ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ಖಚಿತವಾಗದಿದ್ದರೂ ಪ್ರಚಾರ ಆರಂಭ: ಅಭ್ಯರ್ಥಿಗಳ ಮನದಲ್ಲಿ ತಳಮಳ

ವಿಧಾನಸಭೆ ಚುನಾವಣೆ 2013
Last Updated 2 ಏಪ್ರಿಲ್ 2013, 5:37 IST
ಅಕ್ಷರ ಗಾತ್ರ

ಮಂಡ್ಯ: ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಪರಿಣಾಮ ಇಂಥವರಿಗೆ ಟಿಕೆಟ್ ಎಂದು ತಾಸಿಗೊಂದು ಊಹಾಪೋಹ ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಆಕಾಂಕ್ಷಿ ಅಭ್ಯರ್ಥಿಗಳ ಮನದಲ್ಲಿ ತಳಮಳ ಹೆಚ್ಚಾಗಿದೆ.

ಮಂಡ್ಯದಿಂದ ಇಂಥವರಿಗೆ, ಮದ್ದೂರಿನಿಂದ ಇಂಥವರಿಗೆ ಖಚಿತವಾಗಿದೆ ಎಂದು ಕೆಲವರು ತಮಗೆ ತಿಳಿದಿದೆ ಎಂಬಂತೆ ಸುದ್ದಿಯನ್ನು ಹರಿ ಬಿಡುತ್ತಾರೆ. ಆ ಸುದ್ದಿ ಬಾಯಿಂದ, ಬಾಯಿಗೆ ಹರಡುತ್ತಾ ಸಾಗುತ್ತದೆ. ಇದನ್ನು ಕೇಳಿದ ಕೆಲ ಹಿಂಬಾಲಕರು ಕೂಡಲೇ ತಮ್ಮ ನಾಯಕರಿಗೆ ದೂರವಾಣಿ ಕರೆ ಮಾಡಿ ಇಂಥವರಿಗೆ ಟಿಕೆಟ್ ಸಿಕ್ಕಿದೆಯಂತೆ ಹೌದಾ..? ಎಂದು ವಿಚಾರಿಸುತ್ತಾರೆ. ಇದಕ್ಕೆ ಉತ್ತರ ಹೇಳಿ, ಹೇಳಿ ಅಭ್ಯರ್ಥಿಗಳು ಸುಸ್ತಾಗಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯ ಬಗೆಗೂ ವ್ಯಾಪಕ ಚರ್ಚೆಯಾಗುತ್ತಿದೆ. ಯಾರಿಗೆ ಟಿಕೆಟ್ ಸಿಗಬಹುದು. ಯಾಕೆ ಕೊಡಬೇಕು. ಕೊಟ್ಟರೆ ಅವರು ಗೆಲುವನ್ನು ಹೇಗೆ ಸಾಧಿಸುತ್ತಾರೆ ಎಂಬ ಲೆಕ್ಕಾಚಾರಗಳು ಜೋರಾಗಿಯೇ ಸಾಗಿವೆ.

ಜಿಲ್ಲೆಯ ಕೆಲವು ಹಾಲಿ ಶಾಸಕರ ಹೆಸರು ಪ್ರಕಟವಾಗದಿದ್ದರೂ, ಅವರಿಗೆ ಮೌಖಿಕವಾಗಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಉಳಿದಂತೆ ಸ್ಪರ್ಧಿಸ ಬಯಸುವ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗಿದೆ. ಎಲ್ಲರೂ ತೆರೆಮರೆಯಲ್ಲಿ ಟಿಕೆಟ್‌ಗಾಗಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿಯ ಟಿಕೆಟ್ ಹಂಚಿಕೆಯೂ ಹೆಚ್ಚೂ ಕಡಿಮೆ ಅಂತಿಮಗೊಂಡಿದೆ. ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷಗಳು ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿವೆ. ಉಳಿದ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗುವವರಿಗಾಗಿ ಕಾದು ಕುಳಿತಿವೆ.

ಬಂಡಾಯದ ಭೀತಿ: ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಮುಖ ಪಕ್ಷಗಳು ಅಂತಿಮಗೊಳಿಸಿವೆ. ಹೆಸರು ಪ್ರಕಟಿಸಿದರೆ ಬಂಡಾಯ ಏಳಬಹುದು ಎಂಬ ಭೀತಿಯಿಂದ ಪ್ರಕಟಿಸಲು ಮುಂದಾಗುತ್ತಿಲ್ಲ.

ಒಂದು ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಅವರಿಗೂ ಚುನಾವಣೆ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ. ಬಂಡಾಯ ಹಾಗೂ ಭಿನ್ನಮತದಿಂದಾಗಿ ಬೇರೆ ಪಕ್ಷಕ್ಕೆ ಪಕ್ಷಾಂತರವಾಗುವುದನ್ನು ತಡೆಯುವ ಉದ್ದೇಶದಿಂದ ಪ್ರಕಟಿಸುತ್ತಿಲ್ಲ ಎನ್ನುತ್ತಾರೆ ಪಕ್ಷದ ಅಧ್ಯಕ್ಷರೊಬ್ಬರು.

ಪ್ರಚಾರ ಆರಂಭ: ಜಿಲ್ಲೆಯ ಬಹುತೇಕ ಟಿಕೆಟ್ ಆಕಾಂಕ್ಷಿಗಳು ಪ್ರಚಾರವನ್ನು ಆರಂಭಿಸಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಇಬ್ಬರು, ಮೂವರು ಅಭ್ಯರ್ಥಿಗಳು ನಾನೇ ಆ ಪಕ್ಷದ ಅಧಿಕೃತ ಅಭ್ಯರ್ಥಿಯಾಗುತ್ತೇನೆ. ಮತ ನೀಡಿ ಎಂದು ಮನೆ, ಮನೆಗಳಿಗೆ ತೆರಳಿ ಮತ ಕೇಳುತ್ತಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವರು, ಇಂಥ ಪಕ್ಷದಿಂದ ಅಭ್ಯರ್ಥಿಯಾದ ನನಗೆ ಮತ ನೀಡಬೇಕು ಎಂಬ ಕರಪತ್ರಗಳನ್ನು ಹಂಚುವ ಮೂಲಕ ಪ್ರಚಾರಕ್ಕೆ ಮುಂದಾಗಿದ್ದಾರೆ.

ಟಿಕೆಟ್ ನೀಡಿದ ಮೇಲೆಯೇ ಪ್ರಚಾರ ಆರಂಭಿಸಿದರೆ ಕ್ಷೇತ್ರ ಪೂರ್ತಿ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈಗಲೇ ಆರಂಭಿಸಿದ್ದೇವೆ. ನನಗೇ ಟಿಕೆಟ್ ಸಿಗುವುದು ಖಚಿತ ಎನ್ನುತ್ತಾರೆ ಆಕಾಂಕ್ಷಿ ಅಭ್ಯರ್ಥಿಯೊಬ್ಬರು. ಯಾರಿಗಾದರೂ ಟಿಕೆಟ್ ನೀಡಲಿ. ಕೂಡಲೇ ಹೆಸರನ್ನು ಪ್ರಕಟಿಸಬೇಕು. ದಿನ ಕಳೆದಂತೆ ಗೊಂದಲ ಜಾಸ್ತಿಯಾಗುತ್ತದೆ. ಬೆಂಬಲಿಗರ ಪ್ರಶ್ನೆಗೂ ಉತ್ತರ ಹೇಳಿ, ಹೇಳಿ ಸಾಕಾಗಿದೆ ಎನ್ನುತ್ತಾರೆ ಮತ್ತೊಬ್ಬ ಅಭ್ಯರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT