ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೆಗಾಪಿಕ್ಸೆಲ್: ಲೀಟರ್ ಪೆಟ್ರೋಲ್‌ಗೆ 100 ಕಿ.ಮೀ.

Last Updated 13 ಜೂನ್ 2012, 19:30 IST
ಅಕ್ಷರ ಗಾತ್ರ

ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಮೈಲೇಜ್ ನೀಡುವ ಕಾರ್ ಯಾವುದು- ಟಾಟಾ ನ್ಯಾನೋ, ಮಾರುತಿ 800, ಟಾಟಾ ಇಂಡಿಗೋ..? ಬೈಕ್ ಯಾವುದು- ಬಜಾಜ್ ಪ್ಲಾಟಿನಾ, ಹೀರೋ ಸ್ಪ್ಲೆಂಡರ್? ಎಷ್ಟು ಮೈಲೇಜ್ ನೀಡಬಹುದು- ಕಾರಾದರೆ ಗರಿಷ್ಟ 20, ಬೈಕಾದರೆ ಗರಿಷ್ಟ 80. ಹಾಗಾದರೆ ಲೀಟರ್ ಪೆಟ್ರೋಲ್‌ಗೆ 100 ಕಿಲೋ ಮೀಟರ್ ಮೈಲೇಜ್ ನೀಡುವ ವಾಹನವೇ ಇಲ್ಲವೆ? ಇದೆಂಥ ಪ್ರಶ್ನೆ, 100 ಕಿಲೋ ಮೀಟರ್ ಮೈಲೇಜ್ ಎಂದರೆ ಹುಡುಗಾಟವೆ ಎಂದು ಮೂಗು ಮುರಿಯುವ ಕಾಲ ಮುಗಿಯುವ ಕ್ಷಣ ಹತ್ತಿರ ಬರುತ್ತಿದೆ.

ಪೆಟ್ರೋಲ್‌ನ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದಂತೂ ಸತ್ಯ. ಪ್ರತಿ ಬಾರಿ ಬೆಲೆ ಹೆಚ್ಚಳಗೊಳ್ಳುತ್ತಿದ್ದಂತೆ ವಾಹನ ಮಾಲೀಕರ ಕೋಪ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ ವಾಹನ ಚಾಲನೆ ಅನಿವಾರ್ಯವಾದ್ದರಿಂದ ಹಲ್ಲು ಕಚ್ಚಿ ವಾಹನ ಚಾಲನೆ ಮಾಡಲೇಬೇಕು.
ಒಂದು ಲೀಟರ್ ಪೆಟ್ರೋಲ್‌ಗೆ 100 ರೂಪಾಯಿಗಳಾಗುವ ಕಾಲ ದೂರವೇನಿಲ್ಲ. ಆಗಲೂ ವಾಹನ ಓಡಿಸುವವರು ಕಡಿಮೆಯೇನೂ ಆಗುವುದಿಲ್ಲ. ಇಂತಹ ಕ್ಲಿಷ್ಟಕರ ಸಮಯದಲ್ಲಿ ವಾಹನ ಮಾರಾಟವೂ ಕಡಿಮೆಯಾಗಿಲ್ಲ. ಆದರೆ ಮಾರಾಟಕ್ಕೆ ಹಿಂದಿದ್ದ ರಭಸ ಈಗಿಲ್ಲ ಎನ್ನುವುದೂ ನಿಜ. ವಾಹನ ಲೋಕದ ಈ ಬಿಕ್ಕಟ್ಟನ್ನೇ ಒಂದು ಮಾರುಕಟ್ಟೆ ತಂತ್ರವಾಗಿ ಬಳಸಿಕೊಳ್ಳುವ ದಾರಿಯಲ್ಲಿ ಟಾಟಾ ಮೋಟಾರ್ಸ್ ಮುಂದುವರಿಯುತ್ತಿದೆ.

ಟಾಟಾದ ಕಾರ್ಯತಂತ್ರವೇ ಹೀಗೆ, ಕಾರುಗಳ ಬೆಲೆ ಗಗನಕ್ಕೆ ಮುಟ್ಟಿದ್ದಾಗ 1 ಲಕ್ಷ ರೂಪಾಯಿ ಬೆಲೆಯ ನ್ಯಾನೋ ಹೊರಬಿಟ್ಟು ವಿಶ್ವದಾದ್ಯಂತ ಅಚ್ಚರಿ ಹುಟ್ಟಿಸಿತ್ತು. ಈಗಲೂ ಅಷ್ಟೇ. ಭಾರತೀಯರು ಮೈಲೇಜ್ ಪ್ರಿಯರು ಎಂಬ ಸತ್ಯ ಅರಿತುಕೊಂಡಿರುವ ಟಾಟಾ ಭಾರೀ ಮೈಲೇಜ್ ನೀಡುವ ಕಾರಿನ ತಯಾರಿಕೆಗೆ ಮುಂದಾಗಿದೆ.

ಟಾಟಾ ಮೆಗಾಪಿಕ್ಸಲ್

ಡಿಜಿಟಲೀಕರಣಗೊಂಡ ಹೆಸರುಗಳನ್ನು ತಮ್ಮ ಕಾರ್‌ಗಳಿಗೆ ಇಡುವ ಪ್ರವೃತ್ತಿ ಟಾಟಾದಲ್ಲೇ ಹೆಚ್ಚು. 1 ಲಕ್ಷ ರೂಪಾಯಿ ಬೆಲೆಯ ಕಾರ್‌ಗೆ ನ್ಯಾನೋ ಎಂದು ಹೆಸರಿಟ್ಟರೆ, ತನ್ನ ಹೊಸ ಕಾರ್‌ಗೆ `ಮೆಗಾಪಿಕ್ಸೆಲ್~ ಎಂದು ಹೆಸರಿಟ್ಟಿದೆ. ಮೆಗಾಪಿಕ್ಸೆಲ್ ಎಂಬುದು ಕ್ಯಾಮೆರಾ ಪರಿಭಾಷೆ. ಡಿಜಿಟಲ್ ಕ್ಯಾಮೆರಾಗಳಲ್ಲಿ ಚಿತ್ರದ ಗುಣಮಟ್ಟವನ್ನು ನಿರ್ಧರಿಸುವ ಮಾನದಂಡವಿದು. ಮೆಗಾಪಿಕ್ಸೆಲ್ ಹೆಚ್ಚಿದಷ್ಟೂ ಚಿತ್ರದ ಗುಣಮಟ್ಟವೂ ಹೆಚ್ಚುವುದು. ಈ ಹೆಸರನ್ನು ತನ್ನ ಕಾರ್‌ಗೆ ಇಟ್ಟಿರುವುದೂ ಇಲ್ಲಿ ವಿಶೇಷ ಅರ್ಥವನ್ನು ನೀಡುತ್ತದೆ. ಏಕೆಂದರೆ ಇದು ಹೆಚ್ಚು ಮೈಲೇಜ್ ನೀಡುವ ಕಾರ್.

1
 ಹೆಚ್ಚು ಎಂದರೆ ಎಷ್ಟು ಗೊತ್ತೆ ಒಂದು ಲೀಟರಿಗೆ ಪೆಟ್ರೋಲ್‌ಗೆ ಬರೋಬ್ಬರಿ 100 ಕಿಲೋ ಮೀಟರ್‌ಗಳು!

ಹೌದು. ಸದ್ಯಕ್ಕೆ ಭಾರತದಲ್ಲಿ ಯಾವ ವಾಹನವೂ ಲೀಟರ್ ಪೆಟ್ರೋಲ್‌ಗೆ 100 ಕಿಲೋ ಮೀಟರ್ ಮೈಲೇಜ್ ನೀಡುತ್ತಿಲ್ಲ. ಡೀಸೆಲ್‌ನಲ್ಲೂ ಈ ದಾಖಲೆ ಇಲ್ಲ. ಮೈಲೇಜ್ ಅತಿ ಪ್ರಮುಖ ಮಾನದಂಡವಾಗುತ್ತಿರುವ ಈಗಿನ ದಿನಗಳಲ್ಲಿ ಅತ್ಯಂತ ಹೊಚ್ಚ ಹೊಸ ಪ್ಲಾಟ್‌ಫಾರಂನ, ತನ್ನದೇ ವಿನೂತನ ತಂತ್ರಜ್ಞಾನ ಹೈಬ್ರಿಡ್ ಕಾರ್‌ನ್ನು ಟಾಟಾ ಹೊರಬಿಡಲಿದೆ.
 
ಇದು ಪೆಟ್ರೋಲ್ ಹಾಗೂ ವಿದ್ಯುತ್‌ನ ಸಹಾಯದಿಂದ ಚಾಲನೆಗೊಳ್ಳುವ ಕಾರ್. ಮೆಗಾಪಿಕ್ಸೆಲ್ ಅದಕ್ಕೇ ಈಗ ಅಚ್ಚರಿ ಮೂಡಿಸಿರುವುದು. ಈಗಾಗಲೇ ಕೆಲವು ಕಾರ್ ಕಂಪೆನಿಗಳು ಈ ತಂತ್ರಜ್ಞಾನ ಆಧರಿಸಿ ಕಾರ್‌ಗಳನ್ನು ಹೊರಬಿಟ್ಟಿವೆಯಾದರೂ ಮೆಗಾಪಿಕ್ಸೆಲ್‌ನದು ಅತಿ ಹೊಸ ವಿಧಾನ. ಹೋಂಡಾದ ಸಿವಿಕ್‌ಮಾದರಿಯಲ್ಲಿ ಹೈಬ್ರಿಡ್ ಅವತರಣಿಕೆ ಇದೆ.

ಆದರೆ ಅದರಲ್ಲಿ ಪೆಟ್ರೋಲ್‌ನ ಎಂಜಿನ್ ಹಾಗೂ ವಿದ್ಯುತ್‌ನ ಮೋಟಾರ್ ಇದ್ದು, ರಸ್ತೆ ಸ್ಥಿತಿಗತಿಗೆ ತಕ್ಕಂತೆ ಪ್ರತ್ಯೇಕ ಯಂತ್ರಗಳು ಚಾಲನೆಗೆ ಒಳಪಡುತ್ತವೆ. ಆದರೆ ಮೆಗಾಪಿಕ್ಸೆಲ್ ಈ ತಂತ್ರಜ್ಞಾನಕ್ಕೆ ಹೊರತಾದ ವಿನೂತನ ತಂತ್ರಜ್ಞಾನ.

ರೇಂಜ್ ಎಕ್ಸ್‌ಟೆಂಡೆಡ್ ವೆಹಿಕಲ್
ಮೆಗಾಪಿಕ್ಸಲ್ ವಿನೂತನ ವಾಹನ ವಿಭಾಗಕ್ಕೆ ಸೇರುತ್ತದೆ. ಇದನ್ನು ಟಾಟಾ ರೇಂಜ್ ಎಕ್ಸ್‌ಟೆಂಡೆಟ್ ಎಲೆಕ್ಟ್ರಿಕ್ ವೆಹಿಕಲ್ (್ಕಉಉ್ಖ) ಎಂದು ಹೆಸರಿಟ್ಟಿದೆ. ಈ ಕಾರ್‌ನ ತಂತ್ರಜ್ಞಾನದ ಬಗ್ಗೆ ಒಮ್ಮೆ ಗಮನ ಹರಿಸೋಣ. ಇದು ವಾಸ್ತವದಲ್ಲಿ ಸಂಪೂರ್ಣ ವಿದ್ಯುಚ್ಚಾಲಿತ ಕಾರ್. ಆದರೆ ಇದರಲ್ಲಿ ಪೆಟ್ರೋಲ್ ಎಂಜಿನ್ ಸಹ ಇದೆ. ಇದು ಕೊಂಚ ಕ್ಲಿಷ್ಟಕರ ತಂತ್ರಜ್ಞಾನ. ಪೆಟ್ರೋಲ್ ಎಂಜಿನ್ ಇರುವುದು ಕಾರ್‌ನ ಚಾಲನೆಗೆ ಅಲ್ಲ.

ಬದಲಿಗೆ ವಿದ್ಯುತ್ ಉತ್ಪಾದನೆಗಾಗಿ. ಹೌದು, ಇದು ವಿದ್ಯುತ್ ಜೆನರೇಟರ್. ಈ ಜೆನರೇಟರ್‌ಗೆ ಪೆಟ್ರೋಲ್ ತುಂಬಿಸಿ ಆನ್ ಮಾಡಿದರೆ ಸಾಕು. ಇದರಲ್ಲಿ ಉತ್ಪತ್ತಿಯಾಗುವ ವಿದ್ಯುತ್, ಕಾರ್‌ನ ವಿದ್ಯುತ್ ಮೋಟಾರ್‌ಗಳಿಗೆ ಹರಿದು ಚಾಲನೆ ನೀಡುತ್ತದಷ್ಟೇ.

ವಿದ್ಯುಚ್ಚಾಲಿತ ಕಾರುಗಳಲ್ಲಿ ಎರಡು ಬಗೆಯ ಮೋಟಾರ್‌ಗಳನ್ನು ಬಳಸಲಾಗುತ್ತದೆ. ಒಂದು ಬಗೆಯಲ್ಲಿ ಕಾರ್‌ಗೆ ಪ್ರಧಾನವಾಗಿ ಒಂದು ಮೋಟಾರ್ ಇದ್ದು, ಈ ಮೋಟಾರ್‌ನಿಂದ ಕಾರ್‌ನ ನಾಲ್ಕೂ ಚಕ್ರಗಳಿಗೆ ಶಕ್ತಿ ವಿಭಜನೆಗೊಳ್ಳುತ್ತದೆ.

ಆದರೆ ಇದು ಏಷ್ಯನ್ ರಾಷ್ಟ್ರಗಳಲ್ಲಿ ಪ್ರಸಿದ್ಧವಲ್ಲ. ಇಲ್ಲಿ ಹಬ್ ಮೋಟಾರ್ ಎನ್ನುವ ವಿಶೇಷವಾದ ಮೋಟಾರ್ ಬಳಕೆಯಾಗುತ್ತದೆ. ಈ ಮೋಟಾರ್ ವಾಸ್ತವದಲ್ಲಿ ವಾಹನದ ಚಕ್ರವೇ ಆಗಿರುತ್ತದೆ. ಈ ಮೋಟಾರ್ ತಾನೂ ತಿರುಗುತ್ತ, ಚಕ್ರವನ್ನೂ ತಿರುಗಿಸುತ್ತದೆ.

ಇಲ್ಲಿ ಶಕ್ತಿ ದಂಡವಾಗುವುದು ಕಡಿಮೆ. ಮೋಟಾರ್‌ನಿಂದ ಪ್ರತ್ಯೇಕವಾಗಿ ಶಕ್ತಿ ವರ್ಗಾಯಿಸುವ ವಿಧಾನ ಇಲ್ಲಿ ಇಲ್ಲವಾದ್ದರಿಂದ, ಶಕ್ತಿ ಕೊಂಚವೂ ದಂಡವಾಗದೇ ನೇರವಾಗಿ ಚಕ್ರಕ್ಕೆ ಚಾಲನೆಗೆ ಬಳಸಲ್ಪಡುತ್ತದೆ. ಇಂತಹ ವಿಶೇಷ ತಂತ್ರಜ್ಞಾನದ ಅಳವಡಿಕೆ ಮೆಗಾಪಿಕ್ಸೆಲ್‌ನಲ್ಲಿ ಆಗಿದೆ.

ಮೆಗಾಪಿಕ್ಸೆಲ್‌ನಲ್ಲಿ ಇಂತಹ ನಾಲ್ಕು ಹಬ್ ಮೋಟಾರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಹಬ್ ಮೋಟಾರ್‌ಗಳಿಗೆ ಕಾರ್‌ನ ಪೆಟ್ರೋಲ್ ಎಂಜಿನ್ ವಿದ್ಯುತ್ ಪೂರೈಕೆ ಮಾಡುತ್ತದೆ. ಇದರಲ್ಲಿ ಕೇವಲ 325 ಸಿಸಿಯ ಪೆಟ್ರೋಲ್ ಎಂಜಿನ್ ಇದೆ.

ಇದು ಈಗಿನ ರಾಯಲ್ ಎನ್‌ಫೀಲ್ಡ್ 350 ಬೈಕ್‌ಗಳಿಗೂ ಕಡಿಮೆ. ಆದರೆ ಈ ಎಂಜಿನ್ 22 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಕಾರ್‌ನ ಪ್ರತಿ ಚಕ್ರಗಳಲ್ಲೂ 10 ಕಿಲೋವ್ಯಾಟ್‌ನ ವಿದ್ಯುತ್ ಮೋಟಾರ್‌ಗಳಿದ್ದು, ಪ್ರತಿ ಚಕ್ರಗಳಿಗೆ 500 ಎನ್‌ಎಂ (ನ್ಯೂಟನ್ ಮೀಟರ್) ಟಾರ್ಕ್ ಸಿಗಲಿದೆ.

ವಾಹನದ ಚಲನೆಯಲ್ಲಿ ವಿದ್ಯುತ್ ಜನರೇಟರ್ ಶಕ್ತಿ ನೀಡುತ್ತಲೇ ಬ್ಯಾಟರಿ ಸಹ ಚಾರ್ಜ್ ಆಗುತ್ತದೆ. ಹಾಗಾಗಿ ಕಾರ್ ದಾರಿ ಮಧ್ಯೆ ಚಾರ್ಜ್ ಮುಗಿದು ನಿಲ್ಲುತ್ತದೆ ಎಂಬ ಭಯ ಬೇಕಿಲ್ಲ. ಆದರೂ ಈ ಕಾರ್‌ನಲ್ಲಿ ಬ್ಯಾಟರಿ ಅಳವಡಿಸಲಾಗಿದೆ. ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವ ಲಿಥಿಯಂ ಅಯಾನ್ ಫಾಸ್ಫೇಟ್ ಬ್ಯಾಟರಿ ಇದೆ.

ಈ ಕಾರ್‌ಗೆ ಅತಿ ವಿನೂತನ `ಇಂಡಕ್ಟಿವ್ ಕಾರ್ ಸಿಸ್ಟಂ~ ಅಥವಾ ಫಾಸ್ಟ್ ಚಾರ್ಜ್ ಎಂಬ ವ್ಯವಸ್ಥೆ ನೀಡಲಾಗಿದೆ. ಇದರ ಚಾರ್ಜಿಂಗ್ ವಿಧಾನವೂ ವಿನೂತನ. ಹಾಳೆಯಂತಿರುವ ಚಾರ್ಜರ್‌ನ್ನು ಬಿಚ್ಚಿ ನೆಲದ ಮೇಲೆ ಹಾಸಿ ಕಾರನ್ನು ಅದರ ಮೇಲೆ ನಿಲ್ಲಿಸಿದರೆ ಆಯಿತು. ಕಾರ್ ಕೇವಲ ಅರ್ಧ ಗಂಟೆಯಲ್ಲಿ ಚಾರ್ಜ್ ಆಗುತ್ತದೆ.

 ಲೀಟರ್ ಪೆಟ್ರೋಲ್‌ಗೆ 100 ಕಿಲೋ ಮೀಟರ್‌ನಂತೆ 9 ಲೀಟರ್ ಪೆಟ್ರೋಲ್ ಟ್ಯಾಂಕ್ ಇರುವ ಈ ಕಾರ್‌ನಲ್ಲಿ 900 ಕಿಲೋ ಮೀಟರ್ ಕ್ರಮಿಸಲು ಸಾಧ್ಯ ಎಂದು ಟಾಟಾ ಹೇಳಿಕೊಂಡಿದೆ. ಅದರಂತೆ ಅಂದಾಜು 1 ಕಿಲೋ ಮೀಟರ್‌ಗೆ ಕೇವಲ 78 ಪೈಸೆ ಚಾಲಕನಿಗೆ ಖರ್ಚಾಗಲಿದೆ! ಇಂದು ಕಾರೊಂದು 20 ಕಿಲೋ ಮೀಟರ್ ಮೈಲೇಜ್ ನೀಡಿದರೂ ಲೀಟರ್‌ಗೆ 2 ರೂಪಾಯಿಗಳು ಖರ್ಚಾಗುತ್ತಿದೆ.

ಅಂದದ ಕಾರು
ಇದು ಟಾಟಾ ನ್ಯಾನೋ ಕಾರ್‌ನ್ನು ನೋಟದಲ್ಲಿ ಹೋಲುವುದಾದರೂ ಹೊಸ ವಿನ್ಯಾಸವನ್ನು ಹೊಂದಿದೆ. ಹ್ಯಾಚ್‌ಬ್ಯಾಕ್ ಮಾದರಿಗೆ ಕಾರು ಸೇರುತ್ತದೆ. ಹಿಂದಿನ ಬಾಗಿಲನ್ನೂ ಸೇರಿ ಒಟ್ಟು 5 ಬಾಗಿಲುಗಳು ಕಾರ್‌ಗೆ ಇವೆ. ಒಟ್ಟು ನಾಲ್ಕು ಮಂದಿ ಆರಾಮಾಗಿ ಕೂರಬಹುದು.

ಈಗಾಗಾಲೇ ಜಿನಿವಾದಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಕಾನ್ಸೆಪ್ಟ್ ಕಾರ್ ಬಿಡುಗಡೆಗೊಂಡಿದೆ. ಕಾನ್ಸೆಪ್ಟ್ ಕಾರ್ ಅತಿ ಶ್ರೀಮಂತ ಸೌಲಭ್ಯ, ಗುಣಮಟ್ಟ ಹೊಂದಿರುತ್ತದೆ. ಆದರೆ ಅದೇ ಗುಣಮಟ್ಟದಲ್ಲಿ ವಾಸ್ತವದ ಉತ್ಪಾದನೆ ದುಬಾರಿಯಾಗುವ ಕಾರಣ ಗುಣಮಟ್ಟದಲ್ಲಿ ಕೊಂಚ ಇಳಿಕೆಯಾಗುತ್ತದೆ.
 
ಇದು ಎಲ್ಲ ಕಾನ್ಸೆಪ್ಟ್ ಕಾರ್‌ಗಳ ಕಥೆ. ಆದರೂ ಈಗಿನ ಮಾಹಿತಿಯಂತೆ ಕಾರ್‌ಗೆ ಪಾರದರ್ಶಕ ಛಾವಣಿ ಇದೆ. ಅತ್ಯಾಧುನಿಕ ಎಲ್‌ಇಡಿ (ಲೈಡ್ ಎಮಿಟಿಂಗ್ ಡಯೋಡ್) ದೀಪಗಳಿವೆ. ಇವುಗಳ ಬದಲಿಗೆ ವಾಸ್ತವದ ಉತ್ಪಾದನೆಯಲ್ಲಿ ಹಾಲೋಜೆನ್ ದೀಪ ಹಾಗೂ ಸಾಮಾನ್ಯ ಕಬ್ಬಿಣದ ಛಾವಣಿಯನ್ನು ನಿರೀಕ್ಷಿಸಬಹುದು.

ವಿನೂತನ ತಂತ್ರಜ್ಞಾನ
ಮೆಗಾಪಿಕ್ಸೆಲ್‌ನಲ್ಲಿ ವಿಶೇಷವಾದ `ಹ್ಯೂಮನ್ ಮಿಷಿನ್ ಇಂಟರ್‌ಫೇಸ್~ (ಎಚ್‌ಎಂಐ) ಎಂಬ ತಂತ್ರಜ್ಞಾನವಿದೆ. ಕಾರ್‌ನ ಡ್ಯಾಷ್‌ಬೋರ್ಡ್‌ನಲ್ಲಿ ಸ್ಟೀರಿಂಗ್ ವೀಲ್‌ನ ಪಕ್ಕದಲ್ಲಿ ಸ್ಪರ್ಷಗ್ರಾಹಿ (ಟಚ್‌ಸ್ಕ್ರೀನ್) ಪರದೆಯಿದ್ದು, ಇದರಲ್ಲಿ ಕಾರ್‌ನ ತಾಪಮಾನ, ಸಂಗೀತ, ಸಿನಿಮಾ ಮುಂತಾದ ಕ್ರಿಯೆಗಳನ್ನು ನಿಯಂತ್ರಿಸುವ ಅವಕಾಶ ನೀಡಿರುವುದು ಅಚ್ಚರಿ ಮೂಡಿಸಿದೆ.

ಅಂದಾಜು ಬೆಲೆ
ಭಾರತದಲ್ಲಿ ಇದರ ಉತ್ಪಾದನೆಯ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಇದರಲ್ಲಿ ಅಳವಡಿಸಲಾಗುವ ಲಿಥಿಯಂ ಅಯಾನ್ ಫಾಸ್ಫೇಟ್ ಬ್ಯಾಟರಿ ಅತ್ಯಂತ ದುಬಾರಿಯಾದುದು. ಮೊಬೈಲ್ ಫೋನ್‌ಗಳಲ್ಲಿನ ಸಣ್ಣ ಬ್ಯಾಟರಿಗೇ ಸರಿಸುಮಾರು 1 ಸಾವಿರ ರೂಪಾಯಿಯಾದರೆ, ಇನ್ನು ಕಾರಿಗೆ ಎಷ್ಟು ದೊಡ್ಡ ಬ್ಯಾಟರಿಗಳು ಬೇಕಾಗಬಹುದು ಊಹಿಸಿ. ಅಂದಾಜು ಬ್ಯಾಟರಿಗೇ ಸುಮಾರು ಒಂದೂವರೆ ಲಕ್ಷ ರೂಪಾಯಿಗಳಾಗಬಹುದು.

ಆದರೆ ಹೆಚ್ಚು ಮೈಲೇಜ್ ನೀಡುವ ಕಾರು ಎಂಬ ಕಾರಣದಿಂದ ಕಾರ್‌ನ ಮಾರಾಟ ಹೆಚ್ಚಾದರೆ, ಉತ್ಪಾದನಾ ವೆಚ್ಚ ಕಡಿಮೆಯಾಗಬಹುದು. ಹಾಗಾಗಿ ಟಾಟಾ ಸುಮಾರು 4 ಲಕ್ಷ ರೂಪಾಯಿಗಳೆಂದು ಅಂದಾಜು ಬೆಲೆಯನ್ನು ಪ್ರಕಟಿಸಿದೆ. ಈ ಬೆಲೆಗೇ ಈ ಕಾರು ಸಿಗುವುದೇ ಆದಲ್ಲಿ ಇದು ಕಾರ್ ಪ್ರಿಯರಿಗೆ ಹಬ್ಬವೇ ಸರಿ.


ಹೈಬ್ರಿಡ್ ಕಾರುಗಳು ಭಾರತಕ್ಕೆ
ಹೊಸತಾದರೂ, ಅಮೆರಿಕ, ಯುರೋಪ್‌ನಂತ ಮುಂದುವರಿದ ರಾಷ್ಟ್ರಗಳ ಕಾರು ತಯಾರಿಕಾ ಕಂಪೆನಿಗಳೂ ಈಗಾಗಲೇ ಅಧಿಕ ಇಂಧನ ಕ್ಷಮತೆ ನೀಡುವ ಹೈಬ್ರಿಡ್ ಕಾರುಗಳ ಅಭಿವೃದ್ಧಿಯಲ್ಲಿ ತೊಡಿಗಿಸಿಕೊಂಡಿವೆ.
 
ಅವುಗಳಲ್ಲಿ ಹೊಂಡಾ ಸಿವಿಕ್ ಹಾಗೂ ಇನ್‌ಸೈಟ್, ಟೊಯೊಟಾ ಪ್ರೀಯುಸ್ ಹಾಗೂ ಕ್ಯಾಮ್ರಿ, ಷಾವರ್ಲೆ ಮೆಲಿಬು, ಫೋರ್ಡ್ ಫ್ಯೂಷನ್ ಹೈಬ್ರಿಡ್‌ನಂತೆ ಐಷಾರಾಮಿ ಕಾರುಗಳಾದ ಬಿಎಂಡಬ್ಲೂ, ಮರ್ಸಿಡೀಸ್ ಬೆಂಜ್, ಆಡಿ, ಲೆಕ್ಸಸ್, ಪೋರ್ಷ್, ನಿಸ್ಸಾನ್ ಇತ್ಯಾದಿಗಳು ಸಹ ಪೆಟ್ರೋಲ್-ವಿದ್ಯುತ್, ಡೀಸಲ್-ವಿದ್ಯುತ್ ಹಾಗೂ ಜಲಜನಕ ಕಾರುಗಳನ್ನು ತಯಾರಿಕೆಯ ಹಾದಿಯಲ್ಲಿವೆ. ಇವುಗಳಲ್ಲಿ ಕೆಲವೊಂದು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯ.

ಆದರೆ ಈ ಎಲ್ಲಾ ಕಾರುಗಳು ತಮ್ಮ ಮೂಲ ವಿನ್ಯಾಸವನ್ನು ಬಿಟ್ಟಿಲ್ಲ. ಅದೇ ಐಷಾರಾಮಿ ವಿನ್ಯಾಸ ಹಾಗೂ ಸೌಲಭ್ಯದೊಂದಿಗೆ ಹೈಬ್ರಿಡ್ ತಂತ್ರಜ್ಞಾವನ್ನು ಅಳವಡಿಸಿಕೊಂಡಿವೆ. ಈ ಕಾರುಗಳಿಗೆ ಹೋಲಿಸಿದಲ್ಲಿ ಟಾಟಾ ಮೆಗಾಪಿಕ್ಸಲ್ ಬೆಲೆ ತೀರಾ ಕಡಿಮೆ. ಮೆಗಾಪಿಕ್ಸೆಲ್ ನೀಡಲಿದೆ ಎಂದು ಹೇಳಿರುವ ಮೈಲೇಜ್ ಕೂಡಾ ಇವುಗಳಿಗಿಂಥ ಅಧಿಕ ಎನ್ನುವುದು ಗಮನಾರ್ಹ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT