ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಟಿಪ್ಪು ವಿವಿ ರಚನೆಗೆ ಸರ್ಕಾರ ಬದ್ಧ'

Last Updated 24 ಜನವರಿ 2013, 20:59 IST
ಅಕ್ಷರ ಗಾತ್ರ

ಬೆಂಗಳೂರು: `ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯವು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ಕರಡು ಪ್ರತಿಯನ್ನು ಈವರೆಗೂ ರಾಜ್ಯ ಸರ್ಕಾರಕ್ಕೆ ನೀಡಿಲ್ಲ. ರಾಷ್ಟ್ರೀಯ ಹಿತ ಹಾಗೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗದಂತ ವಿಶ್ವವಿದ್ಯಾಲಯ ರಚನೆಗೆ ಸರ್ಕಾರ ಬದ್ಧವಾಗಿದೆ' ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಿಳಿಸಿದರು.

ಪ್ರೊಟಾನ್ ಸಂಸ್ಥೆಯು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ `ಟಿಪ್ಪು ವಿ.ವಿ: ಒಂದು ಅವಲೋಕನ' ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಮತೀಯವಾದವನ್ನು ಬಿತ್ತದೇ ರಾಷ್ಟ್ರೀಯ ಚಿಂತನೆಯನ್ನು ಬಲಗೊಳಿಸುವ ಹಾಗೂ ಸಾಂಸ್ಕೃತಿಕ ಮೌಲ್ಯವನ್ನು ಬಿತ್ತುವ ವಿ.ವಿ ಸ್ಥಾಪನೆಗೆ ಸರ್ಕಾರ ಒಂದಲ್ಲ, ಎರಡು ಸಾವಿರ ಎಕರೆ ಜಮೀನು ನೀಡಲು ಸಿದ್ಧ' ಎಂದು ಹೇಳಿದರು.

`ಟಿಪ್ಪು ಧರ್ಮಾಂಧನಾಗಿದ್ದ, ಬಲವಂತವಾಗಿ ಮತಂತಾರ ಮಾಡಿರುವುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಬ್ರಿಟಿಷರಂತೆ ಟಿಪ್ಪು ಕೂಡ ಪರಕೀಯನಾಗಿದ್ದ. ಹಾಗಾಗಿ ಟಿಪ್ಪುವಿನೊಂದಿಗೆ ಹೋರಾಡಿದ ಮಾತ್ರಕ್ಕೆ ಅವನನ್ನು ದೇಶಭಕ್ತ ಎಂದೂ ಹೇಳಲು ಸಾಧ್ಯವಿಲ್ಲ. ಅವನ ಹೋರಾಟದ ಹಿಂದೆ ಸಾಮ್ರಾಜ್ಯಶಾಹಿ ಧೋರಣೆ ಇದೆ' ಎಂದು ಪ್ರತಿಪಾದಿಸಿದರು.

`ಪಾಕಿಸ್ತಾನದಲ್ಲಿ ತಾಲಿಬಾನ್ ಬೀಜ ಮೊಳಕೆ ಒಡೆದಿದ್ದು `ಮದರಸ'ಗಳಲ್ಲಿ. ಸಿಮಿಯಂತಹ ಭಯೋತ್ಪಾದನೆ ಸಂಘಟನೆ ದೆಹಲಿಯ ಆಲಿಗಢ ವಿಶ್ವವಿದ್ಯಾಲಯದಲ್ಲಿ ರೂಪುಗೊಂಡಿರುವ ಬಗ್ಗೆ ತನಿಖೆಯಾಗಿದೆ. ದೇಶದ ಸಮಗ್ರತೆಗೆ ಎಲ್ಲರೂ ಕಾರಣೀಭೂತರಾಗಿರುವಾಗ ಮುಸ್ಲಿಂರಿಗಾಗಿ ಪ್ರತ್ಯೇಕ ವಿವಿ ಸ್ಥಾಪಿಸುವುದರ ಹಿಂದೆ ದೇಶ ವಿಭಜನೆಗೆ ಕಾರಣರಾದ ಮಹಮ್ಮದ್ ಆಲಿ ಜಿನ್ನಾ ಅವರ ಮಾನಸಿಕತೆಯಿದೆ' ಎಂದು ಆತಂಕ ವ್ಯಕ್ತಪಡಿಸಿದರು.

`ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿಯೇ ಒಂದು ಮತೀಯ ವಿಚಾರವನ್ನು ಬಿತ್ತುವ ವಿಶ್ವವಿದ್ಯಾಲಯ ರೂಪುಗೊಳ್ಳದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಜ್ಞಾನಾರ್ಜನೆಗೆ ಪೂರಕವಾಗುವ ಕೇಂದ್ರೀಯ ವಿಶ್ವವಿದ್ಯಾಲಯ ರಚನೆಯಾಗಬೇಕು. ಪರ ವಿರೋಧಗಳಿಂದ ವಿವಾದಾತ್ಮಕ ಹೆಸರಾಗಿರುವ ಟಿಪ್ಪುವಿನ ಬದಲಾಗಿ ವಿ.ವಿ.ಗೆ ಅಬ್ದುಲ್‌ಕಲಾಂ, ಸಂತ ಶಿಶುನಾಳ ಷರೀಫ್ ಅವರ ಹೆಸರಿಡಬೇಕು' ಎಂದು ಒತ್ತಾಯಿಸಿದರು.

ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ಏಷ್ಯಾ ರಾಷ್ಟ್ರಗಳಲ್ಲೇ ಭಾರತ ಮುಂಚೂಣಿ ಸ್ಥಾನವನ್ನು ಸಾಧಿಸಬೇಕಾದರೆ ವಿ.ವಿಯಲ್ಲಿ ಪಶ್ಚಿಮ ಏಷ್ಯಾ ರಾಷ್ಟ್ರಗಳ ಕಲೆ, ಸಾಹಿತ್ಯ, ಸಂಗೀತ, ಇತಿಹಾಸ ಎಲ್ಲವನ್ನು ಆಳವಾಗಿ ಅಭ್ಯಸಿಸುವ ಕೇಂದ್ರವನ್ನು ಸ್ಥಾಪನೆ ಮಾಡಬೇಕು. ಈ ರೀತಿಯ ಅಧ್ಯಯನ ಕೇಂದ್ರವು ಟಿಪ್ಪು.ವಿ.ವಿಯಲ್ಲಿ ರೂಪುಗೊಳ್ಳಲು ಅವಕಾಶವಿದೆ' ಎಂದು ತಿಳಿಸಿದರು.

`ಟಿಪ್ಪುವಿನ ಕಾಲದಲ್ಲಿ ಮೈಸೂರು ಸಂಸ್ಥಾನವು ದೇಶಕ್ಕೆ ನೀಡಿದ ಕೊಡುಗೆಯಿಂದಲೇ ದೇಶದ ಚರಿತ್ರೆಯನ್ನು ಮರುವ್ಯಾಖ್ಯಾನಗೊಳಿಸುವುದು ಸಾಧ್ಯವಾಗುತ್ತದೆ. ರಾಜ್ಯವ್ಯವಸ್ಥೆಯನ್ನು ಸುಭದ್ರಗೊಳಿಸುವ ಸಲುವಾಗಿ ಕೆಲವೆಡೆ ಬಲವಂತವಾಗಿ ಮತಂತಾರಗೊಳಿಸಿರಬಹುದು. ರಾಜಕಾರಣಿಯಾಗಿ ಎಲ್ಲವನ್ನು ಸರಿದೂಗಿಸುವ ಕಾರ್ಯದಲ್ಲಿ ಕೆಲವೊಮ್ಮೆ ಲೋಪದೋಷಗಳಾಗುತ್ತದೆ. ಹೀಗೆಂದ ಮಾತ್ರಕ್ಕೆ ಆತ ದೇಶವಿರೋಧಿಯಾಗಿರಲಿಲ್ಲ' ಎಂದು ಸಮರ್ಥಿಸಿದರು.

`ಕುವೆಂಪು, ಡಿ.ವಿ.ಜಿ, ರಾಣಿ ಚೆನ್ನಮ್ಮ, ಕೃಷ್ಣದೇವರಾಯ ಹೆಸರಿನಲ್ಲಿರುವ ವಿ.ವಿಗಳು ಆಯಾ ಜಾತಿ ಹಾಗೂ ಧರ್ಮದ ಸೂಚಕವಲ್ಲ. ಕ್ಷಿಪಣಿ ತಂತ್ರಜ್ಞಾನ, ಕನ್ನಂಬಾಡಿ ಕಟ್ಟೆ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ನಾಂದಿ ಹಾಡಿದ್ದ, ರಾಜ್ಯದ ಅಭಿವೃದ್ಧಿಯನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ದಿದ್ದ ಟಿಪ್ಪುವಿನ ಹೆಸರಿನಲ್ಲಿ ವಿ.ವಿ.ಸ್ಥಾಪನೆ ಮಾಡುವುದು ತಪ್ಪಲ್ಲ' ಎಂದರು.

ವಿಮರ್ಶಕ ಡಾ.ಕೆ.ಮರುಳಸಿದ್ಧಪ್ಪ, `ಕೇಂದ್ರ ಅಲ್ಪಸಂಖ್ಯಾತರ ಸಚಿವಾಲಯದಡಿ ಸ್ಥಾಪನೆಯಾಗುತ್ತಿರುವ ಐದು ವಿಶ್ವವಿದ್ಯಾಲಯಗಳಲ್ಲಿ ಟಿಪ್ಪು ವಿ.ವಿ. ಒಂದು. ಇದರಲ್ಲಿ ಶೇ 50 ರಷ್ಟು ಮಂದಿ ಅಲ್ಪಸಂಖ್ಯಾತರಿಗೆ ಮೀಸಲಾತಿಯಿದೆ. ಅಲ್ಪಸಂಖ್ಯಾತರು ಎಂದ ಮಾತ್ರಕ್ಕೆ ಕೇವಲ ಮುಸ್ಲಿಮರಲ್ಲ' ಎಂದು ಸ್ಪಷ್ಟಪಡಿಸಿದರು. ವಿಮರ್ಶಕ ಜಿ.ಬಿ.ಹರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT