ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಕೊವಿಚ್ ಯಶಸ್ಸಿನ ಓಟ

Last Updated 16 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ರಾಯಿಟರ್ಸ್): ಮೆಲ್ಬರ್ನ್ ಪಾರ್ಕ್‌ನಲ್ಲಿ ಸತತ ಮೂರನೇ ಗ್ರ್ಯಾನ್‌ಸ್ಲಾಮ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರ ಯಶಸ್ಸಿನ ನಾಗಾಲೋಟ ಮುಂದುವರಿದಿದೆ.

ಸರ್ಬಿಯಾದ ಜೊಕೊವಿಚ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಹೆಜ್ಜೆ ಇಟ್ಟಿದ್ದಾರೆ. ರಾಡ್ ಲವೆರಾ ಅರೆನಾದಲ್ಲಿ ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 6-1, 6-2, 6-3ರಲ್ಲಿ ಅಮೆರಿಕದ ರ‌್ಯಾನ್ ಹ್ಯಾರಿಸನ್ ಎದುರು ಜಯಭೇರಿ ಮೊಳಗಿಸಿದರು.

ಈ ಗೆಲುವಿಗಾಗಿ ಜೊಕೊವಿಚ್ ಕೇವಲ 91 ನಿಮಿಷ ತೆಗೆದುಕೊಂಡರು. ಅವರು ಮೂರನೇ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಎದುರು ಪೈಪೋಟಿ ನಡೆಸಲಿದ್ದಾರೆ.

ಪುರುಷರ ವಿಭಾಗದ ಇತರ ಎರಡನೇ ಸುತ್ತಿನ ಪಂದ್ಯಗಳಲ್ಲಿ ಸರ್ಬಿಯಾದ ಜಾಂಕೊ ತಿಪ್ಸಾರೆವಿಕ್ 6-3, 6-4, 3-6, 4-6, 7-5ರಲ್ಲಿ ಸ್ಲೊವಾಕಿಯಾದ ಲುಕಾಸ್ ಲ್ಯಾಕೊ ಎದುರೂ, ಸ್ಟೆಪಾನೆಕ್ 6-2, 6-2, 6-4ರಲ್ಲಿ ಸ್ಪೇನ್‌ನ ಫೆಲಿಸಿಯಾನೊ ಲೋಪೆಜ್ ವಿರುದ್ಧವೂ, ಸೈಪ್ರಸ್‌ನ ಮಾರ್ಕಸ್ ಬಗ್ಡಾಟಿಸ್ 3-6, 6-3, 6-2, 6-2ರಲ್ಲಿ ಜಪಾನ್‌ನ ತತ್ಸುಮಾ ಇಟೊ ಮೇಲೂ, ಇಟಲಿಯ ಡೇವಿಡ್ ಫೆರೆರ್ 6-0, 7-5, 4-6, 6-3ರಲ್ಲಿ ಅಮೆರಿಕದ ಟಿಮ್ ಸ್ಮಿಜೆಕ್ ವಿರುದ್ಧವೂ ಜಯ ಗಳಿಸಿದರು.

ಶರ್ಪೋವಾಗೆ ಜಯ: ಮಹಿಳೆಯರ ಸಿಂಗಲ್ಸ್‌ನಲ್ಲಿ ರಷ್ಯಾದ ಮರಿಯಾ ಶರ್ಪೋವಾ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 6-0, 6-0ರಲ್ಲಿ ಮಿಸಾಕಿ ಡೊಯಿ ಎದುರು ಜಯ ಗಳಿಸಿದರು.

ಶರ್ಪೋವಾ ಎದುರಾಳಿಗೆ ಒಂದೂ ಗೇಮ್ ಗೆಲ್ಲಲು ಅವಕಾಶ ನೀಡಲಿಲ್ಲ. ಸತತ ಎರಡನೇ ಪಂದ್ಯದಲ್ಲಿ ಈ ರೀತಿಯ ಸಾಧನೆ ಮಾಡಿದ್ದಾರೆ. ಈ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಇದೊಂದು ದಾಖಲೆಯೇ ಸರಿ. ಏಕೆಂದರೆ 28 ವರ್ಷಗಳಲ್ಲಿ ಈ ರೀತಿ ಆಗುತ್ತಿರುವುದು ಇದು ಮೊದಲ ಬಾರಿ.

ಚೀನಾದ ಆಟಗಾರ್ತಿ ಲೀ ನಾ 6-2, 7-5ರಲ್ಲಿ ಬೆಲಾರಸ್‌ನ ಓಲ್ಗಾ ಗೊವೊರ್‌ಸೊವಾ ಎದುರು ಗೆದ್ದರು. ಆದರೆ ಆಸ್ಟ್ರೇಲಿಯಾದ ಸಮಂತಾ ಸ್ಟ್ರೋಸರ್ ಆಘಾತ ಅನುಭವಿಸಿದರು. ಅವರು 4-6, 6-1, 5-7ರಲ್ಲಿ ಚೀನಾದ ಚೆಂಗ್ ಜೀ ಎದುರು ಸೋಲು ಕಂಡರು.

ಮಹಿಳೆಯರ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ 6-3, 6-3ರಲ್ಲಿ ಫ್ರಾನ್ಸ್‌ನ ಅಲಿಜ್ ಕಾರ್ನೆಟ್ ಎದುರೂ, ಸರ್ಬಿಯಾದ ಅನಾ ಇವಾನೊವಿಕ್ 7-5, 1-6, 6-4ರಲ್ಲಿ ತೈವಾನ್‌ನ ಚನ್ ಯಂಗ್ ಜನ್  ವಿರುದ್ಧವೂ, ಬ್ರಿಟನ್‌ನ ಹೀದರ್ ವಾಟ್ಸನ್ 4-6, 7-6, 6-2ರಲ್ಲಿ ಪೋರ್ಚುಗಲ್‌ನ ಮರಿಯಾ ಜಾವೊ ಕೊಹ್ಲೆರ್ ಮೇಲೂ, ಫ್ರಾನ್ಸ್‌ನ ಮರಿಯಾ ಬಾರ್ತೊಲಿ 7-5, 6-0ರಲ್ಲಿ ಸರ್ಬಿಯಾದ ವೆಸ್ನಾ ಡೊಲೊಂಕ್ ಎದುರೂ, ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ 6-3, 6-3ರಲ್ಲಿ ರುಮೇನಿಯಾದ ಇರಿನಾ ಬೇಗು ವಿರುದ್ಧವೂ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT