ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ಗಾಗಿ ಪಕ್ಷ ಸೇರ್ಪಡೆಗೆ ಅವಕಾಶ ಇಲ್ಲ

Last Updated 3 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ಮಂಗಳೂರು: `ವಿಧಾನ ಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಉದ್ದೇಶಕ್ಕಾಗಿ ಪಕ್ಷಕ್ಕೆ ಸೇರುವವರಿಗೆ ಮಣೆ ಹಾಕಬಾರದು. ಕಾರ್ಯಕರ್ತರಾಗಿ ಆತ್ಮ ಸಮರ್ಪಣಾ ಭಾವದಿಂದ ದುಡಿಯಲು ಸಿದ್ಧರಾಗಿರುವವರನ್ನು ಮಾತ್ರ ಪಕ್ಷಕ್ಕೆ ಬರಮಾಡಿಕೊಳ್ಳಬೇಕು~ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.

ಇಲ್ಲಿನ ಉರ್ವ ಸ್ಟೋರ್ ಮೈದಾನದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಂಗಳವಾರ ನಡೆದ `ಕಾಂಗ್ರೆಸ್‌ನೊಂದಿಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಅಧಿಕಾರ ಅನುಭವಿಸಿ, ಬೇರೆ ಪಕ್ಷದಲ್ಲಿ ಸೀಟು ಸಿಗದ ಕಾರಣ ಕಾಂಗ್ರೆಸ್ ಸೇರುವವರು ನಮಗೆ ಬೇಡ~ ಎಂದು ಖಡಾಖಂಡಿತವಾಗಿ ಹೇಳಿದರು.

`ಬಿಜೆಪಿ ಹೇಳುವುದು ಒಂದು, ಮಾಡುವುದು ಇನ್ನೊಂದು. ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಗೆ ತರುವುದಿಲ್ಲ ಎಂದು ಹೇಳಿ ಪಾಲಿಕೆಯಲ್ಲಿ ಅಧಿಕಾರ ಪಡೆದ ಬಿಜೆಪಿ ಮೊದಲು ಮಾಡಿದ ಕೆಲಸ ಅದನ್ನು ಜಾರಿಗೆ ತಂದಿದ್ದು. ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದಿನ ತೆರಿಗೆ ಪದ್ಧತಿಯನ್ನೇ ತರಲಿದೆ~ ಎಂದರು.

ಎಐಸಿಸಿ ಕಾರ್ಯದರ್ಶಿ ವಿನಯ ಕುಮಾರ್ ಸೊರಕೆ ಮಾತನಾಡಿ, `ರಾಜ್ಯದಲ್ಲಿ ಬರಗಾಲದಿಂದಾಗಿ 39 ಲಕ್ಷ ಜಾನುವಾರುಗಳು ಮೇವಿನ ಕೊರತೆ ಎದುರಿಸುತ್ತಿದ್ದರೆ, ಸರ್ಕಾರ ಕೇವಲ 1 ಲಕ್ಷ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿದೆ. ಕಾವೇರಿ ವಿವಾದವನ್ನು ಬಗೆಹರಿಸುವಲ್ಲಿಯೂ ವಿಫಲವಾಗಿದೆ. ಆದರೆ ಅಧಿಕಾರಕ್ಕಾಗಿ ಕಚ್ಚಾಡುವುದನ್ನು ಬಿಜೆಪಿ ಇನ್ನೂ ಬಿಟ್ಟಿಲ್ಲ~ ಎಂದು ಟೀಕಿಸಿದರು.

`ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಬಿಜೆಪಿ ವೃಥಾ ಗೊಂದಲ ಸೃಷ್ಟಿಸಿದೆ. ರೈತರ ಉತ್ಪನ್ನಗಳ ಬೆಲೆಯ ಶೇ 67ಪಾಲನ್ನು ಮಧ್ಯವರ್ತಿಗಳು ಕಬಳಿಸುತ್ತಿದ್ದಾರೆ. ಎಫ್‌ಡಿಐನಿಂದ ರೈತರಿಗೆ ಭಾರಿ ಪ್ರಯೋಜನವಾಗಲಿದೆ~ ಎಂದರು.

`ಕಲ್ಲಿದ್ದಲು ಹಗರಣದ ಹೆಸರಿನಲ್ಲಿ ಬಿಜೆಪಿ ಸಂಸತ್ತಿನ ಕಲಾಪವನ್ನು ವ್ಯರ್ಥಗೊಳಿಸಿತು. ಕಲ್ಲಿದ್ದಲನ್ನು ಹರಾಜು ಹಾಕುತ್ತಿದ್ದರೆ ವಿದ್ಯುತ್ ಬೆಲೆ 20 ಪಟ್ಟು ಹೆಚ್ಚುತ್ತಿತ್ತು. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಗ್ರಾಹಕರಿಗೆ ಮೂರು ಸಿಲಿಂಡರ್‌ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುತ್ತಿದೆ~ ಎಂದರು.

`ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ ಎಂದು ಬಿಜೆಪಿ ಮುಖಂಡರೇ ಹೇಳುತ್ತಿದ್ದಾರೆ. ಕಾರ್ಯಕರ್ತರು ಶ್ರಮ ವಹಿಸಿ ಆ ಮಾತನ್ನು ನಿಜಗೊಳಿಸಬೇಕು~ ಎಂದರು.

ಕೆಎಸ್‌ಎಂ ಮಸೂದ್ ಮಾತನಾಡಿ, `ಹೊರಗಿನವರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ. ಪಕ್ಷದಲ್ಲಿದ್ದವರನ್ನು ಹೇಗೆ ಕಾಣಲಾಗುತ್ತಿದೆ ಎಂಬತ್ತಲೂ ಗಮನಹರಿಸಬೇಕು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಬೇಕು~ ಎಂದರು.
ಮಾಜಿ ಸಂಸದ ಇಬ್ರಾಹಿಂ ಮಾತನಾಡಿ, `ಈ ಹಿಂದೆ ಪಕ್ಷಕ್ಕಾಗಿ ದುಡಿದವರನ್ನು ಮತ್ತೆ ಕರೆದು ಶಕ್ತಿ ತುಂಬಬೇಕು. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಕ್ರೈಸ್ತರು, ಮುಸ್ಲಿಮರು ಕಾಂಗ್ರೆಸನ್ನು ಮತ್ತೆ ಅಧಿಕಾರಕ್ಕೆ ತರಬೇಕು~ ಎಂದರು.

`ಕಾವೇರಿ: ಶೆಟ್ಟರ್ ವಿಫಲ~  
`ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನದಿನೀರು ಹಂಚಿಕೆ ಪ್ರಾಧಿಕಾರದ ಮುಂದೆ ಸಂಕಷ್ಟ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಜಗದೀಶ ಶೆಟ್ಟರ್ ವಿಫಲರಾಗಿದ್ದಾರೆ. ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡುವ ಬದಲು ಅವರು ಸಭೆಯನ್ನೇ ಬಹಿಷ್ಕರಿಸಿದರು~ ಎಂದು ಪೂಜಾರಿ ಟೀಕಿಸಿದರು.

ಪಕ್ಷದ ಕಾರ್ಯಕರ್ತರು ಮಳೆಯಲ್ಲಿ ಕೊಡೆ ಹಿಡಿದುಕೊಂಡು ಮಾತು ಆಲಿಸಿದರೆ ಮುಖಂಡರೂ ಕೊಡೆ ಹಿಡಿದುಕೊಂಡೇ ಭಾಷಣ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT