ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದ ಮಡಿಲಲ್ಲಿ ಕುಳಿತುಕೊಳ್ಳಿ...

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಸನ್ಯಾಸಿಗಳ ಗುಂಪೊಂದು ರೆಸ್ಟೊರೆಂಟ್ ಒಂದರಲ್ಲಿ ಊಟಕ್ಕೆ ಹೇಳಿತ್ತು. ಜಗತ್ತಿನ ವಿವಿಧ ಭಾಗಗಳಿಂದ ಆ ಪಂಥ ಅನುಸರಿಸುವ ಸನ್ಯಾಸಿಗಳೆಲ್ಲ ಧಾರ್ಮಿಕ ಸಮಾವೇಶಕ್ಕಾಗಿ ಮುಂಬೈಗೆ ಬಂದಿದ್ದರು. ಅವರೆಲ್ಲ ಕಟ್ಟುನಿಟ್ಟಾದ ಸಸ್ಯಾಹಾರಿಗಳು. ಸಸ್ಯಾಹಾರಕ್ಕೆ ಅವರೆಲ್ಲ ಆರ್ಡರ್ ನೀಡಿದ್ದರು.

ಗೊಂದಲದಿಂದಾಗಿ ರೆಸ್ಟೊರೆಂಟ್ ಸಿಬ್ಬಂದಿ ಮಾಂಸಾಹಾರಿ ಅಡುಗೆ ಬಡಿಸಿದರು. ಕೂಡಲೇ ಅಲ್ಲಿ ಹಾಹಾಕಾರ ಎದ್ದಿತು. ಕೆಲ ಯುವ ಸನ್ಯಾಸಿಗಳು ರೆಸ್ಟೊರೆಂಟ್ ಮೇಲ್ವಿಚಾರಕನ ಮೇಲೆ ಕೂಗಾಡಿದರು. ಮತ್ತೆ ಕೆಲವರು ಹೋಟೆಲ್ ವೇಟರ್‌ನ ಕೆನ್ನೆಗೆ ಬಾರಿಸಿದರು. ಆ ಕಿರಿಯ ಸನ್ಯಾಸಿಗಳೆಲ್ಲ ನೋಡುತ್ತಿದ್ದಂತೆ ಅವರ ಗುರು ಊಟಕ್ಕೆ ಮುಂಚಿನ ಪ್ರಾರ್ಥನೆ ಆರಂಭಿಸಿದ್ದ. ಅವರೆಲ್ಲ ಗುರುವಿನತ್ತ ಓಡಿದರು. ಇದು ಮಾಂಸಾಹಾರಿ ಅಡುಗೆ ಎಂದು ಗುರುವಿಗೆ ಹೇಳತೊಡಗಿದರು. ಅತಿ ಸಂಯಮದಿಂದ ಗುರು ಉತ್ತರಿಸಿದ. ಹೌದು.., ನನಗೆ ಗೊತ್ತು. ಈಗ ಅವಾಕ್ಕಾಗುವ ಸರದಿ ಶಿಷ್ಯಂದಿರದಾಗಿತ್ತು.

ನನ್ನ ಶಿಷ್ಯರು ಪ್ಲೇಟ್‌ನಲ್ಲಿರುವ ಕೋಳಿಗೆ ತೋರಿದಷ್ಟೇ ಕರುಣೆಯನ್ನು ಮನುಷ್ಯರಿಗೂ ತೋರಲೆಂದು ಪ್ರಾರ್ಥಿಸುತ್ತಿದ್ದೆ ಎಂದು ಗುರು ಹೇಳಿದ. ಸನ್ಯಾಸಿಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಈ ಒಂದು ಮಾತಿನ ಮೂಲಕ ಸನ್ಯಾಸಿಗಳ ಗುರು ಹೋಟೆಲ್ ಸಿಬ್ಬಂದಿಯೊಂದಿಗೆ ಅವರು ನಡೆದುಕೊಂಡ ರೀತಿ ಎಷ್ಟು ಅನುಚಿತವಾಗಿದೆ ಎಂದು ತಿಳಿಸಿಕೊಟ್ಟಿದ್ದ. ಯಾವುದೇ ಸಿದ್ಧಾಂತ, ತತ್ವದ ತಿರುಳು ಅರ್ಥ ಮಾಡಿಕೊಳ್ಳದೇ ಅದರ ಹೊರ ರೂಪಕ್ಕೆ, ಸಾಂಪ್ರದಾಯಿಕ ವಿಧಿ, ವಿಧಾನಗಳಿಗೆ ಎಷ್ಟು ಜೋತುಬೀಳುತ್ತೇವೆ ಎಂಬುದನ್ನು ಆ ಗುರು ತೋರಿಸಿಕೊಟ್ಟಿದ್ದ. ಕೂಡಲೇ ಆ ಸನ್ಯಾಸಿಗಳೆಲ್ಲ ನಾಚಿಕೆಯಿಂದ ಮೌನಕ್ಕೆ ಶರಣಾದರು.

 ಎರಡು ಪ್ರತಿಕ್ರಿಯೆಗಳು: ನಾವು ಮಾನವೀಯತೆಯನ್ನು ಮರೆತಾಗ, ಸ್ವೀಕರಿಸುವುದನ್ನು ಸಹಿಷ್ಣುತೆಯನ್ನು ತೊರೆದಾಗ ಎರಡು ಬಗೆಯಲ್ಲಿ ಪ್ರತಿಕ್ರಿಯಿಸುತ್ತೇವೆ. ಒಂದು ಖಿನ್ನತೆಯಿಂದ ಮತ್ತೊಂದು ಹಿಂಸೆಯಿಂದ. ಖಿನ್ನತೆಗೆ ಜಾರಿದಾಗ ಕೀಳರಿಮೆ, ಅಸ್ವಸ್ಥತೆ, ಆತ್ಮಹತ್ಯೆಯ ಭಾವನೆಗಳು, ಅನಾರೋಗ್ಯ, ಕಾತುರ, ದುಗುಡ ಎಲ್ಲವೂ ನಮ್ಮನ್ನು ಆವರಿಸುತ್ತದೆ.  ಹಿಂಸೆ ಸಂಬಂಧಗಳನ್ನು ತುಂಡರಿಸುತ್ತದೆ. ಮೋಸ, ಹೊಡೆತ, ಕೊಲೆ, ಭಯೋತ್ಪಾದನೆ, ಯುದ್ಧ ಹಿಂಸೆಯ ರೂಪಗಳು.ಮೇಲಿನ ಎರಡೂ ಪ್ರತಿಕ್ರಿಯೆಗಳಿಗೂ ಸಾಮಾನ್ಯವಾದುದ್ದೊಂದು ಇದೆ.

ದುಃಸ್ವಪ್ನ ಕಂಡಂತೆ ಅಂಧಕಾರದ ಹೊಂಡದೊಳಗೆ ಬೀಳುವುದು. ಇದು ನಮ್ಮ ಪ್ರಜ್ಞೆಗೆ ಅರಿವಿಲ್ಲದೇ ನಡೆಯುತ್ತದೆ.ಇದನ್ನು ನೆನಪಿಟ್ಟುಕೊಳ್ಳಿ. ದೈವಿಕ ಪ್ರಜ್ಞೆಯ ಭಾಗವಾಗಿರಲು ನಾವು ಯಾವಾಗಲೂ ಜ್ಞಾನದ ಕಾಲ ಬಳಿ ಕುಳಿತಿರಬೇಕು.

-ಪ್ರೀತಿ ಎಂಬುದು ಮೌಲ್ಯಗಳಲ್ಲೇ ಅತ್ಯುತ್ತಮವಾದುದ್ದು. ಕೋಪ ಅದಕ್ಷತೆಯ ಅಲೆಗಳನ್ನು ತಣ್ಣಗೆ ಮಾಡಲಾರದು. ಪ್ರೀತಿ ಮಾತ್ರ ಅದನ್ನು ತಣ್ಣಗಾಗಿಸಬಲ್ಲದು.

-ಜ್ಞಾನೋದಯವಾಗಲು ನೀವು ಯಾವುದನ್ನು ತ್ಯಜಿಸುತ್ತೀರಿ, ಯಾವುದನ್ನು ತ್ಯಜಿಸುವುದಿಲ್ಲ ಎಂಬುದು ಮುಖ್ಯವಲ್ಲ. ಅಹಂಕಾರವನ್ನು ಮಾತ್ರ ತ್ಯಜಿಸಲೇಬೇಕು.

-ಮತ್ತೊಬ್ಬರ ಮುಖದಲ್ಲಿ ನಗು ಅರಳಿಸಲು ನಾವು ಇಲ್ಲಿದ್ದೇವೆ. ಅವರನ್ನು ಅಳಿಸಲು ಅಲ್ಲ.

- ಶುದ್ಧ ಆಹಾರ, ಶುದ್ಧ ಪೇಯಕ್ಕಿಂತ ಶುದ್ಧವಾದುದ್ದು ಶುದ್ಧ ಮನಸ್ಸು.

- ನಿಮ್ಮ ಇಚ್ಛೆಯಂತೆ ಯಾವುದೂ ನಡೆಯದಿದ್ದಾಗ ಸುಮ್ಮನೆ ಕುಳಿತು ಏನಾಗುತ್ತದೋ ಎಂದು ನೋಡಿ. ಯಾವುದೋ ತಪ್ಪನ್ನು ದುರಂತವಾಗಿಸುವುದು ಏಕೆ?

ನಿಮ್ಮ ಯೋಚನೆಯನ್ನು ಬದಲಿಸಿಕೊಳ್ಳಿ:
ಯಾವುದೋ ಪಾರ್ಟಿ, ಸಮಾರಂಭ, ಸಂದರ್ಶನ ಅಥವಾ ಸಭೆಗೆ ಮುನ್ನ ನಿಮ್ಮ ಯೋಚನೆಯನ್ನು ಬದಲಿಸಿಕೊಳ್ಳಿ.
ಆರಾಮಾಗಿ ಕುಳಿತುಕೊಳ್ಳಿ. ನಿಮ್ಮ ಕಣ್ಣು ಮುಚ್ಚಿಕೊಳ್ಳಿ. ದೇಹವನ್ನು ತಲೆಯಿಂದ ಕಾಲಿನ ತನಕ ಸಡಿಲಿಸಿಕೊಳ್ಳಿ. ಈಗ 20 ಸಲ ಉಸಿರಾಡಿ. ಮೂಗಿನಿಂದ ಶ್ವಾಸ ಎಳೆದುಕೊಳ್ಳುವಾಗ ಹೊಟ್ಟೆಯನ್ನು ಉಬ್ಬಿಸಿ. ಉಸಿರು ಬಿಡುವಾಗ ಹೊಟ್ಟೆ ಚಪ್ಪಟೆಯಾಗಲಿ.

ನಿಮ್ಮ ದೇಹ ಮತ್ತು ಮನಸ್ಸು  ಪ್ರಶಾಂತವಾದ, ಸ್ತಬ್ಧ ಸ್ಥಿತಿ ತಲುಪುವತನಕ ಹೀಗೆ ಮಾಡಿ.ಜನರಿಂದ ತುಂಬಿರುವ ಕೋಣೆಗೆ ನೀವು ಕಾಲಿಡುತ್ತೀರಿ ಎಂದು ಕಲ್ಪಿಸಿಕೊಳ್ಳಿ. ನಿಮ್ಮ ದೇಹದಿಂದ ಶಾಂತಿಯ ಕಿರಣಗಳು ಹೊಂಬಣ್ಣದ ರೂಪ ತಾಳಿ ಹೊರಹೊಮ್ಮುತ್ತಿವೆ ಎಂದುಕೊಳ್ಳಿ.

ನಿಶ್ಶಬ್ದವಾಗಿ ಈ ವಾಕ್ಯ ಹೇಳಿಕೊಳ್ಳಿ ಅಥವಾ ಬರೆಯಿರಿ. ನಾನು ನನ್ನ ಸಾಧನೆಯಲ್ಲ. ನಾನು ನನ್ನ ಸಂಪತ್ತು ಅಲ್ಲ. ನಾನು ನನ್ನ ವರ್ಚಸ್ಸು ಅಲ್ಲ. ನಾನೆಂದರೆ ನಾನು ಕಲಿತಿರುವುದೂ ಅಲ್ಲ. ನಾನೊಂದು ಪ್ರೀತಿ ತುಂಬಿದ ಆತ್ಮ. ಮತ್ತೊಂದು ಆತ್ಮವನ್ನು ಭೇಟಿಯಾಗಲು ಹೊರಡುತ್ತಿದ್ದೇನೆ. ನನ್ನ ಸಂತಸ ಹಾಗೂ ಬಲವನ್ನು ಆ ಆತ್ಮದೊಂದಿಗೆ ಹಂಚಿಕೊಳ್ಳುತ್ತಿರುವೆ ಅಂದುಕೊಳ್ಳಿ.

ಯಾವುದೇ ಸಮಾರಂಭಕ್ಕೆ ಮುನ್ನ ನಮ್ಮಲ್ಲಿ ಕಾತುರತೆ ಇರುತ್ತದೆ. ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ಚಿಂತೆ ಮತ್ತು ಭಯವನ್ನು ಸಂತಸ ಮತ್ತು ಪ್ರೀತಿಯಾಗಿ ಪರಿವರ್ತಿಸಬಹುದು. ಋಣಾತ್ಮಕ ವ್ಯಕ್ತಿಗಳನ್ನು ಭೇಟಿಯಾಗುತ್ತಿರುವುದಾಗ ನಮ್ಮ ಆತ್ಮದ ‘ಐಡಿ’ಯ ಸತತವಾಗಿ ಸಂಪರ್ಕದಲ್ಲಿರಬೇಕು. ತನ್ಮೂಲಕ ಆ ವ್ಯಕ್ತಿ ಎಷ್ಟೇ ಕಿರಿಕಿರಿಯಾಗುವಂತೆ ಮಾತನಾಡಿದರೂ ತಾಳ್ಮೆ ಕಳೆದುಕೊಳ್ಳಬಾರದು.

ಯಾರನ್ನೂ ಭೇಟಿಯಾಗಬೇಕಾದರೂ ಅವರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ? ನಾನು ಅವರಿಗೆ ಹೇಗೆ ಕಾಣುತ್ತೇನೆ ಎಂದು ಚಿಂತಿಸುವ ಬದಲು, ಈ ಭೇಟಿಯಲ್ಲಿ ನಾನು ಆ ವ್ಯಕ್ತಿಗೆ ಏನನ್ನು ಪ್ರೀತಿಯಿಂದ ಕೊಡಬೇಕು, ಕೊಡಬಲ್ಲೆ ಎಂದು ಯೋಚಿಸಿ. ಈಗ ನಿಮ್ಮ ಆತ್ಮವಿಶ್ವಾಸ ನಿಮಗೇ ಬೆರಗು ಮೂಡಿಸುತ್ತದೆ. ಈ ಮನೋಭಾವದಲ್ಲಿ ಹೊರಟಾಗ ಪ್ರತಿಯೊಬ್ಬರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತದೆ.
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT