ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳ, ರಾಗಿ ಬೇಗ ನೀಡಿ

Last Updated 1 ಸೆಪ್ಟೆಂಬರ್ 2013, 20:05 IST
ಅಕ್ಷರ ಗಾತ್ರ

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಮಾತ್ರವಲ್ಲದೆ ರಾಗಿ, ಜೋಳ, ಗೋಧಿಯನ್ನೂ ಕೊಡಬೇಕು ಎಂಬ ಬೇಡಿಕೆಯನ್ನು ರಾಜ್ಯ ಸಚಿವ ಸಂಪುಟ ಒಪ್ಪಿಕೊಂಡಿರುವುದು ಶ್ಲಾಘನೀಯ.

ಏಕೆಂದರೆ ನಮ್ಮ ರಾಜ್ಯದ ಬೇರೆ ಬೇರೆ ಪ್ರದೇಶದಲ್ಲಿ ವಿಭಿನ್ನ ಬಗೆಯ ಆಹಾರ ಪದ್ಧತಿಯಿದೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜೋಳವೇ ಪ್ರಧಾನ ಆಹಾರ. ಅಲ್ಲಿ ರೊಟ್ಟಿ ತಿನ್ನದೆ ಬೆಳಗಾಗುವುದೇ ಇಲ್ಲ. ಹಳೆಯ ಮೈಸೂರು ಭಾಗಕ್ಕೆ ಬಂದರೆ ರಾಗಿ ಮುದ್ದೆಯನ್ನು ಬಿಟ್ಟು ಅಡುಗೆಯೇ ಇಲ್ಲ. ಕರಾವಳಿ, ಮಲೆನಾಡು ಭಾಗಗಳಲ್ಲಿ, ನಗರವಾಸಿಗಳಲ್ಲಿ ಮಾತ್ರ ಅಕ್ಕಿಗೆ ಬೇಡಿಕೆ ಹೆಚ್ಚು. ಉಳಿದ ಕಡೆ ಅದು ಪೂರಕ ಆಹಾರ ಮಾತ್ರ. ಗೋಧಿ ಬಳಕೆ ಸಾರ್ವತ್ರಿಕ.

ಅಲ್ಲದೆ ಪಡಿತರ ಅಂಗಡಿಗಳಲ್ಲಿ ಗೋಧಿ ಪೂರೈಕೆಯೂ ಇದೆ. ಈ ಸಂಗತಿ ಗೊತ್ತಿದ್ದರೂ ಸರ್ಕಾರ ಎರಡು ತಿಂಗಳ ಹಿಂದೆ ಆರಂಭಿಸಿದ ಅನ್ನಭಾಗ್ಯ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ಕಿಲೊಗೆ ಒಂದು ರೂಪಾಯಿ ದರದಲ್ಲಿ ತಿಂಗಳಿಗೆ ಗರಿಷ್ಠ 30 ಕಿಲೊ ಅಕ್ಕಿಯೊಂದನ್ನೇ ವಿತರಿಸಲು ಪ್ರಾರಂಭಿಸಿತ್ತು. ಈ ಯೋಜನೆಗೆ ಅಕ್ಕಿಯ ಕೊರತೆ ಎದುರಾಗಿದ್ದ ಕಾರಣ ದೂರದ ಛತ್ತೀಸಗಡದಿಂದ ಹೆಚ್ಚು ಬೆಲೆ ಕೊಟ್ಟು ಖರೀದಿಸಿ ತಂದು ಸಬ್ಸಿಡಿ ದರದಲ್ಲಿ ಹಂಚಿತ್ತು. ಆಗಲೇ ರಾಗಿ, ಜೋಳವನ್ನೂ ಕೊಡಿ ಎಂಬ ಕೂಗು ಹುಟ್ಟಿಕೊಂಡದ್ದು.

ರಾಗಿ ಮತ್ತು ಜೋಳ ಅನ್ನಭಾಗ್ಯದಲ್ಲಿ ಸೇರ್ಪಡೆಯಿಂದ ಸರ್ಕಾರಕ್ಕೂ ಅನುಕೂಲ, ಬೆಳೆಗಾರರಿಗೂ ಉತ್ತೇಜನ ಕೊಟ್ಟಂತಾಗುತ್ತದೆ. ಏಕೆಂದರೆ ಅಕ್ಕಿಗೆ ಹೋಲಿಸಿದರೆ ಈ ಎರಡೂ ಬೆಳೆಗಳ ಬೆಲೆ ಸ್ವಲ್ಪ ಕಡಿಮೆ. ಹೀಗಾಗಿ ಮಾರುಕಟ್ಟೆ ದರದಲ್ಲಿ ಖರೀದಿಸಿದರೂ ಸಹಾಯಧನದ ಹೊರೆ ಗಣನೀಯವಾಗಿ ತಗ್ಗುತ್ತದೆ. ಪೌಷ್ಟಿಕ ಆಹಾರವನ್ನು ಜನರಿಗೆ ನೀಡಿದಂತಾಗುತ್ತದೆ. ಅಲ್ಲದೆ ಇಡೀ ದೇಶದಲ್ಲಿ ಎಲ್ಲೂ ಕಂಡುಬರದಂಥ ವೈವಿಧ್ಯಮಯ ಆಹಾರ ಪದ್ಧತಿ ನಮ್ಮಲ್ಲಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ 10 ಲಕ್ಷ ಟನ್ ಜೋಳ ಬೆಳೆಯಲಾಗುತ್ತಿದೆ.

ಇದರಲ್ಲಿ ಅನ್ನಭಾಗ್ಯ ಮತ್ತು ಪಡಿತರ ವ್ಯವಸ್ಥೆ ಮೂಲಕ ವಿತರಣೆಗೆ ಬೇಕಾಗಿರುವುದು 3 ಲಕ್ಷ ಟನ್ ಮಾತ್ರ. ಇನ್ನು, ರಾಗಿಯನ್ನಂತೂ ಪೌಷ್ಟಿಕಾಂಶಗಳ ಗಣಿ ಎಂದೇ ಕರೆಯುವುದುಂಟು. ವರ್ಷಗಟ್ಟಲೆ ದಾಸ್ತಾನು ಮಾಡಬಹುದು. ಹುಳು ಹಿಡಿಯುವ ಸಂಭವ ತೀರಾ ಕಡಿಮೆ. ಜೋಳ, ರಾಗಿ ಬೆಳೆಯುವುದರಿಂದ ಲಾಭವಿಲ್ಲ ಎಂದು ಹತಾಶರಾಗಿರುವ ರೈತರಲ್ಲಿ, ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಇದೆ ಎಂದರೆ ಬೆಳೆಯಲು ಆಸಕ್ತಿ ಹುಟ್ಟುತ್ತದೆ.

ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಂದು ಜೋಳ, ರಾಗಿ, ಗೋಧಿ ವಿತರಣೆ ಆರಂಭಿಸಲು ಸಚಿವ ಸಂಪುಟ ನಿರ್ಧರಿಸಿದ್ದರೂ ಅದಕ್ಕೆ ಸೂಕ್ತ ಸಿದ್ಧತೆ ಕಂಡುಬರುತ್ತಿಲ್ಲ. ಇನ್ನೂ ಎರಡು ತಿಂಗಳು ಮುಂದೂಡಲು ಆಹಾರ ಇಲಾಖೆ ಸಲಹೆ ಮಾಡಿದೆ ಎಂದು ವರದಿಯಾಗಿದೆ. ಅಂಥ ನಿರ್ಧಾರ ಸರಿಯಲ್ಲ. ಅಕ್ಕಿ ವಿತರಣೆಗೆ ತೋರಿದ ಅವಸರ, ಬದ್ಧತೆಯನ್ನೇ ಸರ್ಕಾರ ಇಲ್ಲೂ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT