ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿ ಉದಯ್ ಆಸ್ಪತ್ರೆಯಿಂದ ಮನೆಗೆ

Last Updated 21 ಡಿಸೆಂಬರ್ 2013, 20:03 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂನಲ್ಲಿ ದುಷ್ಕರ್ಮಿ­ಯಿಂದ ತೀವ್ರ ಹಲ್ಲೆಗೆ ಒಳಗಾಗಿ ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದ  ಜ್ಯೋತಿ ಉದಯ್ ಅವರು ಕೊನೆಗೂ ಗುಣಮುಖರಾಗಿದ್ದು,  ಶನಿವಾರ ಮನೆಗೆ ತೆರಳಿದರು.

ನ.19 ರಂದು ಜೆ.ಸಿ.ರಸ್ತೆಯಲ್ಲಿರುವ   ಕಾರ್ಪೋರೇಷನ್ ಬ್ಯಾಂಕ್‌ನ ಎಟಿಎಂ­ನಲ್ಲಿ  ಹಣ ತೆಗೆಯಲು ಹೋಗಿದ್ದ  ಜ್ಯೋತಿ ಅವರ ಮೇಲೆ ದುಷ್ಕರ್ಮಿಯೊ­ಬ್ಬನಿಂದ ತೀವ್ರ ಹಲ್ಲೆಯಾಗಿತ್ತು. ಹಲ್ಲೆ­ಯಾಗಿ  ಒಂದು ತಿಂಗಳ ಅವಧಿಯಲ್ಲಿ ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಯಾತನೆಯನ್ನು ಇದೇ ಮೊದಲ ಬಾರಿಗೆ  ಪತ್ರಕರ್ತರೊಂದಿಗೆ ಹಂಚಿಕೊಂಡರು.

‘ನನಗಾಗಿರುವಂತೆ ಬೇರೆ ಯಾರಿಗೂ ಆಗಬಾರದು.  ಆರೋಪಿ­ಯನ್ನು ಪೊಲೀಸರು  ಪತ್ತೆ ಹಚ್ಚಿದ ಕ್ಷಣ ನನಗೆ ನ್ಯಾಯ ಸಿಕ್ಕಂತೆ’ ಎಂದು ತಿಳಿಸಿದರು.

‘ನಾನಿಲ್ಲದೇ ಬೇರೆ ಯಾರೇ ಇದ್ದರೂ ಈ ಘಟನೆ ನಡೆಯುತ್ತಿತ್ತು. ಜನಸಂದಣಿ ಇರುವ ಜಾಗದಲ್ಲಿ ಕೊಲೆಗಡುಕನೊಬ್ಬ ಹಲ್ಲೆ ಮಾಡಿ, ಸುಖಾಸುಮ್ಮನೆ  ನಡೆದು­ಬಿಡುತ್ತಾನೆ ಎಂಬುದನ್ನು ನೆನೆಸಿ­ಕೊಂಡರೆ ನಾವಿರುವ ಕಾಲದ ಬಗ್ಗೆಯೇ ನಡುಕ ಹುಟ್ಟುತ್ತದೆ’ ಎಂದು ಹೇಳಿದರು.

ಇಬ್ಬರನ್ನು ನೆನೆಯಲೇಬೇಕು: ‘ಎಟಿಎಂ ಕೇಂದ್ರದಿಂದ ಹೊರಗೆ ಕರೆದುಕೊಂಡು ಬಂದ  ಇಬ್ಬರು  ಪುಣ್ಯಾತ್ಮರು  ಆಟೊ­ದಲ್ಲಿ ಕೂರಿಸಿ ‘ಹೇಗಾದರೂ ಸರಿ ಇವರ ಪ್ರಾಣ ಉಳಿಸಬೇಕು’ ಎಂದು ಮಾತ­ನಾಡಿಕೊಳ್ಳುತ್ತಿದ್ದರು. ಅರೆ ಪ್ರಜ್ಞಾವಸ್ಥೆ­ಯಲ್ಲಿದ್ದ ನನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು  ಹೋದರು. ಆ ಅಪರಿಚಿತ ಮಹಾನುಭಾವರು ಯಾರೆಂಬುದು ಈವರೆಗೂ ತಿಳಿದಿಲ್ಲ. ಆದರೆ ನನ್ನ  ಜೀವ ಕಾಪಾಡಿದ ಅವರಿಗೆ ಇಲ್ಲಿಂದಲೇ ಕೈಮುಗಿಯುತ್ತೇನೆ’ ಎಂದು ಭಾವುಕರಾದರು. 

‘ಪ್ರಜ್ಞೆ ಬಂದಾಗ ನನ್ನ ದೇಹದ ಬಲಭಾಗ ಸ್ವಾಧೀನ ಕಳೆದುಕೊಂಡಿತ್ತು. ನಡೆಯಲು ಸಾಧ್ಯವಾಗುತ್ತಿರಲಿಲ್ಲ.  ದೈಹಿಕ ಯಾತನೆ, ಮಗಳನ್ನು ಬಿಟ್ಟಿರುವ ನೋವು ಎಲ್ಲವೂ ಒಟ್ಟುಗೂಡಿ ಬದುಕು ದುಸ್ತರವೆನಿಸಿತ್ತು. ಆದರೆ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರು ನೀಡಿದ ಸಹಕಾರ, ಬದುಕಬೇಕೆಂಬ ಬಹುದೊಡ್ಡ ಆಸೆ ನನ್ನನ್ನು ಬದುಕಿಸಿದೆ’ ಎಂದು ಕ್ಷಣ ಕಾಲ ಸುಮ್ಮನಾದರು.

ದುಷ್ಕರ್ಮಿಯನ್ನು ಹಿಡಿಯುವುದು ಕಷ್ಟವಲ್ಲ!: ‘ಸಿಸಿಟಿವಿ ದೃಶ್ಯಾವಳಿಗಳಿವೆ. ಅನ್ಯಾಯವೆಸಗಿದ ದುಷ್ಕರ್ಮಿಯನ್ನು ಹಿಡಿಯುವುದು ಕಷ್ಟವೇನಲ್ಲ. ಬಲವಾದ ಇಚ್ಛಾಶಕ್ತಿ ತೋರ್ಪ­ಡಿ­ಸಿ­ದರೆ, ಆತನನ್ನು ಖಂಡಿತವಾಗಿ ಹಿಡಿ­ಯಬಹುದು’ ಎಂದು ಅಭಿಪ್ರಾಯಪಟ್ಟರು.

‘ಆರೋಗ್ಯ ಸುಧಾರಿಸಿದೆ. ನಡೆಯಲು ಶಕ್ತಳಾಗಿದ್ದೇನೆ. ಬರೆಯಲು ಹಾಗೂ ಟೈಪಿಂಗ್ ಮಾಡಲು ಬೆರಳುಗಳಿಗೆ ಇನ್ನಷ್ಟು ಸಂವೇದನೆ ಬರಬೇಕಿದೆ. ಶೀಘ್ರದಲ್ಲೇ ಕಚೇರಿಗೆ ತೆರಳುತ್ತೇನೆ. ಮಗಳಿಗೆ ಘಟನೆಯ ಬಗ್ಗೆ ಮಾಹಿತಿ  ಇದೆ. ಮನೆಗೆ ತೆರಳಿ ಮಗಳೊಂದಿಗೆ ಖುಷಿಯಾಗಿರಲು ಬಯಸುತ್ತೇನೆ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು ಹೀಗಾಗುತ್ತಿರಲಿಲ್ಲ: ‘ಎಟಿಎಂ  ಕಾರ್ಡ್ ಸ್ವೈಪ್ ಮಾಡಿದರೆ ಮಾತ್ರ ಬಾಗಿಲು ತೆರೆಯುವ ವ್ಯವಸ್ಥೆ ಎಲ್ಲಾ ಎಟಿಎಂ ಕೇಂದ್ರಗಳಲ್ಲಿ ಇರಬೇಕು. ಆದರೆ, ದುರದೃಷ್ಟಕ್ಕೆ ನಾನು ಬಳಕೆ ಮಾಡಿದ್ದ ಎಟಿಎಂನಲ್ಲಿ ಆ ವ್ಯವಸ್ಥೆ ಇರಲಿಲ್ಲ. ಹಾಗೊಮ್ಮೆ ಇದ್ದಿದ್ದರೆ ಹೀಗಾಗುತ್ತಿರ­ಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ. ವೆಂಕಟರಮಣ ಮಾತನಾಡಿ, ‘ಗುಣ­ಮಖ­ರಾಗಲು 2 ತಿಂಗಳಾದರೂ ಬೇಕಾ­ಗ­ಬಹುದು ಎಂದು ಅಂದಾಜಿಸ­ಲಾ­ಗಿತ್ತು. ಆದರೆ, ಜ್ಯೋತಿ ಅವರಲ್ಲಿ­ರುವ ಆತ್ಮವಿಶ್ವಾಸದಿಂದ ಬಹುಬೇಗ ಚೇತರಿಸಿ­ಕೊಂಡಿದ್ದಾರೆ’ ಎಂದು ತಿಳಿಸಿದರು.
‘ಮಿದುಳಿಗೆ ಮತ್ತೊಮ್ಮೆ ಪೆಟ್ಟಾಗ­ದಂತೆ, ನರವ್ಯೂಹಕ್ಕೆ ತೊಂದರೆಯಾಗ­ದಂತೆ ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿತ್ತು. ಆದರೆ ಆ ಸವಾಲು­ಗಳನ್ನು ಬಹಳ ಧೈರ್ಯವಾಗಿ ಎದುರಿಸಿ­ದ್ದಾರೆ’ ಎಂದ ಅವರು. ‘ಒಂದು ತಿಂಗಳಲ್ಲಿ ಎಂದಿನಂತೆ ಕಚೇರಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸದ್ಯ ದಿನಕ್ಕೆ ಎರಡು ಬಾರಿಯಾದರೂ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ’ ಎಂದರು.

‘ಜ್ಯೋತಿ ಅವರ  ವೈದ್ಯಕೀಯ ವೆಚ್ಚವನ್ನು ಕಾರ್ಪೋರೇಷನ್ ಬ್ಯಾಂಕ್ ಭರಿಸಿದೆ. ಅಲ್ಲದೇ ಆಸ್ಪತ್ರೆಯು ಕೆಲವು ಸೇವೆಗಳನ್ನು ಉಚಿತವಾಗಿ ನೀಡಿದೆ’ ಎಂದು ತಿಳಿಸಿದರು.

ಹೊಸ ವರ್ಷದ ಉಡುಗೊರೆ: ‘ಅಪ­ಘಾತ, ಅವಘಡಗಳು ಸಂಭವಿಸಿ­ದಾಗ ವೈದ್ಯರಿಂದ ಉಚಿತವಾಗಿ  ವೈದ್ಯಕೀಯ ಮಾಹಿತಿ ಪಡೆಯಲು ಆಸ್ಪತ್ರೆಯು ‘1062’ ಸಹಾಯವಾಣಿ­ಯನ್ನು ಹೊಸ­ವರ್ಷದಿಂದ ಆರಂಭಿಸ­ಲಿದೆ’ ಎಂದು ಮಾಹಿತಿ ನೀಡಿದರು.

ಹಣ ತುಂಬಲು ಬಂದ ಸಿಬ್ಬಂದಿ ಎಂದು ಭಾವಿಸಿದೆ

‘ನಾನು ಕಾರ್ಯ­ನಿರ್ವಹಿಸುತ್ತಿದ್ದ ಕಾರ್ಪೋರೇಷನ್ ಬ್ಯಾಂಕಿಗೆ ಅಂದು ಬೆಳಗಿನ ಪಾಳಿ ಇದ್ದುದ್ದರಿಂದ ಹಲವು ವರ್ಷಗಳಿಂದ ಬಳಕೆ ಮಾಡುತ್ತಿದ್ದ ಜೆ.ಸಿ.ರಸ್ತೆಯ ಕಾರ್ಪೋರೇಷನ್ ಬ್ಯಾಂಕ್ ಎಟಿಎಂಗೆ ಹೋದೆ. ಆಗಂತುಕ ಬಂದು ಏಕಾಏಕಿ  ಷಟರ್  ಎಳೆದಾಗ, ಸಿಬ್ಬಂದಿಯೊಬ್ಬರು  ಹಣ ತುಂಬಲು ಬಂದಿರಬೇಕು ಎಂದು ಭಾವಿಸಿದೆ.  ಆದರೆ, ಆತ ಸಮೀಪ ಬಂದಾಗಷ್ಟೆ ಕೊಲೆಗಡುಕ ಎಂಬುದು ಅರಿವಾಗಿತ್ತು’ ಎಂದು ನೆನಪಿಸಿಕೊಂಡರು.

‘ಕೂಗಬೇಡ, ಕೂಗಿದರೆ, ಸಾಯಿಸಿಬಿಡ್ತಿನಿ.... ಹಣ ಎಷ್ಟಿದೆ ಹೇಳು?’ ಅಂತ   ಹೆದ­ರಿ­ಸಿದ್ದ. ಆದರೆ , ನಾನು ‘ಮಗಳ ಶಾಲೆಯ ಶುಲ್ಕಕ್ಕೆ ಹಣ ತೆಗೆಯುತ್ತಿದ್ದೇನೆ. ಹೆಚ್ಚಿಲ್ಲ’ ಎಂದು ಧೈರ್ಯವಾಗಿಯೇ ಉತ್ತರಿಸಿದ್ದೆ. ಆಟಿಕೆಯಂತಿದ್ದ ಪಿಸ್ತೂಲು ತೋರಿ­ಸಿದ್ದ, ಧೃತಿ­ಗೆಡಲಿಲ್ಲ.  ಮಚ್ಚಿನಿಂದ   ತಲೆಗೆ ಹೊಡೆದ  ಮೇಲೆ ಜ್ಞಾನ ತಪ್ಪಿತ್ತು. 3 ಗಂಟೆ ಕಾಲ ಎಟಿಎಂ ಕೇಂದ್ರದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದೆ’ ಎಂದು ಗದ್ಗದಿತರಾದರು.

‘ಮತ್ತೆ ಎಚ್ಚರವಾಯ್ತು.  ನನಗೆ ಆಗಿರುವ  ತೊಂದರೆಯ ಬಗ್ಗೆ ಕಚೇರಿಯ ಅಧಿಕಾರಿ­ಗಳಿಗೆ ತಿಳಿಸುವ ಸಲುವಾಗಿ ಬ್ಯಾಗ್ ಹುಡುಕಿದರೆ ಮೊಬೈಲ್ ಇರಲಿಲ್ಲ. ತಲೆ­ಯಲ್ಲಿ ರಕ್ತಸೋರುತ್ತಿತ್ತು. ದೇಹದ ಬಲಭಾಗ ಸಂವೇದನೆ  ಕಳೆದುಕೊಂಡಿತ್ತು. ಹೊಟ್ಟೆ­ಯಲ್ಲಿ ಸಂಕಟ ಎಲ್ಲವನ್ನು ಸಹಿಸಿಕೊಂಡು ತೆವಳಿಕೊಂಡೇ ಬಾಗಿಲ ಬಳಿ ಬಂದು ‘ಯಾರಾದರೂ ಕಾಪಾಡಿ’ ಎಂಬ ಆರ್ತನಾದ ಹೊರಡಿಸಿದ್ದೆ’ ಎಂದು ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT