ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ `ಕೈ'ತಪ್ಪುವ ಭೀತಿಗೆ ಪ್ರತಿಭಟನೆ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕಗ್ಗಂಟಾಗಿರುವ ಬೆನ್ನಲ್ಲೇ, ಆಕಾಂಕ್ಷಿಗಳ ಬೆಂಬಲಿಗರ ಪ್ರತಿಭಟನೆಯ ಪರ್ವವೂ ಈಗ ಕಾಂಗ್ರೆಸ್ ಪಕ್ಷವನ್ನು ಕಾಡಲಾರಂಭಿಸಿದೆ. ಕೆಲವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿ ಕೆಪಿಸಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆಗಳು ನಡೆದವು.

ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರ ಮುಖಂಡರು ಬೆಂಗಳೂರಿಗೆ ವಾಪಸಾಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕ ಸೃಷ್ಟಿಸಿದೆ. ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವ ಕೆಲವರು ಪ್ರತಿಸ್ಪರ್ಧಿಗಳಿಗೆ ಅವಕಾಶ ನೀಡದಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆ ಸದಸ್ಯ ಮುನಿರತ್ನ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿ ಆಕಾಂಕ್ಷಿಗಳ ಬೆಂಬಲಿಗರು ಸೋಮವಾರ ಪ್ರತಿಭಟನೆಗಳನ್ನು ನಡೆಸಿದರು.
ಶ್ರವಣಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದ ಪುಟ್ಟೇಗೌಡ ಇತ್ತೀಚೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ತೊರೆದಿರುವ ಅವರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ. ಶ್ರವಣಬೆಳಗೊಳ ಕ್ಷೇತ್ರದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದೆ.

ಸ್ಥಳೀಯ ಕಾಂಗ್ರೆಸ್ ಮುಖಂಡ ಗೋಪಾಲಸ್ವಾಮಿ ನೇತೃತ್ವದಲ್ಲಿ ಹಲವರು ಕೆಪಿಸಿಸಿ ಕಚೇರಿ ಎದುರು ಧರಣಿ ನಡೆಸಿದರು. `ಪಕ್ಷದ ಸಕ್ರಿಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಬಾರದು' ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಪುಟ್ಟೇಗೌಡರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರನ್ನು ಭೇಟಿಮಾಡಿದ ಪ್ರತಿಭಟನಾಕಾರರು, `ಜೆಡಿಎಸ್‌ನಲ್ಲಿ ಟಿಕೆಟ್ ದೊರೆಯುವುದಿಲ್ಲ ಎಂಬುದು ಖಾತರಿಯಾದ ಬಳಿಕ ಪುಟ್ಟೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದಾರೆ. ಅವರಿಗೆ ಟಿಕೆಟ್ ನೀಡಬಾರದು. ಪಕ್ಷ ಸಂಘಟನೆಗಾಗಿ ಶ್ರಮಿಸಿದವರಿಗೆ ಟಿಕೆಟ್ ನೀಡಬೇಕು' ಎಂದು ಒತ್ತಾಯಿಸಿದರು.

ಅವರ ಅಹವಾಲನ್ನು ಆಲಿಸಿದ ಶಂಕರ್, `ಟಿಕೆಟ್ ಹಂಚಿಕೆಯಲ್ಲಿ ಕೆಪಿಸಿಸಿ ಪಾತ್ರ ಅತ್ಯಂತ ಕಡಿಮೆ. ಪಕ್ಷದ ಹಿತದೃಷ್ಟಿಯಿಂದ ಯಾರನ್ನು ಚುನಾವಣಾ ಕಣಕ್ಕೆ ಇಳಿಸಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಶೀಘ್ರದಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಎಲ್ಲರೂ ಹೈಕಮಾಂಡ್ ನಿರ್ದೇಶನದ ಪ್ರಕಾರ ಕೆಲಸ ಮಾಡೋಣ' ಎಂದು ಸಮಾಧಾನಪಡಿಸಲು ಯತ್ನಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರನ್ನು ಭೇಟಿಮಾಡಿದ ಪ್ರತಿಭಟನಾಕಾರರು, `ಜೆಡಿಎಸ್‌ನಲ್ಲಿ ಟಿಕೆಟ್ ದೊರೆಯುವುದಿಲ್ಲ ಎಂಬುದು ಖಾತರಿಯಾದ ಬಳಿಕ ಪುಟ್ಟೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದಾರೆ. ಅವರಿಗೆ ಟಿಕೆಟ್ ನೀಡಬಾರದು. ಪಕ್ಷ ಸಂಘಟನೆಗಾಗಿ ಶ್ರಮಿಸಿದವರಿಗೆ ಟಿಕೆಟ್ ನೀಡಬೇಕು' ಎಂದು ಒತ್ತಾಯಿಸಿದರು.

ಅವರ ಅಹವಾಲನ್ನು ಆಲಿಸಿದ ಶಂಕರ್, `ಟಿಕೆಟ್ ಹಂಚಿಕೆಯಲ್ಲಿ ಕೆಪಿಸಿಸಿ ಪಾತ್ರ ಅತ್ಯಂತ ಕಡಿಮೆ. ಪಕ್ಷದ ಹಿತದೃಷ್ಟಿಯಿಂದ ಯಾರನ್ನು ಚುನಾವಣಾ ಕಣಕ್ಕೆ ಇಳಿಸಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಶೀಘ್ರದಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಎಲ್ಲರೂ ಹೈಕಮಾಂಡ್ ನಿರ್ದೇಶನದ ಪ್ರಕಾರ ಕೆಲಸ ಮಾಡೋಣ' ಎಂದು ಸಮಾಧಾನಪಡಿಸಲು ಯತ್ನಿಸಿದರು.

ಮುನಿರತ್ನ ವಿರುದ್ಧ ಪ್ರದರ್ಶನ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಮುನಿರತ್ನ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪಿ.ಎನ್.ಕೃಷ್ಣಮೂರ್ತಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಹನುಮಂತರಾಯಪ್ಪ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಅವರು ಕೂಡ ಇದೇ ಕ್ಷೇತ್ರದಲ್ಲಿ ಟಿಕೆಟ್ ಬಯಸಿದ್ದಾರೆ. ಮುನಿರತ್ನ ಅವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂಬ ಸುದ್ದಿ ಇತರರ ನಿದ್ದೆಗೆಡಿಸಿದೆ.

ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕೃಷ್ಣಮೂರ್ತಿ ಬೆಂಬಲಿಗರು, ಮುನಿರತ್ನ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದರು. 2010ರ ಜೂನ್ 1ರಂದು ಗಂಗಾನಗರದ ಸಿಬಿಐ ವೃತ್ತದ ಬಳಿ ಗೋಡೆ ಉರುಳಿ ಸಂಜನಾ ಎಂಬ ವಿದ್ಯಾರ್ಥಿನಿ ಮೃತಪಟ್ಟ ಘಟನೆಯನ್ನು ಪ್ರಸ್ತಾಪಿಸಿದ ಪ್ರತಿಭಟನಾಕಾರರು, ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೃಷ್ಣಮೂರ್ತಿ ಅವರಿಗೇ ಟಿಕೆಟ್ ನೀಡುವಂತೆ ಒತ್ತಾಯಿಸಿ ಕೆಪಿಸಿಸಿ ಕಚೇರಿ ಒಳಕ್ಕೆ ನುಗ್ಗುವುದಕ್ಕೂ ಯತ್ನಿಸಿದರು.

ಇನ್ನೊಂದೆಡೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಗೌಡ ಅವರಿಗೆ ಟಿಕೆಟ್ ನೀಡದಂತೆ ಕ್ಷೇತ್ರದ ವಿವಿಧ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳು ಸೋಮವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತೇಜಸ್ವಿನಿ ಪಕ್ಷದ ವಿರುದ್ಧವೇ ಹೇಳಿಕೆ ನೀಡಿ ಹಲವು ಬಾರಿ ಮುಜುಗರ ಉಂಟುಮಾಡಿರುವುದರಿಂದ ಅವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಮತ್ತಷ್ಟು ಪ್ರತಿಭಟನೆ ಸಾಧ್ಯತೆ: ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಯುತ್ತಿದೆ. ಕೆಪಿಸಿಸಿ ಚುನಾವಣಾ ಸಮಿತಿ, ಎಐಸಿಸಿ ನೇಮಕ ಮಾಡಿದ್ದ ಅಭ್ಯರ್ಥಿಗಳ ಆಯ್ಕೆ ಪರಿಶೀಲನಾ ಸಮಿತಿ, ಎಐಸಿಸಿ ಚುನಾವಣಾ ಸಮಿತಿ ಸಭೆಗಳ ಬಳಿಕವೂ ಪೈಪೋಟಿ ನಿಂತಿಲ್ಲ.
ಹೆಚ್ಚು ಮಂದಿ ಆಕಾಂಕ್ಷಿಗಳಿರುವ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಂಭಾವ್ಯರ ಪಟ್ಟಿ ಪೈಪೋಟಿಗೆ ಮತ್ತಷ್ಟು ಕಿಚ್ಚುಹಚ್ಚಿದೆ.

ಕೆ.ಆರ್.ಪುರ, ರಾಜಾಜಿನಗರ, ಹೆಬ್ಬಾಳ, ಬೆಂಗಳೂರು ದಕ್ಷಿಣ, ಮಡಿಕೇರಿ, ಮಂಡ್ಯ, ಬಳ್ಳಾರಿ ನಗರ ಮತ್ತಿತರ ಕ್ಷೇತ್ರಗಳಲ್ಲಿ ಹಲವು ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಈ ಕ್ಷೇತ್ರಗಳ ಸಂಭಾವ್ಯರ ಪಟ್ಟಿ ಉಳಿದ ಆಕಾಂಕ್ಷಿಗಳ ಕೋಪಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾದ ಬಳಿಕ ಅವರಲ್ಲಿ ಬಹುತೇಕರು ಪ್ರತಿಭಟನೆಯ ಹಾದಿ ಹಿಡಿಯುವ ಸಾಧ್ಯತೆ ಇದೆ. ಕೆಲವು ಮುಖಂಡರು ಬೆಂಬಲಿಗರ ಸಭೆಗಳನ್ನು ನಡೆಸುವ ಮೂಲಕ ಪ್ರತಿಭಟನೆಯ ಹಾದಿ ಹಿಡಿಯುವ ಸೂಚನೆ ನೀಡಿದ್ದಾರೆ.

ಟಿಕೆಟ್ ಆಕಾಂಕ್ಷಿಗಳ ಮುನಿಸು, ಪ್ರತಿಭಟನೆಯ ಸುದ್ದಿ ತಿಳಿದ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಕಚೇರಿಯಿಂದ ದೂರ ಉಳಿದಿದ್ದಾರೆ. ಪಕ್ಷದ ಮುಖಂಡರೂ ಸೋಮವಾರ ಅತ್ತ ಬರಲಿಲ್ಲ. ಪ್ರತಿಭಟನೆ ಕಾರಣದಿಂದ ಕೆಪಿಸಿಸಿ ಕಚೇರಿಗೆ ಹೆಚ್ಚಿನ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿದೆ. ಹಗಲಿನ ವೇಳೆಯಲ್ಲಿ 15ಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT