ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಹೆಚ್ಚು ದಕ್ಷತೆ

ಪ್ರಯಾಣಿಕ ಸ್ನೇಹಿ ಸೇವೆಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ
Last Updated 26 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಹೆಚ್ಚಿನ ದಕ್ಷತೆ ಮತ್ತು ಪ್ರಯಾಣಿಕ ಸ್ನೇಹಿ ಸೇವೆ ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವುದಾಗಿ ರೈಲ್ವೆ ಸಚಿವ  ಬನ್ಸಲ್ ಘೋಷಿಸಿದ್ದಾರೆ.

ಮೊಬೈಲ್ ಮೂಲಕ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಅದರ ಸ್ಥಿತಿಗತಿ ಬಗ್ಗೆ ಸಂದೇಶ ರವಾನಿಸಲಾಗುವುದು ಎಂದೂ ಹೇಳಿದ್ದಾರೆ.

ಸದ್ಯ ಅಂತರ್ಜಾಲದ ಮೂಲಕ ಒದಗಿಸಲಾಗುತ್ತಿರುವ `ಇ- ಟಿಕೆಟ್' ಸೇವೆಯನ್ನು ಮೊಬೈಲ್‌ನಲ್ಲೂ ಉಪಲಬ್ಧ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ಸೇವೆಯು ಡಿಸೆಂಬರ್ ಅಂತ್ಯದ ಹೊತ್ತಿಗೆ ಜಾರಿಯಾಲಿದೆ. ಜೊತೆಗೆ ಟಿಕೆಟ್ ಕಾಯ್ದಿರಿಸುವಿಕೆ ಸ್ಥಿತಿಗತಿ ಮಾಹಿತಿಯನ್ನು `ಎಸ್‌ಎಂಎಸ್' ಮೂಲಕ ತಿಳಿಯಪಡಿಸಲಾಗುವುದು ಎಂದಿದ್ದಾರೆ.

`ಮುಂದಿನ ಪೀಳಿಗೆಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದರಿಂದ `ಇ- ಟಿಕೆಟ್' ಸೇವೆಯಲ್ಲಿ ಗಮನಾರ್ಹ ಬದಲಾವಣೆ ಸಾಧ್ಯವಿದೆ. ಉದ್ದೇಶಿತ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪ್ರತಿ ನಿಮಿಷಕ್ಕೆ 7,200 ಟಿಕೆಟ್‌ಗಳನ್ನು ಪಡೆಯಬಹುದು. ಸದ್ಯ ಈಗ ಪ್ರತಿ ನಿಮಿಷಕ್ಕೆ 2000 ಟಿಕೆಟ್‌ಗಳನ್ನು ಕಾಯ್ದಿರಿಸಲು ಮಾತ್ರ ಅವಕಾಶ ಇದೆ' ಎಂದು ಹೇಳಿದ್ದಾರೆ.

`ಸದ್ಯ 40 ಸಾವಿರ ಅಂತರ್ಜಾಲ ಬಳಕೆದಾರರು ಮಾತ್ರ ಏಕಕಾಲಕ್ಕೆ `ಇ- ಟಿಕೆಟ್' ಸೇವೆ ಪಡೆಯುವ ಅವಕಾಶ ಇದೆ. ಆದರೆ, ಹೊಸ ತಂತ್ರಜ್ಞಾನದಲ್ಲಿ ಒಮ್ಮೆಗೆ 1.20 ಲಕ್ಷ ಜನರು `ಇ- ಟಿಕೆಟ್' ಸೇವೆಗಾಗಿ ಅಂತರ್ಜಾಲದಲ್ಲಿ ಜಾಲಾಡಬಹುದು. ಅಂತರ್ಜಾಲ ಸೇವೆ ನಿಧಾನ ಆಗುವುದು ಇಲ್ಲವೆ ಸಂಪರ್ಕ ಕಡಿತಗೊಳ್ಳುವ ತೊಡಕುಗಳು ಇರುವುದಿಲ್ಲ' ಎಂದಿದ್ದಾರೆ.

`ಉದ್ದೇಶಿತ ತಂತ್ರಜ್ಞಾನವನ್ನು ಯಾವುದೇ ರೀತಿಯ ವಂಚನೆಗೆ ಅವಕಾಶ ಇಲ್ಲದಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಪಾರದರ್ಶಕ ಮತ್ತು ನ್ಯಾಯ ಸಮ್ಮತವಾಗಿ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ನಡೆಸಲು ಸಾಧ್ಯ' ಎಂದು ಬನ್ಸಲ್ ಹೇಳಿದ್ದಾರೆ.

`ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ರೈಲ್ವೆ ವೆಬ್‌ಸೈಟ್ ಮತ್ತು ಸಂಯೋಜಿತ ರೈಲು ವಿಚಾರಣೆ ಸೇವೆಯ (ದೂರವಾಣಿ `139') ಮೇಲಿನ ಅವಲಂಬನೆ ತಗ್ಗುತ್ತದೆ' ಎಂದೂ ಅವರು ಲೋಕಸಭೆಯಲ್ಲಿ ವಿವರಿಸಿದ್ದಾರೆ.

`ಐ- ಟಿಕೆಟ್' ಸೇವಾ ಅವಧಿ ವಿಸ್ತರಣೆ: ಅಂತರ್ಜಾಲದ ಟಿಕೆಟ್ ಕಾಯ್ದಿರಿಸುವಿಕೆ ಸೇವೆಯನ್ನು ಸತತ 23 ತಾಸುಗಳ ಕಾಲದವರೆಗೆ (ಮಧ್ಯರಾತ್ರಿ 12.30ರಿಂದ ಮಾರನೆ ದಿನ ಮಧ್ಯರಾತ್ರಿ 11.30ರ ವರೆಗೆ) ವಿಸ್ತರಿಸಲಾಗಿದೆ.

ರೈಲು ಸಂಚಾರದ ಬಗ್ಗೆ ಆ ಕ್ಷಣದ ಮಾಹಿತಿ ನೀಡುವ `ಆರ್‌ಟಿಐಎಸ್' ಸೇವೆಗೆ ಮತ್ತಷ್ಟು ರೈಲುಗಳ ಮಾಹಿತಿಯನ್ನು ಸೇರಿಸಲಾಗುವುದು. ಇದನ್ನು ಅಂತರ್ಜಾಲ ಮತ್ತು ಮೊಬೈಲ್ ಮೂಲಕ ದೊರಕುವಂತೆ ಮಾಡಲು ರೈಲ್ವೆ ಇಲಾಖೆ  ಚಿಂತಿಸಿದೆ.

ರೈಲ್ವೆ ಸೇವೆಗೂ `ಆಧಾರ್'
ರೈಲ್ವೆ ಸೇವೆಯಲ್ಲಿ `ಆಧಾರ್' ವ್ಯವಸ್ಥೆಯನ್ನು ಸಮಗ್ರವಾಗಿ ಬಳಕೆ ಮಾಡಿಕೊಳ್ಳುವ ಇಂಗಿತವನ್ನು ಸಚಿವ ಬನ್ಸಲ್ ವ್ಯಕ್ತಪಡಿಸಿದ್ದಾರೆ.

`ಆಧಾರ್' ಮೂಲಕ ಪ್ರಯಾಣಿಕರಿಗೆ ಸೇವೆಯನ್ನು ಸ್ಥೀರಿಕರಿಸಲು ಸಾಧ್ಯ. ಇದರಿಂದ ನೈಜ ಪ್ರಯಾಣಿಕರಿಗೆ ಕರಾರುವಾಕ್ ಸೇವೆಯನ್ನು ಕಲ್ಪಿಸಬಹುದು. ಮಾತ್ರವಲ್ಲದೆ, `ಆಧಾರ್' ಮೂಲಕ  ಇಲಾಖೆಯ ಸಿಬ್ಬಂದಿ ವರ್ಗದವರಿಗೂ ಉತ್ತಮ ಸೇವೆ ಒದಗಿಸಲು ಸಾಧ್ಯವಿದೆ. ಸಂಬಳ, ಪಿಂಚಣಿ, ಭತ್ಯೆಗಳನ್ನು ದೊರಕಿಸಿಕೊಡುವ ಚಿಂತನೆ ಇದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT