ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಕನ್ನಡ ವಿರೋಧಿಯಾಗಿರಲಿಲ್ಲ

Last Updated 10 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಶೃಂಗೇರಿ ಮಠದಲ್ಲಿ ದೊರೆತಿರುವ ಪ್ರಮುಖ ಸಾಕ್ಷ್ಯಗಳು ಟಿಪ್ಪು ಸುಲ್ತಾನ್ ಕನ್ನಡ ವಿರೋಧಿಯಾಗಿರಲಿಲ್ಲ ಎನ್ನುವುದನ್ನು ಪುಷ್ಟೀಕರಿಸುತ್ತವೆ~ ಎಂದು ಮಾಜಿ ಸಚಿವ ಡಾ.ಮುಮ್ತಾಜ್ ಅಲಿಖಾನ್ ಹೇಳಿದರು.

ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 261ನೇ ಟಿಪ್ಪು ಸುಲ್ತಾನ್ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿರುವ ಟಿಪ್ಪುವಿನ ವ್ಯಕ್ತಿತ್ವಕ್ಕೆ ಮನ್ನಣೆ ನೀಡಿ ಆತನ ಜನ್ಮ ದಿನವನ್ನು ರಾಜ್ಯ ಸರ್ಕಾರ ಸಾರ್ವತ್ರಿಕ ರಜಾ ದಿನವನ್ನಾಗಿ ಘೋಷಿಸಬೇಕು~ ಎಂದು ಅವರು ಒತ್ತಾಯಿಸಿದರು.

`ಕೆಲವು ಕೋಮುವಾದಿ ಶಕ್ತಿಗಳು ಟಿಪ್ಪುವನ್ನು ವಿನಾಕಾರಣ ಕನ್ನಡ ವಿರೋಧಿ, ಮತಾಂಧನೆಂದು ಬಿಂಬಿಸುತ್ತಿವೆ. ಈ ಶಕ್ತಿಗಳ ವಿರುದ್ಧ ಪ್ರಜ್ಞಾವಂತ ಸಮಾಜ ಹೋರಾಡಬೇಕಿದೆ. ಟಿಪ್ಪು ಇಸ್ಲಾಂ ಧರ್ಮದ ಅನುಯಾಯಿ ಆಗಿದ್ದರೂ ಶೃಂಗೇರಿ ಮತ್ತು ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಧರ್ಮಸಹಿಷ್ಣುನಾಗಿದ್ದ ಎಂಬುದು ಸಾಬೀತಾಗುತ್ತದೆ. ಪ್ರಸ್ತುತ ಪೀಳಿಗೆ ಇತಿಹಾಸವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ~ ಎಂದರು.

`ಟಿಪ್ಪು ಪ್ರಗತಿಪರ ಧೋರಣೆಯನ್ನು ಹೊಂದಿದ್ದ. ಕಂದಾಯ ವಸೂಲಾತಿ ನಿಯಮಗಳನ್ನು ಸಡಿಲಗೊಳಿಸಿ ಉಳುವವನಿಗೇ ಭೂಮಿ ಎಂಬ ಕಾನೂನನ್ನು ಜಾರಿಗೆ ತರಲು ಚಿಂತಿಸಿದ್ದ. ನಾಡಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ನೂತನ ಯೋಜನೆಗಳನ್ನು ಜಾರಿಗೊಳಿಸಿದ್ದ ಟಿಪ್ಪುವಿನ ಆದರ್ಶಗಳು ಮುಂದಿನ ಪೀಳಿಗೆಗೆ ಅನುಸರಣೀಯ~ ಎಂದು ತಿಳಿಸಿದರು.

ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ಹಾಸಿಂಫೀರ್ ಐ.ವಾಲೇಕರ್, `ದೇಶಕ್ಕಾಗಿ ಮಕ್ಕಳನ್ನೇ ಒತ್ತೆಯಿಟ್ಟು ಹೋರಾಡಿದ ಟಿಪ್ಪುವಿನ ವ್ಯಕ್ತಿತ್ವವನ್ನು ಸರಿಯಾಗಿ ಅರಿತುಕೊಳ್ಳದೇ ಧರ್ಮಾಂಧ ಸಾಹಿತಿಗಳು ಸುಮ್ಮನೆ ಟೀಕೆ ಮಾಡುತ್ತಿರುವುದು ಸರಿಯಲ್ಲ. ಶೃಂಗೇರಿ ಮಠದ ಧರ್ಮಗುರು ರಾಜ್ಯವನ್ನು ತೊರೆಯುವ ಸಂದರ್ಭದಲ್ಲಿ ಅವರ ಮನವೊಲಿಸಲು ಕನ್ನಡದಲ್ಲೇ ಪತ್ರ ಬರೆದಿರುವ ಟಿಪ್ಪು ಹೇಗೆ ಕನ್ನಡ ವಿರೋಧಿಯಾಗುತ್ತಾನೆ~ ಎಂದು ಪ್ರಶ್ನಿಸಿದರು.

ಛಲವಾದಿ ಮಹಾಸಂಸ್ಥಾನ ಮಠದ ಬಸವನಾಗಿದೇವ ಶರಣ, ಇಸ್ಲಾಂ ಧರ್ಮಗುರು ಮೌಲ್ವಿ ಹಜರತ್ ಅರ್ಷದ್ ರಜ, ಮಹಾಬೋಧಿ ಮಿಷನ್ ಬೌದ್ದ ಬಿಕ್ಕು ಬಂತೇ ಬುದ್ದಪ್ರಕಾಶ್, ಅಹಿಂದ ಅಧ್ಯಕ್ಷ ಕೆ.ಮುಕುಡಪ್ಪ, ಸರ್ವಜನ ಸಮಾಜ ವೇದಿಕೆಯ ಅಧ್ಯಕ್ಷ ಬಿ.ಗೋಪಾಲ್, ಟಿಪ್ಪು ಸುಲ್ತಾನ್ ಮಹಿಳಾ ಸಂಘದ ಅಧ್ಯಕ್ಷ ಗೀತಾ ಶ್ರೀನಿವಾಸರಾವ್, ಜಾನಪದ ಗಾಯಕ ಬಾನಂದೂರು ಕೆಂಪಯ್ಯ, ಸಮಿತಿಯ ಅಧ್ಯಕ್ಷ ಮೆಹಬೂಬ್ ಪಾಷ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT