ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವರದ ಹಿಂದೆ...

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಂದಿಜ್ವರ, ಕೋಳಿಜ್ವರ, ಎಚ್1ಎನ್1 ಇತ್ಯಾದಿ ಜ್ವರಗಳು (ಫ್ಲೂ) ಮಾರಣಾಂತಿಕವಾಗಿದ್ದು ಸಾಂಕ್ರಾಮಿಕ ರೋಗವಾದ ಇವಕ್ಕೆ ಸೂಕ್ತ ಔಷಧಗಳೊಂದಿಗೆ ನಿಯಂತ್ರಿಸದಿದ್ದರೆ ಕೋಟ್ಯಂತರ ಜನ ಸಾಯುವುದು ಶತಸಿದ್ಧ ಎನ್ನುವ ರೀತಿಯ ವರದಿಗಳನ್ನು ಇತ್ತೀಚಿನ ವರ್ಷಗಳಲ್ಲಿ ನಾವು ಮತ್ತೆ ಮತ್ತೆ ಕಾಣುತ್ತಿದ್ದೇವೆ.

ಚೂರು ನೆಗಡಿ, ಕೆಮ್ಮು, ಶೀತವಾದರೂ ಮುಖಕ್ಕೆ ದುಬಾರಿ ಬೆಲೆಯ ಮಾಸ್ಕ್‌ಗಳನ್ನು ಹಾಕಿಕೊಂಡು ನರ್ಸಿಂಗ್ ಹೋಂಗಳಿಗೆ ಹೋಗಿ ಡಾಕ್ಟರ್ ಹೇಳಿದ್ದಕ್ಕೆ ಗೋಣಾಡಿಸಿ ಅವರು ಹೇಳಿದ ಪರೀಕ್ಷೆಗಳನ್ನೂ ಮಾಡಿಸಿ ಹತ್ತಾರು ಸಾವಿರ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ನೂರಕ್ಕೆ ತೊಂಬತ್ತೊಂಬತ್ತು ಜನರಲ್ಲಿ ಏನೂ ಔಷಧ ತೆಗೆದುಕೊಳ್ಳದಿದ್ದರೂ ವಾರದೊಳಗೆ ಗುಣವಾಗುವ ಮೇಲಿನ ಜ್ವರಗಳ ಬಗ್ಗೆ, ಔಷಧ ತಯಾರಿಕಾ ಬಹುರಾಷ್ಟ್ರೀಯ ಕಂಪನಿಗಳು ಭಯ ಹುಟ್ಟಿಸುವುದರ ಜೊತೆಗೆ, ಜನರಿಂದ ಕೋಟ್ಯಂತರ ರೂಪಾಯಿ ದೋಚುತ್ತಿರುವ ವಿಪರ್ಯಾಸವನ್ನು `ಫ್ಲೂ ಎಂದು ಹೆದರುವಿರೇಕೆ?~ ಎಂಬ ಕಿರು ಪುಸ್ತಕ ಚಿತ್ರಿಸುತ್ತದೆ.

ಜ್ವರಕ್ಕೆ ವೈರಸ್‌ಗಳೇ ಕಾರಣವೆಂದು 1931ರಲ್ಲಿಯೇ ಗುರುತಿಸಲಾಗಿದ್ದು ಈ ವೈರಸ್‌ಗಳ ನಿಯಂತ್ರಣ ಮತ್ತು ನಾಶಕ್ಕೆ ಎಂಟು ದಶಕಗಳಿಂದ ನಿರಂತರ ಸಂಶೋಧನೆ ನಡೆಯುತ್ತಿದೆ. ವಿವಿಧ ರೀತಿಯ ಜ್ವರಗಳು ದಿಢೀರನೇ ಸೃಷ್ಟಿಗೊಂಡಿಲ್ಲ.

ಈ ಜ್ವರಗಳಿಗೆ ತಕ್ಷಣಕ್ಕೆ ಬದಲಿ ಔಷಧ ನೀಡುವ ವೈದ್ಯರು ಹಾಗೂ ಆಸ್ಪತ್ರೆಗಳು ರೋಗ ನಿಯಂತ್ರಣಕ್ಕಿಂತ ತಮ್ಮ ಚಿಕಿತ್ಸೆಯಿಂದ ಅನಾಹುತಗಳನ್ನೆಸಗುವ ಸಂಭವವವೇ ಜಾಸ್ತಿಯೆಂದು ಲೇಖಕರು ಅಭಿಪ್ರಾಯಪಡುತ್ತಾರೆ.

ಆಧುನಿಕ ವೈದ್ಯ ವಿಜ್ಞಾನಕ್ಕೆ ಒಂದು ಹೊಸ ಔಷಧವನ್ನು ಅಭಿವೃದ್ಧಿಪಡಿಸಬೇಕಾದರೆ ಏಳೆಂಟು ವರ್ಷಗಳೇ ಬೇಕಾಗುತ್ತವೆ. ಅಷ್ಟಾಗಿಯೂ ಹೆಚ್ಚಿನವು ನಿಷ್ಫಲವಾಗುತ್ತವೆ.
ಆಯುರ್ವೇದ ಹಾಗೂ ಯುನಾನಿಗಳಲ್ಲಿ ಈ ಜ್ವರಗಳನ್ನು ತಡೆಯವಲ್ಲಿ ಔಷಧಗಳು ಲಭ್ಯವೆಂದು ಜಾಹೀರಾತು ನೀಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಳಗಿನ `ಆಯುಷ್ ವಿಭಾಗ~ಕ್ಕೆ ಮಾಹಿತಿ ಹಕ್ಕಿನ ಕಾನೂನಡಿ ಸ್ಪಷ್ಟನೆ ಕೋರಿದಾಗ, ಈ ಔಷಧಗಳ ಉಪಯುಕ್ತತೆಯನ್ನು ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿಲ್ಲ ಎಂಬ ಅಘಾತಕಾರಿ ಮಾಹಿತಿಯನ್ನು ಪುಸ್ತಕ ನೀಡುತ್ತದೆ.  
    
ಪುಣೆ ಹಾಗೂ ಕೆಲವು ವೈದ್ಯಕೀಯ ವಿದ್ಯಾಲಯಗಳನ್ನು ಬಿಟ್ಟರೆ ವೈರಾಣುವನ್ನು ಗುರುತಿಸುವ ಸೌಲಭ್ಯ ಎಲ್ಲಿಯೂ ಇಲ್ಲ. ಆದರೆ ಈ ಜ್ವರ ಮಾಧ್ಯಮದ ಮೂಲಕ ಎಲ್ಲೆಲ್ಲೂ ಭೀತಿಗೆ ಕಾರಣವಾಗಿದ್ದಾಗ ನಮ್ಮ ಆರೋಗ್ಯ ಸಚಿವರು `ಫ್ಲೂ~ ಲಕ್ಷಣಗಳಿದ್ದವರೆಲ್ಲರೂ ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು~ ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ.

ಹಕ್ಕಿಜ್ವರ ನಿಯಂತ್ರಣಕ್ಕೆ ಒಸೆಲ್ಟಾಮಿಮ್ ಎಂಬ ಔಷಧ ತಯಾರಿಸುವ ಅಮೆರಿಕಾದ ಗಿಲಿಯಟ್ ಸಯನ್ಸಸ್ ಕಂಪನಿ ಪ್ರತಿ ಷೇರಿನ ಬೆಲೆ 2000ನೇ ಇಸವಿಯಲ್ಲಿ 2-3 ಡಾಲರ್ ಇದ್ದುದು, ಹಕ್ಕಿಜ್ವರದ ಅಬ್ಬರದ ಬಳಿಕ 2005ರ ವೇಳೆಗೆ 55 ಡಾಲರ್‌ಗಳಿಗೆ ಜಿಗಿಯುತ್ತದೆ. ಆದರೆ, ಬಹುತೇಕ ಜನ ಈ ಔಷಧ  ತೆಗೆದುಕೊಳ್ಳದೆಯೂ ಗುಣಮುಖರಾದರು.

ವಿಶ್ವ ಆರೋಗ್ಯ ಸಂಸ್ಥೆ, ಅಮೇರಿಕದ ರೋಗ ನಿಯಂತ್ರಣ ಸಂಸ್ಥೆಗಳೂ ಔಷಧ ತಯಾರಿಕಾ ಸಂಸ್ಥೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜನರ ಹಣವನ್ನು ಲೂಟಿ ಹೊಡೆಯುತ್ತಿವೆ ಎಂಬುದನ್ನು ಸಾಂದರ್ಭಿಕ ಸಾಕ್ಷಿಗಳೊಂದಿಗೆ ಕೃತಿ ಬಿಚ್ಚಿಡುತ್ತದೆ.
ಈ ಕೃತಿ ಸುಸಂಬದ್ಧ ಅಧ್ಯಯನ, ತರ್ಕಬದ್ಧ ವಿಶ್ಲೇಷಣೆ, ರೋಗಿಗಳೆಡೆಗಿನ ಪ್ರಾಮಾಣಿಕ ಕಾಳಜಿಯಿಂದ ಗಮನ ಸೆಳೆಯುತ್ತದೆ.
 
`ಜ್ವರವು ನಮ್ಮ ರೋಗ ರಕ್ಷಣಾ ವ್ಯವಸ್ಥೆಯ ಪ್ರಬಲ ಅಸ್ತ್ರಗಳಲ್ಲೊಂದಾಗಿದ್ದು, ಈ ಏರು ತಾಪವನ್ನು ಸಹಿಸಲಾಗದೆ ವೈರಸ್‌ಗಳೂ ಇತರ ಸೂಕ್ಷ್ಮಾಣುಗಳು ನಾಶ ಹೊಂದುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಜ್ವರವನ್ನು ಸಹಿಸಿಕೊಳ್ಳುವುದೇ ಒಳ್ಳೆಯದು~ ಎನ್ನುವ, ಸ್ವತಃ ವೈದ್ಯರೂ ಆಗಿರುವ ಲೇಖಕರು ಜ್ವರನಿಯಂತ್ರಣಕ್ಕೆ ಅನೇಕ ಸರಳ ಮಾರ್ಗಗಳನ್ನು ತಿಳಿಸುತ್ತಾರೆ.

ಫ್ಲೂ ಎಂದು ಹೆದರುವಿರೇಕೆ?
ಲೇ: ಡಾ.ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ
ಪು: 72; ಬೆ: ರೂ. 40
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು-58

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT