ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿರ್ಲಿಂಗ ದರ್ಶನ

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಿಶ್ವೇಶ್ವರ: ಕಾಶಿ, ವಾರಣಾಸಿ, ಬನಾರಸ್ ಹೆಸರುಗಳಿಂದ ಪ್ರಸಿದ್ಧ ಈ ಕ್ಷೇತ್ರ. ಉತ್ತರಪ್ರದೇಶ ರಾಜ್ಯದ ಈ ವಾರಣಾಸಿಯಲ್ಲಿ ವಿಶಾಲಾಕ್ಷಿ ಸಮೇತ ವಿಶ್ವೇಶ್ವರ ಅಥವಾ ವಿಶ್ವನಾಥ ದೇವಾಲಯ ಇದೆ. ಗಂಗಾ ನದಿ ತೀರದಲ್ಲಿ ಇರುವ ಈ ದೇವಾಲಯ ನಿರ್ಮಾಣ ಸಂಬಂಧ ಸಾಕಷ್ಟು ಪುರಾಣ ಕತೆಗಳಿವೆ.ವೈದ್ಯನಾಥೇಶ್ವರ:  ಜಾರ್ಖಂಡ್ ರಾಜ್ಯದ ಸಂತಾಲ ಪರಗಣ ವಿಭಾಗಕ್ಕೆ ಬರುವ ದಿಯೋಗರಾದಲ್ಲಿದೆ ವೈದ್ಯನಾಥ ದೇವಾಲಯ.

ತನ್ನ ಹತ್ತು ತಲೆಗಳನ್ನು ಶಿವನಿಗೆ ಅರ್ಪಿಸುತ್ತಾ ಶಿವಧ್ಯಾನ ಮಾಡುವ ರಾವಣನ ಎದುರು ಪ್ರತ್ಯಕ್ಷನಾದ ಶಿವ ಅವನಿಗೆ ಚಿಕಿತ್ಸೆ ನೀಡಿ ಬದುಕಿಸುತ್ತಾನೆ.ವೈದ್ಯನ ಪಾತ್ರ ನಿರ್ವಹಿಸುವ ಶಿವನೇ ಅಲ್ಲಿ ವೈದ್ಯನಾಥೇಶ್ವರನಾಗುತ್ತಾನೆ. ವೈದ್ಯನಾಥ ಜ್ಯೋತಿರ್ಲಿಂಗ ಎಲ್ಲಿದೆ ಎಂಬುದು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಶಂಕರಾಚಾರ್ಯರ ಹೇಳಿಕೆಗೆ ದಿಯೋಗರಾದ ವೈದ್ಯನಾಥೇಶ್ವರ ದೇವಾಲಯ ಸಾಕಷ್ಟು ಹೋಲುತ್ತದೆ ಎನ್ನಲಾಗುತ್ತದೆ. ಹಾಗೆಯೇ 51 ಶಕ್ತಿ ಪೀಠಗಳಲ್ಲಿ ಬರುವ ಯೋನಿ ಪೀಠ ಕೂಡ ಇಲ್ಲಿದೆ.

ಇದಲ್ಲದೇ ಮಹಾರಾಷ್ಟ್ರದ ಪಾರ್ಲಿಯ ವೈಜನಾಥ ದೇವಾಲಯ, ಹಿಮಾಚಲ ಪ್ರದೇಶದ  ಬೈಜನಾಥದಲ್ಲಿರುವ ಬೈಜನಾಥ್ ದೇವಾಲಯವನ್ನು ಕೂಡ ವೈದ್ಯನಾಥೇಶ್ವರನ ಸನ್ನಿಧಿ ಎನ್ನಲಾಗುತ್ತದೆ. ಮಹಾಕಾಳೇಶ್ವರ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇದೆ ಮಹಾಕಾಳೇಶ್ವರ ಸನ್ನಿಧಿ. ರುದ್ರ ಸಾಗರ ಹೆಸರಿನ ಸರೋವರದ ಅಂಚಿನಲ್ಲಿರುವ ಈ ಕ್ಷೇತ್ರದಲ್ಲಿ ಕೋಟಿ ತೀರ್ಥ ಜಿನುಗುತ್ತದೆ ಎಂಬ ಪ್ರತೀತಿ ಇದೆ. ಮಹಾಕಾಳೇಶ್ವರ ದಕ್ಷಿಣಕ್ಕೆ ಮುಖ ಮಾಡಿರುವುದು ಒಂದು ವಿಶೇಷ. ಕತ್ತಲೆಯಿಂದ ಹುಟ್ಟಿದ ಅಂಧಕಾಸುರನನ್ನು (ಕಾಲಅಸುರ- ಕಪ್ಪುಅಸುರ) ಕೊಂದ ಕಾರಣ ಈಶ್ವರನಿಗೆ ಮಹಾಕಾಳೇಶ್ವರ ಎಂಬ ನಾಮ ಬಂತು ಎನ್ನಲಾಗುತ್ತದೆ.

ಸೋಮನಾಥ: ಗುಜರಾತ್‌ನ ಇತಿಹಾಸ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿದ್ದಾನೆ ಸೋಮನಾಥ. ಗುಜರಾತ್‌ನ ಪಶ್ಚಿಮ ತೀರ ಪ್ರದೇಶದ ಸೌರಾಷ್ಟ್ರದ ವರೇವಾಲ್ ಹತ್ತಿರದಲ್ಲಿರುವ ಪ್ರಭಾಸ್ ಕ್ಷೇತ್ರದಲ್ಲಿ ದೇವಾಲಯ ಇದೆ. ಅದು ಆರು ಭಾರಿ ವಿರೋಧಿಗಳ ದಾಳಿಗೆ ತುತ್ತಾಯಿತು. ಪುರಾಣದ ಪ್ರಕಾರ ಚಂದ್ರನ ಇನ್ನೊಂದು ಹೆಸರು ಸೋಮ.ಅವನು ಶಿವನನ್ನು ಆರಾಧಿಸಲು ಕಟ್ಟಿದ ದೇವಾಲಯ ಸೋಮನಾಥ ದೇವಾಲಯ ಎನಿಸಿಕೊಂಡಿತು
ಎನ್ನಲಾಗುತ್ತದೆ.

ಪುರಾತನ ದೇವಾಲಯ ಸಂಪೂರ್ಣ ನಾಶವಾಗಿದ್ದು ಅದನ್ನು 649ರಲ್ಲಿ  ಯಾದವ ರಾಜ ವಲ್ಲಭಿ ಎರಡನೇ ಬಾರಿಗೆ ಪುನರ್ ನಿರ್ಮಿಸಿದ ಎನ್ನಲಾಗುತ್ತದೆ.ಮಲ್ಲಿಕಾರ್ಜುನ: ಆಂಧ್ರಪ್ರದೇಶ ನಲ್ಲಮಲ ಬೆಟ್ಟ ಪ್ರದೇಶದಲ್ಲಿದೆ ಶ್ರೀಶೈಲಂ. ಕರ್ನೂರು ಜಿಲ್ಲೆಗೆ ಸೇರಿದ ಈ ದೇವಾಲಯ ಕೃಷ್ಣ ನದಿ ತೀರದಲ್ಲಿದೆ. ಮಲ್ಲಿಕಾರ್ಜುನ ಸ್ವಾಮಿ ಭ್ರಮರಾಂಭ ದೇವಿಯೊಂದಿಗೆ ಇಲ್ಲಿ ನೆಲೆನಿಂತಿದ್ದಾನೆ. ಇಲ್ಲಿಯೇ ಶಂಕರಾಚಾರ್ಯ ಶಿವಾನಂದ ಲಹರಿ ಬರೆದಿದ್ದು ಎನ್ನಲಾಗುತ್ತದೆ.

ನಂದಿಯ ತಪಸ್ಸಿಗೆ ಮೆಚ್ಚಿ ಮಲ್ಲಿಕಾರ್ಜುನ ಮತ್ತು ಭ್ರಮರಾಂಭರಾಗಿ ಶಿವ-ಪಾರ್ವತಿ ಪ್ರತ್ಯಕ್ಷರಾದ ಕತೆಯನ್ನು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳಲಾಗುತ್ತದೆ. ಓಂಕಾರೇಶ್ವರ: ಮಧ್ಯಪ್ರದೇಶ ರಾಜ್ಯದ ಖಾಂಡ್ವಾ ಜಿಲ್ಲೆಗೆ ಸೇರಿದ ಊರು ಶಿವಪುರಿ. ಅದು ನರ್ಮದಾ ನದಿ ಸುತ್ತುವರಿದ ದ್ವೀಪ. ಅದನ್ನು ಶಿವಪುರಿ ಅಥವಾ ಮಂಡಟ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ದ್ವೀಪ ಓಂ ಚಿಹ್ನೆಯನ್ನು ಹೋಲುತ್ತದೆ ಎನ್ನಲಾಗುತ್ತದೆ. ಈ ಸುಂದರ ಕ್ಷೇತ್ರದಲ್ಲಿ ಓಂಕಾರೇಶ್ವರನ ಸನ್ನಿಧಿ ಇದೆ.

ಕೇದಾರನಾಥ: ಉತ್ತರಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಗೆ ಸೇರಿದ ನಾಗರ ಪಂಚಾಯತ್‌ನಲ್ಲಿದ್ದಾನೆ ಕೇದಾರನಾಥ. ಮಂದಾಕಿನಿ ನದಿ ತೀರದ ಈ ದೇವಾಲಯ ಸಮುದ್ರ ಮಟ್ಟದಿಂದ 3584 ಮೀಟರ್ ಎತ್ತರದ ಹಿಮಾಲದಯಲ್ಲಿದೆ. ಭೀಮಾಶಂಕರ: ಮಹಾರಾಷ್ಟ್ರದ ಪೂನಾ ಸಮೀಪ ಇರುವ ಭೋರ್‌ಗಿರಿ ಹಳ್ಳಿಯಲ್ಲಿ ಭೀಮಾಶಂಕರನ ಸನ್ನಿಧಿ ಇದೆ. ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಇರುವ ಈ ದೇವಾಲಯ ಭೀಮಾನದಿ ತೀರದಲ್ಲಿದೆ. ಪೂನಾದಿಂದ 110 ಕಿ.ಮೀ ದೂರದಲ್ಲಿದೆ.

ತ್ರಯಂಬಕೇಶ್ವರ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ತ್ರಯಂಬಕ್‌ನಲ್ಲಿದೆ ತ್ರಯಂಬಕೇಶ್ವರ ದೇವಾಲಯ. ಗೋದಾವರಿ ನದಿ ಈ ದೇವಾಲಯ ಸಮೀಪ ಹರಿಯುತ್ತದೆ. ರಾಮೇಶ್ವರ:  ತಮಿಳುನಾಡಿನ ರಾಮನಾಥ ಜಿಲ್ಲೆಗೆ ಸೇರಿದ ರಾಮೇಶ್ವರ ದ್ವೀಪ ಅಥವಾ ಪಂಬನ್ ದ್ವೀಪದಲ್ಲಿದ್ದಾನೆ ರಾಮೇಶ್ವರ. ರಾಮ ಖುಷಿಯಗಳ ಆದೇಶದಂತೆ ಲಕ್ಷ್ಮಣ  ಮತ್ತು ಸೀತೆ ಜೊತೆಗೂಡಿ ಇಲ್ಲಿ ರಾಮಲಿಂಗ ಸ್ಥಾಪಿಸಿದ ಎನ್ನಲಾಗುತ್ತದೆ.
 
ಗುಶ್ಮೇಶ್ವರ: ಮಹಾರಾಷ್ಟ್ರದ ಈಗಿನ ದೌಲತಾಬಾದ್(ದೇವಗಿರಿ)ನಿಂದ 11 ಕಿಮೀ ದೂರದಲ್ಲಿರುವುದೇ ಗುಶ್ಮೇಶ್ವರ. ಔರಂಗಾಬಾದ್ ಮತ್ತು ಎಲ್ಲೋರ ಗುಹೆಗಳಿಗೆ ಹತ್ತಿರದಲ್ಲಿದೆ ಈ ಕ್ಷೇತ್ರ. 16ನೇ ಶತಮಾನದಲ್ಲಿ ಮಾಲೋಜಿ ರಾಜೆ ಬೋಂಸ್ಲೆ ಈ ದೇವಾಲಯದ ಜೀರ್ಣೋದ್ಧಾರ ಮಾಡಿದ ಎನ್ನಲಾಗುತ್ತದೆ.

ನಾಗೇಶ್ವರ: ಉತ್ತರಖಂಡ ರಾಜ್ಯದ ಅಲ್ಮೋರ ಹತ್ತಿರ ಇರುವುದೇ ನಾಗೇಶ್ವರ. ಅದು ಪ್ರಥಮ ಜ್ಯೋತಿರ್ಲಿಂಗ ಎಂಬ ಪ್ರತೀತಿ ಪಡೆದ ಕ್ಷೇತ್ರ. ಆದರೆ ಗುಜರಾತ್‌ನ ದ್ವಾರಕದಲ್ಲಿರುವ  ನಾಗೇಶ್ವರ ಮತ್ತು ಮಹಾರಾಷ್ಟ್ರದ ಔಂದಾದಲ್ಲಿ ಇರುವ ನಾಗನಾಥ ದೇವಾಲಯಗಳು ಕೂಡ ನಾಗೇಶ್ವರನ ಜ್ಯೋತಿರ್ಲಿಂಗ ತಾಣ ಎನಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT