ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೀರೋ ಫಿಗರ್ ಬೇಡ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಎಂಜಿನಿಯರ್ ಆಗಬೇಕೆಂಬುದು ಅಪ್ಪನ ಒತ್ತಾಸೆ. ನನಗೆ ಫ್ಯಾಷನ್ ಲೋಕದತ್ತ ಸೆಳೆತ. ಬಿಪಾಶಾ ಬಸು ಮಾಡೆಲಿಂಗ್ ಸ್ಟೈಲನ್ನು ಕಣ್ಣು ತುಂಬಿಕೊಳ್ಳುತ್ತಲೇ ಎಂಜಿನಿಯರಿಂಗ್ ಮುಗಿಸಿ ಈ ಕ್ಷೇತ್ರಕ್ಕೆ ಕಾಲಿಟ್ಟೆ. ನಂತರ ಕಂಡಿದ್ದು ಪಂಚರಂಗಿ ಲೋಕ...~ ಹೀಗೆ ನಗುವಿನೊಂದಿಗೆ ಮಾತಿಗೆ ಶುರುವಿಟ್ಟುಕೊಂಡರು ರೂಪದರ್ಶಿ ಶ್ವೇತಾ ದಾಸಪ್ಪ.

ಹುಟ್ಟಿದ್ದು, ಬೆಳೆದಿದ್ದು, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು?
ನನ್ನೂರು ತುಮಕೂರು. ವಿದ್ಯಾಭ್ಯಾಸಕ್ಕೆ ದಾರಿ ತೋರಿದ್ದು ಬೆಂಗಳೂರು. ಕಾಲೇಜಿನಲ್ಲಿದ್ದಾಗಲೇ ಹಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿದ್ದೆ. ಟೆಲಿ ಕಮ್ಯುನಿಕೇಷನ್ಸ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿ ಈಗ ಮಾಡೆಲಿಂಗ್‌ಗೆಂದೇ ಸಂಪೂರ್ಣ ಸಮಯ ಮೀಸಲಿಟ್ಟಿದ್ದೇನೆ. ಇದುವರೆಗೂ ಸುಮಾರು 300 ರಾಂಪ್‌ಶೋ ನೀಡಿದ್ದೇನೆ.

ರೂಪದರ್ಶಿಯಾಗಿ ಮರೆಯದ ಅನುಭವ?
ರಾಂಪ್ ಮೇಲೆ ಹೆಜ್ಜೆ ಇಡುವುದೇ ರೋಮಾಂಚನಕಾರಿ ಅನುಭವ. ಕಾಲೇಜಿನಲ್ಲಿ ಮೊದಲ ಬಾರಿ 2009ರಲ್ಲಿ `ಮಿಸ್ ತುಮಕೂರು~ ಪಟ್ಟ ಗಿಟ್ಟಿಸಿದ್ದೆ. 400 ಮಂದಿಯಲ್ಲಿ ನಾನೊಬ್ಬಳು ಆಯ್ಕೆಯಾಗಿದ್ದು ಅತಿಯಾದ ಖುಷಿ ನೀಡಿತು.

ಅಲ್ಲಿಂದ ಆರಂಭವಾದದ್ದು ನನ್ನ ಮಾಡೆಲಿಂಗ್ ಪಯಣ. 2010ರಲ್ಲಿ ಬೆಳಗಾಂನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಶಾಂತಲಾ ರೂಪದಲ್ಲಿ ಕಾಣಿಸಿಕೊಂಡು, ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸಿದ್ದು ಹೆಮ್ಮೆ ಎನಿಸಿತ್ತು. ಇನ್ನು 2011ರಲ್ಲಿ ಮಿಸ್ ಕರ್ನಾಟಕ ಆಗಿ ಆಯ್ಕೆಯಾದೆ. ಅದೇ ಡಿಸೆಂಬರ್‌ನಲ್ಲಿ `ಮಿಸ್ ಸೌತ್‌ಇಂಡಿಯಾ~ ಆಗಿ ಆಯ್ಕೆಯಾಗಿದ್ದು ಒಳ್ಳೆಯ ಅನುಭವ.

ಮಾಡೆಲಿಂಗ್ ಹೊರತಾಗಿ ಇನ್ನಿತರ ಹವ್ಯಾಸ?
ನೃತ್ಯ ನನ್ನ ಅಚ್ಚುಮೆಚ್ಚಿನ ಹವ್ಯಾಸ. ಆದರೆ, ಕಾಲೇಜು ದಿನಗಳಲ್ಲಿ ಅದಕ್ಕೆ ಅವಕಾಶ ಸಿಕ್ಕಿದ್ದು ಕಡಿಮೆ. ರೂಪದರ್ಶಿಯಾದ ಮೇಲೆ ಎಲ್ಲಕ್ಕೂ ಜಾಗ ನೀಡುತ್ತಿದ್ದೇನೆ. ಇನ್ನು ತಿಂಡಿಯಲ್ಲಿ ಪಲಾವ್ ಎಂದರೆ ಬಾಯಿ ಚಪ್ಪರಿಸಿ ತಿನ್ನುತ್ತೇನೆ.

ಮಾಡೆಲಿಂಗ್‌ನಲ್ಲಿ ತೊಡುವ ಉಡುಗೆಗೂ ನಿಮ್ಮ ಸ್ವಂತ ಆಯ್ಕೆಗೂ ವ್ಯತ್ಯಾಸ ಇದೆಯೇ?
ಮಾಡೆಲಿಂಗ್‌ನಲ್ಲಿ ವಿನ್ಯಾಸಕರು ಸಿದ್ಧಪಡಿಸಿದ ಉಡುಗೆಗಳನ್ನೇ ತೊಡಬೇಕು. ಅವರೂ ನಮಗೆ ಹೊಂದುವಂಥದ್ದನ್ನೇ ತಯಾರಿಸಿರುತ್ತಾರೆ. ಆದರೆ ನನ್ನ ಸ್ವಂತ ಆಯ್ಕೆಯಲ್ಲಿ ಸೀರೆಗೇ ಪ್ರಾಧಾನ್ಯ. ಸಾಂಪ್ರದಾಯಿಕ ವಸ್ತ್ರಗಳಲ್ಲದೆ ಜೀನ್ಸ್, ಟೀ ಶರ್ಟ್ ಅಂದರೆ ತುಂಬಾ ಇಷ್ಟ.

ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಅನುಭವ, ಅಭಿಪ್ರಾಯ?
ಮಾಡೆಲಿಂಗ್ ತುಂಬಾ ವಿಭಿನ್ನ ಕ್ಷೇತ್ರ. ಆದರೆ ಅದನ್ನು ಹೇಗೆ ಸ್ವೀಕರಿಸುತ್ತೀರಿ ಎಂಬುದಷ್ಟೇ ಮುಖ್ಯ. ಎಲ್ಲೆಡೆ ಇರುವಂತೆ ಇಲ್ಲೂ ಕೆಟ್ಟದ್ದು, ಒಳ್ಳೆಯದ್ದು ಇದ್ದೇ ಇದೆ. ಆದರೆ ನಮ್ಮ ಆಯ್ಕೆ ಸರಿಯಿರಬೇಕು. ದಿನನಿತ್ಯ ಎಲ್ಲಾ ರೀತಿಯ ಜನರನ್ನೂ ಭೇಟಿ ಮಾಡುತ್ತೇವೆ. ನಾವು ಹೇಗೆ ವರ್ತಿಸುತ್ತೇವೆ ಎಂಬುದು ಗಣನೆಗೆ ಬರುತ್ತದೆ.

ಮಾಡೆಲಿಂಗ್‌ಗೆ ಪೋಷಕರ ಬೆಂಬಲ ಇದೆಯೇ?
ಅಪ್ಪ ಅಮ್ಮ ನನ್ನನ್ನು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ನೋಡಬೇಕೆಂದು ಬಯಸಿದ್ದರು. ಅದಕ್ಕೆಂದೇ ಎಂಜಿನಿಯರಿಂಗ್ ಮುಗಿಸಿದೆ. ಅಪ್ಪ ಶಿಕ್ಷಕ. ಅಮ್ಮ ಆರೋಗ್ಯ ಇಲಾಖೆಯಲ್ಲಿದ್ದಾರೆ. ಅಣ್ಣ ಸಾಫ್ಟ್‌ವೇರ್ ಎಂಜಿನಿಯರ್.

ಸದ್ಯಕ್ಕೆ ಮಾಡೆಲಿಂಗ್‌ನಲ್ಲಿ ಮಿಂಚಬೇಕೆಂಬ ಕನಸು ನನ್ನದು. ಕೆಟ್ಟ ಜನರ ಕೈಯ್ಯಲ್ಲಿ ಸಿಲುಕಬೇಡ ಎಂದ ಅಪ್ಪನ ಮಾತನ್ನು ನೆನಪಿನಲ್ಲಿಟ್ಟುಕೊಂಡೇ ಇಲ್ಲಿ ಸಾಗುತ್ತಿದ್ದೇನೆ. `ಸ್ಯಾಂಕಿ ಇವೆಂಟ್ಸ್~ನ ಪ್ರದೀಪ್ ಕುಮಾರ್ ನಾನು ಈ ಮಟ್ಟಕ್ಕೆ ಬರಲು ಕಾರಣ. ಸ್ನೇಹಿತರೂ ಹುರಿದುಂಬಿಸಿದ್ದರು.

ನಿಮ್ಮ ಮೆಚ್ಚಿನ ನಟ ಅಥವಾ ನಟಿ?
ಬಿಪಾಶಾ ಬಸು ನನ್ನ ಮೆಚ್ಚಿನ ನಟಿ. ಆಕೆ ರಾಂಪ್ ಮೇಲೆ ಹೆಜ್ಜೆ ಇಡುತ್ತಿದ್ದ ಪರಿ, ಆಂಗಿಕ ಅಭಿನಯ ಎಲ್ಲವೂ ನನಗಿಷ್ಟ. ಅದೇ ನನಗೆ ಸ್ಫೂರ್ತಿ ನೀಡಿದ್ದು. ಕಂಗನಾ ಅವರೊಂದಿಗೂ ಚರ್ಚಿಸಿ ಟಿಪ್ಸ್ ಪಡೆದುಕೊಂಡಿದ್ದೇನೆ. ಕನ್ನಡದಲ್ಲಿ ರಮ್ಯಾ ಅಚ್ಚುಮೆಚ್ಚು. ಅವರ ಉಡುಗೆಗಳ ಆಯ್ಕೆ, ಮಾತಿನ ಶೈಲಿ ತುಂಬಾ ಇಷ್ಟ. ನಟರಲ್ಲಿ ಜಾನ್ ಅಬ್ರಹಾಂ ಬಿಟ್ಟರೆ ಬೇರ‌್ಯಾರೂ ನನ್ನ ಮನ ಗೆದ್ದಿಲ್ಲ.

ಫಿಟ್‌ನೆಸ್ ಗುಟ್ಟು?
ಮಾಡೆಲಿಂಗ್‌ಬಂದ ನಂತರ ಡಯೆಟ್ ಮಾಡಲೇಬೇಕು. ಭಾರತೀಯರು `ಝೀರೋ ಫಿಗರ್~ ಮೆಚ್ಚುವುದಿಲ್ಲ. ರೂಪದರ್ಶಿಯಾದವರು ಸೆಕ್ಸಿಯಾಗಿರಬೇಕೆಂದು ನಿರೀಕ್ಷಿಸುತ್ತಾರೆ. ಅದಕ್ಕಾಗಿ ಹಿತಮಿತವಾಗಿ ಬೊಜ್ಜೂ ಇರಬೇಕು. ಫಿಟ್‌ನೆಸ್ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗುತ್ತೇನೆ. ಊಟ- ತಿಂಡಿಯಲ್ಲೂ ಸ್ವಲ್ಪ ಕಟ್ಟುನಿಟ್ಟು. ಇಲ್ಲದಿದ್ದರೆ ಇಲ್ಲಿ ಉಳಿಯೋದು ಹೇಗೆ?

ನಿಮ್ಮ ಮುಂದಿನ ಕನಸು?
ಬೆಂಗಳೂರಿನಲ್ಲಿ ಮಾಡೆಲಿಂಗ್ ಏಜೆನ್ಸಿ ಆರಂಭಿಸಬೇಕೆನ್ನುವುದು ನನ್ನ ಪುಟ್ಟ ಕನಸು. ನನ್ನಂತೆಯೇ ಎಷ್ಟೋ ಮಂದಿ ಇರುತ್ತಾರೆ. ಅವರಿಗೆ ಅವಕಾಶ ನೀಡಬೇಕೆಂಬುದು ಹೆಬ್ಬಯಕೆ.

ಮಾಡೆಲಿಂಗ್‌ಗೆ ಬರುವವರಿಗೆ ನಿಮ್ಮ ಟಿಪ್ಸ್?
ಎಂದಿಗೂ ಶಾರ್ಟ್‌ಕಟ್‌ನಲ್ಲಿ ಸಾಗಬೇಡಿ. ಕಾಲೆಳೆಯುವವರು, ಆಮಿಷ ತೋರುವವರೂ ಇಲ್ಲಿದ್ದಾರೆ. ಕಷ್ಟವಾದರೂ ಪರವಾಗಿಲ್ಲ, ಸರಿ ದಾರಿಯಲ್ಲೇ ನಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT