ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿರಸ್ತೆ ಅಭಿವೃದ್ಧಿ ಮರೀಚಿಕೆ

Last Updated 15 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ಬಿ. ರಾಚಯ್ಯ ಜೋಡಿರಸ್ತೆಯ ಅಭಿವೃದ್ಧಿ ನೆನೆಗುದಿಗೆ ಬಿದ್ದಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.

ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರೆಗೆ ಇರುವ ಈ ರಸ್ತೆಯ ಫುಟ್‌ಪಾತ್ ಹದಗೆಟ್ಟಿದೆ. ಇದರಿಂದ ಪಾದಚಾರಿಗಳು ಫುಟ್‌ಪಾತ್‌ನಲ್ಲಿ ಸಂಚರಿಸುವುದಿಲ್ಲ. ರಸ್ತೆಯಲ್ಲಿಯೇ ಸಂಚರಿಸುವುದರಿಂದ ಅಪಘಾತಕ್ಕೆ ತುತ್ತಾಗುವ ಘಟನೆ ನಡೆಯುತ್ತಲೇ ಇವೆ.

ಪಾದಚಾರಿ ರಸ್ತೆಯ ಅಗಲ ಸುಮಾರು 1 ರಿಂದ 4 ಮೀ.ವರೆಗೆ ಅಂಕುಡೊಂಕಾಗಿದೆ. ಉಬ್ಬು-ತಗ್ಗುಗಳಿಂದ ಕೂಡಿದ್ದು, ಕಲ್ಲುಚಪ್ಪಡಿ ಹಾಗೂ ಮಣ್ಣಿನ ರಸ್ತೆಯಾಗಿದೆ. ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆಗೆ ಯಾವುದೇ ವ್ಯವಸ್ಥೆಯಿಲ್ಲ. ಹೀಗಾಗಿ, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಕುಡಿಯುವ ನೀರು ಪೂರೈಕೆ ಕೊಳವೆಯು ರಸ್ತೆಯ ಮಧ್ಯದಲ್ಲಿಯೇ ಹಾದುಹೋಗಿದೆ. ವಾಹನಗಳ ಸಂಚಾರದಿಂದ ದುರಸ್ತಿಗೆ ಒಳಪಡುತ್ತಿದೆ. ಈಗ ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಆದರೆ, ಜೋಡಿರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆಗೆ ಸ್ಥಳಾವಕಾಶವೇ ಇಲ್ಲ!

ಕೆಇಬಿ ಉಪ ವಿಭಾಗದ ಕಚೇರಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ 460 ಮೀ. ಉದ್ದದಷ್ಟು ರಸ್ತೆಯು ತಗ್ಗುಪ್ರದೇಶದಿಂದ ಕೂಡಿದೆ. ಇದರ ಪರಿಣಾಮ ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರಿನ ಪ್ರವಾಹ ಸೃಷ್ಟಿಯಾಗಿ  ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
 
ಎರಡು ಬದಿಯಲ್ಲಿರುವ ತೆರೆದ ಚರಂಡಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ. ನೀರು ಹಾಗೂ ವಿದ್ಯುತ್ ಪೂರೈಕೆಗಾಗಿ ರಸ್ತೆ ಅಗೆಯುವ ಕೆಲಸವೂ ನಡೆಯುತ್ತದೆ. ಹೀಗಾಗಿ, ಜೋಡಿರಸ್ತೆಯ ನಿರ್ವಹಣೆಗೂ ಒತ್ತು ನೀಡುತ್ತಿಲ್ಲ.

ಕಳೆದ ವರ್ಷ ನಗರಸಭೆಗೆ ರಾಜ್ಯ ಸರ್ಕಾರದಿಂದ 12 ಕೋಟಿ ರೂ ವಿಶೇಷ ಅನುದಾನ ಮಂಜೂರಾಗಿತ್ತು. ಈ ಅನುದಾನ ಬಳಸಿಕೊಂಡು ಜೋಡಿರಸ್ತೆ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಲಾಗಿತ್ತು. ಆದರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಅನುದಾನವು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಪಾಲಾಯಿತು. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ರಸ್ತೆ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ.

ಪ್ರಸ್ತಾವ ತಯಾರಿಕೆ
ಅಗಲೀಕರಣದೊಂದಿಗೆ ಜೋಡಿರಸ್ತೆ ಅಭಿವೃದ್ಧಿಪಡಿಸಲು ಜಿಲ್ಲಾಡಳಿತದಿಂದ ಪ್ರಸ್ತಾವ ಸಿದ್ಧಪಡಿಸಲಾಗಿದೆ.
ರಸ್ತೆಯ ಮಧ್ಯದಲ್ಲಿರುವ ನೀರು ಪೂರೈಕೆ ಕೊಳವೆಯ ಸ್ಥಳಾಂತರಕ್ಕೆ 2.80 ಕೋಟಿ ರೂ, ವಿದ್ಯುತ್ ಕಂಬ ಬದಲಾವಣೆಯೊಂದಿಗೆ ಯುಜಿ ಕೇಬಲ್ ಅಳವಡಿಕೆಗೆ 50 ಲಕ್ಷ ರೂ ನಿಗದಿಪಡಿಸಲಾಗಿದೆ. ಅನಧಿಕೃತ ಕಾಂಪೌಂಡ್‌ಗಳ ತೆರವಿಗೆ 5 ಲಕ್ಷ ರೂ ನಿಗದಿಪಡಿಸಲಾಗಿದೆ.

ಮುಂದಿನ 15ವರ್ಷಗಳಿಗೆ ವಿನ್ಯಾಸಗೊಳಿಸಿ ಹೊಸ ರಸ್ತೆ, ಸೈಡ್ ಡ್ರೈನ್, ಕೇಬಲ್ ಡಕ್ಟ್, ಪಾದಚಾರಿ ರಸ್ತೆ ನಿರ್ಮಾಣಕ್ಕೆ 9.90 ಕೋಟಿ ರೂ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ರಾಜ್ಯ ಸರ್ಕಾರ ಈ ಕ್ರಿಯಾಯೋಜನೆಗೆ ಅನುಮೋದನೆ ನೀಡಿ ಅನುದಾನವನ್ನು ಬಿಡುಗಡೆಗೊಳಿಸಿದರೆ ಮಾತ್ರವೇ ಜೋಡಿರಸ್ತೆಯಲ್ಲಿ ನಾಗರಿಕರು, ವಾಹನ ಚಾಲಕರು ನೆಮ್ಮದಿಯಿಂದ ಸಂಚರಿಸಲು ಸಾಧ್ಯವಾಗಲಿದೆ.

`ಪ್ರಸ್ತುತ ಜೋಡಿರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಜಿಲ್ಲಾಡಳಿತ, ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ತೆರಳಲು ಈ ಮಾರ್ಗದಲ್ಲಿಯೇ ಹೋಗಬೇಕಿದೆ.

ಆದರೆ, ಫುಟ್‌ಪಾತ್ ಹದಗೆಟ್ಟಿದೆ. ಚರಂಡಿಯ ಕಲ್ಲುಚಪ್ಪಡಿ ಮೇಲೆದ್ದಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ, ರಸ್ತೆ ನಿರ್ವಹಣೆಗೆ ಒತ್ತು ನೀಡಬೇಕಿದೆ~ ಎಂಬುದು ಚಾಲಕ ಪರಶಿವಮೂರ್ತಿ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT