ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊತೆಯಾಟದ ಬಲದಿಂದ ಬೆಳೆದವರು

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಜೊತೆಯಾಟಗಳು ಬೆಳೆದರೆ ಪಂದ್ಯದ ಸ್ವರೂಪವೇ ಬದಲಾಗುತ್ತದೆ ಎನ್ನುವ ಮಾತು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಪ್ರಚಾರ ಪಡೆದಿದೆ. ಇದು ನಿಜವೂ ಆಗಿದೆ. ಎರಡು ಮೂರು ಜೊತೆಯಾಟಗಳ ಬಲದಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿ, ವಿಜಯದ ಸಂಭ್ರಮ ಪಡೆದ ತಂಡಗಳ ಕಥೆಗಳೂ ಸಾಕಷ್ಟಿವೆ.

ಕ್ರಿಕೆಟ್ ತಂಡದ ಆಟ; ಇಲ್ಲಿ ವೈಯಕ್ತಿಕವಾಗಿ ಒಬ್ಬ ಬ್ಯಾಟ್ಸ್‌ಮನ್ ಇಲ್ಲವೆ ಬೌಲರ್ ಬೆಳೆದು ನಿಂತರೆ ಯಶಸ್ಸು ಸಿಗುವುದು ತೀರ ವಿರಳ. ಆದ್ದರಿಂದ ಸಂಘಟಿತ ಹೋರಾಟ ಅಗತ್ಯ. ಬ್ಯಾಟಿಂಗ್ ವಿಷಯ ಬಂದಾಗ ಕ್ರೀಸ್‌ನಲ್ಲಿ ಇರುವವರು ಹೊಂದಾಣಿಕೆಯಿಂದ ರನ್ ಗಳಿಸುತ್ತಾ ಸಾಗಿ ಇನಿಂಗ್ಸ್ ಹಿಗ್ಗಿಸುವುದು ಮಹತ್ವದ್ದಾಗುತ್ತದೆ. ಆದ್ದರಿಂದಲೇ ಅನೇಕ ಸಂದರ್ಭಗಳಲ್ಲಿ ‘ಜೊತೆಯಾಟಗಳು ಬೆಳೆಯಲಿಲ್ಲದ ಕಾರಣಕ್ಕೆ ಸೋತೆವು’ ಎಂದು ತಂಡಗಳ ನಾಯಕರು ಹೇಳಿದ್ದಾರೆ.

ಇನಿಂಗ್ಸ್ ಕಟ್ಟುವುದೇ ಜೊತೆಯಾಟಗಳ ಬಲದಿಂದ ಎನ್ನುವುದು ಕ್ರಿಕೆಟ್ ಶಾಸ್ತ್ರ ಹೇಳುವ ಮಾತು. ಇದು ಸಾಧ್ಯವಾಗುವುದು ಕ್ರೀಸ್‌ನಲ್ಲಿರುವ ಇಬ್ಬರು ಬ್ಯಾಟ್ಸ್‌ಮನ್‌ಗಳು ಹೇಗೆ ಹಾಗೂ ಎಷ್ಟು ಸಂಯಮದಿಂದ ಒಬ್ಬರಿಗೊಬ್ಬರು ಸಹಕಾರ ನೀಡಿ ಆಡುತ್ತಾರೆ ಎನ್ನುವುದರ ಮೇಲೆ. ವಿಶ್ವಕಪ್ ಇತಿಹಾಸದ ಪುಟದಲ್ಲಿಯೂ ಹೀಗೆ ಬ್ಯಾಟ್ಸ್‌ಮನ್‌ಗಳು ಜೊತೆಯಾಗಿ ತಂಡದ ಮೊತ್ತವನ್ನು ಹೆಚ್ಚಿಸಿದ ಅನೇಕ ಘಟನೆಗಳು ಅಚ್ಚಾಗಿವೆ. ಅವುಗಳಲ್ಲಿ ಕೆಲವು ವಿಶಿಷ್ಟವಾದ ವಿವರಗಳು ಇಲ್ಲಿವೆ.

* ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಮೂರಂಕಿಯ ರನ್ ಮೊತ್ತದ ಜೊತೆಯಾಟವು ದಾಖಲಾಗಿದ್ದು 176 ಬಾರಿ. ಒಂದರಿಂದ ಹತ್ತರವರೆಗಿನ ಜೊತೆಯಾಟದಲ್ಲಿ ಕ್ರಮವಾಗಿ 45, 42, 46, 25, 12, 4, 0, 1, 1, 0 ಬಾರಿ ಮೂರಂಕಿಯ ಮೊತ್ತವನ್ನು ಬ್ಯಾಟ್ಸ್‌ಮನ್‌ಗಳು ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಏಳು ಹಾಗೂ ಹತ್ತನೇ ವಿಕೆಟ್‌ನಲ್ಲಿ ಮೂರಂಕಿಯ ಮೊತ್ತವನ್ನು ಬ್ಯಾಟ್ಸ್‌ಮನ್ ದ್ವಯರು ಸೇರಿಸಿದ್ದನ್ನು ನೋಡುವ ಅವಕಾಶ ವಿಶ್ವಕಪ್ ಪಂದ್ಯಗಳಲ್ಲಿ ಸಿಕ್ಕಿಲ್ಲ.

* ವಿವಿಧ ತಂಡಗಳ ಪರವಾಗಿ ಮೂರಂಕಿಯ ಜೊತೆಯಾಟ ದಾಖಲಾಗಿದ್ದು ಇಂತಿದೆ: ಆಸ್ಟ್ರೇಲಿಯಾ (32), ವೆಸ್ಟ್ ಇಂಡೀಸ್ (22), ಇಂಗ್ಲೆಂಡ್ (20), ಭಾರತ (19), ನ್ಯೂಜಿಲೆಂಡ್ (19), ದಕ್ಷಿಣ ಆಫ್ರಿಕಾ (17), ಪಾಕಿಸ್ತಾನ (16), ಶ್ರೀಲಂಕಾ (16), ಜಿಂಬಾಬ್ವೆ (6), ಕೀನ್ಯಾ (5), ಹಾಲೆಂಡ್ (3) ಮತ್ತು ಯುಎಇ (1). ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದವರು ಜೊತೆಯಾಟವನ್ನು ಬೆಳೆಸುವಲ್ಲಿ ಬಲಾಢ್ಯರಾಗಿದ್ದಾರೆ ಎನ್ನುವುದು ಈ ಅಂಕಿ-ಅಂಶದಿಂದಲೇ ಸ್ಪಷ್ಟವಾಗುತ್ತದೆ.

* ಒಂದೇ ವಿಶ್ವಕಪ್‌ನಲ್ಲಿ ವಿವಿಧ ಪಂದ್ಯಗಳಲ್ಲಿ ಜೊತೆಯಾಗಿ ಆಡುವ ಮೂಲಕ ಒಟ್ಟಾರೆಯಾಗಿ 500 ಹಾಗೂ ಅದಕ್ಕಿಂತ ಹೆಚ್ಚು ರನ್‌ಗಳನ್ನು ಕಲೆಹಾಕಿದವರು ತೀರ ಕಡಿಮೆ. 2007ರಲ್ಲಿ ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್ ಹಾಗೂ ಮ್ಯಾಥ್ಯೂ ಹೇಡನ್ ಅವರು ಹತ್ತು ಇನಿಂಗ್ಸ್‌ಗಳಲ್ಲಿ 699 ರನ್‌ಗಳನ್ನು ಸೇರಿಸಿದ್ದು ದಾಖಲೆಯಾಗಿದೆ. ಶ್ರೀಲಂಕಾದ ಅರವಿಂದ್ ಡಿಸಿಲ್ವಾ-ಎ.ಪಿ.ಗುರುಸಿಂಗಾ (1995) ಜೋಡಿಯು ಐದು ಇನಿಂಗ್ಸ್‌ಗಳಲ್ಲಿ 566 ರನ್ ಗಳಿಸಿದ್ದು ವಿಶೇಷ. ಈ ಪಟ್ಟಿಯಲ್ಲಿ ಭಾರತದ ರಾಹುಲ್ ದ್ರಾವಿಡ್-ಸೌರವ್ ಗಂಗೂಲಿ ನಂತರದ ಸ್ಥಾನದಲ್ಲಿದ್ದಾರೆ.

1999ರಲ್ಲಿ ಇವರಿಬ್ಬರೂ ಐದು ಇನಿಂಗ್ಸ್‌ಗಳಲ್ಲಿ 546 ರನ್ ಜೋಡಿಸಿದ್ದರು. 2003ರಲ್ಲಿ ಭಾರತದ ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಹನ್ನೊಂದು ಇನಿಂಗ್ಸ್‌ಗಳಲ್ಲಿ ಜೊತೆಯಾಗಿ ಆಡಿ 543 ರನ್ ಗಳಿಸಿದ್ದರು. ಅದೇ ವರ್ಷ ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್-ಮ್ಯಾಥ್ಯೂ ಹೇಡನ್ (10 ಇನಿಂಗ್ಸ್ 521 ರನ್) ಹಾಗೂ ಭಾರತದ ಸೌರವ್ ಗಂಗೂಲಿ-ಸಚಿನ್ ತೆಂಡೂಲ್ಕರ್ (10 ಇನಿಂಗ್ಸ್ 502 ರನ್) ಅವರು ಐದನೂರಕ್ಕೂ ಹೆಚ್ಚು ರನ್‌ಗಳನ್ನು ಜೊತೆಯಾಗಿ ಗಳಿಸಿ, ಗಮನ ಸೆಳೆದಿದ್ದರು.

* ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್ ಹಾಗೂ ಹೇಡನ್ ಅವರು ಮಾತ್ರ ಎರಡು ವಿಶ್ವಕಪ್‌ಗಳಲ್ಲಿ ಜೊತೆಯಾಗಿ ಐದನೂರಕ್ಕೂ ಅಧಿಕ ರನ್‌ಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2003 (521 ರನ್) ಹಾಗೂ 2007 (699 ರನ್)ರಲ್ಲಿ ಅವರು ಇಂಥದೊಂದು ವಿಶಿಷ್ಟ ಸಾಧನೆ ಮಾಡಿದ್ದರು. ಇನ್ನೊಂದು ವಿಶೇಷವೆಂದರೆ ಗಿಲ್‌ಕ್ರಿಸ್ಟ್-ಹೇಡನ್ ಜೋಡಿಯು ಮಾತ್ರ ವಿಶ್ವಕಪ್ ಇತಿಹಾಸದಲ್ಲಿ ಒಟ್ಟಾರೆಯಾಗಿ ಸಾವಿರಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದ್ದಾರೆ. ವಿಶ್ವಕಪ್ ಪಂದ್ಯಗಳ 20 ಇನಿಂಗ್ಸ್‌ಗಳಲ್ಲಿ ಇವರು 1220 ರನ್ ಕಲೆಹಾಗಿದ್ದಾರೆ.

* ಇನ್ನೂರಕ್ಕೂ ಹೆಚ್ಚು ರನ್‌ಗಳ ಜೊತೆಯಾಟವು ಸಾಧ್ಯವಾಗಿದ್ದು ವಿಶ್ವಕಪ್ ಪಂದ್ಯಗಳಲ್ಲಿ ಎಂಟು ಬಾರಿ ಮಾತ್ರ. ಅತಿ ದೊಡ್ಡ ಮೊತ್ತದ ಜೊತೆಯಾಟವಾಡಿದ ಶ್ರೇಯ ಹೊಂದಿರುವುದು ಭಾರತದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ. 1999ರಲ್ಲಿ ಶ್ರೀಲಂಕಾ ಎದುರು ಎರಡನೇ ವಿಕೆಟ್‌ನಲ್ಲಿ 318 ರನ್ ಗಳಿಸಿದ್ದು ದಾಖಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT