಬಳಸಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಾರೆ. ರೋಗಗಳಿಂದ ಆಗುವ ನಷ್ಟದ ಜೊತೆಗೆ ಔಷಧಿ ಖರೀದಿ,ಬಳಕೆ ಇತ್ಯಾದಿಗಳಿಗೆ ಮಾಡುವ ವೆಚ್ಚವೂ ಸೇರಿ ನಷ್ಟ ಹೆಚ್ಚಾಗುತ್ತದೆ.

ರಾಸಾಯನಿಕ ಔಷಧಿಗಳು ರೋಗಾಣುಗಳನ್ನು ನಾಶ ಮಾಡುವುದರ ಜೊತೆಗೆ ಎಲ್ಲ ಜೀವ ಸಂಕುಲದ ನಾಶಕ್ಕೆ ಕಾರಣವಾಗುವುದಲ್ಲದೆ ಅಲ್ಪ ಪ್ರಮಾಣದಲ್ಲಿ ಆಹಾರ ಸರಪಣಿಯಲ್ಲಿ ಸೇರಿ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತಿರುವುದು ಎಲ್ಲರನ್ನೂ ಚಿಂತೆಗೀಡುಮಾಡಿದೆ. ಜೈವಿಕ ಮೂಲದ ಔಷಧಿಗಳು (ಉದಾ: ಟ್ರೈಕೋಡರ್ಮಾ ಮಿಶ್ರಣಗಳು) ಮಣ್ಣಿನ ಸೋಂಕಿನಿಂದ ಬರುವ ರೋಗಗಳನ್ನು ನಿಯಂತ್ರಿಸುತ್ತಿವೆ. ಆದರೆ ರೈತರು ತಾವಾಗಿಯೇ  ರೂಪಿಸಿಕೊಳ್ಳಬಹುದಾದ ತಂತ್ರಜ್ಞಾನವನ್ನು ಸಂಶೋಧಕರು ಹಾಗೂ ಉತ್ಪಾದಕರು ರೂಪಿಸಿ ಪ್ರಚಾರ ಪಡಿಸುತ್ತಿಲ್ಲ.ರೈತರ ಈ ಎಲ್ಲ ಸಮಸ್ಯೆಗಳಿಗೆ ಈಗಿರುವ ಸುಲಭ ಪರಿಹಾರವೆಂದರೆ ಜೈವಿಕ ಧೂಮೀಕರಣ ಅಥವಾ  ಸಾಸಿವೆ ಸಸ್ಯ ಧೂಮೀಕರಣ (ಬಯೋಪ್ಯೂಮಿಗೇಷನ್).

ಸಾಸಿವೆ ಕುಟುಂಬಕ್ಕೆ ಸೇರಿದ (ಬ್ರಾಸಿಕ) ಸಸ್ಯಗಳನ್ನು ಬೆಳೆಸಿ 45-60 ದಿನಗಳ ನಂತರ ಬೇರು ಸಹಿತ ಕಿತ್ತು ಕತ್ತರಿಸಿ ಮಣ್ಣಿಗೆ ಸೇರಿಸಿ ನೀರು ಹಾಯಿಸಬೇಕು. ಹೀಗೆ ಮಾಡಿದರೆ ಐಸೋಥಯೋಸಯನೇಟ್ (ಐ.ಟಿ.ಸಿ.) ಎಂಬ ಅನಿಲ ಮಣ್ಣಿನೊಳಗೆ ಬಿಡುಗಡೆಯಾಗಿ ರೋಗಾಣುಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಇದೇ ಜೈವಿಕ ಧೂಮೀಕರಣ ತಂತ್ರಜ್ಞಾನ.  ಈ  ತಂತ್ರಜ್ಞಾನದಿಂದ ಕೆಳಕಂಡ ಮಹತ್ವದ ಉಪಯೋಗಗಳನ್ನು ಪಡೆಯಬಹುದು.

* ಯಾವುದೇ ತರಕಾರಿ ಬೆಳೆ ಮಾಡುವ ಮುನ್ನ ಮಣ್ಣನ್ನು ಸೋಂಕು ರಹಿತವನ್ನಾಗಿಸಲು ಸಾಸಿವೆ ಗಿಡಗಳನ್ನು ಬೆಳೆಸಿ ಕತ್ತರಿಸಿ ಮಣ್ಣಿಗೆ ಸೇರಿಸಿ ತೇವಾಂಶ ನಿರ್ವಹಿಸಬೇಕು.

* ತರಕಾರಿ ಸಾಲುಗಳ ನಡುವೆ ಸಾಸಿವೆ ಗಿಡಗಳನ್ನು ಬೆಳೆಸಿ, ತರಕಾರಿ ಫಸಲು ಪಡೆದ ನಂತರ ಭೂಮಿಗೆ ಸೇರಿಸಿ ಧೂಮೀಕರಣಗೊಳಿಸಬಹುದು.

* ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳಲ್ಲಿ ಸಾಲುಗಳ ಮಧ್ಯೆ ಸಾಸಿವೆ ಗಿಡಗಳನ್ನು ಬೆಳೆಸಿ ಮಣ್ಣಿಗೆ ಸೇರಿಸಬೇಕು.

* ಸಾಸಿವೆ ಕುಟುಂಬಕ್ಕೆ ಸೇರಿದ ಎಲೆಕೋಸು, ಮೂಲಂಗಿ, ಗೆಡ್ಡೆಕೋಸು, ಕ್ಯಾರೆಟ್ ಮತ್ತು ಹೂಕೋಸು ಇತ್ಯಾದಿಗಳನ್ನು ‘ಬೆಳೆ ಪರಿವರ್ತಕ’ ಗಳನ್ನಾಗಿ ಉಪಯೋಗಿಸಿ ಪ್ರಯೋಜನ ಪಡೆಯಬಹುದು.

* ಸಾಸಿವೆ ಸಸ್ಯಗಳ ಹಸಿರೆಲೆಗೊಬ್ಬರದಂತೆ ಬೆಳೆಸಿ ಮಲ್ಚಿಂಗ್ ಮಾಡಿದಾಗ ಹ್ಯೂಮಸ್ ಅಂಶವು ಹೆಚ್ಚಾಗುವುದರ ಜೊತೆಗೆ ಮಣ್ಣಿನ ಸೋಂಕು ನಿವಾರಣೆ ಆಗುತ್ತದೆ.

* ಸಾಸಿವೆ ಸಸ್ಯಗಳ ಧೂಮೀಕರಣದಿಂದ ವಿವಿಧ ಹಾನಿಕಾರಕ ಕೀಟಗಳ ಕೋಶಾವಸ್ಥೆ ಹಾಗೂ ಕಳೆ ಬೀಜ, ಮೂಲಗಳ ಬೆಳವಣಿಗೆಯನ್ನು ನಿಯಂತ್ರಿಸುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.

* ಐಟಿಸಿ ಅನಿಲವು ಸಾಸಿವೆ ಸಸ್ಯಗಳ ಕೊಳೆಯುವಿಕೆಯಿಂದ ನಿಧಾನವಾಗಿ ಬಿಡುಗಡೆಯಾಗುವುದರಿಂದ ಧೂಮೀಕರಣವು ದೂರಗಾಮಿ ಪರಿಣಾಮವನ್ನು ಹೊಂದಿದೆ.

* ಸಸ್ಯ ಮೂಲದಿಂದ ಬಿಡುಗಡೆಯಾಗುವ ಅನಿಲವಾದುದರಿಂದ ಪಾರ್ಶ್ವ ಪರಿಣಾಮಗಳು ಅತಿ ಕಡಿಮೆಯಾಗಿವೆ.

* ಸಾಸಿವೆ ಸಸ್ಯಗಳನ್ನು ಕತ್ತರಿಸಿ ಅರೆದಷ್ಟೂ ಪರಿಣಾಮ ಹೆಚ್ಚು.

* ರೈತ ತಾನಾಗಿಯೇ ಅರಿತು ಮಾಡಬಲ್ಲ ತಂತ್ರಜ್ಞಾನವಾದುದರಿಂದ ಅಳವಡಿಕೆ ಸುಲಭ ಮತ್ತು ಅನಗತ್ಯ ವೆಚ್ಚಗಳಿಲ್ಲ. ಸ್ಥಳೀಯವಾಗಿ ಬೆಳೆಯುವ ಸಾಸಿವೆಯು (ಕಪ್ಪು/ ಕಂದು ಬಣ್ಣ) ಹೆಚ್ಚಿನ ಐಟಿಸಿ ಅನಿಲ ಬಿಡುಗಡೆಯಾಗುವ ಗುಣ ಹೊಂದಿದೆ. ಸಾಸಿವೆ ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿಯನ್ನು ಐಟಿಸಿಯ ಬದಲಿ  ಮೂಲವಾಗಿ ಉಪಯೋಗಿಸಬಹುದಾಗಿದೆ. 

(ಆಧಾರ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT