ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್: ವೀಕ್ಷಕರ ಮುಂದೆ ಶಕ್ತಿ ಪ್ರದರ್ಶನ

Last Updated 3 ಡಿಸೆಂಬರ್ 2012, 6:47 IST
ಅಕ್ಷರ ಗಾತ್ರ

ಬೀದರ್: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮುಖಂಡರು ವೀಕ್ಷಕರ ಎದುರು ಶಕ್ತಿ ಪ್ರದರ್ಶನ ನಡೆಸಿದ ಪ್ರಸಂಗ ನಗರದಲ್ಲಿ ಭಾನುವಾರ ನಡೆಯಿತು.

ಬೀದರ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳ ಮಾಹಿತಿ ಪಡೆಯಲು ಕಾಂಗ್ರೆಸ್ ವೀಕ್ಷಕರಾಗಿ ಪ್ರಕಾಶ್ ರಾಠೋಡ್ ಹಾಗೂ ಎಸ್.ಎ. ಜಿದ್ದಿ ನಗರಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಭೆಗೆ ಮುನ್ನವೇ ನಗರದ ಅಕ್ಕ ಮಹಾದೇವಿ ಕಾಲೇಜು ಎದುರು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ವೀಕ್ಷಕರು ಆಗಮಿಸುತ್ತಲೇ ಆಯಾ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರಿಗೇ ಟಿಕೆಟ್ ಕೊಡಬೇಕು ಎಂದು ಘೋಷಣೆಗಳನ್ನು ಕೂಗಿದರು. ಟಿಕೇಟ್ ಆಕಾಂಕ್ಷಿಗಳು ವೀಕ್ಷಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗಲೂ ಅವರ ಪರ ಘೋಷಣೆಗಳನ್ನು ಹಾಕಿದರು. ಇದು ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು. ಆಗ ಪರಿಸ್ಥಿತಿ ತಿಳಿಗೊಳಿಸಲು ವೀಕ್ಷಕರು `ಜಯಕಾರ ಹಾಕಿದರೆ ಟಿಕೇಟ್ ಸಿಗಲ್ಲ' ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಖಂಡ್ರೆ ಅವರು ಮೇಜು ಹತ್ತಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.ನಾವು ಟಿಕೇಟ್ ಆಕಾಂಕ್ಷಿಗಳ ವಿವರಗಳನ್ನಷ್ಟೇ ಪಡೆಯಲು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಕಾರ್ಯಗಳ ಮಾಹಿತಿ ಏನಿದೆ ಕೊಡಿ, ಪಕ್ಷದ ವರಿಷ್ಠರಿಗೆ ಮುಟ್ಟಿಸುತ್ತೇವೆ ಎಂದು ವೀಕ್ಷಕರು ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ಟಿಕೇಟ್‌ಗಾಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್, ಮಾಜಿ ಸದಸ್ಯ ಅಮೃತರಾವ್ ಚಿಮಕೋಡ್ ಅವರು ನೂರಾರು ಜನ ಬೆಂಬಲಿಗರೊಂದಿಗೆ  ಮನವಿ ಸಲ್ಲಿಸಿದರು. ತಮ್ಮ ಕಾರ್ಯಗಳ ಕೈಪಿಡಿ, ಮಾಹಿತಿಯನ್ನೂ ವೀಕ್ಷಕರಿಗೆ ನೀಡಿದರು. ಬೀದರ್ ದಕ್ಷಿಣ ಕ್ಷೇತ್ರಕ್ಕಾಗಿ ಮನವಿ ಸಲ್ಲಿಸಿದ ಇತರರಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪಂಡಿತರಾವ್ ಚಿದ್ರಿ, ಮುರಳಿಧರರಾವ್ ಎಕಲಾರಕರ್, ಪ್ರಮುಖರಾದ ಪ್ರದೀಪ್ ಕುಶನೂರು, ಸಂಜಯ್ ಜಾಗೀರದಾರ್,  ರುಕ್ಮಾರೆಡ್ಡಿ ಪಾಟೀಲ್, ಮಡಿವಾಳಪ್ಪ ಕಾರಭಾರಿ, ಬಕ್ಕಪ್ಪ ಶೇರಿಕಾರ ಹಾಗೂ ಪ್ರಭಾಕರ್ ಸೇರಿದ್ದಾರೆ.


ಬೀದರ್ ಕ್ಷೇತ್ರದ ಟಿಕೇಟ್‌ಗಾಗಿ ಹಾಲಿ ಶಾಸಕ ರಹೀಮ್‌ಖಾನ್, ಪ್ರಮುಖರಾದ ಮಹಮ್ಮದ್ ಸಲಿಮುದ್ದೀನ್, ಶೇಕ್ ಹಾಜಿ, ಪ್ರಭಾಕರ್ ಹಾಗೂ ಶಿರೋಮಣಿ ಶ್ರೀಮಂಡಲ್ ಮನವಿ ಸಲ್ಲಿಸಿದರು. ಒಟ್ಟಾರೆಯಾಗಿ ಬೀದರ್ ಕ್ಷೇತ್ರಕ್ಕಾಗಿ 5 ಮತ್ತು ಬೀದರ್ ದಕ್ಷಿಣ ಕ್ಷೇತ್ರಕ್ಕಾಗಿ ಒಟ್ಟು 11 ಜನ ಟಿಕೇಟ್‌ನ ಬೇಡಿಕೆ ಮಂಡಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅನ್ವರ್ ಮುಧೋಳ್, ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದಕುಮಾರ್ ಅರಳಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT