ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾರ್ಜನ್ ಹೆಸರಿನಲ್ಲಿ ಹಲವು ಭಾಷೆಗಳು

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಟಾರ್ಜನ್~ ನಿಜರೂಪ
ಕಾಡಿನಲ್ಲಿ ಹುಟ್ಟಿ ಪ್ರಾಣಿಗಳ ಜೊತೆಗೇ ಒಡನಾಟವಿಟ್ಟುಕೊಂಡು ಬದುಕುವ ಟಾರ್ಜನ್ ಎಂಬ ಕಲ್ಪಿತ ಚಿತ್ರಣದ ಕಥೆ ಯಾರಿಗೆ ಗೊತ್ತಿಲ್ಲ. ಕಾಮಿಕ್ ರೂಪದಲ್ಲಿ, ಸಿನಿಮಾ ರೂಪದಲ್ಲಿ ನಾವು ಕಂಡ `ಟಾರ್ಜನ್~ ಪಾತ್ರವೇ ಒಂದು ರೋಮಾಂಚನ.
 
ಟಾರ್ಜನ್ ಹೆಸರಿನಲ್ಲಿ ಹಲವು ಭಾಷೆಗಳಲ್ಲಿ ಹಲವು ಚಿತ್ರಗಳು ಬಂದು ಹೋಗಿವೆ. ಈಗ ಹಾಲಿವುಡ್‌ನಲ್ಲಿ ಮತ್ತೊಂದು ಟಾರ್ಜನ್ ಚಿತ್ರ ತಯಾರಾಗಲಿದೆ. ಅದರಲ್ಲೇನು ವಿಶೇಷ ಎಂದು ಹುಬ್ಬೇರಿಸುತ್ತೀರಾ? ಇಲ್ಲಿ ನಟಿಸುತ್ತಿರುವುದು ನಿಜವಾದ ಟಾರ್ಜನ್! ಈ ಟಾರ್ಜನ್ ಇರುವುದು ದಕ್ಷಿಣ ಆಫ್ರಿಕಾದಲ್ಲಿ. 24ರ ಹರೆಯದ ಈ ಯುವಕನ ಹೆಸರು ಡಿವೆಟ್ ಟು ಟೊಯ್ಟ.

ಹುಟ್ಟಿನಿಂದಲೂ ಅರಣ್ಯದ ವ್ಯಾಮೋಹಿಯಾಗಿದ್ದ ಈತ ಕಾಲ್ಪನಿಕ ಟಾರ್ಜನ್‌ನಂತೆಯೇ ಕಾಡಿನ ಬದುಕನ್ನು ಕಳೆಯುತ್ತಿದ್ದಾನೆ. ಆದರೆ ಈತ ನಾಗರಿಕ ಟಾರ್ಜನ್. ಅಲ್ಪಕಾಲ ಅಂಗಡಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದ ಈ ಕಾಡಿನ ಮನುಷ್ಯ ಸದ್ಯಕ್ಕೆ ನಿರುದ್ಯೋಗಿ. 

 ಅಂದಹಾಗೆ ಟೊಯ್ಟ ನಮೀಬಿಯಾ ಮೂಲದವನು. ಆತನ ತಂದೆ ಟಾರ್ಜನ್ ಕಾಮಿಕ್ ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದರು. ಟಾರ್ಜನ್ ಕಾಮಿಕ್‌ಗಳನ್ನು ನೋಡಿಕೊಂಡೇ ಬೆಳೆದ ಟೊಯ್ಟ ತನ್ನ ಮನಸಿನಲ್ಲಿ ಟಾರ್ಜನ್‌ನನ್ನು ಆವಾಹಿಸಿಕೊಂಡಿದ್ದ. ಆಗಲೇ ಕಾಡು ಪ್ರಾಣಿಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದ.
 
ಕುಟುಂಬ ದಕ್ಷಿಣಾ ಆಪ್ರಿಕಾಕ್ಕೆ ತೆರಳಿದ ಬಳಿಕ ಮನೆ ಸಮೀಪದ ಕಾಡೇ ಈತನ ಬದುಕು. ವಾರದಲ್ಲಿ ಕನಿಷ್ಠ ಮೂರುದಿನ ದಟ್ಟಾರಣ್ಯದೊಳಗೆ ಮರದ ಮೇಲೆ ಪ್ರಾಣಿಗಳಂತೆ ವಾಸಿಸುತ್ತಾನೆ. ಅಲ್ಲಿನ ಆನೆ, ಚಿರತೆ, ಕೋತಿಗಳು, ಜೀಬ್ರಾ ಈತನ ಆಪ್ತಸ್ನೇಹಿತರು. ಈಗ ಈತನದೇ ಕಾಡಿನ ಬದುಕಿನ ಕಥೆ ಹಾಲಿವುಡ್‌ನಲ್ಲಿ ಮತ್ತೊಂದು `ಟಾರ್ಜನ್~ ಚಿತ್ರವಾಗಿ ಮೂಡಿಬರಲಿದೆ. ಅದಕ್ಕೆ ನಾಯಕ ಕೂಡ ಈತನೇ.
 
ಬೈಕ್ ಎಂದರೆ ಸಲೀಸು

ಬೈಕ್ ಓಡಿಸುವಾಗ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಅಪಘಾತಕ್ಕೀಡಾದ ಅನೇಕ ದೃಷ್ಟಾಂತಗಳಿವೆ. ಆದರೆ ಈ ಸಾಹಸಿಗೆ ಬೈಕ್ ಓಡಿಸಲು ಕೈಗಳ ಅಗತ್ಯವೇ ಇಲ್ಲ! ಕೇವಲ ಕಾಲುಗಳ ಸಹಾಯದಿಂದಲೇ ಬೈಕನ್ನು ನಿಯಂತ್ರಿಸಿ ಸಾವಿರಾರು ಕಿ.ಮೀ. ದೂರ ಕ್ರಮಿಸಬಲ್ಲವರು ಬೀದರಿನ 26ರ ಹರೆಯದ ಇಸ್ಮಾಯಿಲ್.
 
ಬೀದರ್-ಬೆಂಗಳೂರು-ಮೈಸೂರು-ಚಾಮುಂಡಿ ಬೆಟ್ಟ-ಬೆಂಗಳೂರು-ಹೈದರಾಬಾದ್-ಬೀದರ್ ಹೀಗೆ ಇಷ್ಟು ನಗರಗಳ 1,800 ಕಿ.ಮೀ.ಯನ್ನು ಬೈಕ್‌ನ ಹ್ಯಾಂಡಲ್ ಮುಟ್ಟದೇನೇ ಕ್ರಮಿಸಿದ್ದು ಇಸ್ಮಾಯಿಲ್ ಸಾಧನೆ.

ಸದ್ಯ ಗಿನ್ನಿಸ್ ದಾಖಲೆ ಮಾಡುವ ಹಂಬಲದಲ್ಲಿರುವ ಇಸ್ಮಾಯಿಲ್ ಅದಕ್ಕಾಗಿ ದೆಹಲಿಯವರೆಗೆ ಹ್ಯಾಂಡಲ್ ಮುಟ್ಟದೆ ಕಾಲಿನ ಸಹಾಯದಿಂದಲೇ ಬೈಕ್ ಓಡಿಸಲು ಸಿದ್ಧತೆ ನಡೆಸಿದ್ದಾರೆ. ಬೈಕ್ ಮೇಲೆ 35 ವಿಧಗಳಲ್ಲಿ ಸ್ಟಂಟ್ ಪ್ರದರ್ಶನ ನೀಡುವ ಇಸ್ಮಾಯಿಲ್ ಬೈಕ್ ಓಡಿಸಲು ಕಲಿತುಕೊಂಡದ್ದು ತನ್ನ 8ನೇ ವಯಸ್ಸಿನಲ್ಲಿ.
 
ಬೈಕ್‌ರೇಸ್‌ಗಳಲ್ಲಿ ಅನೇಕ ಪದಕಗಳು ಇಸ್ಮಾಯಿಲ್ ಪಾಲಾಗಿವೆ. ಚಾಮುಂಡಿ ಬೆಟ್ಟವನ್ನೇರುವಾಗ ಬೈಕ್‌ನ ಟ್ಯಾಂಕ್ ಮೇಲೆ ನಿಂತುಕೊಂಡು ಸರ್ಕಸ್ ಮಾಡಿದ್ದ ಇಸ್ಮಾಯಿಲ್ ತಮ್ಮ ಸಾಮರ್ಥ್ಯವನ್ನು ಸಿನಿಮಾಗಳಲ್ಲೂ ಪ್ರದರ್ಶಿಸಿದ್ದಾರೆ. 

 ಅಂಧತ್ವಕ್ಕೆ ಸವಾಲು

ಆ  ಬಾಲಕ ಕೇವಲ ಮೂರು ವರ್ಷದವನಾಗಿದ್ದ. ಎಲ್ಲ ಮಕ್ಕಳಂತೆ ಚಟುವಟಿಕೆ ನಡೆಸುತ್ತಿದ್ದ ಆತನಿಗೆ ಎರವಾಗಿದ್ದು ಕ್ಯಾನ್ಸರ್. ಜೀವ ಉಳಿದರೂ ಆತ ತನ್ನೆರಡೂ ಕಣ್ಣುಗಳನ್ನು ಕಳೆದುಕೊಳ್ಳುವಂತಾಯಿತು. ಈಗ ಆತನಿಗೆ 17 ವರ್ಷ. ಕಣ್ಣಿಲ್ಲದಿದ್ದರೂ ಆತ ಪ್ರಪಂಚವನ್ನು ನೋಡಬಲ್ಲ. ಗ್ರಹಿಸಬಲ್ಲ. ಸಲೀಸಾಗಿ ಬೈಕ್ ಓಡಿಸಬಲ್ಲ. ಬಾಸ್ಕೆಟ್‌ಬಾಲ್‌ನಲ್ಲಿ ಚೆಂಡನ್ನು ನೇರವಾಗಿ `ಹೂಪ್~ಗೆ ಹಾಕಬಲ್ಲ.

ಕೇವಲ ಶಬ್ದವನ್ನು ಗ್ರಹಿಸುವ ಮೂಲಕವೇ ವಸ್ತುವಿನ ಗಾತ್ರ, ತೂಕ ಮುಂತಾದವುಗಳನ್ನು ವಿವರಿಸಬಲ್ಲ ಸಾಮರ್ಥ್ಯದ ಬೆನ್ ಅಂಡರ್‌ವುಡ್‌ಟಾಟ್ ತನ್ನ ಅಂಧತ್ವವನ್ನು ಸುಳ್ಳೆನಿಸುವಂತೆ ಬದುಕುತ್ತಿದ್ದಾನೆ. ಕೇವಲ ಶಬ್ದದಿಂದಲೇ ಎಲ್ಲವನ್ನೂ ಕಾಣಬಲ್ಲ ಈತ ಈಗ ಜನರ ಪಾಲಿಗೆ `ಸೂಪರ್‌ಮ್ಯಾನ್~.

  ನೃತ್ಯ ಪ್ರವೀಣೆ
ಕೇರಳದ ಕಲಾಮಂಡಲಮ್ ಹೇಮಲತಾ ಐದು ದಿನ ಸತತ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದವರು. ದಾಖಲೆ ನಿರ್ಮಿಸುವ ಅವರ ಮೊದಲ ಪ್ರಯತ್ನ ವಿಫಲವಾಗಿತ್ತು.
 
ಎರಡೂವರೆ ದಿನ (63 ಗಂಟೆ) ಸತತ ನೃತ್ಯ ಪ್ರದರ್ಶನ ಮಾಡಿದ್ದ ಹೇಮಲತಾ ಅನಾರೋಗ್ಯ ಕ್ಕೊಳಗಾಗಿ ಅರ್ಧಕ್ಕೆ ನಿಲ್ಲಿಸುವಂತಾಗಿತ್ತು. ಆದರೆ 2011ರ ಜನವರಿಯಲ್ಲಿ ಸತತ 123 ಗಂಟೆ 15 ನಿಮಿಷ ನರ್ತಿಸುವ ಮೂಲಕ ಗಿನ್ನಿಸ್ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT