ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಷಿ ಬ್ಯಾಡ್ಮಿಂಟನ್ ಪ್ರೇಮ...

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

`ಬ್ಯಾಡ್ಮಿಂಟನ್ ಅಂಗಳದಲ್ಲಿ ನನಗೆ ಯಾವಾಗಲು ಕಾಣುವುದು ಇಬ್ಬರೇ - ನಾನು ಮತ್ತು ನನ್ನ ಎದುರಾಳಿ...~

-ಡೆನ್ಮಾರ್ಕ್‌ನ ಸುಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ ಎರ್ಲಂಡ್ ಕೊರ್ಪ್ಸ್ ತನ್ನ ಪ್ರೀತಿಯ ಆಟದ ಬಗ್ಗೆ ಒಮ್ಮೆ ಹೀಗೆ ಹೇಳಿದ್ದ. ಕಣ್ಣು ಪಿಳುಕಿಸುವ ಮುಂಚೆಯೇ ಈ ಆಟ ಎಷ್ಟು ಬೇಗನೆ ಮುಂದುವರೆಯುತ್ತದೆಯಂದರೆ, ನೀವು ಒಂದು ಕ್ಷಣದಲ್ಲಿ ಏನಾಯಿತು ಎಂದು ದಂಗು ಬಡಿಯುತ್ತೀರಿ.

ಹೀಗೆ ಅತಿ ವೇಗದಲ್ಲಿ ನಿಮ್ಮನ್ನು ಅಚ್ಚರಿಗೊಳಿಸುವ ಆಟವೇ ಬ್ಯಾಡ್ಮಿಂಟನ್. ತೀವ್ರಗತಿಯ ಕೈ ಚಳಕ ಹಾಗೂ ದೇಹ ಚಲನೆಯ ಅವಶ್ಯಕತೆ ಇರುವುದರಿಂದ, ಈ ಆಟದಲ್ಲಿ ಯಾವಾಗಲು ಯುವ ಜನಾಂಗದ್ದೇ ಪಾರುಪತ್ಯ.

ಸುಪ್ರಸಿದ್ದ ಆಟಗಾರರು ತಮ್ಮ ಯೌವನದಲ್ಲಿ ಈ ಆಟಕ್ಕೆ ವಿದಾಯ ಹೇಳುತ್ತಾರೆ. ಅವರಲ್ಲಿ ಧಾರವಾಡದ ಒಬ್ಬ ಅಥ್ಲೀಟ್ ಮೂವತೈದನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ರಂಗಕ್ಕೆ ಕಾಲಿಟ್ಟರು.
 
ಆಟದ ಹಿಂದೆ ಮುಂದೆ ಗೊತ್ತಿಲ್ಲದಿದ್ದರೂ ತನಗಿಂತ ಅರ್ಧ ವಯಸ್ಸಿನ ಯುವಕರೊಂದಿಗೆ ಆಟ ಕಲಿಯಲು ಶುರು ಮಾಡಿದ ಇವರು ಸುಮಾರು ಹದಿನೈದು ವರ್ಷಗಳವರೆಗೆ ಬ್ಯಾಡ್ಮಿಂಟನ್‌ನಲ್ಲಿ ಭಾರತೀಯ ಜೀವ ವಿಮಾ ನಿಗಮವನ್ನು (ಎಲ್‌ಐಸಿ) ಪ್ರತಿನಿಧಿಸಿದ್ದರು.

ಶಿಸ್ತಿನ ವ್ಯಕ್ತಿಯಾಗಿದ್ದರಿಂದ ಆಟವನ್ನು ಕರಗತ ಮಾಡಿಕೊಳ್ಳುವುದು ಇವರಿಗೆ ಕಷ್ಟವಾಗಲಿಲ್ಲ. ಭಾರತೀಯ ಜೀವ ವಿಮಾ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಇವರು, ನಿವೃತ್ತಿಯಾಗುವ 60ನೇ ವಯಸ್ಸಿಗೂ ಕೂಡ 20 ವರ್ಷದ ಯುವಕರೊಂದಿಗೆ ಸೆಣಸಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಧಾರವಾಡದಲ್ಲಿ ಎಂ.ಎಲ್.ಜೋಷಿ ಅವರ ಪರಿಚಯ ಇಲ್ಲದವರು ಅತಿ ವಿರಳ. ಯಕ್ಷಗಾನ, ರಂಗಭೂಮಿ, ಟ್ರೆಕ್ಕಿಂಗ್ ಹೀಗೆ ಎಲ್ಲದರಲ್ಲೂ ಹೆಜ್ಜೆ ಹಾಕಿದ್ದ ಅವರು ಅಂಧ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. ಕರ್ನಾಟಕದ ಕಲಾ ರಾಜಧಾನಿ ಧಾರವಾಡದಲ್ಲಿ ನಡೆಯುವ ಸಾಂಸ್ಕತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಿದ್ದರು.

ಮೋಹನ್ ಲಕ್ಷ್ಮಣರಾವ್ ಜೋಷಿ ಹುಟ್ಟಿದ್ದು ಅಂದಿನ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಹಾನಗಲ್‌ನಲ್ಲಿ. 19ನೇ ವಯಸ್ಸಿಗೆ ಭಾರತೀಯ ಜೀವ ವಿಮಾ ನಿಗಮವನ್ನು ಸೇರಿದ್ದ ಅವರು, 2500 ಹಾಗೂ 5000 ಮೀಟರ್ ಓಟದಲ್ಲಿ ಎಲ್.ಐ.ಸಿಯನ್ನು ಪ್ರತಿನಿಧಿಸಿದರು.

35ನೇ ವಯಸ್ಸಿಗೆ ಅಥ್ಲೆಟಿಕ್ಸ್‌ಗೆ ವಿದಾಯ ಹೇಳಿದ ಅವರು ಆರಿಸಿಕೊಂಡಿದ್ದು ಬ್ಯಾಡ್ಮಿಂಟನ್ ಅಂಗಳವನ್ನು. ಈ ಕ್ರೀಡೆಯೊಂದಿಗೆ ಅವರ ಸಂಬಂಧ ಎಷ್ಟು ಗಾಢವಾಗಿತ್ತೆಂದರೆ ವಿಧಿ ಎಂ.ಎಲ್ ಅವರ ಕೊನೆಯ ಉಸಿರನ್ನು ಬ್ಯಾಡ್ಮಿಂಟನ್ ಕೋರ್ಟ್‌ನಲ್ಲೆೀ ಬರೆದಿತ್ತು. 7ನೇ ಆಗಸ್ಟ್ 2011 ರಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರೆಫರಿ ಆಗಿ ಕರ್ತವ್ಯದಲ್ಲಿದ್ದಾಗ ಹೃದಯಘಾತದಿಂದ ಅಸುನೀಗಿದರು.

ಎಂ.ಎಲ್.ಜೋಷಿ ನೆನಪಿನಲ್ಲಿ ಧಾರವಾಡದಲ್ಲಿ ರಾಜ್ಯ ಮಟ್ಟದ ಮುಕ್ತಬ್ಯಾಡ್ಮಿಂಟನ್ ಟೂರ್ನಿಯನ್ನು ಎಂ.ಎಲ್. ಅವರ ಪತ್ನಿ ಶಶಿಕಲಾ ಜೋಷಿ ಧಾರವಾಡ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ನೆರವಿನಿಂದ ಸಂಘಟಿಸಿದ್ದರು. ಎರಡು ದಿನ ನಡೆದ ಈ ಟೂರ್ನಿಯಲ್ಲಿ ರಾಜ್ಯದ 60 ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಕ್ರೀಡಾಪಟು ಹಾಗೂ ವೃತ್ತಿಯಿಂದ ಪ್ಲಾಸ್ಟಿಕ್ ಸರ್ಜನ್ ಆಗಿರುವ ಡಾ.ರಂಜಿತ್ ಮಿರ್ಜಿ ಅವರು `45 ವರ್ಷಕ್ಕೂ ಮೇಲ್ಪಟ್ಟ ಆಟಗಾರರು ಅಂಗಳದಲ್ಲಿ ಓಡುವ, ಆಟವಾಡುವ ರೀತಿ ನೋಡಿದರೆ ಧಾರವಾಡದಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ಸುರಕ್ಷಿತವಾಗಿದೆ~ ಎಂದು ಹೇಳಿದರು.

ಬ್ಯಾಡ್ಮಿಂಟನ್ ಅಂದರೆ ಸಾಕಷ್ಟು ಇಷ್ಟಪಡುತ್ತಿದ್ದ ಎಂ.ಎಲ್. ತಮ್ಮ 60ನೇ ವಯಸ್ಸಿನಲ್ಲೂ ಕ್ರೀಡೆಗಾಗಿ ದೈಹಿಕ ಕ್ಷಮತೆಯನ್ನು ಕಾಯ್ದುಕೊಂಡಿದ್ದರು.

ಇಳಿ ವಯಸ್ಸಿನವರಿಗೂ ಈ ಆಟವನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ. ಇದರಿಂದ ತೆರೆಯ ಮರೆಯ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅವಕಾಶ ಕೊಡಲು ಸಾಧ್ಯವಾಗುತ್ತದೆ. ಈ ಟೂರ್ನಿಯನ್ನು ಪ್ರತಿ ವರ್ಷ ಆಯೋಜಿಸುವುದಾಗಿ ಶಶಿಕಲಾ ಜೋಷಿ ತಿಳಿಸಿದರು. 

ಕೇವಲ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುವ ಈ ಕಾಲದಲ್ಲಿ ಬ್ಯಾಡ್ಮಿಂಟನ್ ಉಳಿಯಲು ಈ ಮಾದರಿ ಪ್ರಯತ್ನ ತುಂಬಾ ಅಗತ್ಯ. ಎಂ.ಎಲ್ ಅವರಂಥ ಕ್ರೀಡಾಪಟುಗಳು ತಯಾರಾದರೆ ಧಾರವಾಡ ಬ್ಯಾಡ್ಮಿಂಟನ್ ರಂಗದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT